ಪ್ರಧಾನಿ ಮೋದಿ ಕ್ಷಮೆ ಕೇಳೋದು ಯಾವಾಗ? – ಯಾಕೆ?

Date:

Advertisements

ಬಿಜೆಪಿ – RSSನ ಹುಟ್ಟುಗುಣವೇ ಕ್ಷಮೆಯಾಚಿಸೋದು ಅಂತ ವ್ಯಂಗ್ಯಗಳು ಆಗ್ಗಾಗ್ಗೆ ಕೇಳಿಬರುತ್ತವೆ. ಬಿಜೆಪಿಯ ಆರಾಧ್ಯದೈವವೆಂದೇ ಕರೆಯುವ ಸಾವರ್ಕರ್ ಬ್ರಿಟಿಷರ ಬಳಿ ಕ್ಷಮೆಯಾಚಿಸಿ, ಜೈಲಿನಿಂದ ಹೊರಬಂದು ಕೋಮು ದ್ವೇಷ ಬಿತ್ತಲು ಆರಂಭಿಸಿದ್ದರು. ಅಂದಿನಿಂದಲೂ RSS – ಬಿಜೆಪಿಗೆ ಮೊಸಳೆ ಕಣ್ಣೀರು ಸುರಿಸುವುದು, ನೆಪ ಮಾತ್ರಕ್ಕೆ ಕ್ಷಮೆಯಾಚಿಸಿ ಜಾರಿಕೊಳ್ಳುವುದು ಒಂದು ರೀತಿಯ ಛಾಳಿಯಾಗಿಬಿಟ್ಟಿದೆ. ಆದರೆ, ಪ್ರಧಾನಿ ಮೋದಿ ಕಳೆದ 10 ವರ್ಷಗಳಲ್ಲಿ ಕ್ಷಮೆ ಕೇಳಿದ್ದನ್ನು ನಾವು ನೋಡಿರಲು ಸಾಧ್ಯವಿಲ್ಲ. ಆದ್ರೆ, ಈಗ ಅವರೂ ಜನರಲ್ಲಿ, ಮುಖ್ಯವಾಗಿ ಮರಾಠಿಗರಲ್ಲಿ ಕ್ಷಮೆ ಕೇಳಿದ್ದಾರೆ. ಅದೂ ಪ್ರತಿಮೆಯ ಕಾರಣಕ್ಕಾಗಿ ಅವರು ಕ್ಷಮೆ ಕೇಳಿದ್ದಾರೆ ಎಂದರೆ, ಅದರ ಹಿಂದೆ ಬಲವಾದ ರಾಜಕೀಯ ಉದ್ದೇಶ ಇದ್ದೆ ಇರುತ್ತೆ…

