ಜಾತಿ ಗಣತಿ ವರದಿಗೆ ಲಿಂಗಾಯತರು, ಒಕ್ಕಲಿಗರ ವಿರೋಧ ಯಾಕೆ? ವಿವರ!

Date:

Advertisements

ಕರ್ನಾಟಕದ ಅಂದಾಜು ಏಳು ಕೋಟಿ ಜನಸಂಖ್ಯೆಯಲ್ಲಿ 17% ಇದ್ದೇವೆಂದು ಲಿಂಗಾಯತರು ಹೇಳಿಕೊಳ್ಳುತ್ತಾರೆ. ಅಂದರೆ, 1.2 ಕೋಟಿಯಷ್ಟು ಲಿಂಗಾಯತ ಜನಸಂಖ್ಯೆ ಇರುವುದಾಗಿ ಸಮುದಾಯ ಪರಿಗಣಿಸಿದೆ. ಹೀಗಾಗಿ, ರಾಜ್ಯದ ಏಕೈಕ ದೊಡ್ಡ ಸಮುದಾಯ ತಮ್ಮದೇ ಎಂದು ಹೇಳುತ್ತಾರೆ. ಇನ್ನು, ಒಕ್ಕಲಿಗರು ಕೂಡ ರಾಜ್ಯದ ಜನಸಂಖ್ಯೆಯಲ್ಲಿ 15%, ಅಂದರೆ, 1.05 ಕೋಟಿ ಇದ್ದೇವೆಂದು ಹೇಳಿಕೊಳ್ಳುತ್ತಾರೆ. ಅವರು ಎರಡನೇ ಅತಿದೊಡ್ಡ ಜಾತಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಕರ್ನಾಟಕ ರಾಜಕೀಯದಲ್ಲಿಯೂ ಈ ಎರಡೂ ಸಮುದಾಯಗಳನ್ನು ಹೆಚ್ಚು ಪ್ರಾಬಲ್ಯ ಹೊಂದಿವೆ. ಸರ್ಕಾರಗಳ ಬಹುತೇಕ ನಿರ್ಧಾರಗಳೂ ಈ ಸಮುದಾಯದ ನಿರ್ಧಾರಗಳ ಮೇಲೆ ಆಧರಿಸಿರುತ್ತವೆ.

ಈ ನಡುವೆ, ‘ಜಾತಿ ಗಣತಿ ವರದಿ’ ಎಂದು ಜನಪ್ರಿಯವಾಗಿರುವ ಇತ್ತೀಚಿನ ಸಾಮಾಜಿಕ-ಆರ್ಥಿಕ ಹಾಗೂ ಶಿಕ್ಷಣ ಸಮೀಕ್ಷಾ ವರದಿಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ (ಕೆಎಸ್‌ಸಿಬಿಸಿ) ಅಧ್ಯಕ್ಷರಾಗಿದ್ದ ಕೆ ಜಯಪ್ರಕಾಶ್ ಹೆಗ್ಡೆ ಅವರು ಫೆ.28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ. ಈ ವರದಿಯೂ ಈ ಎರಡೂ ಸಮುದಾಯಗಳ ಸ್ಥಾನಗಳನ್ನು ಕೆಳಗಿಸಿದೆ.

ವರದಿಯು ಈ ಎರಡೂ ದೊಡ್ಡ ಸಮುದಾಯಗಳ ನಡುವೆ ಕೋಲಾಹಲವನ್ನು ಸೃಷ್ಟಿಸಿದೆ. ಸಮೀಕ್ಷೆಯು ಲಿಂಗಾಯತ ಜನಸಂಖ್ಯೆಯನ್ನು ಕೇವಲ 65 ಲಕ್ಷ (10.9%) ಮತ್ತು ಒಕ್ಕಲಿಗರನ್ನು 60 ಲಕ್ಷ (10%) ಇದ್ದಾರೆಂದು ಹೇಳಿದೆ ಎನ್ನಲಾಗಿದೆ. ಅಲ್ಲದೆ, ಕರ್ನಾಟಕದ ಒಟ್ಟು ಜನಸಂಖ್ಯೆಯನ್ನು 5.98 ಕೋಟಿಗೆ ಇಳಿಸಿದೆ. 2011ರ ಜನಗಣತಿ ಪ್ರಕಾರ, ರಾಜ್ಯದ ಜನಸಂಖ್ಯೆ 6.1 ಕೋಟಿ ಆಗಿತ್ತು. ಸಮೀಕ್ಷೆಯಲ್ಲಿ ರಾಜ್ಯದಲ್ಲಿ 1,351 ವಿವಿಧ ಜಾತಿಗಳು ಕಂಡುಬಂದಿವೆ ಎಂದು ವರದಿ ಹೇಳಿದೆ ಎನ್ನಲಾಗಿದೆ.

