ರೈತ ಹೋರಾಟದ ಅಂಗವಾಗಿ ಫೆಬ್ರವರಿ 13ರ ದೆಹಲಿ ಚಲೋ ಪ್ರತಿಭಟನಾಕಾರರು ಟ್ರ್ಯಾಕ್ಟರ್‌ಗಳ ಮೂಲಕ ನಗರವನ್ನು ಪ್ರವೇಶಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸೋಮವಾರ ಗಾಜಿಪುರ್, ಟಿಕ್ರಿ ಹಾಗೂ ಸಿಂಘು ಗಡಿಗಳಲ್ಲಿ ಸೆಕ್ಷನ್ 144 ಹೇರಲಾಗಿದೆ.
ಗಾಜಿಪುರ್ ಗಡಿಭಾಗದಲ್ಲಿ ಕ್ಷಿಪ್ರಕಾರ್ಯಾಚರಣೆ ಪೊಲೀಸ್ ಪಡೆ (ಆರ್‌ಪಿಎಫ್) ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ, ಭದ್ರತೆ ಬಿಗಿಗೊಳಿಸಲಾಗಿದೆ. ಸಿಂಘು ಗಡಿಭಾಗದಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಅಂಬಾಲದ ಶಂಬು ಗಡಿಭಾಗವನ್ನೂ ಮುಚ್ಚಲಾಗಿದೆ. ಬಹುತೇಕ ಹರಿಯಾಣ ಮತ್ತು ಪಂಜಾಬ್ ಗಡಿಯನ್ನು ಮುಚ್ಚಲಾಗಿದೆ. ಮತ್ತೊಂದೆಡೆ ದೆಹಲಿಯ ಇತರ ಗಡಿಗಳಲ್ಲೂ ಬಿಗಿಭದ್ರತೆಯನ್ನು ನಿಯೋಜಿಸಲಾಗಿದೆ.
ಬಂದ್‌ಗೆ ಸಜ್ಜಾಗುತ್ತಿರುವ ಗ್ರಾಮೀಣ ಭಾರತ
ಸಂಯುಕ್ತ ಕಿಸಾನ್ ಮೋರ್ಚಾದ ವಿಭಜಿತ ಶಾಖೆ ಮತ್ತು ಕಿಸಾನ್ ಮಜ್‌ದೂರ್ ಮೋರ್ಚಾ (ಕೆಎಂಎಂ) ಫೆಬ್ರವರಿ 13ರಂದು ‘ದೆಹಲಿ ಚಲೋ’ ಹೋರಾಟಕ್ಕೆ ಕರೆ ನೀಡುವ ಮುನ್ನವೇ, ಬಹಳ ಹಿಂದೆಯೇ ಘೋಷಿಸಿರುವ ಫೆಬ್ರವರಿ 16ರಂದು ನಡೆಯಲಿರುವ ಗ್ರಾಮೀಣ್ ಭಾರತ್ ಬಂದ್‌ಗೆ ಇದೀಗ ಎಸ್‌ಕೆಎಂ ಮತ್ತು ಕೇಂದ್ರ ವ್ಯಾಪಾರಿ ಸಂಘಟನೆಗಳು ನಿರ್ದೇಶನಗಳನ್ನು ಬಿಡುಗಡೆ ಮಾಡಿವೆ.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯ ನಡುವೆ ಗ್ರಾಮೀಣ ಭಾರತ್ ಬಂದ್ ನಡೆಯಲಿದ್ದು, ರಾಷ್ಟ್ರವ್ಯಾಪಿ ಮುಖ್ಯರಸ್ತೆಗಳಲ್ಲಿ ಮಧ್ಯಾಹ್ನ 12ರಿಂದ ಸಂಜೆ 4 ಗಂಟೆಯವರಿಗೆ ನಾಲ್ಕು ಗಂಟೆಗಳ ಕಾಲ ಬೃಹತ್ ನಾಕಾಬಂದಿ ಜರುಗಲಿದೆ. ಪಂಜಾಬ್‌ನಲ್ಲಿ ಬಹುತೇಕ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ನಾಲ್ಕು ಗಂಟೆಗಳ ಕಾಲ ಮುಚ್ಚಲಾಗುವುದು.
“ಡಿಸೆಂಬರ್‌ನಲ್ಲಿಯೇ ಗ್ರಾಮೀಣ ಭಾರತ್ ಬಂದ್ ಯೋಜಿಸಿದ್ದೆವು. ಅಂದು ಗ್ರಾಮಸ್ಥರು ಕೃಷಿ ಚಟುವಟಿಕೆಗಳನ್ನು ಮತ್ತು ಮನ್‌ರೇಗಾ ಹಾಗೂ ಗ್ರಾಮೀಣ ಕೆಲಸಗಳನ್ನು ತೊರೆಯಲಿದ್ದಾರೆ. ಯಾವುದೇ ರೈತ, ಕೃಷಿ ಕಾರ್ಮಿಕ ಅಥವಾ ಗ್ರಾಮೀಣ ಕಾರ್ಮಿಕ ಅಂದು ಕೆಲಸ ಮಾಡುವುದಿಲ್ಲ” ಎಂದು ತಿಳಿಸಿದ್ದಾರೆ.