ಹೌದು, ಕಳೆದ ವಾರ ಪ್ರಧಾನಿ ಮೋದಿ ಅವರು ತಮ್ಮ ಇಷ್ಟು ವರ್ಷಗಳ ಆಡಳಿತದಲ್ಲಿ ಎರಡನೇ ಬಾರಿಗೆ ತಲೆ ಬಾಗಿ ಜನರಲ್ಲಿ ಕ್ಷಮೆ ಕೇಳಿದ್ದಾರೆ. ದೇಶದಲ್ಲಿ ಎಷ್ಟೋ ದುರಂತಗಳು, ಅನಾಹುತಗಳು ನಡೆದರೂ ಆ ಘಟನೆಗಳ ಬಗ್ಗೆ ತುಟಿ ಬಿಚ್ಚಿ ಮಾತನಾಡದ ಮೋದಿ ಅವರು ಇದೀಗ ಕ್ಷಮೆ ಕೇಳಿದ್ದಾರೆ. ಇದರ ಹಿಂದಿನ ಉದ್ದೇಶ ಏನು? ಮೋದಿ ಅವರಿಗೆ ನಿಜವಾಗಲೂ ಈ ದೇಶದ ಜನರ ಮೇಲೆ ಅಷ್ಟೊಂದು ಪ್ರೀತಿ ಇದೇಯಾ? ದೇಶದ ಜನರ ಮೇಲೆ ಪ್ರೀತಿ ಇದೆ ಅನ್ನೋದಾದ್ರೆ ಇಷ್ಟು ವರ್ಷಗಳ ಮೋದಿ ಅವರ ಆಡಳಿತದಲ್ಲಿ ಲೆಕ್ಕಕ್ಕೆ ಸಿಗದಷ್ಟು ದುರಂತಗಳು, ಸಾವು-ನೋವುಗಳು, ಸೇತುವೆಗಳ ಕುಸಿತ, ಪ್ರತಿಮೆಗಳು ಕುಸಿದಂತಹ ಘಟನಗೆಳು ನಡೆದಿವೆ. ಆದರೆ, ಅವರು ಈ ಎಲ್ಲ ಸಮಯದಲ್ಲಿಯೂ ಕ್ಷಮೆ ಕೇಳಿಲ್ಲ. ಇದೀಗ, ಏಕಾಏಕಿ ಜನರಲ್ಲಿ ಕ್ಷಮೆಯಾಚಿಸಿದ್ದಾರೆ. ಇತ್ತೀಚೆಗೆ, ಮಹಾರಾಷ್ಟ್ರದ ರಾಜ್‌ಕೋಟ್‌ನಲ್ಲಿ ಕಳೆದ ಎಂಟು ತಿಂಗಳ ಹಿಂದೆ ನಿರ್ಮಾಣ ಮಾಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು ಬಿದ್ದಿದೆ. ಪ್ರತಿಮೆ ಕುಸಿದು ಬಿದ್ದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮರಾಠಿಗರ ಕ್ಷಮೆ ಕೋರಿದ್ದಾರೆ.

 “2013ರಲ್ಲಿ ನನ್ನನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದ ತಕ್ಷಣ, ರಾಯಗಡದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ ಅವರ ಸಮಾಧಿಯ ಮುಂದೆ ಭಕ್ತನಾಗಿ ಕುಳಿತಿದ್ದೆ. ಅಲ್ಲಿಂದಲೇ ಹೊಸ ಪಯಣ ಆರಂಭವಾಯಿತು. ಶಿವಾಜಿ ಮಹಾರಾಜ ನಮ್ಮ ಪಾಲಿಗೆ ಕೇವಲ ಹೆಸರು ಅಥವಾ ರಾಜ ಅಷ್ಟೇ ಅಲ್ಲ, ಅವರು ನಮಗೆ ಪೂಜಿತರು. ಅವರ ಪಾದಕ್ಕೆ ಶಿರಬಾಗಿ ನಮಸ್ಕರಿಸಿ, ಇದೀಗ ಆದ ಘಟನೆಗೆ ಕ್ಷಮೆ ಕೋರುತ್ತೇನೆ” ಎಂದು ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವ ಮಹಾರಾಷ್ಟ್ರದ ಫಾಲ್ಘಾರಕ್ಕೆ ಶುಕ್ರವಾರ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮರಾಠಿಗರಲ್ಲಿ ಕ್ಷಮೆ ಕೇಳಿದ್ದಾರೆ.

Advertisements

ಅಂದಹಾಗೆ, ಕಳೆದ 10 ವರ್ಷಗಳಲ್ಲಿ, ಮೋದಿ ಪ್ರಧಾನಿಯಾಗಿ ಆಡಳಿತ ನಡೆಸುತ್ತಿರುವ ಈ ಸಮಯದಲ್ಲಿ ದೇಶಾದ್ಯಂತ ನಾನಾ ಅವಘಡಗಳು ನಡೆಯುತ್ತಲೇ ಇವೆ.. ಸೇತುವೆಗಳು ಕುಸಿದು ಬೀಳುವದು, ಹಿಂಸಾಚಾರ, ಗಲಭೆಗಳು ನಡೆದು, ರೈಲ್ವೇ ಅಪಘಾತಗಳಿಂದ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಇಂತಹ ದುರಂತ ಘಟನೆಗಳು ನಡೆದಾಗಲೇ ಕ್ಷಮೆ ಕೇಳದ ಮೋದಿ, ಒಂದು ಪ್ರತಿಮೆ ಕುಸಿದು ಬಿದ್ದ ಕಾರಣಕ್ಕೆ ಕ್ಷಮೆ ಕೇಳುತ್ತಾರೆ ಎಂದರೆ, ಅವರ ತಂತ್ರವೇನು? ಅವರ ತಂತ್ರ ಸ್ಪಷ್ಟ. ಅದು ಚುನಾವಣೆ.. ಇದೇ ವರ್ಷದ ಕೊನೆಯಲ್ಲಿ ಮರಾಠಿಗರ ಪ್ರಾಬಲ್ಯವಿರುವ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಲಿದೆ. ಆ ಚುನಾವಣೆಯಲ್ಲಿ ಮರಾಠಿಗರನ್ನು ಬಿಜೆಪಿಯತ್ತ ಸೆಳೆಯುವುದು ಮೋದಿಯವರ ಉದ್ದೇಶ.