Advertisements

ವರದಿಯ ಪ್ರಕಾರ, 5.98 ಕೋಟಿ ಜನರಲ್ಲಿ, 3.98 ಕೋಟಿಗೂ ಹೆಚ್ಚು ಜನರು ಅಹಿಂದಾ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಸಮುದಾಯದವರಾಗಿದ್ದಾರೆ. ಇನ್ನುಳಿದ 1.87 ಕೋಟಿ ಜನಸಂಖ್ಯೆಯಲ್ಲಿ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ಮತ್ತು ಇತರ ಜಾತಿಗಳ ಜನರಿದ್ದಾರೆ. ಲಿಂಗಾಯತರು ಮತ್ತು ವೊಕ್ಕಲಿಗರು ಜಾತಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರದಿದ್ದರೆ, ಅವರು ಸಾಮಾಜಿಕ ಮತ್ತು ಕಲ್ಯಾಣ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಆತಂಕ ಸಮುದಾಯಗಳಲ್ಲಿ ಕಾಡುತ್ತಿದೆ.

caste

ಸಮೀಕ್ಷೆಯು ಪರಿಶಿಷ್ಟ ಜಾತಿಗಳನ್ನು ಮೊದಲ ಸ್ಥಾನದಲ್ಲಿ ಇರಿಸಿದೆ. ನಂತರ ಮುಸ್ಲಿಮರು ಇದ್ದಾರೆ. ಪಟ್ಟಿಯಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಪರಿಣಾಮವಾಗಿ, ಸಮಿತಿಯು ಎಸ್‌ಸಿಗಳ ಕೋಟಾವನ್ನು ಹೆಚ್ಚಿಸಲು ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ. ‘ವೀರಶೈವರು ಮತ್ತು ಲಿಂಗಾಯತರು ಒಂದೇ’ ಎಂದು ವರದಿ ಒತ್ತಿಹೇಳಿದೆ ಎಂದು ಮೂಲಗಳು ತಿಳಿಸಿವೆ.

ವರದಿ ಸಲ್ಲಿಕೆಯಾಗಿ ಹಲವಾರು ದಿನಗಳ ಕಳೆದಿವೆ. ಆದರೂ, ರಾಜ್ಯ ಸರ್ಕಾರ ವರದಿಯನ್ನು ಇನ್ನೂ ಸಾರ್ವಜನಿಕ ಡೊಮೇನ್‌ನಲ್ಲಿ ಹಾಕಿಲ್ಲ. ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ರಾಜಕಾರಣದಲ್ಲಿ ನಿಷ್ಣಾತರು. ಅದಕ್ಕಾಗಿಯೇ ಅವರು ಸಮೀಕ್ಷೆಗೆ ಆದೇಶಿಸಿದ್ದರು. ಆದರೆ, ಲಿಂಗಾಯತರು ಮತ್ತು ಒಕ್ಕಲಿಗರು ಆಗಲೂ ವಿರೋಧಿಸಿದ್ದರು. ಈಗಲೂ ವಿರೋಧಿಸುತ್ತಿದ್ದಾರೆ. ಹೀಗಾಗಿ, ಹಿಂದುಳಿದ ವರ್ಗಗಳ ಆಕಾಂಕ್ಷೆಗಳನ್ನು ಹಾಗೂ ಪ್ರಬಲ ಸಮುದಾಯಗಳ ಆಕಾಂಕ್ಷೆಗಳನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.

