ಸದನದಲ್ಲಿ ಆಗಬೇಕಾದ್ದೇನು | ಉತ್ತರ ಕರ್ನಾಟಕದ ನೀರು-ನೀರಾವರಿ ತಾಪತ್ರಯ ನೀಗುವುದು ಯಾವಾಗ?

Date:

Advertisements
ಗಡಿನಾಡು ಜಿಲ್ಲೆ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿ ಉತ್ತರ ಕರ್ನಾಟಕಕ್ಕೆ 'ಶಕ್ತಿಕೇಂದ್ರ' ಕೊಡಲಾಗಿದೆ ಎಂದು ಬೀಗುವ ಪ್ರಭುತ್ವ, ಆ ಭಾಗದ ಜನರಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ, ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಲ್ಲಿ ಹಾಗೂ ರೈತರ ಕಷ್ಟಗಳಿಗೆ ಸ್ಪಂದಿಸುವಲ್ಲಿ ತುಟಿಯೇ ಬಿಚ್ಚದಿರುವುದು ವಿಪರ್ಯಾಸ. 

ರಾಜ್ಯದ ಸಮಗ್ರ ಅಭಿವೃದ್ಧಿ ವಿಷಯಕ್ಕೆ ಬಂದಾಗ ಯಾವುದೇ ಸರ್ಕಾರವಿರಲಿ ಉತ್ತರ ಕರ್ನಾಟಕವನ್ನು ಆದ್ಯತೆಯಾಗಿ ಪರಿಗಣಿಸಿಲ್ಲ. ಅದರಲ್ಲೂ ನೀರಾವರಿ ಯೋಜನೆಗಳ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ನೀರಾವರಿ ಯೋಜನೆಗಳು ಕರ್ನಾಟಕ ಏಕೀಕರಣದ ನಂತರ ಆರಂಭವಾಗಿವೆ. ಆದರೆ, ದಕ್ಷಿಣ ಕರ್ನಾಟಕಕ್ಕೆ ಸಿಕ್ಕ ಸವಲತ್ತು ಉತ್ತರ ಕರ್ನಾಟಕಕ್ಕೆ ದೊರಕಿಲ್ಲ. ಆಡಳಿತಾತ್ಮಕ ಅನುಮೋದನೆ ಇರಲಿ, ಸಕಾಲಿಕ ನಿರ್ಧಾರಗಳಾಗಿರಲಿ ಅಥವಾ ಅಗತ್ಯ ಹಣಕಾಸು ನೆರವು ಒದಗಿಸುವ ವಿಚಾರದಲ್ಲಿ ಸರ್ಕಾರಗಳು ಯಾವಾಗಲೂ ತಾರತಮ್ಯ ಅನುಸರಿಸಿವೆ.

ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ಎಂದರೆ ಈಗ ಅವು ಕೇವಲ ಚುನಾವಣೆಯ ಸರಕಷ್ಟೇ. ಮಹದಾಯಿ ಮತ್ತು ಕೃಷ್ಣ ಮೇಲ್ದಂಡೆಯಂತಹ ನೀರಾವರಿ ಯೋಜನೆಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಆ ಭಾಗದ ಜನಪ್ರತಿನಿಧಿಗಳಿಗೆ ಸಾಮಾನ್ಯವಾಗಿದೆ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಮೂರ್ನಾಲ್ಕು ದಶಕಗಳಿಂದ ಬಹುತೇಕ ಯೋಜನೆಗಳು ಕಾರ್ಯಗತವಾಗದೇ ನನೆಗುದಿಗೆ ಬಿದ್ದಿವೆ.

Advertisements

ದಶಕಗಳ ಬಹುದೊಡ್ಡ ಬೇಡಿಕೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಹಾಗೂ ಕಳಸಾ ಬಂಡೂರಿ ನಾಲಾ (ಮಹಾದಾಯಿ) ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸುವ ಕಾಳಜಿ ಯಾವ ಪಕ್ಷದಿಂದಲೂ ಸಾಧ್ಯವಾಗುತ್ತಿಲ್ಲ. ಕಳೆದ 20 ವರ್ಷಗಳಲ್ಲಿ ಪ್ರಾರಂಭವಾದ ಬಹುಪಾಲು ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಕೆಲವು ಪೂರ್ಣಗೊಂಡರೂ ಸಮರ್ಪಕವಾಗಿ ಕಾರ್ಯ ನಿರ್ವಹಣೆಯಾಗುತ್ತಿಲ್ಲ. ಇದರ ಜೊತೆಗೆ ಏತ ನೀರಾವರಿ ಯೋಜನೆಗಳೂ ಕುಂಟುತ್ತಾ ಸಾಗಿವೆ.