ಶಿವಾಜಿ ಎಂಬ ಹೆಸರು ಮಹಾರಾಷ್ಟ್ರದ ಮಟ್ಟಿಗೆ ಭಾವನಾತ್ಮಕವಾದುದು ಮತ್ತು ಬಹುದೊಡ್ಡ ಸಂಕೇತ. ಮರಾಠಿಗರ ಒಲವು ಮತ್ತು ಮತಗಳನ್ನ ಪಡೆಯಲು ಉಪಾಯ ರೂಪಿಸಿ ನರೇಂದ್ರ ಮೋದಿ ಅವರು ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿಯೇ ಇರುವಾಗ ಶಿವಾಜಿ ಪ್ರತಿಮೆಯನ್ನ ನಿರ್ಮಾಣ ಮಾಡಿಸಿ ಅವರೇ ಉದ್ಘಾಟನೆ ಕೂಡ ಮಾಡಿದ್ದರು. ಆದರೆ, ಕಳಪೆ ಕಾಮಗಾರಿ ಮತ್ತು ಭ್ರಷ್ಟಚಾರದ ನಿದರ್ಶನ ಎಂಬಂತೆ ಆ ಪ್ರತಿಮೆ ಎಂಟೇ ತಿಂಗಳಲ್ಲಿ ನೆಲಕಚ್ಚಿದೆ. ಮುರಿದು ಬಿದ್ದಿದೆ. ಇದು ಮರಾಠಿಗರ ಭಾವನೆಯನ್ನು ಕೆರಳಿಸಿದೆ. ಮಾತ್ರವಲ್ಲ, ಮೋದಿ ಬಗೆಗಿನ ಮರಾಠಿಗರ ಪ್ರೀತಿ ಮತ್ತು ವಿಶ್ವಾಸಕ್ಕೆ ಕೊಡಲಿ ಪೆಟ್ಟು ಕೊಟ್ಟಿದೆ.

ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಶಿವಾಜಿ ಪ್ರತಿಮೆ ಕುಸಿದು ಬಿದ್ದಿದೆ. ಚುನಾವಣೆಯ ಸಮಯದಲ್ಲಿ ಮಾತ್ರ ಕಾಣಸಿಗುವ ಮೋದಿ ಅವರು ಪ್ರತಿಮೆ ಕುಸಿದಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಯಾಚಿಸಿ, ತಮ್ಮ ಮತ್ತು ತಮ್ಮ ಪಕ್ಷದ ವರ್ಚಸ್ಸಿಗೆ ಆಗಿರುವ ಹಾನಿಯನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕ್ಷಮೆ ಯಾವ ಸಮಯದಲ್ಲಿ ಕೇಳಬೇಕು, ಕೇಳಬಾರದು ಎಂಬುವುದೆಲ್ಲಾ ಮೋದಿ ಅವರಿಗೆ ಕರಗತ ಆಗಿರುವ ವಿಚಾರಗಳು… ಇಷ್ಟು ವರ್ಷದ ಆಡಳಿತದಲ್ಲಿ ಮೋದಿ ಅವರು ಕ್ಷಮೆ ಕೇಳಿರುವುದು ಇದು ಎರಡನೇ ಬಾರಿಗೆ…  ಹಾಗಿದ್ದರೇ ಮೊದಲನೇ ಬಾರಿ ಕ್ಷಮೆ ಕೇಳಿದ್ದು ಯಾವಾಗ?

