ಅಂತೂ ಜೋ ಬೈಡನ್ ಚುನಾವಣಾಕಣದಿಂದ ನಿವೃತ್ತಿಹೊಂದಿದ್ದಾನೆ. ಆತನ ಸ್ಥಾನವನ್ನು ಕಮಲಾ ಹ್ಯಾರಿಸ್ ತುಂಬಲು ಹೊರಟಿದ್ದಾಳೆ. ಅಮೆರಿಕದಲ್ಲಿ ಮೊಟ್ಟಮೊದಲ ಬಾರಿಗೆ ಡೊನಾಲ್ಡ್ ಹ್ಯಾರಿಸ್ ಎಂಬ ಕಪ್ಪುತಂದೆ ಮತ್ತು ಶ್ಯಾಮಲಾ ಮಾಧವನ್ ಎಂಬ ಭಾರತೀಯ ಮೂಲದ ಅಮ್ಮನಿಗೆ ಹುಟ್ಟಿದ ಓರ್ವ ಮಿಶ್ರಜನಾಂಗದ ಹೆಂಗಸು ಪ್ರಪ್ರಥಮ ಬಾರಿಗೆ ಅಮೆರಿಕಾದ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆಗೆ ನಿಂತಿದ್ದಾಳೆ.
ಈಕೆ ಎದುರಿಸುತ್ತಿರುವುದು ಡೊನಾಲ್ಡ್ ಟ್ರಂಪ್. ವಲಸಿಗರೆಂದರೆ ಕಳ್ಳರು, ದಗಾಕೋರರು, ಮಾದಕವ್ಯಸನಿಗಳು ಹಾಗೂ ಹೆಂಗಸರನ್ನು ಬಲಾತ್ಕಾರ ಮಾಡುವವರು ಎಂದು ಆಪಾದಿಸುತ್ತಾ ‘ವಲಸಿಗ ಅಪರಾಧ’ ಎಂಬ ಪದಸಮುಚ್ಚಯವನ್ನು ನಾನೇ ಕಂಡುಹಿಡಿದದ್ದು ಎಂದು ಎದೆತಟ್ಟಿ ಹೇಳಿಕೊಳ್ಳುವ ಡೊನಾಲ್ಡ್ ಟ್ರಂಪ್.
ಈತನ ಜತೆ ಉಪಾಧ್ಯಕ್ಷ ಸ್ಥಾನಕ್ಕೆ ನಿಂತಿರುವ ಒಹಾಯೋ ರಾಜ್ಯದ ಸೆನೆಟರ್. ಅಷ್ಟೇನೂ ಅನುಕೂಲವಿಲ್ಲದ ಹಿನ್ನೆಲೆಯಿಂದ ಬಂದು ಯೇಲ್ ವಿಶ್ವವಿದ್ಯಾನಿಲಯಕ್ಕೆ ಹೋಗಿ ನಂತರ ಒಹಾಯೋ ರಾಜ್ಯದ ಸೆನೆಟರ್ ಆಗಿ ಈಗ ಬೇರೆಲ್ಲರನ್ನೂ ಹಿಂದೆಹಾಕಿ ‘ಅಮೆರಿಕಾದ ಚಿಕ್ಕಪಟ್ಟಣದಲ್ಲಿ ಬೆಳೆದರೂ, ಅಂತ ಅನುಕೂಲಗಳಿಲ್ಲದೇ ಬೆಳೆದರೂ ಒಂದು ದಿನ ಉಪಾಧ್ಯಕ್ಷ ನಂತರ ಅಧ್ಯಕ್ಷನಾಗಬಹುದು’ ಎಂದು ಸಾಬೀತುಪಡಿಸಲೆಂದೇ ನಿಂತಿರುವ ಜೆ ಡಿ ವ್ಯಾನ್ಸ್. ಈತ ಒಂದು ಕಾಲದಲ್ಲಿ ಟ್ರಂಪನ್ನು ‘ಹಿಟ್ಲರ್’, ‘ಅಫೀಮಿನಂತವನು’ ಎಂದೆಲ್ಲ ಟೀಕಿಸಿ ಈಗ ಆತನನ್ನು ಬಿಟ್ಟರೆ ಇಲ್ಲ ಎಂದು ಕೊಂಡಾಡುವ ಸಮಯಸಾಧಕ.