ಒಕ್ಕಲಿಗರು ಮತ್ತು ಲಿಂಗಾಯತರು

ಲಿಂಗಾಯತರು ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಬಸವಣ್ಣನ (12ನೇ ಶತಮಾನ) ಕಾಲದಿಂದ ಕಂಡುಬರುವ ಧಾರ್ಮಿಕ ಪಂಥದವರಾಗಿದ್ದಾರೆ. ಸಮುದಾಯವು ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಪ್ರದೇಶದಲ್ಲಿ ವ್ಯಾಪ್ತಿಸಿದೆ. 2020ರಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಯಿತು. ಅವರ ಅಭಿವೃದ್ಧಿಗೆ ₹500 ಕೋಟಿ ಘೋಷಿಸಿದ್ದರು. ಇನ್ನು, ಮೂಲತಃ ಕೃಷಿಯನ್ನು ಅವಲಂಬಿಸಿರುವ ಒಕ್ಕಲಿಗರು ಹಳೆಯ ಮೈಸೂರು ಮತ್ತು ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಪ್ರಬಲರಾಗಿದ್ದಾರೆ.

ಒಕ್ಕಲಿಗ ಸಮುದಾಯದಲ್ಲಿ ಹೆಚ್ಚಿನವರು ಕೃಷಿಕರು. ಸಮುದಾಯವು ಹಳೇ ಮೈಸೂರು ಪ್ರದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಪ್ರಾಬಲ್ಯವನ್ನು ಹೊಂದಿದೆ. ಕೆಲವು ಇತಿಹಾಸಕಾರರ ಪ್ರಕಾರ, ರಾಷ್ಟ್ರಕೂಟರು ಮತ್ತು ಪಶ್ಚಿಮ ಗಂಗರು ಒಕ್ಕಲಿಗ ಮೂಲದವರು. ಒಕ್ಕಲಿಗರು ವಿಜಯನಗರ ಸಾಮ್ರಾಜ್ಯದಲ್ಲಿ ಆಡಳಿತಾತ್ಮಕ ಸ್ಥಾನಗಳನ್ನು ಹೊಂದಿದ್ದರು. ಕೆಳದಿ ನಾಯಕರ ಆರಂಭಿಕ ಆಡಳಿತಗಾರರೂ ಆಗಿದ್ದರು. ಮೈಸೂರು ಸಾಮ್ರಾಜ್ಯದಲ್ಲಿ ಸೈನ್ಯ ಮತ್ತು ಸೇನಾಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ಒಕ್ಕಲಿಗ ಸಮುದಾಯದ ಹೆಚ್ಚಿನ ಉಪಪಂಗಡಗಳನ್ನು ಕೇಂದ್ರ ಸರ್ಕಾರವು ಮುಂದುವರಿದ ಜಾತಿಗಳೆಂದು ಗೊತ್ತುಪಡಿಸಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿನ ಕೆಲವು ಉಪಪಂಗಡಗಳನ್ನು ರಾಜ್ಯ ಸರ್ಕಾರವು ಇತರೆ ಹಿಂದುಳಿದ ವರ್ಗಗಳೆಂದು ಗೊತ್ತುಪಡಿಸಿದೆ.

ಜಾತಿ ಗಣತಿ ವರದಿಗೆ ವಿರೋಧ

ಜಾತಿ ಗಣತಿ ವಿರುದ್ಧ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಮುಖಂಡರು ಧ್ವನಿ ಎತ್ತಿದ್ದಾರೆ. ವರದಿ ತಿರಸ್ಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಮೇಲೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಒತ್ತಡ ಹೇರುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ದಾವಣಗೆರೆಯಲ್ಲಿ ನಡೆದ ಮಹಾಸಭಾದ 24ನೇ ಮಹಾಸಭೆಯಲ್ಲಿ ವರದಿಯನ್ನು ವಿರೋಧಿಸಲು ನಿರ್ಧರಿಸಿತ್ತು. ವರದಿ ಅಂಗೀಕರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.