ಯಾವ ಸೌಲಭ್ಯಗಳಿಗೆ ಅಡ್ಡಿ?
ಅಂಬ್ಯುಲೆನ್ಸ್‌ಗಳು, ಸಾವು, ವಿವಾಹ, ವೈದ್ಯಕೀಯ ಅಂಗಡಿಗಳು, ದಿನಪತ್ರಿಕೆಗಳ ಸರಬರಾಜು, ಪರೀಕ್ಷೆಗಳಿಗೆ ಸಾಗುವ ವಿದ್ಯಾರ್ಥಿಗಳು ಹಾಗೂ ವಿಮಾನಗಳಿಗೆ ಸಾಗುವ ಪ್ರಯಾಣಿಕರು ಮೊದಲಾದ ತುರ್ತು ಪ್ರಯಾಣಗಳಿಗೆ ಅವಕಾಶ ನೀಡಲಾಗುವುದು. ತರಕಾರಿಗಳು ಮತ್ತು ಬೆಳೆಗಳ ಸರಬರಾಜು ಮತ್ತು ಖರೀದಿ ಸ್ಥಗಿತಗೊಳಿಸಲಾಗುವುದು.
ಗ್ರಾಮೀಣ ಅಂಗಡಿಗಳು, ಧಾನ್ಯ ಮಾರುಕಟ್ಟೆಗಳು, ತರಕಾರಿ ಮಾರುಕಟ್ಟೆಗಳು, ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳು, ಗ್ರಾಮೀಣ ಕೈಗಾರಿಕಾ ಮತ್ತು ಸೇವಾ ಕ್ಷೇತ್ರ ಸಂಸ್ಥೆಗಳು ಮತ್ತು ಖಾಸಗಿ ಕ್ಷೇತ್ರದ ಉದ್ಯಮಗಳನ್ನು ಮುಚ್ಚಲಾಗುವುದು. ಗ್ರಾಮಗಳಿಗೆ ಸಮೀಪವಿರುವ ಅಂಗಡಿಗಳು ಮತ್ತು ಸಂಸ್ಥೆಗಳು ಮುಷ್ಕರದ ಅವಧಿಯಲ್ಲಿ ಮುಚ್ಚಲಾಗುವುದು. ರಸ್ತೆ ಸಾರಿಗೆ ಉದ್ಯೋಗಿ ಸಂಘಟನೆಗಳೂ ಪ್ರತಿಭಟನೆಯಲ್ಲಿ ಭಾಗವಹಿಸುವ ಕಾರಣದಿಂದ ಸಾರ್ವಜನಿಕ ಸಾರಿಗೆ ಸೌಲಭ್ಯ ಇರುವುದಿಲ್ಲ ಎಂದು ಎಸ್‌ಕೆಎಂನ ಸದಸ್ಯ ಜಗನ್ಮೋಹನ್ ಸಿಂಗ್ ಪಾಟಿಲಾಲ ಹೇಳಿದ್ದಾರೆ.
ಮುಷ್ಕರದ ಅವಧಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವವರಿಗೆ ಸಮಸ್ಯೆಯಾಗದಂತೆ ಪರೀಕ್ಷೆಯನ್ನು ಮುಂದೂಡುವಂತೆ ಪ್ರಜಾಸತ್ತಾತ್ಮಕ ಅದ್ಯಾಪಕರ ವೇದಿಕೆ ಪಂಜಾಬ್ ರಾಜ್ಯ ಸರ್ಕಾರವನ್ನು ಕೇಳಿಕೊಂಡಿದೆ. ವೇದಿಕೆ ಗ್ರಾಮೀಣ ಭಾರತ್ ಬಂದ್‌ಗೆ ಬೆಂಬಲಿಸಿದೆ.ಅದ್ಯಾಪಕರು ಮತ್ತು ವಿದ್ಯಾರ್ಥಿಗಳು ಪರೀಕ್ಷೆ ನಡೆಯುವ ಕೇಂದ್ರಗಳಿಗೆ ತಲುಪುವುದು ಕಷ್ಟವಾಗುವ ಸಾಧ್ಯತೆಯಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.