ಈ ಸುದ್ದಿ ಓದಿದ್ದೀರಾ? ‘ಬೆಳೆ ಪರಿಹಾರ’ ಪರಿಕಲ್ಪನೆಯೇ ಸರ್ಕಾರದಲ್ಲಿ ಇಲ್ಲ, ರಾಜ್ಯಕ್ಕೆ ಬೇಕಿದೆ ಹೊಸ ಕಾಯ್ದೆ – ಕಾನೂನು

ನೀರಾವರಿ, ರೈತರ ಸಮಸ್ಯೆಗಳು, ಮೂಲ ಸೌಕರ್ಯ, ಕೈಗಾರಿಕಾ ನೀತಿ, ಸಾಂಸ್ಕೃತಿಕ ನೀತಿಗಳಾಗಿರಬಹುದು ಯಾವುದೇ ವಿಷಯದಲ್ಲಿಯೂ ಉತ್ತರ ಕರ್ನಾಟಕವನ್ನು ಎರಡನೇ ಆಯ್ಕೆ ಎಂಬಂತೆ ಸರ್ಕಾರಗಳು ಪರಿಗಣಿಸಿವೆ. ಆ ಭಾಗದ ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ತೆರನಾದ ಸಮಸ್ಯೆಗಳಿವೆ. ರೈತ, ಕೂಲಿಕಾರ, ನೇಕಾರ, ಕೈಗಾರಿಕೆ, ಸಕ್ಕರೆ ಕಾರ್ಖಾನೆ, ನೀರಾವರಿ, ಶಿಕ್ಷಣ, ಆರೋಗ್ಯ, ಉದ್ಯೋಗ, ರಸ್ತೆ, ಸಾರಿಗೆ ಒಳಗೊಂಡ ಸಮಸ್ಯೆಗಳು ಜನರನ್ನು ಭಾದಿಸುತ್ತಿವೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರತಿ ವರ್ಷ 10 ದಿನಗಳ ಕಾಲ ವಿಧಾನಮಂಡಲ ಚಳಿಗಾಲ ಅಧಿವೇಶನ ನಡೆಯುತ್ತದೆ. ಆದರೆ ಚಳಿಗಾಲ ಅಧಿವೇಶನದ ನೈಜ ಆಶಯವೇ ಮಣ್ಣುಪಾಲಾಗಿದೆ ಎಂಬುದು ಆ ಭಾಗದ ಜನರ ಅಳಲು. ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಗಂಭೀರ ಚರ್ಚೆಗಳು ನಡೆದು, ರಚನಾತ್ಮಕ ತೀರ್ಮಾನಗಳನ್ನು ಸರ್ಕಾರ ಕೈಗೊಂಡ ನಿದರ್ಶನಗಳನ್ನು ಹುಡುಕಿದರೆ ನಿರಾಶೆಯ ಭಾವವೇ ಜನರಲ್ಲಿ ಆವರಿಸಿದೆ. ಸದನದಲ್ಲಿ ಕಾಟಾಚಾರಕ್ಕೆ ಒಂದಿಷ್ಟು ಮಾತನಾಡಿ, ಹಾರಿಕೆಯ ಭರವಸೆಗಳನ್ನು ಕೊಟ್ಟು ಬೆಂಗಳೂರು ಕಡೆ ಶಾಸಕರು, ಸಚಿವರು ಹಾಗೂ ಅಧಿಕಾರಿವರ್ಗ ಶಿಫ್ಟ್‌ ಆಗುವುದು‌ ಪ್ರತಿ ವರ್ಷದ ರೂಟೀನ್ ಕೆಲಸವಾಗಿದೆ.