ಒಕ್ಕಲಿಗ ಸಮುದಾಯವೂ ವರದಿಗೆ ವಿರೋಧ ವ್ಯಕ್ತಪಡಿಸಿದೆ. ವರದಿಯನ್ನು ಸಚಿವ ಸಂಪುಟದ ಮುಂದೆ ಇಟ್ಟು ತಮ್ಮ ಸಚಿವರ ಅಭಿಪ್ರಾಯ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಾನೂನು ಮತ್ತು ತಜ್ಞರ ಅಭಿಪ್ರಾಯಗಳನ್ನು ಪಡೆಯುವುದಾಗಿಯೂ ಅವರು ಹೇಳಿದ್ದಾರೆ. ಆದರೆ, ವರದಿ ಇನ್ನೂ ಸಂಪುಟದ ಮುಂದೆ ಪ್ರಸ್ತಾಪವಾಗಿಲ್ಲ. ಲೋಕಸಭೆ ಚುನಾವಣೆ ಮುಗಿದ ಬಳಿಕ ಅದರ ಚರ್ಚೆಯಾಗುವ ಸಾಧ್ಯತೆಗಳಿವೆ.

ಒಕ್ಕಲಿಗರ ನಿಲುವೇನು? 

ಕೆಲ ತಿಂಗಳ ಹಿಂದೆಯಷ್ಟೇ ಒಕ್ಕಲಿಗ ಸಮುದಾಯದವರೇ ಆದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಒಕ್ಕಲಿಗ ಸಮುದಾಯದ ಮುಖಂಡರು ವರದಿಯನ್ನು ಸ್ವೀಕರಿಸದಂತೆ ಮುಖ್ಯಮಂತ್ರಿಗೆ ಒತ್ತಾಯಿಸಿದ್ದರು. ಸಮೀಕ್ಷೆಯು ಸರಿಯಾದ ರೀತಿಯಲ್ಲಿ ನಡೆದಿದೆ. ಮನೆ-ಮನೆಗೆ ತಲುಪಿ ಸಮೀಕ್ಷೆ ಮಾಡಲಾಗಿಲ್ಲ. ಹೀಗಾಗಿ, ವರದಿಯನ್ನು ವೈಜ್ಞಾನಿಕವಾಗಿ ರಚಿಸಲಾಗಿಲ್ಲವೆಂದು ಅವರು ಪ್ರತಿಪಾದಿಸಿದ್ದರು. ಡಿ.ಕೆ ಶಿವಕುಮಾರ್, ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರು ಜಾತಿಗಣತಿ ವಿರುದ್ಧ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆ ಮನವಿಗೆ ಒಕ್ಕಲಿಗ ಮಠಗಳ ಸ್ವಾಮೀಜಿಗಳೂ ಸಹಿ ಹಾಕಿದ್ದಾರೆ.

ಕರ್ನಾಟಕ ಒಕ್ಕಲಿಗರ ಸಂಘ ಮತ್ತು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಹೆಗಡೆ ಆಯೋಗವು ರಾಜ್ಯದ ಜನಸಂಖ್ಯೆಯನ್ನು 5.9 ಕೋಟಿ ಎಂದು ಲೆಕ್ಕ ಹಾಕಿದೆ. ಆದರೆ, ಆಧಾರ್ ಅಂಕಿಅಂಶಗಳು 6.9 ಕೋಟಿಗೂ ಹೆಚ್ಚು ಜನಸಂಖ್ಯೆಯಿದೆ ಎಂದು ಹೇಳಿವೆ. ಸಮೀಕ್ಷೆ ನಡೆಸಿದವರು ಎಲ್ಲ ಮನೆಗಳಿಗೂ ಭೇಟಿ ನೀಡಿಲ್ಲ ಎಂದು ಆರೋಪಿಸಿದ್ದಾರೆ. “ಈ ವರದಿಯು ಕಾಂತರಾಜು ವರದಿಯನ್ನು ಆಧರಿಸಿದೆ. ಕಾಂತರಾಜು ಅವರ ವರದಿಯನ್ನು 2014-15ರಲ್ಲಿ ಮಾಡಲಾಗಿದೆ. ಅಂದರೆ, ಆ ವರದಿಗೂ ಇಂದಿಗೂ 10 ವರ್ಷಗಳ ಅಂತರವಿದೆ. ಕಳೆದ ಹತ್ತು ವರ್ಷಗಳಲ್ಲಿ ತೀವ್ರ ಬದಲಾವಣೆಗಳಾಗಿದ್ದು, ಇದರ ಆಧಾರದ ಮೇಲೆ ವರದಿ ನೀಡುವುದು ಅವೈಜ್ಞಾನಿಕವಾಗಿದೆ ವೆಂದು ಹೇಳಿದೆ.

