- ಎಸ್ಟಿ ಸಮುದಾಯದ ವ್ಯಕ್ತಿಯೊಬ್ಬರು ಸಿಎಂ ಆಗಬೇಕು: ಶಾಸಕ ರಾಜಣ್ಣ
- ಟ್ರೈಬಲ್ ಯೂನಿವರ್ಸಿಟಿ ತೆರೆಯುವ ಚಿಂತನೆ ಇದೆ: ಸಚಿವ ನಾಗೇಂದ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿ ಅರ್ಧಕ್ಕೆ ಅಂತ ಯಾರೂ ಹೇಳಿಲ್ಲ. ಸಿಎಂ ಆಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಂದುವರೆಯುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಇಂದು ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಿದ್ದರಾಮಯ್ಯ ಅಧಿಕಾರಾವಧಿ ಎರಡೂವರೆ ವರ್ಷ ಎಂದು ಎಲ್ಲೂ ಹೇಳಿಲ್ಲ. ಸಿಎಂ ಬದಲಾವಣೆ ಮಾಡುವುದು ಬಿಡುವುದು ಅದು ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಸ್ವಾಮೀಜಿಗಳಿಗೆ ಸಚಿವ ಜಾರಕಿಹೊಳಿ ಕಿವಿಮಾತು ಹೇಳಿ ಸಮುದಾಯ ಬದ್ದತೆ ಮೆರೆಯುವಂತೆ ತಿಳಿಸಿದರು.
“ಬಿಜೆಪಿ ಎಸ್ಟಿ ಮೀಸಲಾತಿ ನೀಡಿದೆ ಎಂದು ನೀವು ಮರುಳಾಗಬೇಡಿ. ಎಸ್ಟಿ ಸಮುದಾಯಕ್ಕೆ ಬಿಜೆಪಿ ಪ್ರೀತಿಯಿಂದ ಮೀಸಲಾತಿ ಕೊಟ್ಟಿಲ್ಲ. ಚುನಾವಣೆಯಲ್ಲಿ ಸಮುದಾಯ ಕೈಕೊಡುತ್ತೆ ಎನ್ನುವ ಭಯದಲ್ಲಿ ಕೊಟ್ಟಿದ್ದಾರೆ. ಸ್ವಾಮೀಜಿಯ 274 ದಿನ ಧರಣಿಗೆ ಹೆದರಿ ಬಿಜೆಪಿ ಮೀಸಲಾತಿ ನೀಡಿದೆ” ಎಂದರು.
“ಹಾಗಂತ ಸ್ವಾಮೀಜಿ ಬಿಜೆಪಿ ಅವರು ಬಂದಾಗ ಅವರಂತೆ, ನಾವು ಬಂದಾಗ ನಮ್ಮಂತೆ ಇರಬಾರದು. ಬಿಜೆಪಿಯ ನಾಲ್ಕೈದು ಜನರ ಮೇಲೆ ಮಾತ್ರ ವಿಶ್ವಾಸವಿಡಿ. ಎಲ್ಲರನ್ನೂ ನಂಬಬೇಡಿ. ವಾಲ್ಮೀಕಿ ಸಮುದಾಯ ಕಾಂಗ್ರೆಸ್‌ಗೆ ಕೇವಲ 46% ಮತ ಹಾಕಿದೆ. 54% ನಮಗೆ ವಿರೋಧವಾಗಿ ಮತ ಚಲಾಯಿಸಿದ್ದಾರೆ. ನೋಡೋಣ ಮುಂದಿನ ದಿನಗಳಲ್ಲಿ ಸುಮುದಾಯದವರು ಬದಲಾಗುತ್ತಾರೆ” ಎಂದು ಅವರು ಹೇಳಿದರು.
ಸಮುದಾಯ ಭವನ ಕೇಳುವ ಬದಲು ಶಿಕ್ಷಣ, ಶಾಲೆಗಳನ್ನು ಕೇಳಿ
“ಎಸ್ಸಿ-ಎಸ್ಟಿ ಸಮುದಾಯಕ್ಕೆ ಸಮುದಾಯ ಭವನಕ್ಕಿಂತ ಶಾಲೆಗಳು ಮುಖ್ಯ. ಯಾರೂ ಇದುವರೆಗೆ ನಮ್ಮೂರಿಗೆ ಶಾಲೆ ಬೇಕು ಎಂದು ಕೇಳಿಲ್ಲ. ನಾನು 21 ವರ್ಷದಿಂದ ನೋಡುತ್ತಿದ್ದೇನೆ. ಬರೀ ಸಮುದಾಯ ಭವನಕ್ಕೆ ಎಂದು ನನ್ನ ಬಳಿ ಬರುತ್ತಾರೆ. ಎಸ್ಸಿ-ಎಸ್ಟಿ ಸಮುದಾಯವರು ಸಮುದಾಯ ಭವನಕ್ಕೆ ಹೋರಾಟ ಮಾಡುವುದನ್ನು ಕೈಬಿಡಬೇಕು. ಶಿಕ್ಷಣ ಯಾರೂ ಕದಿಯಲಾರದ ಆಸ್ತಿ. ಹೀಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಸಮುದಾಯ ಭವನದ ಬೇಡಿಕೆ ನಿಂತು ಶಾಲೆ ಬೇಕು ಎನ್ನುವ ಬೇಡಿಕೆ ಬರಬೇಕು” ಎಂದು ಅವರು ಕಿವಿಮಾತು ಹೇಳಿದರು.