ನೀರಿನ ಸಮಸ್ಯೆ 1 1
ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ (ಹಳ್ಳಿಯೊಂದರ ಪ್ರಾತಿನಿಧಿಕ ಚಿತ್ರ)

ಬಯಲುಸೀಮೆ ನೀರು-ನೀರಾವರಿ ತಾಪತ್ರಯಗಳು

ಬೆಳಗಾವಿ ಜಿಲ್ಲೆಯಲ್ಲೇ ನೀರಿನ ಸಮಸ್ಯೆಗಳು ಮೂಟೆಕಟ್ಟಿ ಬಿದ್ದಿವೆ. ಬೆಳಗಾವಿ ನಗರದಲ್ಲಿ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ಅದೂ ಕೂಡಾ ಜನರ ಅವಶ್ಯಕತೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಕೂಡ ಇದೆ. ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಗೋಳನ್ನು ಕೇಳುವವರಿಲ್ಲ. ಬೆಳಗಾವಿ ಜಿಲ್ಲೆಯ ವಿಶಾಲ ಭೌಗೋಳಿಕ ಪ್ರದೇಶದಲ್ಲಿ ಏಳು ನದಿ ಹರಿದರೂ ಕುಡಿಯುವ ನೀರಿಗೂ ಜನತೆ ಪರದಾಡಬೇಕಿದೆ.

ರಾಮದುರ್ಗ ತಾಲೂಕು ಹುಲಕುಂದ ಭಾಗದ ರಾಮೇಶ್ವರ ಏತನೀರಾವರಿ, ಖಾನಾಪುರ ತಾಲೂಕಿನ ಕಳಸಾ ಬಂಡೂರಿ ನಾಲಾ ಜೋಡಣೆಗೆ ಮುಕ್ತಿ ಸಿಗಬೇಕಿದೆ. ವೀರಭದ್ರೇಶ್ವರ ಏತ ನೀರಾವರಿ ಮತ್ತು ಕಿಣಯೇ ಡ್ಯಾಂಗೆ ಚಾಲನೆ ಕೊಡಬೇಕು. ಘಟಪ್ರಭಾ, ಮಲಪ್ರಭಾ ಒಳಗೊಂಡು ಇತರ ಬೃಹತ್ ಯೋಜನೆಗಳ ಅಳಿದುಳಿದ ಕೆಲಸ ಪೂರ್ಣಗೊಳ್ಳಬೇಕು. ಜಲಾಶಯಗಳ ಹೂಳು ತೆಗೆಯಬೇಕು. ಜಮೀನಿನ ಸವಳು, ಜವಳಿಗೆ ಮದ್ದು ಅರೆಯಬೇಕು. ಹೊಲಗಾಲುವೆಗಳ ನಿರ್ಮಾಣವಾಗಬೇಕು. ನೆರೆ ಹಾವಳಿಯೂ ಸೇರಿದಂತೆ ಹಿಪ್ಪರಗಿ ಜಲಾಶಯದ ಹಿನ್ನೀರಿನ ಸಂತ್ರಸ್ತರ ಸಮಸ್ಯೆಗೆ ಪರಿಹಾರ ಸಿಗಬೇಕಿದೆ.

ಈ ಸುದ್ದಿ ಓದಿದ್ದೀರಾ? ಚಳಿಗಾಲ ಅಧಿವೇಶನ | ‘ಸುವರ್ಣಸೌಧ’ ತಗೊಂಡು ಏನು ಮಾಡೋಣ, ‘ಬ್ರ್ಯಾಂಡ್‌ ಬೆಳಗಾವಿ’ ಯಾವಾಗ?

ಮೂರನೇ ಹಂತದ ಕೃಷ್ಣ ಮೇಲ್ದಂಡೆ ಯೋಜನೆಯಡಿ (ಯುಕೆಪಿ-3) ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ಹಾಗೂ ಉಪಯೋಜನೆಗಳು ಸೇರಿದಂತೆ ಕೃಷ್ಣಾ ಕಣಿವೆಯ 40ಕ್ಕೂ ಅಧಿಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕೆಂಬ ಆಗ್ರಹಕ್ಕೆ ಕೇಂದ್ರದಿಂದ ಸ್ಪಂದನೆಯೇ ಸಿಗುತ್ತಿಲ್ಲ. 2014-15ರ ಆರ್ಥಿಕ ಸಮೀಕ್ಷೆಯಂತೆ ಕೃಷ್ಣಾ ಮೆಲ್ದಂಡೆ ಯೋಜನೆ ಹಂತ-3ರ 130 ಟಿಎಂಸಿ ಅಡಿ ನೀರಿನ ಬಳಕೆಗಾಗಿ ಕಾಮಗಾರಿಗೆ ಲಭ್ಯವಿದ್ದ ಅಂದಿನ ಅಂದಾಜುಪಟ್ಟಿಯಂತೆ 17 ಸಾವಿರ ಕೋಟಿ ಹಣ ಹೊಂದಿಸುವುದು ರಾಜ್ಯ ಸರ್ಕಾರಕ್ಕೆ ಕಷ್ಟವಾಯಿತು. ಈಗಲೂ ಯೋಜನೆ ಅನುಷ್ಠಾನವಾಗಲಿಲ್ಲ.