ಲಿಂಗಾಯತರು ಹೇಳುವುದೇನು?

30 ಲಿಂಗಾಯತ ಶಾಸಕರು ಕೂಡ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಆ ಪತ್ರಕ್ಕೆ ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ಈಶ್ವರ ಖಂಡ್ರೆ ಸೇರಿದಂತೆ ಸಚಿವರು ಸಹಿ ಹಾಕಿದ್ದರು. ವೀರಶೈವ ಮಹಾಸಭಾದ ಮುಖ್ಯಸ್ಥ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕೂಡ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವರದಿಯನ್ನು ತರಸ್ಕರಿಸಿ, ಮರು ಸಮೀಕ್ಷೆ ನಡೆಸುವಂತೆ ಲಿಂಗಾಯತ ಮಹಾಸಭಾ ಆಗ್ರಹಿಸಿದೆ. ಕಾಂತರಾಜು/ಹೆಗಡೆ ವರದಿ 10 ವರ್ಷಗಳ ಹಿಂದಿನ ಮಾಹಿತಿ ಆಧರಿಸಿವೆ ಎಂದು ಶಿವಶಂಕರಪ್ಪ ಹೇಳಿದ್ದಾರೆ. “ಲಿಂಗಾಯತರು 2 ಕೋಟಿಗೂ ಅಧಿಕ ಜನರಿದ್ದಾರೆ ಎಂದು ನಾವು ಅಂದಾಜಿಸಿದ್ದೇವೆ. ನಾವು ನಮ್ಮ ಮಹಾಸಭಾದಿಂದ ಸಮೀಕ್ಷೆ ನಡೆಸುತ್ತೇವೆ. ಒಕ್ಕಲಿಗರು ಮತ್ತು ಬ್ರಾಹ್ಮಣರ ಸಹಾಯದಿಂದ ನಾವು ವರದಿ ವಿರುದ್ಧ ಹೋರಾಡಲಿದ್ದೇವೆ. ಈ ವರದಿಯನ್ನು ನಾವು ಒಪ್ಪುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಲಿಂಗಾಯತ ಸಮುದಾಯವು ಸಂಕಷ್ಟದಲ್ಲಿದೆ. ಜೆ.ಎಚ್ ಪಟೇಲ್ ಮತ್ತು ಎಸ್ ನಿಜಲಿಂಗಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಸಮುದಾಯದ ಪರಿಸ್ಥಿತಿ ಉತ್ತಮವಾಗಿತ್ತು ಎಂದು ಅವರು ಹೇಳಿದ್ದಾರೆ. ಅಲ್ಲದೆ, ತಮ್ಮ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.

ಸಮುದಾಯ – ವರದಿ – ರಾಜಕೀಯ

2013ರಿಂದ 2018ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸಮೀಕ್ಷೆಗೆ ಆದೇಶಿಸಿದ್ದರು. ಕೆಎಸ್‌ಸಿಬಿಸಿಯ ಆಗಿನ ಅಧ್ಯಕ್ಷರಾಗಿದ್ದ ಎಚ್ ಕಾಂತರಾಜು ಅವರು 2018ರಲ್ಲಿ ತಮ್ಮ ವರದಿಯನ್ನು ಸಿದ್ಧಪಡಿಸಿದ್ದರು. ಆದರೆ, ಅದನ್ನು ಅಂಗೀಕರಿಸಲಾಗಲಿಲ್ಲ. ಸಾರ್ವಜನಿಕರಿಗೆ ಸಮೀಕ್ಷೆಯಲ್ಲಿನ ಅಂಕಿಅಂಶಗಳ ಮಾಹಿತಿಯನ್ನು ನೀಡಲಾಗಿರಲಿಲ್ಲ. ಅಧ್ಯಕ್ಷರಾಗಿ ಕಾಂತರಾಜು ಅವರ ಅವಧಿ ಮುಗಿದಾಗ, ಜಯಪ್ರಕಾಶ್ ಹೆಗ್ಡೆ ಅವರನ್ನು ಅಧ್ಯಕ್ಷರನ್ನಾಗಿ ಬಿಜೆಪಿ ಸರ್ಕಾರ ನೇಮಿಸಿತು. ಹೆಗಡೆ ಅವರ ಅಧಿಕಾರವಧಿ ಮುಗಿಯುವ ಕಡೆಯ ದಿನ, ಫೆಬ್ರವರಿ 28 ರಂದು ರಾಜ್ಯ ಸರ್ಕಾರಕ್ಕೆ ವರದಿ ಅವರು ವರದಿ ಸಲ್ಲಿಸಿದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌ಡಿ ಕುಮಾರಸ್ವಾಮಿ ಅವರು ವರದಿ ಸ್ವೀಕರಿಸಲು ಸೆಣೆಸಾಡಿದ್ದರು ಎಂಬುದು ಸಿದ್ದರಾಮಯ್ಯ ಅವರ ಆರೋಪ.