ಈತ ಮತ್ತು ಇಂಥ ಗಂಡಸರ ಒಂದು ವಿಶೇಷ ಗುಣವಿದೆ. ಇವರು ಸ್ಪರ್ಧೆಯಲ್ಲಿ ಮುಂದೆ ಹೋಗಲು ಏನು ಮಾತಾಡಬೇಕೋ ಅಂತದನ್ನೆಲ್ಲಾ ಮಾತಾಡಲು ಕಲಿತಿರುತ್ತಾರೆ. ರಾಜಕೀಯವೆಂದರೆ ಇವರಿಗೆ ಯಾವುದೇ ನೀತಿಸಂಹಿತೆಗಳಿಲ್ಲ. ಅಧಿಕಾರ ಮಾತ್ರ ಮುಖ್ಯ.
ಟ್ರಂಪ್ನ ವಲಸಿಗ ವಿರೋಧ ನೀತಿಯನ್ನು ಬ್ಯಾಲೆನ್ಸ್ ಮಾಡಲೆಂದೇ ತೋರಿಸಲು ಜೆ ಡಿ ವ್ಯಾನ್ಸ್ ತನ್ನ ಪತ್ನಿ ಉಷಾ ವ್ಯಾನ್ಸ್ ಜತೆಜತೆಗೇ ಪ್ರಚಾರ ಮಾಡುತ್ತಿದ್ದಾನೆ. ಭಾರತೀಯ ಮೂಲದ ಈಕೆ ಒಂದು ಕಾಲದಲ್ಲಿ ಟ್ರಂಪ್ ವಿರೋಧಿ. ಈಗ ಅದೇ ಟ್ರಂಪ್ ಜತೆಗಿನ ಅಮೆರಿಕಾದ ಉಪಾಧ್ಯಕ್ಷ ಅಭ್ಯರ್ಥಿಯ ಹೆಂಡತಿ.
ಅಮೆರಿಕನ್ ಪ್ರಜೆಗಳಾದ ಭಾರತೀಯ ವಲಸಿಗರು ಈ ಬಾರಿಯ ಚುನಾವಣೆಯಲ್ಲಿ ಹೇಗೆ ಮತಚಲಾಯಿಸುತ್ತಾರೆ ಎಂಬುದು ಕುತೂಹಲಕಾರಿ ಸಂಗತಿ. ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳಲ್ಲಿರುವ ಕೆಲವು ಸಾಮಾನ್ಯ ಸಂಗತಿಗಳಿವೆ. ಬಹಳಷ್ಟು ಜನ ಆರ್ಥಿಕವಾಗಿ ಅನುಕೂಲವಾಗಿದ್ದಾರೆ ಮತ್ತು ಭಾರತದಲ್ಲಿ ಕೂಡ ಚೆನ್ನಾಗಿ ಓದಿಕೊಂಡು ಆರ್ಥಿಕ ಅಥವಾ ಸಾಮಾಜಿಕ ಸ್ತರಗಳಲ್ಲಿ ಅನುಕೂಲವಾಗಿದ್ದು ಈಗ ಅದನ್ನು ವಲಸೆಯಿಂದ ಇನ್ನೂ ಸಬಲಗೊಂಡಿಸಿಕೊಂಡಿರುವವರು. ಮುಕ್ಕಾಲುವಾಸಿ ಜನ ವೈದ್ಯರು ಅಥವಾ ಮಾಹಿತಿ ತಂತ್ರಜ್ಞರು. ಅಂದರೆ ಒಂದು ಕಾಲದಲ್ಲಿ ಎಚ್ 1ಬಿ ವೀಸಾದಲ್ಲಿ ಅಮೆರಿಕಕ್ಕೆ ಬಂದು ನಂತರ ಅಮೆರಿಕದ ಪೌರತ್ವ ಪಡೆದು ಈಗ ಅಮೆರಿಕಾದ ಅಧ್ಯಕ್ಷನನ್ನು ಚುನಾಯಿಸಲು ಮತಚಲಾಯಿಸುವವರು.
ಇವರು ಸುಮಾರು ತಮ್ಮ ಆದಾಯದ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ತೆರಿಗೆಯನ್ನು ಸರಕಾರಕ್ಕೆ ಕೊಡಬೇಕಾಗಿರುವುದರಿಂದ ಯಾವ ಸರಕಾರ ಅಧಿಕಾರಕ್ಕೆ ಬಂದಲ್ಲಿ ತಮ್ಮ ದುಡ್ಡು ತಮ್ಮಲ್ಲೇ ಉಳಿಯುತ್ತದೆ, ಯಾವ ಸರಕಾರ ಅಧಿಕಾರಕ್ಕೆ ಬಂದಲ್ಲಿ ತಮಗೆ ತೆರಿಗೆ ಅನುಕೂಲಗಳು ಸಿಗುತ್ತವೆ ಎಂಬುದು ಇವರು ಅಭ್ಯರ್ಥಿಯನ್ನು ಆರಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.