ಬಹುತೇಕ ಕರ್ನಾಟಕವನ್ನು ಸಮೃದ್ಧಗೊಳಿಸಲು ಕೃಷ್ಣೆಯಿಂದ ಹಂಚಿಕೆಯಾದ ನೀರು ಸಾಕು. ಕೃಷ್ಣೆಯ ಒಡಲು ಅಕ್ಷರಶಃ ಅಕ್ಷಯಪಾತ್ರೆ. ಬಚಾವತ್‌ ಆಯೋಗದ ತೀರ್ಪಿನಲ್ಲಿ ರಾಜ್ಯಕ್ಕೆ 734 ಟಿಎಂಸಿ ಹಂಚಿಕೆಯಾಗಿದ್ದರೆ ನಂತರ ಕೃಷ್ಣಾ ನ್ಯಾಯಾಧಿಕರಣ-2ರಲ್ಲಿ ನೀಡಲಾಗಿರುವುದು 173 ಟಿಎಂಸಿ. ಇದರ ನಡುವೆ ಪೋಲಾವರಂ ಡೈವರ್ಷನ್‌ ಮೂಲಕ 21 ಟಿಎಂಸಿ ಲಭ್ಯವಾಗಿದೆ. ಹಾಗಾಗಿ ಕೃಷ್ಣೆಯಿಂದ ಕರ್ನಾಟಕಕ್ಕೆ ಒಟ್ಟಾರೆ ಹಂಚಿಕೆಯಾಗಿರುವುದು 928 ಟಿಎಂಸಿ ನೀರು. ಯುಕೆಪಿ-3ರಿಂದ 5.94 ಲಕ್ಷ ಹೆಕ್ಟೇರ್‌ಗೆ ನೀರಾವರಿಯಾಗಲಿದೆ. ಪೂರ್ಣ ಪ್ರಮಾಣದಲ್ಲಿ ಇದನ್ನು ಬಳಸಿಕೊಳ್ಳಲು ಸಾಧ್ಯವಾಗದಿರುವುದು ರಾಜ್ಯದ ದೌರ್ಭಾಗ್ಯ.

ಈ ಸುದ್ದಿ ಓದಿದ್ದೀರಾ? ಅಧಿವೇಶನದಲ್ಲಿ ಆಗಬೇಕಾದ್ದೇನು | ಕಷ್ಟ-ನಷ್ಟದಲ್ಲಿ ಮುಳುಗೇಳುವ ಒಕ್ಕಲುತನ ಕುರಿತು ಚರ್ಚೆಯಾಗಲಿ

ಉತ್ತರ ಕರ್ನಾಟಕದ ಬರದ ಸಮಸ್ಯೆ ನೀಗಿಸುವ ಸಾಮರ್ಥ್ಯ ಹೊಂದಿರುವ ಕೃಷ್ಣಾ ಮೇಲ್ದಂಡೆ ಯೋಜನೆ-3 (ಯುಕೆಪಿ-3)ಕ್ಕೆ ಸಂಪೂರ್ಣ ಗ್ರಹಣ ಹಿಡಿದಿದೆ. ಯುಕೆಪಿ-3 ಪೂರ್ಣಗೊಂಡರೆ ರಾಜ್ಯದ ಸುಮಾರು 20 ಜಿಲ್ಲೆಗಳಿಗೆ ನೀರಾವರಿ ವ್ಯವಸ್ಥೆಯಾಗಲಿದೆ. ಉತ್ತರ ಕರ್ನಾಟಕದ ಬರದ ಸಮಸ್ಯೆ ನೀಗಲಿದೆ. ಪರ್ಯಾಯವಾಗಿ ಇದರಿಂದ ಲಾಭವಾಗುವುದು ಅಖಂಡ ಕರ್ನಾಟಕಕ್ಕೆ. ಯುಕೆಪಿ-3ರ ಭೂಸ್ವಾಧೀನ, ಪರಿಹಾರ, ಪುನರ್ವಸತಿಗಾಗಿ 51,000 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ 2018ರಲ್ಲಿ ಅನುಮೋದಿಸಲಾಗಿದೆ. ಯೋಜನೆ ತೆವಳುತ್ತಿರುವುದರಿಂದ ಈಗ ಪರಿಷ್ಕೃತ ಅಂದಾಜು ಮೊತ್ತ ಒಂದು ಲಕ್ಷ ಕೋಟಿ ರೂ.ಗೆ ಹೆಚ್ಚಲಿದೆ. ಒಂದೇ ಬಾರಿಗೆ ಸಾವಿರಾರು ಕೋಟಿ ರೂ. ವಿನಿಯೋಗಿಸುವ ಸ್ಥಿತಿಯಲ್ಲಿ ಸರಕಾರವೂ ಇಲ್ಲ. ಇದು ಕೃಷ್ಣಾ ಯೋಜನೆಯ ಮುಂದಿರುವ ನಿಜವಾದ ಸವಾಲು.