ರೈತರ ಆದಾಯ ದ್ವಿಗುಣ, MSPಯಂತಹ ಭರವಸೆಗಳನ್ನು ನೀಡಿದ್ದ ಮೋದಿ ಸರ್ಕಾರ, ಅಸಲಿಗೆ ರೈತರ ಕತ್ತು ಹಿಸುಕಲು ಮುಂದಾಗಿತ್ತು. ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳಾದ ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ–ಸೌಲಭ್ಯ) ಕಾಯ್ದೆ, ಬೆಲೆ ಖಾತರಿ ಒಪ್ಪಂದ ಮತ್ತು ಕೃಷಿ ಸೇವೆಗಳ (ಸಬಲೀಕರಣ ಮತ್ತು ರಕ್ಷಣೆ) ಕಾಯ್ದೆ ಹಾಗೂ ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆಗಳನ್ನ ಜಾರಿಗೆ ತಂದಿತ್ತು.

ಈ ಮೂರು ಕೃಷಿ ಕಾಯ್ದೆಗಳ ವಿರುದ್ಧ 2020-2021ರಲ್ಲಿ ಬರೋಬ್ಬರಿ 1 ವರ್ಷಗಳ ಕಾಲ ರೈತರು ಹೋರಾಟ ನಡೆಸಿದ್ದರು. ಈ ಹೋರಾಟವನ್ನ ಹತ್ತಿಕ್ಕಲು ಕೇಂದ್ರ ಸರ್ಕಾರ ರೈತರ ಮೇಲೆ ನಾನಾ ರೀತಿಯಲ್ಲಿ ದೌರ್ಜನ್ಯ ಎಸಗಿತ್ತು. ಟಿಯರ್ ಗ್ಯಾಸ್, ವಾಟರ್ ಜೆಟ್ ಗಳು, ರಬ್ಬರ್ ಬುಲೆಟ್ ಗಳು, ಲಾಠಿ ಚಾರ್ಜ್ ಮಾಡಿ ಹಲ್ಲೆ ನಡೆಸಿತು. ಅಲ್ಲದೆ, ರೈತರು ದೆಹಲಿಗೆ ಬರುವ ಹಾದಿಗೆ ಮುಳ್ಳಿನ ಬೇಲಿ, ಕಬ್ಬಿಣದ ಮೊಳೆಗಳನ್ನು ಹಾಕಿತ್ತು. ರಸ್ತೆಗಳಲ್ಲಿ ದೊಡ್ಡ ದೊಡ್ಡ ಕಂದಕಗಳನ್ನು ನಿರ್ಮಾಣ ಮಾಡಿತು. ರೈತರ ಹೋರಾಟದ ಜಾಗಕ್ಕೆ ವಿದ್ಯುತ್, ನೀರು ಮತ್ತು ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿತ್ತು. ರೈತರು ಮತ್ತು ಅವರ ಕುಟುಂಬಗಳ ಮೇಲೆ ದಾಳಿಗಳು ನಡೆದವು. ಆದರೂ, ಕೊರೊನಾ, ಮಳೆ, ಬಿಸಿಲಿಗೂ ರೈತರು ಜಗ್ಗದೆ ಹೋರಾಟ ನಡೆಸಿದರು. ಹೋರಾಟದಲ್ಲಿ ಸುಮಾರು 750 ರೈತರು ಪ್ರಾಣ ಕಳೆದುಕೊಂಡರು.

