- ವಾಲ್‌ಸ್ಟ್ರೀಟ್ ಜರ್ನಲ್ ವರದಿಗಾರ್ತಿ ಸಬ್ರೀನಾ ಸಿದ್ದೀಕಿಗೆ ಕಿರುಕುಳ
- ‘ಕಿರುಕುಳ ನೀಡುವುದನ್ನು ನಾವು ಖಂಡಿಸುತ್ತೇವೆ’ ಎಂದ ಜಾನ್ ಕಿರ್ಬಿ
ಕಳೆದ ವಾರ ಪ್ರಧಾನಿ ಮೋದಿಯವರ ಅಮೆರಿಕ ಪ್ರವಾಸದ ವೇಳೆ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾರತದಲ್ಲಿನ ಮಾನವ ಹಕ್ಕುಗಳ ಬಗ್ಗೆ ಪ್ರಶ್ನಿಸಿದ್ದ ವಾಲ್‌ಸ್ಟ್ರೀಟ್ ಜರ್ನಲ್ ವರದಿಗಾರ್ತಿ ಸಬ್ರೀನಾ ಸಿದ್ದೀಕಿಗೆ ಆನ್‌ಲೈನ್‌ನಲ್ಲಿ ಕಿರುಕುಳ ನೀಡುತ್ತಿರುವ ಹಿಂದುತ್ವವಾದಿಗಳ ನಡೆಯನ್ನು ‘ಶ್ವೇತಭವನ’ವು ಖಂಡಿಸಿದೆ.
ಹಿಂದುತ್ವವಾದಿಗಳು ಹಾಗೂ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸೇರಿದಂತೆ ಬಿಜೆಪಿ ಸದಸ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಕಿರುಕುಳ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅಮೆರಿಕದ ಸ್ಟ್ರಾಟೆಜಿಕ್ ಕಮ್ಯುನಿಕೇಷನ್ಸ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಸಂಯೋಜಕ ಜಾನ್ ಕಿರ್ಬಿ, ‘ಇದು ಸ್ವೀಕಾರಾರ್ಹವಲ್ಲ. ಖಂಡನೀಯ ನಡೆ’ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಸಂದರ್ಭದಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರ ತಾರತಮ್ಯದ ಕುರಿತು ಶ್ವೇತಭವನದ ವರದಿಗಾರ್ತಿ ಸಬ್ರೀನಾ ಸಿದ್ದೀಕಿ ಮೋದಿಯವರನ್ನು ಪ್ರಶ್ನಿಸಿದ್ದರು. ಆದರೆ, ಅದಕ್ಕೆ ಸರಿಯಾದ ಉತ್ತರ ನೀಡುವ ಬದಲು, ಭಾರತದ ಪ್ರಜಾಪ್ರಭುತ್ವದ ಬಗ್ಗೆ ಹೇಳಿಕೊಂಡಿದ್ದರು.
ಪತ್ರಿಕಾಗೋಷ್ಠಿಯ ನಂತರ ಸಿದ್ದೀಕಿ ಅವರ ಮೇಲೆ ಬಿಜೆಪಿಯ ನಾಯಕರೂ ಸೇರಿ, ಹಿಂದುತ್ವವಾದಿಗಳು ಟ್ವಿಟರ್‌ನಲ್ಲಿ ದಾಳಿ ನಡೆಸಿ, ‘ಪಾಕಿಸ್ತಾನದ ಪೋಷಕರ ಮಗಳು’ ಮತ್ತು ‘ಇಸ್ಲಾಮಿಸ್ಟ್’ ಎಂದು ದಾಳಿ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಆರ್‌ಎಸ್‌ಎಸ್ ಲಾಠಿ ಕಸಿದುಕೊಂಡು ಬಿಜೆಪಿಯಲ್ಲಿ ಬಡಿದಾಡಿಕೊಂಡರೂ ಆಶ್ಚರ್ಯವಿಲ್ಲ: ಕಾಂಗ್ರೆಸ್ ಟೀಕೆ
ಈ ದಾಳಿಗೆ ಉತ್ತರವಾಗಿ ಟ್ವೀಟ್ ಮಾಡಿದ್ದ ಪತ್ರಕರ್ತೆ, ತನ್ನ ತಂದೆಯೊಂದಿಗೆ ಭಾರತ ಕ್ರಿಕೆಟ್ ತಂಡವನ್ನು ಬೆಂಬಲಿಸುತ್ತಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಗ್ಗೆ ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಶ್ವೇತಭವನದ ಅಧಿಕಾರಿ ಜಾನ್ ಕಿರ್ಬಿ, “ಆ ಕಿರುಕುಳದ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಇದು ಸ್ವೀಕಾರಾರ್ಹವಲ್ಲ. ಯಾವುದೇ ಸಂದರ್ಭದಲ್ಲೂ ಪತ್ರಕರ್ತರಿಗೆ ಯಾವುದೇ ಕಿರುಕುಳ ನೀಡುವುದನ್ನು ನಾವು ಖಂಡಿಸುತ್ತೇವೆ. ಇದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧ” ಎಂದು ಹೇಳುವ ಮೂಲಕ ಖಂಡಿಸಿದ್ದಾರೆ.
‘ಅಮೆರಿಕವು ಪತ್ರಿಕಾ ಸ್ವಾತಂತ್ರ್ಯಕ್ಕೆ ಬದ್ಧವಾಗಿದೆ. ಪತ್ರಕರ್ತರು ತಮ್ಮ ಕೆಲಸವನ್ನು ಅವರು ಮಾಡುತ್ತಿರುವಾಗ ಅವರಿಗೆ ಬೆದರಿಕೆ ಅಥವಾ ಕಿರುಕುಳ ನೀಡುವುದನ್ನು ನಾವು ಖಂಡಿಸುತ್ತೇವೆ” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಹೇಳಿಕೆ ನೀಡಿದ್ದಾರೆ.