ಯುಕೆಪಿ-3ರಡಿ ಪ್ರಮುಖವಾದ 9 ಏತ ನೀರಾವರಿ ಯೋಜನೆಗಳು ಬರುತ್ತವೆ. ಇವುಗಳ ಕಾಮಗಾರಿಗಳು ಪ್ರಾರಂಭವಾಗಿವೆಯಾದರೂ ಕಳೆದ ಐದಾರು ವರ್ಷಗಳಿಂದ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ಸಾಗುತ್ತಿಲ್ಲ. ರಾಮಥಾಳ, ಸೊಂತಿ, ಬಸಾಪೂರ, ಬಳ್ಳಾರಿ ನಾಲಾ, ತಿಮ್ಮಾಪುರ, ಗುಡ್ಡದ ಮಲ್ಲಾಪುರ, ಹಿರಣ್ಯಕೇಶಿ, ದಂಡಾವತಿ ಏತ ನೀರಾವರಿ ಯೋಜನೆಗಳಲ್ಲಿ ಕೆಲವು ಅಪೂರ್ಣವಾಗಿವೆ. ಕೆಲವು ಪ್ರಾರಂಭವೇ ಆಗಿಲ್ಲ.

ಕೃಷ್ಣಾ ಮೇಲ್ದಂಡೆ ಯೋಜೆ
ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯ

ಕುಲಹಳ್ಳಿ-ಹನ್ನೂರು, ಸಲಟ್ಟೆ-ಶಿವಲಿಂಗೇಶ್ವರ ಮತ್ತು ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಸುಮಾರು 34,134 ಹೆಕ್ಟೇರ್ ಅಚ್ಚುಕಟ್ಟು ನೀರುಣಿಸುವುದು ಬಾಕಿಯಿದೆ. ರಾಜ್ಯದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆಗಳನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದ್ದು, ಇವುಗಳಲ್ಲಿ 19 ಕೆರೆ ತುಂಬಿಸುವ ಯೋಜನೆಗಳನ್ನು 770 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್‌, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ, ಯಾದಗಿರಿ ಜಿಲ್ಲೆಗಳ 899 ಕೆರೆಗಳಿಗೆ ನೀರು ತುಂಬಿಸುವ ಭರವಸೆ ಕೇವಲ ಕಾಗದದಲ್ಲೇ ಉಳಿದಿದೆ.

ಘಟಪ್ರಭಾ ಎಡದಂಡೆ ಕಾಲುವೆಯಡಿ ಬಾಧಿತವಾದ ಜಮಖಂಡಿ ತಾಲೂಕಿನ ಕುಲಹಳ್ಳಿ-ಹುನ್ನೂರ ಭಾಗದ 9,164 ಹೆಕ್ಟೇ‌ರ್ ಪ್ರದೇಶಕ್ಕೆ ನೀರು ಒದಗಿಸುವ ಕುಲಹಳ್ಳಿ ಹುನ್ನೂರು ಏತ ನೀರಾವರಿ ಯೋಜನೆಗೆ 2017ರಲ್ಲಿಯೇ ಅನುಮೋದನೆ ದೊರೆತರೂ ಯೋಜನೆ ಇಂದಿಗೂ ಪೂರ್ಣವಾಗಿಲ್ಲ. ಜಮಖಂಡಿ ತಾಲ್ಲೂಕಿನ 6 ಗ್ರಾಮಗಳು, ಮುಧೋಳ ತಾಲೂಕಿನ 4 ಗ್ರಾಮಗಳ 7,200 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ವೆಂಕಟೇಶ್ವರ ಏತ ನೀರಾವರಿ ಯೋಜನೆ ಇನ್ನೂ ಕುಂಟುತ್ತಿದೆ.