ಇನ್ನೊಂದು ಮುಖ್ಯ ಅಂಶ, ಈ ಗುಂಪಿನ ‘ಸಾಮಾಜಿಕ ಅನುಕೂಲ’. ಬಹುಪಾಲು ಭಾರತದಲ್ಲಿನ ಮೇಲ್ಜಾತಿಗಳಲ್ಲಿ ಬೆಳೆದುಬಂದ ಈ ಗುಂಪು ಅಮೆರಿಕಾದಂತ ದೇಶಕ್ಕೆ ವಲಸೆಗೊಂಡಾಗ ತಾವು ಅಮೆರಿಕಾದ ಮುಖ್ಯವಾಹಿನಿಯ ಜತೆ ವಿಲೀನಗೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದಾಗ ಅವರು ಮುಖ್ಯವಾಹಿನಿ ಎಂದು ಪರಿಗಣಿಸುತ್ತಿರುವುದು ಅಮೆರಿಕಾದ ಸಬರ್ಬನ್ ಬಿಳಿಯ ಜನರನ್ನು ಮಾತ್ರ. ಇವರ್ಯಾರೂ ನ್ಯೂಯಾರ್ಕಿನ ಬ್ರೂಕ್ಲಿನ್ನಿನ ಕರಿಯರು ಅಥವಾ ಟೆಕ್ಸಸಿನ ಮೆಕ್ಸಿಕನ್ನರ ಜತೆ ತಮ್ಮನ್ನು ಸಮೀಕರಿಸಿಕೊಳ್ಳುತ್ತಿಲ್ಲ.
ಈ ರೀತಿ ತಾವು ಅಮೆರಿಕನ್ನರಾಗುವುದು ಎಂದರೆ ಬಿಳಿಯರಾಗುವುದು ಎಂದು ತಿಳಿದಿರುವ ಈ ಗುಂಪು ಕೆಲಸದಲ್ಲಿ ಮೇಲೇರಲಾಗದಿದ್ದಾಗ, ಬಿಳಿಯ ಪೊಲೀಸು ಸಂಚಾರನಿಯಮವನ್ನು ಉಲ್ಲಂಘಿಸಿದಕ್ಕಾಗಿ ಕಾರನ್ನು ನಿಲ್ಲಿಸಿ ವಿಚಾರಿಸಿದಾಗಲೂ ತಮ್ಮ ಚರ್ಮದ ಬಣ್ಣ ಬಿಳಿಯಾಗದೇ ಇರುವುದೇ ಈ ರೀತಿಯ ಸಾಮಾಜಿಕ ಅನ್ಯಾಯಕ್ಕೆ ಕಾರಣ ಎಂದು ಅಂದುಕೊಂಡೇ ತಮ್ಮ ‘ಅಲ್ಪಸಂಖ್ಯಾತ’ ಐಡೆಂಟಿಟಿಯೆಂಬ ವಿರೋಧಾಭಾಸವನ್ನು ಭದ್ರಪಡಿಸಿಕೊಳುತ್ತಿರುತ್ತಾರೆ.

ಸಂಜೆ ಪಾರ್ಟಿಗಳಲ್ಲಿ ಗೋಡಂಬಿ, ಸ್ಕಾಚುಗಳ ಜತೆಗೆ ಟ್ರಂಪ್, ಕ್ರಿಕೆಟ್, ಸ್ಟಾಕ್ ಮಾರ್ಕೆಟ್ಟು, ಎಲಕ್ಟ್ರಿಕ್ ಕಾರುಗಳ ಬಗ್ಗೆ ಪಟ್ಟಾಂಗ ಹೊಡೆಯುವ ಜತೆಗೆ ಈ ಬಾರಿಯ ಚುನಾವಣೆಯಲ್ಲಿ ಕಮಲ ಹ್ಯಾರಿಸ್ ಗೆಲ್ಲುವ ಸಾಧ್ಯತೆಯ ಬಗ್ಗೆ ಮಾತು ಹಾಗೇ ಹೋಗುತ್ತದೆ.
ಈ ಸುದ್ದಿ ಓದಿದ್ದೀರಾ? ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕಣದಿಂದ ಹೊರ ನಡೆದ ಜೋ ಬೈಡನ್, ಕಮಲಾ ಹ್ಯಾರಿಸ್ ಸ್ಪರ್ಧೆ!