1947ರಿಂದ, ಕರ್ನಾಟಕ (ಮೈಸೂರು ರಾಜ್ಯ ಸೇರಿದಂತೆ) 22 ಮುಖ್ಯಮಂತ್ರಿಗಳನ್ನು ಕಂಡಿದೆ. ಅವರಲ್ಲಿ ಕೆಲವರು ಒಂದಕ್ಕಿಂತ ಹೆಚ್ಚು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅವರಲ್ಲಿ 8 ಲಿಂಗಾಯತರು ಮತ್ತು 7 ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪ್ರಮುಖ ಲಿಂಗಾಯತ ನಾಯಕರಲ್ಲಿ ಒಬ್ಬರಾಗಿದ್ದ ಎಂ ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದರು. ಆದರೆ, ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತ್ತು. ಅದಾದ ಬಳಿಕ, ಲಿಂಗಾಯತ ಸಮುದಾಯವು ಕಾಂಗ್ರೆಸ್‌ನಿಂದ ದೂರ ಸರಿಯಿತು.

ಇತ್ತೀಚಿನ ಜನಗಣತಿ ವರದಿ ಜಾರಿಯಾದರೆ, ಒಕ್ಕಲಿಗ-ಲಿಂಗಾಯತ ಸಮುದಾಯಗಳ ಪ್ರಾಬಲ್ಯ ಕಡಿಮೆಯೆಂದು ಬಿಂಬಿತವಾಗುತ್ತದೆ. ಇದರಿಂದ, ಸಮುದಾಯದ ಸದಸ್ಯರು ರಾಜಕೀಯವಾಗಿಯೂ ತಮ್ಮ ಪ್ರಾತಿನಿಧ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯ ಎರಡೂ ಸಮುದಾಯಗಳಲ್ಲಿದೆ. ಪ್ರಸ್ತುತ ಕ್ಯಾಬಿನೆಟ್‌ನಲ್ಲಿ ಮಾತ್ರವಲ್ಲದೆ, ಹಲವು ಮಂಡಳಿಗಳು ಮತ್ತು ನಿಗಮಗಳಲ್ಲಿ ಈ ಎರಡು ಸಮುದಾಯಕ್ಕೆ ಸೇರಿದವರೆ ಅಧ್ಯಕ್ಷರಾಗಿದ್ದಾರೆ.

ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಲಿಂಗಾಯತ ಪ್ರತ್ಯೇಕ ಧರ್ಮವೆಂದು ಪ್ರಸ್ತಾಪಿಸಿದ್ದರು. ಅಲ್ಲದೆ, ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆಯನ್ನು ಪಡೆದಿದ್ದರು. ಆದರೆ ಇದನ್ನು ಸಮುದಾಯದೊಳಗಿನ ಅನೇಕರು ಮತ್ತು ವಿರೋಧ ಪಕ್ಷ ಬಿಜೆಪಿ ವ್ಯಾಪಕವಾಗಿ ವಿರೋಧಿಸಿತು. ಪರಿಣಾಮವಾಗಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಷ್ಟ ಅನುಭವಿಸಿತು. ಸೋಲು ಕಂಡಿತು.

ಮಾಹಿತಿ ಮೂಲ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X