ಮಲಪ್ರಭಾ ನೀರು ಬಳಸಿಕೊಂಡು ಬಾದಾಮಿ ಮತ್ತು ನರಗುಂದ ತಾಲ್ಲೂಕಿನ 1,578 ಹೆಕ್ಟೇ‌ರ್ ಪ್ರದೇಶಕ್ಕೆ ನೀರು ಒದಗಿಸುವ ಕೊಣ್ಣೂರು ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತರೂ ಭೂ ಸ್ವಾಧೀನ ಪಕ್ರಿಯೆಯಿಂದಾಗಿ ಯೋಜನೆ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಒಂದು ಬದಿಯಲ್ಲಿ ಸಮೃದ್ಧ ಕೃಷ್ಣ ಮತ್ತೊಂದು ಬದಿಯಲ್ಲಿ ಭೀಕರ ಬರಗಾಲಕ್ಕೆ ತುತ್ತಾಗುವ ಅಥಣಿ ತಾಲೂಕಿನ 22 ಹಳ್ಳಿಗಳ ಒಣಭೂಮಿ ರೈತರಿಗೆ ವರದಾನವಾಗಬಲ್ಲ ಬಸವೇಶ್ವರ (ಕೆಂಪವಾಡ) ಏತ ನೀರಾವರಿ ಯೋಜನೆ. ಈ ಯೋಜನೆ ಘೋಷಣೆಯಾದಾಗ ಅಥಣಿ ತಾಲೂಕಿನ ರೈತರಿಗೆ 2-3 ವರ್ಷದಲ್ಲಿ ತಮ್ಮ ಭೂಮಿ ಹಸುರಿನಿಂದ ಕಂಗೊಳಿಸುತ್ತದೆ ಎಂಬ ಕನಸು ಇತ್ತು. ಆದರೆ ಅದು ಆಮೆಗತಿಯಲ್ಲಿ ಸಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? ಅಧಿವೇಶನದಲ್ಲಿ ಆಗಬೇಕಾದ್ದೇನು | ಮರಾಠಿ ಮುಂದೆ ಮುಂದೆ, ಕನ್ನಡ ತೀರಾ ಹಿಂದೆ; ಗಡಿನಾಡಲ್ಲಿ ಕನ್ನಡ ಅವಸ್ಥೆ ಶೋಚನೀಯ

ಘಟಪ್ರಭಾ ಮತ್ತು ಮಾರ್ಕಂಡೇಯ ನದಿಯ ನೀರು ಉಪಯೋಗಿಸಿಕೊಂಡು ಗೋಕಾಕ ತಾಲ್ಲೂಕಿನ 12 ಗ್ರಾಮಗಳ 2,568.42 ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸಲು ಗೊಡಚಿನಮಲ್ಕಿ ಏತ ನೀರಾವರಿ ಯೋಜನೆ ಇಂದಿಗೂ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಮಾರ್ಕಂಡೇಯ ಬಲದಂಡೆ ಕಾಲುವೆ ಉಪಯೋಗಿಸಿಕೊಂಡು ಬೈಲಹೊಂಗಲ ತಾಲ್ಲೂಕಿನ 2,718 ಹೆಕ್ಟೇ‌ರ್ ಪ್ರದೇಶಕ್ಕೆ ನೀರುಣಿಸುವ ಚಚಡಿ ಹಾಗೂ ಮುರಗೋಡ ಏತ ನೀರಾವರಿ ಯೋಜನೆ ಶೀಘ್ರ ಪುರ್ಣಗೊಳ್ಳಬೇಕಿದೆ.