ಕಮಲಾ ಹ್ಯಾರಿಸ್ ಬಹಳಷ್ಟು ಭಾರತೀಯರು ಯೋಚಿಸದ, ಗಮನಿಸದ, ಬಯಸದ ವಲಸೆಯ ಇನ್ನೊಂದು ಮಗ್ಗುಲು. ಕಪ್ಪು ಅಪ್ಪ, ಭಾರತೀಯ ಅಮ್ಮನಿಗೆ ಹುಟ್ಟಿದ ಈಕೆ ಎರಡೆರಡು ಹೈಫನ್ಗಳನ್ನು (ಕಪ್ಪು-ದಕ್ಷಿಣ ಏಶ್ಯಾ ಮೂಲದ-) ಅಮೆರಿಕನ್. ಅಮೆರಿಕಾ ಬಿಳಿಯ ಬಣ್ಣದವರನ್ನು ಬಿಟ್ಟು ಬೇರೆಲ್ಲರಿಗೂ ಅವರ ಜನಾಂಗೀಯ ಮೂಲವನ್ನು ಉದ್ಧರಿಸಿಯೇ ಕರೆಯುವುದು. ಏಶಿಯನ್ ಅಮೆರಿಕನ್, ಆಫ್ರಿಕನ್ ಅಮೆರಿಕನ್, ಮೆಕ್ಸಿಕನ್ ಅಮೆರಿಕನ್ ಇತ್ಯಾದಿ.
ಅಮೆರಿಕನ್ನರೆಂದರೆ ತಮ್ಮ ಹೈಫನ್ನುಗಳನ್ನು ತೊರೆದು ಬಿಳಿಯರಾಗುವುದು ಎಂದು ತಿಳಕೊಂಡ ಭಾರತೀಯರು ಅರಿತುಕೊಳ್ಳದೇ ಇರುವುದೆಂದರೆ ತಾವು ಹಾಗಾಗುವುದು ಸಾಧ್ಯವೇ ಇಲ್ಲ ಎನ್ನುವುದು.
ಇವೆಲ್ಲ ಬರೇ ಸುಳ್ಳು. ನಮಗೆ ಬಿಳಿಯರಾಗುವ ಹಂಬಲವೇ ಇಲ್ಲ ಎಂದು ಹೇಳುವ ಲಿಬರಲ್ಲುಗಳಾದ ನಾವೆಲ್ಲ ಒಂದು ಪ್ರಾಮಾಣಿಕ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ. ನಮ್ಮ ಮಕ್ಕಳು ತನ್ನ ಬಾಯ್ಫ್ರೆಂಡು, ಗರ್ಲ್ಫ್ರೆಂಡಾಗಿ ಒಬ್ಬ ಮೆಕ್ಸಿಕನ್ನನನ್ನೋ, ಕ್ಯೂಬನ್ನನನ್ನೋ, ಸೊಮಾಲಿಯನ್ನನ್ನೋ ಕರೆದುಕೊಂಡು ಬಂದಾಗ ನಮ್ಮ ಮನಸ್ಸು ಅದನ್ನು ಪ್ರಾಮಾಣಿಕವಾಗಿ ಯಾವಮಟ್ಟಿಗೆ ಸ್ವೀಕರಿಸುತ್ತದೆ ಎಂಬುದನ್ನು ನಾವು ಒರೆಹಚ್ಚಿ ನೋಡಿಕೊಳ್ಳಬೇಕಾಗಿದೆ.
ಲಿಬರಟೇರಿಯನ್ ಅನ್ನುವುದು ಮನಸ್ಥಿತಿ, ಜೀವನಕ್ರಮ. ಎರಡೂ ಬದಲಾಗಬೇಕಾದರೆ ಒಂದು ವಿಪ್ಲವವಾಗಲೇಬೇಕು.
ಆ ವಿಪ್ಲವಕ್ಕೆ ಬಾರತೀಯ-ಅಮೆರಿಕನ್ನರು ಸಿದ್ಧವಾಗಿದ್ದೀವಾ?
ನಮ್ಮ ಮತವೂ ಬಹಳ ಮುಖ್ಯ. ಜತೆಗೆ ನಮ್ಮ ಮನಸ್ಥಿತಿಯನ್ನು ನಾವು ಪ್ರಾಮಾಣಿಕವಾಗಿ ಅರಿತು ಕಮಲಾ ಹ್ಯಾರಿಸ್ಗೆ ಮತಹಾಕುವ ಮೂಲಕ ನಾವು ಟ್ರಂಪ್ಅನ್ನು ವಿರೋಧಿಸುತ್ತಿದ್ದೇವೆ ಎಂದು ತಿಳಕೊಳ್ಳುವುದು ಬಹಳ ಮೇಲ್ಪದರದ ಚಿಂತನೆ.