ರೈತರ ಸುಧೀರ್ಘ ಹೋರಾಟ ಮತ್ತು ನೂರಾರು ಮಂದಿ ಪ್ರಾಣ ತೆತ್ತರೂ ಮೋದಿಯ ಅಹಂ ಇಳಿಯಲಿಲ್ಲ. ಹೋರಾಟಕ್ಕೆ ಅವರು ಬಗ್ಗಲಿಲ್ಲ. ಇದೇ ಸಮಯದಲ್ಲಿ ಉತ್ತರಪ್ರದೇಶಲ್ಲಿ ಚುನಾವಣೆ ಹೊಸ್ತಿಲಿನಲ್ಲಿತ್ತು. ಈ ವೇಳೆ, ಸರ್ವೇಗಳನ್ನು ನಡೆಸಲಾಗಿತ್ತು. ಸರ್ವೇಗಳಲ್ಲಿ ರೈತರ ಹೋರಾಟ ಹೀಗೆ ಮುಂದುವರೆದರೇ, ಬಿಜೆಪಿ ಚುನಾವಣೆಯಲ್ಲಿ ಸೋಲುತ್ತೆ ಎಂಬ ಸುದ್ದಿ ಬಂತು. ಆ ಬಳಿಕ ಮೋದಿ ಅವರು ಕ್ಷಮೆ ಕೇಳುವ ನಾಟಕವಾಡಿ, ಮೊಸಳೆ ಕಣ್ಣಿರು ಸುರಿಸಿ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು.

ನರೇಂದ್ರ ಮೋದಿ

“ನಮ್ಮ ನಿರ್ಣಯದಲ್ಲಿಯೇ ಎಲ್ಲೋ ತಪ್ಪು ಆಗಿರಬಹುದು. ಹಾಗಾಗಿ ನಾನು ದೇಶವಾಸಿಗಳಲ್ಲಿ ಕ್ಷಮೆ ಕೋರುವೆ. ತನ್ಮೂಲಕ ಮೂರೂ ಕೃಷಿ ಮಸೂದೆಗಳನ್ನು ಇದೇ ತಿಂಗಳು ಸಂಸತ್ತಿನಲ್ಲಿ ವಾಪಸ್ ತೆಗೆದುಕೊಳ್ಳುವೆ. ರೈತ ಬಂಧುಗಳು ತಮ್ಮ ತಮ್ಮ ಹೊಲ, ತೋಟಗಳಿಗೆ ವಾಪಸ್ ಹೋಗಿ, ಕೃಷಿಯಲ್ಲಿ ತೊಡಗಿರಿ” ಎಂದು ಮೋದಿ ಹೇಳಿದ್ದರು. ಇದು, ಮೋದಿ ಮೊದಲ ಬಾರಿಗೆ ಕ್ಷಮೆಯಾಚಿಸಿದ್ದ ಸಂದರ್ಭ. ಆದರೆ, MSPಗೆ ಕಾನೂನು ಖಾತರಿಕೊಡುವ ಭರವಸೆಯನ್ನು ಮೋದಿ ಈಡೇರಿಸಿಲ್ಲ. ಈಗಲೂ ರೈತರು ಪಂಜಾಬ್-ಹರಿಯಾಣ ಗಡಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ.

ಅದೇನೇ ಇರಲಿ, ರೈತರು ಮೋದಿಯನ್ನು ಕ್ಷಮೆ ಕೇಳುವಂತೆ ಮಾಡಿದ್ದರು. ಅದಾಗ್ಯೂ, ಇನ್ನೂ ಹಲವಾರು ದುರ್ಘಟನೆಗಳಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ದುರ್ಘಟನೆಗಳಿಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ, ಆಡಳಿತ ವೈಫಲ್ಯವೇ ಕಾರಣವಾಗಿದೆ. ಆದರೂ, ಮೋದಿ ಎಂದೂ ಕ್ಷಮೆ ಕೇಳಿಲ್ಲ.