ಘಟಪ್ರಭಾ ನದಿಯ ನೀರು ಬಳಸಿಕೊಂಡು ರಾಮದುರ್ಗ, ಸವದತ್ತಿ ಹಾಗೂ ಗೋಕಾಕ್ ತಾ‌ಲೂಕಿನ 13,800 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ರಾಮೇಶ್ವರ ಏತ ನೀರಾವರಿ ಯೋಜನೆಯಲ್ಲಿ ಹೊಲಗಾಲುವೆ ನಿರ್ಮಾಣವಾಗಬೇಕಿದೆ. ಘಟಪ್ರಭಾ ನದಿಯ ನೀರು ಬಳಸಿಕೊಂಡು ಅನುಷ್ಠಾನಗೊಳಿಸುತ್ತಿರುವ ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಂಡರೆ ಮುಧೋಳ ಹಾಗೂ ರಾಮದುರ್ಗ ತಾಲೂಕಿನ 10 ಸಣ್ಣ ನೀರಾವರಿ ಕೆರೆಗಳನ್ನು ತುಂಬಿಸುವ ಜತೆಗೆ 17,377 ಹೆಕ್ಟೇರ್ ಭೂಮಿಗೆ ನೀರಾವರಿ ಸೌಕರ್ಯ ಕಲ್ಪಿಸಬಹುದು.

ಮಹದಾಯಿ ನೀರು
ಮಹದಾಯಿ ನದಿ

ಹಾವು ಏಣಿಯ ಆಟದಲ್ಲಿ ಮಹದಾಯಿ ಯೋಜನೆ

ಉತ್ತರ ಕರ್ನಾಟಕ ಭಾಗದ ಬಹುದೊಡ್ಡ ಬೇಡಿಕೆಯಾದ ಕಳಸಾ-ಬಂಡೂರಿ, ಮಹದಾಯಿ ಯೋಜನೆ ಜಾರಿಯ ಐದು ದಶಕದ ಹೋರಾಟಕ್ಕೆ ಇನ್ನೇನು ಮುಕ್ತಿ ಸಿಕ್ಕಿತು ಎನ್ನುವಾಗಲೇ ಗೋವಾ ಸರ್ಕಾರ ಖ್ಯಾತೆ ತೆಗೆದಿದೆ. ಜೊತೆಗೆ ಕೇಂದ್ರ ವನ್ಯಜೀವಿ ಮಂಡಳಿ ಕೂಡ ಯೋಜನೆ ಜಾರಿಗೆ ಅನುಮತಿ ನೀಡದೇ ವಿಳಂಬ ಧೋರಣೆ ಅನುಸರಿಸುತ್ತಿದೆ. ಕಾಲ ಕಾಲಕ್ಕೆ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಮಹದಾಯಿಯನ್ನು ತಮ್ಮ ರಾಜಕೀಯ ಆಟಕ್ಕೆ ಬಳಸಿಕೊಂಡಿದ್ದೇ ಹೆಚ್ಚು. ಕಳೆದ ಅವಧಿಯಲ್ಲಿ ಕೇಂದ್ರದಲ್ಲಿ, ರಾಜ್ಯದಲ್ಲಿ ಮತ್ತು ಗೋವಾದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಮಹದಾಯಿ ಯೋಜನೆಯನ್ನು ಜಾರಿಗೆ ತರುವಲ್ಲಿ ಬಿಜೆಪಿ ಮನಸ್ಸು ಮಾಡಲಿಲ್ಲ.

ಹಾವು ಏಣಿಯ ಆಟದ ತರ ಮಹದಾಯಿ ಯೋಜನೆಯಾಗಿದೆ. ಮಹದಾಯಿಯನ್ನು ಜಾರಿಗೆ ತಂದರೆ ರಾಜಕೀಯ ಅಸ್ತ್ರವೊಂದು ಮರೆಯಾಗುತ್ತದೆ ಎಂಬ ಹುನ್ನಾರ ಇದರ ಹಿಂದಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ. ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಸಹಕರಿಸಿದರೆ ಸಂಪೂರ್ಣ ಲಾಭ ಕಾಂಗ್ರೆಸ್‌ ಪಾಲಾಗುತ್ತದೆ ಎಂಬುದು ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷಗಳ ಹೊಟ್ಟೆಕಿಚ್ಚು. ಅವರದೇ ಸರ್ಕಾರ ಇದ್ದಾಗಲೂ ಮಾಡುವುದಿಲ್ಲ, ಇಲ್ಲದಿದ್ದಾಗಲೂ ಮಾಡುವುದಿಲ್ಲ. ಇದು ಜನರಿಗೆ ಅರ್ಥವಾಗಬೇಕಿದೆ.

