- ಈಶ್ವರಪ್ಪ ಸೇರಿದಂತೆ ಹಲವು ನಾಯಕರಿಂದ ಅಸಮಾಧಾನ
- ದಲಿತರ ಪರವಾಗಿ ಯಾರೂ ಕೈ ಎತ್ತಿಲ್ಲ: ರಮೇಶ್ ಜಿಗಜಿಣಗಿ
ವಿಧಾನಸಭಾ ಚುನಾವಣೆಯಲ್ಲಿ ನೋಡಿದ್ದೇವೆ, ಲೋಕಸಭೆಯಲ್ಲೂ ನೋಡಿದ್ದೇವೆ. ಅಸೆಂಬ್ಲಿಯಲ್ಲಿ ದೊಡ್ಡ ದೊಡ್ಡ ಗೌಡರು ಸಾಹುಕಾರರುಗಳು ಬಂದರು. ಅವರ ಪರವಾಗಿ ನಾವು (ದಲಿತರು) ಕೈ ಎತ್ತುತ್ತಲೇ ಇದ್ದೇವೆ. ಕಳೆದ 75 ವರ್ಷಗಳಿಂದ ನಾವು ಕೈ ಎತ್ತಿಕೊಂಡೇ ಬಂದಿದ್ದೇವೆ. ಆದರೆ, ನಮ್ಮ ಪರವಾಗಿ ಯಾರೂ ಕೈ ಎತ್ತಿಲ್ಲ ಎಂದು ಸಂಸದ ರಮೇಶ್ ಜಿಗಜಿಣಗಿ ಬೇಸರ ವ್ಯಕ್ತಪಡಿಸಿದರು.
ಬಿ ವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ಬಗ್ಗೆ ಕೆ ಎಸ್ ಈಶ್ವರಪ್ಪ ಸೇರಿದಂತೆ ಹಲವು ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ. ಈಗ ಮುಂದುವರಿದು, ಸಂಸದ ರಮೇಶ್ ಜಿಗಜಿಣಗಿ ಈ ಬಗ್ಗೆ ಮಾತನಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉರಿದು ಉಳಿದ ಮಣ್ಣಿನ ಹಣತೆಯಲ್ಲಿ ಎಣ್ಣೆ ಹೆಕ್ಕುವ ಬಡವರು ಮತ್ತು ವಿಶ್ವಗುರು
ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಾವು ದಲಿತರು, ನಮಗಾಗಿ ಈ ಜೀವನದಲ್ಲಿ ಯಾರೂ ಕೈ ಎತ್ತಿಲ್ಲ. ಇದು ಬಹಳ ದುಃಖದ ಸಂಗತಿ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರನ್ನು ನಾವಂತೂ ನೇಮಕ ಮಾಡಿಲ್ಲ. ಪಕ್ಷದ ಹಿರಿಯರು ಯಾವ ಯಾವುದೋ ಕಾರಣಕ್ಕೆ ಮಾಡಿದ್ದಾರೆ. ಬಹಳ ಯೋಚಿಸಿ ಯಡಿಯೂರಪ್ಪ ಮಗನೇ ಆಗಬೇಕೆಂದು ನೇಮಿಸಿದ್ದಾರೆ” ಎಂದು ಮಾರ್ಮಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
“ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿರುವುದರಿಂದ ನಮಗೇನು ಹೊಟ್ಟೆ ಉರಿ ಇಲ್ಲ. ನಾನೇ ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕೆಂದು ಅಂದುಕೊಂಡವನೂ ಅಲ್ಲ. ಆದರೆ, ದಲಿತರಿಗೂ ಕೊಡಬೇಕಿತ್ತು ಎನ್ನುವುದು ನನ್ನ ಆಶಯ” ಎಂದರು.