ಹಾಗೆ, ನೋಡಿದರೆ, ಮೋದಿ ಅವರ ತವರೂರಾದ ಗುಜರಾತ್ ನ ಮೋರ್ಬಿ ನಗರದಲ್ಲಿ ಮಚ್ಚು ನದಿಗೆ ನಿರ್ಮಿಸಲಾಗಿದ್ದ ತೂಗು ಸೇತುವೆ ಕುಸಿದ ಪರಿಣಾಮ 135 ಜನ ಮೃತಪಟ್ಟಿದ್ದರು. ಈ ಸೇತುವೆ ನವೀಕರಣಗೊಂಡು ಅಕ್ಟೋಬರ್ 26ರಂದು ಉದ್ಘಾಟನೆಗೊಂಡಿತ್ತು. ಇದಾಗಿ ನಾಲ್ಕೇ ದಿನಕ್ಕೆ 2022ರ ನವೆಂಬರ್ 1 ರಂದು ಸೇತುವೆ ಕುಸಿದಿತ್ತು. ಈ ದುರಂತದಲ್ಲಿ ಮೃತಪಟ್ಟವರಲ್ಲಿ 47 ಮಂದಿ ಮಕ್ಕಳು ಸಹ ಇದ್ದರು. ಈ ದುರಂತದ ಬಗ್ಗೆ ಮೋದಿ ತುಟಿ ಬಿಚ್ಚಲಿಲ್ಲ. ಸಂತಾಪವನ್ನೂ ಸೂಚಿಸಲಿಲ್ಲ.

ಮೋರ್ಬಿ ದುರಂತ9

ಇನ್ನು ಗುಜರಾತ್ ನ ವಡೋದರದಲ್ಲಿರುವ ಹರ್ನಿ ಕೆರೆಯಲ್ಲಿ 2024ರ ಜನವರಿ 18ರಂದು ಸಂಭವಿಸಿದ ದೋಣಿ ದುರಂತದಲ್ಲಿ 12 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕಿಯರು ಮೃತಪಟ್ಟಿದ್ದರು. ಉತ್ತರ ಪ್ರದೇಶದ ಹತ್ರಾಸ್‌ ನಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಬರೋಬ್ಬರಿ 121 ಜನರು ಸಾವನ್ನಪ್ಪಿದ್ದರು. ಈ ಜನರ ಸಾವಿಗೆ ಕಾರಣವಾಗಿದ್ದ ಡೋಂಗಿ ಭೋಲೆ ಬಾಬಾನನ್ನು ಬಂಧಿಸುವ ಬಗ್ಗೆಯಾಗಲೀ ಅಥವಾ ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪದ ಮಾತುಗಳನ್ನಾಗಲೀ ಪ್ರಧಾನಿಯಾಗಿ ಮೋದಿ ಬಾಯಿ ಬಿಡಲಿಲ್ಲ.

ಮೇ 3ರಲ್ಲಿ ಮಣಿಪುರದಲ್ಲಿ ಆರಂಭವಾದ ಕುಕಿ ಹಾಗೂ ಮೈತೇಯಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷವು 2023ರ ಭಾರತದ ಪ್ರಮುಖ ಘಟನಾವಳಿಗಳಲ್ಲೊಂದು. ಮಣಿಪುರದಲ್ಲಿ ಜನಾಂಗೀಯ ಗಲಭೆಯು ಆರಂಭವಾಗಿ ಒಂದು ವರ್ಷ ಕಳೆದಿದೆ. ಈವರೆಗೆ 220ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ. 60 ಸಾವಿರಕ್ಕೂ ಹೆಚ್ಚು ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಚರ್ಚುಗಳಿಗೆ ಬೆಂಕಿ ಹಚ್ಚಲಾಗಿದೆ. ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ವಿಡಿಯೊ ದೇಶದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ಕೃತ್ಯದ ವಿರುದ್ಧ ದೇಶಾದ್ಯಂತ ಆಕ್ರೋಶ ಮಡುಗಟ್ಟಿತ್ತು. ಆದರೂ ಮಣಿಪುರದ ಜನರು ನೊಂದರೂ ಪರವಾಗಿಲ್ಲ ಬೆಂದರೂ ಪರವಾಗಿಲ್ಲ ಎಂದು ಕೇಂದ್ರ ಸರ್ಕಾರ ಭಾವಿಸಿತು. ಮೋದಿ ಅವರು ದಿವ್ಯ ಮೌನ ತಾಳಿದ್ದರು. ಅವರು ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಬರೋಬ್ಬರಿ 79 ದಿನಗಳು ಬೇಕಾದವು.