ನಮ್ಮ ಸಮುದಾಯವರು ಸಿಎಂ-ಡಿಸಿಎಂ ಆಗಬೇಕು
ಇದೇ ಸಮಾರಂಭದಲ್ಲಿ ಮಾತನಾಡಿದ ಶಾಸಕ ಕೆ ಎನ್ ರಾಜಣ್ಣ, ರಾಜ್ಯದಲ್ಲಿ ನಾಯಕ ಸಮಾಜದವರು ಮುಂದೆ ಡಿಸಿಎಂ ಹಾಗು ಸಿಎಂ ಆಗಬೇಕು. ಆ ಅರ್ಹತೆ ಸತೀಶ್ ಜಾರಕಿಹೊಳಿಗೆ ಇದೆ. ನಾನು ಮುಂದೆ ಯಾವುದೇ ಚುನಾವಣೆಯಲ್ಲೂ ನಿಲ್ಲುವುದಿಲ್ಲ. ಆದರೆ ನಮ್ಮ ಗುರಿ ಒಂದೇ: ನಮ್ಮ ಸಮುದಾಯದ ವ್ಯಕ್ತಿ ಮುಂದಿನ ಮುಖ್ಯಮಂತ್ರಿಯಾಗುವುದು” ಎಂದರು.
ಸಮಾಜದ ಹೆಸರಲ್ಲಿ ನಕಲಿ ಜಾತಿ ಪ್ರಮಾಣಪತ್ರ
“ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯಲಾಗುತ್ತಿದೆ. ಅದು ಎಲ್ಲರಿಗೂ ಗೊತ್ತಿದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ. ನಕಲಿ ಜಾತಿ ಪತ್ರ ವ್ಯವಸ್ಥೆ ತಪ್ಪಿಸದಿದ್ದರೆ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ?: ಮುಖ್ಯಮಂತ್ರಿ ಅವಧಿ ಹೇಳಿಕೆ: ಸಚಿವ ಮಹದೇವಪ್ಪ ಬಗ್ಗೆ ಡಿ ಕೆ ಸುರೇಶ್ ಅಸಮಾಧಾನ
ಟ್ರೈಬಲ್ ಯೂನಿವರ್ಸಿಟಿ ಮಾಡಲು ಚಿಂತನೆ
ಎಸ್ಟಿ ಸಮುದಾಯಕ್ಕೆ ಅನುಕೂಲ ಆಗಲು ಟ್ರೈಬಲ್ ಯೂನಿವರ್ಸಿಟಿ ಮಾಡಲು ಚಿಂತನೆ ನಡೆದಿದೆ ಎಂದು ಸಮಾರಂಭದಲ್ಲಿ ಹಾಜರಿದ್ದ ಮತ್ತೋರ್ವ ಸಚಿವ ನಾಗೇಂದ್ರ ತಿಳಿಸಿದರು. ಟ್ರೈಬಲ್ ಯೂನಿವರ್ಸಿಟಿಗೆ ಹಣ ಇಲ್ಲವೆಂದು ಹಣಕಾಸು ಇಲಾಖೆ ಹೇಳುತ್ತಿದೆ. ಮನಸ್ಸಿದ್ದರೆ ಮಾರ್ಗ. ಸಿಎಂ ಗಮನಕ್ಕೆ ತಂದು ಟ್ರೈಬಲ್ ಯೂನಿವರ್ಸಿಟಿ ಮಾಡಿಯೇ ತೀರುತ್ತೇವೆ ಎಂದು ನಾಗೇಂದ್ರ ಹೇಳಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಬೇಡಿಕೆ ಇದೆ. ಪ್ರತ್ಯೇಕ ಸಚಿವಾಲಯ ಮಾಡಿದರೆ ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗುತ್ತದೆ. ವಾಲ್ಮೀಕಿ ಸಮುದಾಯದ ಕ್ಲಾಸ್ 1, 2 ಗುತ್ತಿಗೆದಾರರಿಗೆ 20% ಅಡ್ವಾನ್ಸ್ ಕೊಡಲು ಚಿಂತನೆ ನಡೆದಿದೆ ಎಂದವರು ಹೇಳಿದರು.