ವಂಶ ರಾಜಕಾರಣ ಆರೋಪಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದು,ಬಿಜೆಪಿ ನಾಯಕರ ಮಂತ್ರಿಗಳು ಹೊಂದಿರುವ ರಾಜಕೀಯ ಸ್ಥಾನಮಾನದ ಬಗ್ಗೆ ಪ್ರಶ್ನಿಸಿದ್ದಾರೆ.
ಮಿಜೋರಾಂನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ವಂಶ ರಾಜಕಾರಣವನ್ನು ಪ್ರಶ್ನಿಸುವ ಬಿಜೆಪಿ ನಾಯಕರು ಅಮಿತ್ ಶಾ ಅವರ ಮಗ ನಿಜವಾಗಿ ಏನು ಮಾಡುತ್ತಿದ್ದಾನೆ ಎಂದು ಕೇಳಬೇಕು. ಬಿಸಿಸಿಐ ಕಾರ್ಯದರ್ಶಿ ಹುದ್ದೆಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿದ್ದಾರೆ ಎಂದರು.
“ಅಮಿತ್ ಶಾ ಅವರ ಮಗ ಏನು ಮಾಡುತ್ತಿದ್ದಾರೆ? ರಾಜನಾಥ್ ಸಿಂಗ್ ಅವರ ಮಗ ಏನು ಮಾಡುತ್ತಾರೆ? ಕೊನೆಯದಾಗಿ ನಾನು ಹೇಳುತ್ತೇನೆ, ಅಮಿತ್ ಶಾ ಅವರ ಮಗ ಭಾರತೀಯ ಕ್ರಿಕೆಟ್ ಅನ್ನು ನಡೆಸುತ್ತಿದ್ದಾರೆ. ದಯವಿಟ್ಟು ಪ್ರಮಾಣಿಕರಾಗಿರಿ. ಬಿಜೆಪಿಯನ್ನು ನೋಡಿ, ಅನುರಾಗ್ ಠಾಕೂರ್ ಅವರಂತಹ ಅನೇಕರು ವಂಶ ರಾಜಕಾರಣದಿಂದ ಬಂದವರು ಅಲ್ಲವೇ” ಎಂದು ತಿರುಗೇಟು ನೀಡಿದರು.
ಈ ಸುದ್ದಿ ಓದಿದ್ದೀರಾ? 4 ವರ್ಷಗಳ ನಂತರ ಜಾರ್ಖಂಡ್ ವಿಧಾನಸಭೆಗೆ ಬಿಜೆಪಿಯಿಂದ ವಿರೋಧ ಪಕ್ಷದ ನಾಯಕನ ಆಯ್ಕೆ
“ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಮತ್ತು ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ಜೆಡ್ಪಿಎಂ) ಆಡಳಿತವು ಆರ್ಎಸ್ಎಸ್ ಮತ್ತು ಬಿಜೆಪಿಗೆ ಈಶಾನ್ಯ ರಾಜ್ಯವನ್ನು ಪ್ರವೇಶಿಸಲು ಪ್ರಮುಖ ಮಾರ್ಗವಾಗಿದೆ. ನಾವು ಎಂದಿಗೂ ಕೋಮುವಾದಿಗಳನ್ನು ಪ್ರವೇಶಿಸಲು ಬಿಡುವುದಿಲ್ಲ. ಮಿಜೋರಾಂ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದ ಎಲ್ಲ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ” ಎಂದು ರಾಹುಲ್ ಗಾಂಧಿ ಹೇಳಿದರು.
ನವೆಂಬರ್ 7 ರಂದು ನಿಗದಿಯಾಗಿರುವ ಮಿಜೋರಾಂ ವಿಧಾನಸಭಾ ಚುನಾವಣೆಗೆ 39 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
2018 ರ ಚುನಾವಣೆಯಲ್ಲಿ, ಮಿಜೋ ನ್ಯಾಷನಲ್ ಫ್ರಂಟ್ 37.8 ಶೇಕಡಾ ಮತಗಳೊಂದಿಗೆ 26 ಸ್ಥಾನಗಳನ್ನು ಗಳಿಸಿದರೆ, ಕಾಂಗ್ರೆಸ್ ಐದು ಮತ್ತು ಬಿಜೆಪಿ ಒಂದು ಸ್ಥಾನ ಗಳಿಸಿತ್ತು.