- ‘ಬಿಜೆಪಿ ನಾಯಕರೇ ಕನ್ನಡಿಗರ ಕಡೆ ಗಮನ ಕೊಡಿ’
- ಕನ್ನಡಿಗರ ರಕ್ಷಣೆಗೆ ಯಾರಿದ್ದಾರೆ? ಎಂದ ಸಿದ್ದರಾಮಯ್ಯ
ಸೂಡಾನ್‌ನ ಸೇನೆ ಮತ್ತು ಅರೆಸೇನೆಗಳ ನಡುವಿನ ಕಿತ್ತಾಟಕ್ಕೆ ಇಡೀ ದೇಶವೇ ಬಲಿಯಾಗುತ್ತಿದೆ. ದುಡಿಮೆಗೆ ತೆರಳಿರುವ ಕರ್ನಾಟಕ ಮೂಲದ ಬುಡಕಟ್ಟು ಜನಾಂಗದವರು ಸಹ ಅಲ್ಲಿ ಸಿಲುಕಿದ್ದಾರೆ. ಈ ಕುರಿತು ಸಹಾಯ ಕೇಳಿದರೆ, ರಾಯಭಾರ ಕಚೇರಿ ಅಸಡ್ಡೆಯಿಂದ ಮಾತನಾಡಿದೆ.
“ನಮಗೇ ತಿನ್ನುವುದಕ್ಕೆ ಏನೂ ಇಲ್ಲ, ನಿಮಗೇನು ಮಾಡದು? ನೀವು ಇರುವ ಸ್ಥಳದಲ್ಲಿಯೇ ಬಾಗಿಲು ಹಾಕಿಕೊಂಡು ಇರಿ” ಎಂಬುದಾಗಿ ಸೂಡಾನ್‌ನ ರಾಯಭಾರ ಕಚೇರಿ ಪ್ರತಿಕ್ರಿಯೆ ನೀಡಿದೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಸೂಡಾನ್ ರಾಯಭಾರ ಕಚೇರಿಯ ಹೇಳಿಕೆ ಎನ್ನಲಾದ ಸಾಲುಗಳನ್ನು ಹಂಚಿಕೊಂಡ ಸಿದ್ದರಾಮಯ್ಯ, “ಜಯಶಂಕರ್ ಅವರೇ, ಇದನ್ನು ಕೇಳಿ ಗಾಬರಿಯಾಗಲಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
“ಸೂಡಾನ್‌ನಲ್ಲಿ ಕಳೆದ 8-10 ದಿನಗಳಿಂದ ನಮ್ಮ ಕನ್ನಡಿಗ ಹಕ್ಕಿಪಿಕ್ಕಿ ಜನಾಂಗದವರು ತಿನ್ನಲು ಅನ್ನ ಇಲ್ಲದೆ, ಕುಡಿಯಲು ನೀರಿಲ್ಲದೆ ನರಳಾಡುತ್ತಿದ್ದಾರೆ. ನಮ್ಮ ‘ವಿಶ್ವಗುರು’ ಪ್ರಧಾನಿ ಮೋದಿ ಅವರು ಸೂಚನೆ -ಭರವಸೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಕನ್ನಡಿಗರ ರಕ್ಷಣೆಗೆ ಯಾರಿದ್ದಾರೆ?” ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಚುನಾವಣೆಯ ಬುರುಡೆ ಭಾಷಣಗಳ ಮಧ್ಯೆ ಬಿಡುವಾದರೆ ಸೂಡಾನ್‌ನಲ್ಲಿ ಕಷ್ಟದಲ್ಲಿರುವ ಕನ್ನಡಿಗರ ಕಡೆ ಗಮನ ಕೊಡಿ” ಎಂದು ಟ್ವೀಟ್ ಮಾಡಿದ್ದಾರೆ.
“ಪ್ರಧಾನಿ ಮೋದಿ ಅವರಿಗೆ ಈಶ್ವರಪ್ಪನವರಿಗೆ ಫೋನ್ ಮಾಡಲು ಇರುವಷ್ಟು ಪುರುಸೊತ್ತು ಕನ್ನಡಿಗರ ರಕ್ಷಣೆಗೆ ಇಲ್ಲವೇ?” ಎಂದು ಕೇಳುವಂತೆ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಮ್ಮ ಕುಟುಂಬ ಯಾವತ್ತೂ ಪ್ರಚಾರಕ್ಕೆ ಬಂದಿಲ್ಲ, ನಮಗೆ ಸೋಲಿನ ಭಯವಿಲ್ಲ: ಯತೀಂದ್ರ
ಸೂಡಾನ್‌ದಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷದಿಂದ ಯುದ್ಧ ಸಂಭವಿಸಿದೆ. ಅಲ್ಲಿ ಶಿವಮೊಗ್ಗ ಮೂಲದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗಕ್ಕೆ ಸೇರಿದ ಜನರು ಸಿಲುಕಿಕೊಂಡಿದ್ದಾರೆ.
ದೇಶಕ್ಕೆ ವಾಪಸ್ ಆಗಲು ಮತ್ತು ತಮ್ಮ ಜೀವ ರಕ್ಷಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈ ಕುರಿತು ಸೂಡಾನ್ ರಾಯಭಾರ ಕಚೇರಿಗೆ ತೆರಳಿದರೆ, ‘ನಾವೇನು ಮಾಡೋಕೆ ಆಗಲ್ಲ’ ಎನ್ನುವ ಪ್ರತಿಕ್ರಿಯೆ ದೊರೆಕಿದ್ದು, ಕನ್ನಡಿಗರಿಗೆ ದಿಕ್ಕಿಲ್ಲದಾಗಿದೆ.