ಸಿದಗೌಡ ಮೋದಗಿ
ಸಿದಗೌಡ ಮೋದಗಿ, ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರು

“ನಮ್ಮ ಭಾಗದ ಸಚಿವರಿಗೆ, ಶಾಸಕರಿಗೆ ಮಹದಾಯಿ ಆಟದ ಅಂಗಳವಾಗಿದೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹದಾಯಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಯಾವುದೇ ನಾಯಕರಿಗೂ ಮಹದಾಯಿ ಜಾರಿ ಬಗ್ಗೆ ಕಿಂಚತ್ತೂ ಕಾಳಜಿ ಕಾಣುತ್ತಿಲ್ಲ. 2018ರಲ್ಲೇ ಈ ಬಗ್ಗೆ ತೀರ್ಪು ಬಂದಿದೆ. ಕಳೆದ ಬಾರಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇತ್ತು. ಆಗಲೂ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇತ್ತು. ಯೋಜನೆ ಜಾರಿಗೆ ಯಾವ ಕ್ರಮವನ್ನೂ ಕೈಗೊಳ್ಳದೇ ಚುನಾವಣೆ ಬಂದಾಗ ಯೋಜನೆಯ ಪರಿಷ್ಕೃತ ವಿಸ್ತ್ರತ ಯೋಜನಾ ವರದಿಗೆ ಒಪ್ಪಿಗೆ ನೀಡಿದಂತೆ ಮಾಡಿ ರಾಜಕೀಯ ಲಾಭ ಪಡೆಯಿತು” ಎಂದು ಈ ದಿನ.ಕಾಮ್‌ ಜೊತೆ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಮಾತನಾಡಿ ಬೇಸರ ವ್ಯಕ್ತಪಡಿಸಿದರು.

ಹೂಳಿನಿಂದ ತುಂಬಿದ ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಂಗ್ರಹಣೆಯಿಂದ ಉಂಟಾಗಿರುವ ನೀರು ಸಂಗ್ರಹಣೆ ಸಾಮರ್ಥ್ಯದ ಕೊರತೆ ನಿವಾರಿಸಲು ಕೊಪ್ಪಳ ಜಿಲ್ಲೆಯ ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಯೋಜನೆಯನ್ನು ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚಿಸಿ, ಸಹಮತಿಯೊಂದಿಗೆ ಯೋಜನೆ ಅನುಷ್ಠಾನಗೊಳಿಸುವ ಮಾತುಕತೆಗಳು ಅರ್ಧಕ್ಕೆ ನಿಂತಿವೆ.

ಒಟ್ಟಾರೆ ಬಯಲುಸೀಮೆಯ ನೀರು ಮತ್ತು ನೀರಾವರಿ ತಾಪತ್ರಯಗಳು ನೀಗಿಲ್ಲ. ಯುಕೆಪಿಯಿಂದ ಯೋಜನೆಯಿಂದ ಸಾಕಷ್ಟು ನೀರು ಹಂಚಿಕೆಯಾಗಿದ್ದರೂ ಇದಕ್ಕೆ ಅಂಟಿಕೊಂಡ ಏತ ನೀರಾವರಿ ಯೋಜನೆಗಳು ಪೂರ್ಣಗೊಳ್ಳದೇ ನೀರು ಹಂಚಿಕೆ ರೈತರಿಗೆ ಸಿಗುತ್ತಿಲ್ಲ. ನಗರ ಮತ್ತು ಗ್ರಾಮೀಣ ಭಾಗದ ಕುಡಿಯುವ ನೀರು ಒದಗಿಸುವ ಯೋಜನೆಗಳು ತುರ್ತಾಗಿ ಪೂರ್ಣಗೊಳ್ಳಬೇಕಿದೆ. ಆದರೆ, ಗಡಿನಾಡು ಜಿಲ್ಲೆ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿ ಉತ್ತರ ಕರ್ನಾಟಕಕ್ಕೆ ‘ಶಕ್ತಿಕೇಂದ್ರ’ ಕೊಡಲಾಗಿದೆ ಎಂದು ಬೀಗುವ ಪ್ರಭುತ್ವ, ಆ ಭಾಗದ ಜನರಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ, ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಲ್ಲಿ ಹಾಗೂ ರೈತರ ಕಷ್ಟಗಳಿಗೆ ಸ್ಪಂದಿಸುವಲ್ಲಿ ತುಟಿಯೇ ಬಿಚ್ಚದಿರುವುದು ವಿಪರ್ಯಾಸ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X