ಟ್ರಂಪ್ ಸ್ತ್ರೀದ್ವೇಷದ, ತೆರಿಗೆ ವಂಚಿಸುವ, ಗಂಡಾಳ್ವಿಕೆಯ, ಬಿಗಮಿಯ ಮಾನವರೂಪ. ಕಮಲಾ ಹ್ಯಾರಿಸ್ಗೆ ಮತ ಹಾಕುವ ಮುನ್ನ ಆಕೆ ಪ್ರತಿನಿಧಿಸುವ ಎಲ್ಲ ಅಂಶಗಳಿಗೂ ನಮಗೆ ಒಪ್ಪಿಗೆ ಇದೆ ಎಂದು ತಿಳಕೊಂಡು ಮತ್ತೆ ಮನೆಗೆ ಬಂದು ಮಕ್ಕಳಿಗೆ ಯಾರನ್ನು ಬೇಕಾದರೂ ಡೇಟ್ ಮಾಡು ಎಂದು ಸ್ಮಾಲ್ಪ್ರಿಂಟಲ್ಲಿ ಕರಿಯರ, ಮೆಕ್ಸಿಕನ್ನರ ಬಗ್ಗೆ ಎಚ್ಚರ ಎಂದು ಶಾಸನ ವಿಧಿಸಿದ ಎಚ್ಚರಿಕೆಯಂತೆ ವಿಧಿಸುವುದು ತೋರಿಕೆಯಾದೀತು.
- ಡಾ. ಗುರುಪ್ರಸಾದ್ ಕಾಗಿನೆಲೆ
ಇದೊಂದು ಒಳ್ಳೆಯ ಲೇಖನ. ಅಮೆರಿಕಾ ದೇಶದಲ್ಲಿ ಹಲವು ವರ್ಷ ಕಾಲ ನೆಲೆಸಿ, ನಿಜವಾಗಿಯೂ “American Values” ಅರ್ಥ ಮಾಡಿಕೊಂಡವರಿಂದ ಮಾತ್ರ ಇಂತಹ ಚಿಂತನೆಯ ಬರಹ ಸಾಧ್ಯ. ಕೇವಲ ಡಾಲರ್ ದುಡಿದು, ತಮ್ಮ ಐಶ್ವರ್ಯ ಅಂತಸ್ತು ಪ್ರದರ್ಶನವನ್ನು ವೀಕೆಂಡ್ ಪಾರ್ಟಿಗಳಲ್ಲಿ ತಮ್ಮಂತಹದೆ ಇತರ ಭಾರತೀಯ ಮೂಲದವರ ನಡುವೆ ಬೊಗಳೆ ಬಿಡುವವರಿಗೆ ಅಮೇರಿಕಾದ ಇತಿಹಾಸ, ಕಪ್ಪು ಜನರ ಸಂಘರ್ಷದ ಜ್ಞಾನವೇ ಇರುವುದಿಲ್ಲ.
ಪ್ರಸ್ತುತ ಭಾರತ ಮೂಲದ ಜನರಿಗೆ ಸಿಕ್ಕಿರುವ ಸಮಾನತೆಗೆ ಡಾ. ಮಾರ್ಟಿನ್ ಲೂತರ್ ಕಿಂಗ್ ಹಾಗೂ ಇತರ ಕಪ್ಪು ಜನಾಂಗದವರ ಹೋರಾಟದ ಪ್ರತಿಫಲವೆಂಬುದನ್ನು ಮರೆತಿದ್ದಾರೆ. ಭಾರತೀಯ ಮೂಲದ ಜನ ತಮ್ಮನ್ನು ಬಿಳಿಯರನ್ನ ಮೆಚ್ಚಿಸಲು ಎಷ್ಟೇ ಪ್ರಯತ್ನಿಸಿದರೂ ಅದು ಮರೀಚಕೆಯೆ. ಕಾಮುಕ, ದುಷ್ಟ ಮನೋಭಾವನೆಯ ಟ್ರಂಪ್ ನನ್ನು ಈಗ ಬೆಂಬಲಿಸಿದರೆ ಅವನು ಚುನಾಯಿತನಾದರೆ ಅವನಿಂದಮೊದಲು ನಿಂದನೆ ಹಾಗೂ ಅವಮಾನಕ್ಳೆೆ ಒಳಗಾಗುವವರು ಭಾರತೀಯ ಮೂಲದವರೆ.
ಗುರುಪ್ರಸಾದ್ ಅವರಿಗೆ ಕನ್ನಡಿಗರಿಗೆ ಇಂತಹ ಕ್ಲಿಷ್ಟ ವಿಷಯವನ್ನು ವರದಿ ಮಾಡಿದ್ದಕ್ಕೆ ಅಭಿನಂದನೆಗಳು.