ಗ್ರಾಮಗಳಲ್ಲಿ ಪ್ರತಿಭಟನಾ ಮೆರವಣಿಗೆಗಳಲ್ಲಿ ಮತ್ತು ರಸ್ತೆಗಳಲ್ಲಿ ಮುಖ್ಯವಾಗಿ ರೈತರು ಮತ್ತು ಕಾರ್ಮಿಕರ ಕಷ್ಟವನ್ನು ಮುಂದಿಟ್ಟು ಸ್ಕಿಟ್‌ಗಳು, ಬೀದಿ ನಾಟಕಗಳು, ಕವಿತೆಗಳು, ಹಾಡುಗಳು ಇತ್ಯಾದಿಗಳನ್ನು ಪ್ರದರ್ಶಿಸಲಾಗುವುದು.
500 ರೈತ ಸಂಘಟನೆಗಳಿರುವ ಎಸ್‌ಕೆಎಂ ಸಂಘಟನೆ ಈಗ ರದ್ದು ಮಾಡಲಾಗಿರುವ ಕೃಷಿ ಕಾನೂನುಗಳ ವಿರುದ್ಧ ಯಶಸ್ವೀ ಹೋರಾಟ ಆಯೋಜಿಸಿತ್ತು. ಈ ಸಂಘಟನೆಯೇ ಈಗ ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡಿದೆ. ಆದರೆ ಸಂಘಟನೆ ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ.
ದೆಹಲಿ ಚಲೋ ಪ್ರತಿಭಟನೆಯಲ್ಲಿ ರಾಜಕೀಯೇತರ ಎಸ್‌ಕೆಎಂ ಭಾಗವಹಿಸುತ್ತಿದೆ. ಅಭಿಪ್ರಾಯ ವಿರೋಧದಿಂದಾಗಿ ಮುಖ್ಯ ಸಂಘಟನೆಯಿಂದ ವಿಭಜನೆಗೊಂಡು ರಾಜಕೀಯೇತರ ಎಸ್‌ಕೆಎಂ ಅನ್ನು 2022 ಜುಲೈನಲ್ಲಿ ರಚಿಸಲಾಗಿತ್ತು.
ರೈತರು ಮತ್ತು ಕಾರ್ಮಿಕರ ಬೇಡಿಕೆಗಳೇನು?
ದೆಹಲಿ ಚಲೋಗೆ ಕರೆ ನೀಡಿರುವ ಸಂಘಟನೆ ಮತ್ತು ಎಸ್‌ಕೆಎಂ ಮುಖ್ಯ ಸಂಘಟನೆಯ ಪ್ರತಿಭಟನೆಗಳಲ್ಲಿ ಮುಂದಿಟ್ಟಿರುವ ಬೇಡಿಕೆಗಳು ಒಂದೇ ಆಗಿವೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ರೈತರಿಗೆ ಪಿಂಚಣಿ ಹಾಗೂ ರೈತರ ಇತರ ಬೇಡಿಕೆಗಳು, ಉದ್ಯೋಗಿಗಳಿಗೆ ಹಳೇ ಪಿಂಚಣಿ ಪದ್ಧತಿ ಅನುಷ್ಠಾನ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಹಿಂಪಡೆಯುವುದು ಮತ್ತು ಇನ್ನೂ ಅನೇಕ ಬೇಡಿಕೆಗಳನ್ನು ಮುಂದಿಡಲಾಗಿದೆ.
ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ ವೇತನ ರೂ 26,000 ಸಿಗಬೇಕು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು, ಉದ್ಯೋಗ ಖಾತ್ರಿ ಮೂಲಭೂತ ಹಕ್ಕಾಗಿಸಬೇಕು, ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಬಾರದು, ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳಬಾರದು ಹಾಗೂ ಖಾಯಂ ಉದ್ಯೋಗವನ್ನು ರದ್ದುಗೊಳಿಸುವಂತಿಲ್ಲ ಇತ್ಯಾದಿ ಬೇಡಿಕೆಗಳನ್ನು ಶ್ರಮಿಕ ವರ್ಗದವರು ಇಟ್ಟಿದ್ದಾರೆ.
ಮನ್‌ರೇಗಾದ ಯೋಜನೆಯಡಿ ಪ್ರತಿ ವ್ಯಕ್ತಿಗೂ 200 ದಿನಗಳ ಕೆಲಸ ನೀಡುವುದು ಮತ್ತು ರೂ 600 ಕನಿಷ್ಠ ವೇತನ ಕಡ್ಡಾಯಗೊಳಿಸುವುದು, ಅಸಂಘಟಿತ ಮತ್ತು ಸಂಘಟಿತ ವಲಯಗಳಲ್ಲಿ ಸಾಮಾಜಿಕ ಭದ್ರತೆ ಇತ್ಯಾದಿ ಬೇಡಿಕೆಗಳನ್ನು ಮುಂದಿಡಲಾಗಿದೆ.