ಇನ್ನು, ಇತ್ತೀಚೆಗೆ ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಪ್ರವಾಹದಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕದ ಶಿರೂರು ಗುಡ್ಡ ಕುಸಿದು 8 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಬಿಹಾರದಲ್ಲಿ ಜೂನ್ 18ರಿಂದ ಜುಲೈ 4ರ ನಡುವೆ ಬರೋಬ್ಬರಿ 12 ಸೇತುವೆಗಳು ಕುಸಿದು ಬಿದ್ದಿವೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಸಮೀಪ ನಿರ್ಮಾಣ ಮಾಡಲಾದ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಶುರುವಾದಾಗಿನಿಂದಲೂ ವಿವಾದ ಕೇಂದ್ರಬಿಂದುವಾಗಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣ ಮಾಡುವುದಾಗಿ ಹೇಳಿ ಪ್ಲಾಸ್ಟಿಕ್ ವಿಗ್ರಹವನ್ನು ಇದೇ ಬಿಜೆಪಿಗರು ಪ್ರತಿಷ್ಠಾಪಿಸಿದ್ದರು. ಪ್ರತಿಮೆ ನಿರ್ಮಾಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಾಣ ಸಿಗುತ್ತಿತ್ತು. ಆದರೂ, ಈ ಬಗ್ಗೆ ಮೋದಿ ಬಾಯಿ ಬಿಡಲಿಲ್ಲ. ಈಗಲೂ ಬಿಟ್ಟಿಲ್ಲ.

ಇದಷ್ಟೇ ಅಲ್ಲ, ಇದೇ ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರೋರಾತ್ರಿ ನೋಟು ಅಮಾನ್ಯೀಕರಣ ಮಾಡಿದ್ದರಿಂದ ರೈತರು, ಕಾರ್ಮಿಕರು, ಸಣ್ಣ ಉದ್ದಿಮೆದಾರರಿಗೆ ತೊಂದರೆ ಉಂಟಾಗಿತ್ತು. ಇಡೀ ದೇಶದ ಜನ ಸಂಕಷ್ಟಕ್ಕೆ ಸಿಲುಕಿದ್ದರು. ದೇಶದಲ್ಲಿ ಆರ್ಥಿಕ ಅಸ್ಥಿರತೆಗೆ ಕಾರಣವಾಗಿತ್ತು. ನೋಟು ಅಮಾನ್ಯೀಕರಣದಿಂದಾಗಿ ನೋಟು ಬದಲಾವಣೆ ಮತ್ತು ಹಣ ವಿತ್ ಡ್ರಾ ಮಾಡಲು ಬ್ಯಾಂಕ್ ಗಳ ಮುಂದೆ ಸಾಲುಗಟ್ಟಿ ನಿಂತವರಲ್ಲಿ 115 ಮಂದಿಗೂ ಹೆಚ್ಚು ಜನ ಸಾವನ್ನಪ್ಪಿದ್ದರು. ದೇಶದಾದ್ಯಂತ ಹಣದ ಕೊರತೆ ತಾಂಡವವಾಡುತ್ತಿತ್ತು. ಇಂತಹ ಸಮಯದಲ್ಲಿಯೂ ಮೋದಿ ಜನರ ಬಗ್ಗೆ ಒಂದೇ ಒಂದು ಮಾತಾಡಲಿಲ್ಲ. ಬದಲಾಗಿ ಇನ್ನು 50 ದಿನ ಸಮಯ ನೀಡಿ ಎಲ್ಲ ಸರಿ ಮಾಡುವೆ ಎಂದಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೌರಿ ಲಂಕೇಶ್: ಕೋಮುವಾದಿ ಕತ್ತಲಿಗೆ ಸವಾಲೆಸೆದ ಬೆಳ್ಳಂಬೆಳಕಿನ ದೀವಟಿಗೆ

ಅಷ್ಟೇ ಅಲ್ಲ, ದೇಶದಲ್ಲಿ ನಿರಂತರವಾಗಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಬೇಟಿ ಬಚಾವೋ – ಬೇಟಿ ಪಡಾವೋ ಎಂದಿದ್ದ ಮೋದಿ, ದೇಶದ ಹೆಣ್ಣು ಮಕ್ಕಳನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಈಗ, ಕೋಲ್ಕತ್ತಾ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ-ಹತ್ಯೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲಾಗದ ಮೋದಿ, ದೇಶದ ಮಹಿಳೆಯರಲ್ಲಿ ಕ್ಷಮೆ ಕೇಳಿಲ್ಲ.

