- ಸಿಎಂ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ – ಸಿದ್ದರಾಮಯ್ಯ ನಡುವೆ ಜಟಾಪಟಿ
- ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನ ಗೆಲುವು ಸಾಧಿಸಿರುವ ಕಾಂಗ್ರೆಸ್
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಪಡೆದಿರುವ ಕಾಂಗ್ರೆಸ್ ಪಾಳಯದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಕೊನೆಗೂ ಅಂತಿಮ ಹಂತಕ್ಕೆ ತಲುಪಿದ್ದು, ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹೆಸರು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಹಲವು ವಿಚಾರಗಳು ಚರ್ಚೆಯಾಗುತ್ತಿದ್ದು, ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವೆ ಜಟಾಪಟಿ ಮುಂದುವರಿದಿದೆ.
“ಕೊಟ್ಟರೇ ನನಗೆ ಸಿಎಂ ಸ್ಥಾನವನ್ನು ಕೊಡಿ ಬೇರೆ ಸ್ಥಾನ ಬೇಡ” ಎಂದು ಡಿ ಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಇತ್ತ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಿ ಎಂದು ಬಹುತೇಕ ಶಾಸಕರು ಬೆಂಬಲ ಸೂಚಿಸಿದ್ದು, ಹೈಕಮಾಂಡ್‌ಗೆ ತಲೆನೋವಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ದೆಹಲಿಯಲ್ಲಿ ಪ್ರತ್ಯೇಕವಾಗಿ 50 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಇಬ್ಬರೂ ನಾಯಕರು ಸಿಎಂ ಸ್ಥಾನ ಬೇಕೇ ಬೇಕು ಎಂದು ಪಟ್ಟು ಹಿಡಿದ್ದಾರೆ.
ಡಿ ಕೆ ಶಿವಕುಮಾರ್ ಕೊಟ್ಟರೇ ಮುಖ್ಯಮಂತ್ರಿ ಸ್ಥಾನ ನೀಡಿ ಇಲ್ಲ, ಅಧ್ಯಕ್ಷನಾಗಿಯೇ ಪಕ್ಷ ಸಂಘಟನೆಯನ್ನು ಮಾಡುತ್ತೇನೆ, ನನಗೆ ಯಾವ ಮಂತ್ರಿ ಸ್ಥಾನವು ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
135 ಸ್ಥಾನ ಗೆದ್ದಿರುವ ಕಾಂಗ್ರೆಸ್ ಗೆ ಮುಖ್ಯಮಂತ್ರಿ ಆಯ್ಕೆ ವಿಚಾರವೇ ದೊಡ್ಡ ಸವಾಲಾಗಿದೆ. ಈಗಾಗಲೇ ಸಾಲು ಸಾಲು ಸಭೆಗಳನ್ನು ನಡೆಸಿರುವ ಕಾಂಗ್ರೆಸ್ ಹೈಕಮಾಂಡ್, ಬುಧವಾರ ಬೆಳಗ್ಗೆ ಮಲ್ಲಿಕಾರ್ಜುನ್ ಖರ್ಗೆ ನಿವಾಸದಲ್ಲಿ ಅಂತಿಮ ಸುತ್ತಿನ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಭಾಗಿಯಾಗಲಿದ್ದು, ಅಂತಿಮವಾಗಿ ಸಭೆಯ ಬಳಿಕ ಮುಖ್ಯಮಂತ್ರಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಈ ಸುದ್ದಿ ಓದಿದ್ದೀರಾ? ಇದ್ರೀಸ್ ಪಾಷ ಸಾವು ಪ್ರಕರಣ | ಪುನೀತ್ ಕೆರೆಹಳ್ಳಿಗೆ ಷರತ್ತುಬದ್ಧ ಜಾಮೀನು ಮಂಜೂರು
ಲೋಕಸಭಾ ಚುನಾವಣಾ ಹಿನ್ನೆಲೆ ಬಹುತೇಕ ಶಾಸಕರ ಅಭಿಪ್ರಾಯದಂತೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಲು ಹೈಕಮಾಂಡ್ ಮುಂದಾಗಿತ್ತು ಎನ್ನಲಾಗಿದೆ. ಆದರೆ, ಡಿ ಕೆ ಶಿವಕುಮಾರ್ ಪಟ್ಟು ಹಿಡಿದಿದ್ದು, ಇನ್ನೂ ಸಿಎಂ ಯಾರು ಎನ್ನುವ ಬಗ್ಗೆ ಹೈಕಮಾಂಡ್ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ.
ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಕೊಡಬೇಕು ಎಂದು ರಾಹುಲ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದ್ದು, ಇಂದು ನಡೆಯುವ ಅಂತಿಮ ಸಭೆಯಲ್ಲಿ ರಾಜ್ಯ ಮುಖ್ಯಮಂತ್ರಿ ಯಾರು ಎಂದು ತಿಳಿಯಲಿದೆ.
2024 ನೆ ವರ್ಷದಲ್ಲಿ ನಡೆಯುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ನೋಡಿದರೆ, ಈಗ ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯನವರೇ ಯೋಗ್ಯ ವ್ಯಕ್ತಿ. ಇವರ ಮುಂದೆ ಡಿಕೆಶಿ ಶೂನ್ಯ. ಚುನಾವಣಾ ಪ್ರಚಾರಕ್ಕಾಗಿ ಬಂದ ಎಲ್ಲಾ ವಿರೋಧ ಪಕ್ಷದವರು, ಮೋದಿ, ಅಮಿತ್ ಷಾ ಅವರೂ ಸಹ ಸಿದ್ದರಾಮಯ್ಯ ಅವರ ವಿರುದ್ಧನೇ ಪ್ರಚಾರ ಮಾಡಿದ್ದು. ಅದರಲ್ಲೇ ಗೊತ್ತಾಗುತ್ತದೆ ಸಿದ್ದು ಬಲ ಎಷ್ಟು ಅಂತ…