ಇನ್ನು, ಅಯೋಧ್ಯೆ ರಾಮಮಂದಿರ, ಪಾರ್ಲಿಮೆಂಟ್ ಭವನ, ಬೆಂಗಳೂರಿನ ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2, ಮುಂಬೈ ವಿಮಾನ ನಿಲ್ದಾಣ, ಬೆಂಗಳೂರಿನ ವೈಟ್ ಫೀಲ್ಡ್‌ ಮೆಟ್ರೋ ನಿಲ್ದಾಣ ಸೇರಿದಂತೆ ಹಲವಾರು ಕಾಮಗಾರಿಗಳು ಕಳಪೆಯಾಗಿರುವುದು ಕಂಡುಬಂದಿದೆ. ಅವುಗಳಲ್ಲಿಯೂ ಭ್ರಷ್ಟಾಚಾರ ನಡೆದಿರುವ ಆರೋಪಗಳಿವೆ. ಮೋದಿ ಸರ್ಕಾರ ಭಾರೀ ಜಾಹೀರಾತು ನೀಡಿ ನಿರ್ಮಾಣ ಮಾಡಿದ್ದ ಅಟಲ್ ಸೇತು ರಸ್ತೆ ಬಿರುಕು ಬಿಟ್ಟಿದೆ.

ಶಿವಾಜಿ

ಹೀಗೆ, ಮೋದಿ ಅವರು ಉದ್ಘಾಟಿಸಿ, ಅವರ ಆಡಳಿತದಲ್ಲಿ ನಿರ್ಮಾಣವಾದ ಹಲವಾರು ಕಟ್ಟಡಗಳು, ರಸ್ತೆ, ಸೇತುವೆ, ಮೆಟ್ರೋ, ವಿಮಾನ ನಿಲ್ದಾಣ, ಪ್ರತಿಮೆಗಳು ಕಳಪೆ ಕಾಮಗಾರಿಯಿಂದ ಹಾಳಾಗಿವೆ. ಆದರೆ, ಇದಾವ ಸಂದರ್ಭದಲ್ಲೂ ಕ್ಷಮೆ ಕೇಳದ ಮೋದಿ, ಈಗ ಮರಾಠಿಗರಲ್ಲಿ ಕ್ಷಮೆ ಕೇಳಿದ್ದಾರೆ. ಇದು, ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಭೀತಿಯಿಂದಾಗಿ ಮೋದಿ ಗಂಟಲಿನಿಂದ ಹೊರಬಂದ ಕ್ಷಮೆಯೇ ಹೊರತು, ಜನರ ಮೇಲಿನ ಕಾಳಜಿ ಇಂದಲ್ಲ.

ಏನೇ ಇರಲಿ, ಇಂತಹ ಚುನಾವಣಾ ಸೋಲಿನ ಭೀತಿ ಇಂದಾದರೂ, ದೇಶದಲ್ಲಿ ನಿಂತರವಾಗಿ ಶೋಷಣೆಗೆ ಬಲಿಯಾಗುತ್ತಿರುವ ದಲಿತರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರಲ್ಲಿ ಮೋದಿ ಕ್ಷಮೆ ಕೇಳುವ ದಿನಗಳು ಸಮೀಪಿಸಲಿ.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಬಿಹಾರದಲ್ಲಿ ಒಂದು ಮತವನ್ನೂ ಕದಿಯಲು ನಾವು ಬಿಡಲ್ಲ: ರಾಹುಲ್ ಗಾಂಧಿ

ಮತಗಳನ್ನು ಕದಿಯಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿದೆ ಎಂದು...

Download Eedina App Android / iOS

X