- `ಆನ್ಸರ್ ಮಾಡಿ ಮೋದಿʼ ಹ್ಯಾಶ್‌ಟ್ಯಾಗ್‌ನಡಿ ಮೋದಿ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್
- ʼಗೌತಮ್ ಅದಾನಿ ಬಿಜೆಪಿಗೆ ಕೊಟ್ಟಿರುವ ದೇಣಿಗೆ ಎಷ್ಟು ಎಂಬುದು ಬಹಿರಂಗವಾಗಲಿʼ
“ಸರ್ವಶಕ್ತ ಪ್ರಧಾನ ಮಂತ್ರಿ ಎಂದು ಬೆಂಬಲಿಗರಿಂದ ಭೋಪರಾಕ್ ಹಾಕಿಸಿಕೊಳ್ಳುತ್ತಿರುವ ನರೇಂದ್ರ ಮೋದಿಯವರೇ, ಗೌತಮ್ ಅದಾನಿ ಎಂಬ ಉದ್ಯಮಿ ಬಗ್ಗೆ ಮಾತನಾಡಲು ನಿಮಗೆ ಮುಜುಗರ ಯಾಕೆ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರಶ್ನೆಗಳಿಗೆ ಉತ್ತರಿಸಲು ಭಯ ಯಾಕೆ?” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದ್ದಾರೆ.
ʼಆನ್ಸರ್ ಮಾಡಿ ಮೋದಿʼ ಹ್ಯಾಶ್‌ಟ್ಯಾಗ್‌ನಡಿ ಮೋದಿ ವಿರುದ್ಧ ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, “2014ರಲ್ಲಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಅವರು 2022ರಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದು ಹೇಗೆ? 2014ರಲ್ಲಿ 8 ಬಿಲಿಯನ್ ಡಾಲರ್ ಸಂಪತ್ತಿನ ಗೌತಮ್ ಅದಾನಿ ಅವರು 2022ರಲ್ಲಿ 140 ಬಿಲಿಯನ್ ಡಾಲರ್ ನ ಧನಿಕ ಹೇಗಾದರು” ಎಂದು ಪ್ರಶ್ನಿಸಿದ್ದಾರೆ.
“ನಿಮ್ಮ ವಿದೇಶ ಪ್ರವಾಸದಲ್ಲಿ ಎಷ್ಟು ಬಾರಿ ಗೌತಮ್ ಅದಾನಿ ನಿಮ್ಮ ಜೊತೆಗಿದ್ದರು? ಎಷ್ಟು ಬಾರಿ ವಿದೇಶದಲ್ಲಿ ನಿಮಗೆ ಜೊತೆಯಾದರು? ಅವರು ಯಾವ ಉದ್ಯಮಿಗಳ ನಿಯೋಗದಲ್ಲಿದ್ದರು? ಈ ಪ್ರವಾಸದ ಸಮಯದಲ್ಲಿ ನಿಮ್ಮ ಜೊತೆ ಇದ್ದ ಇತರ ಉದ್ಯಮಿಗಳು ಯಾರು?” ಎಂದು ಕೆಣಕಿದ್ದಾರೆ.
“ನೀವು ಭೇಟಿ ನೀಡಿದ ದೇಶಗಳಲ್ಲಿ ಅದಾನಿಯವರು ಯಾವ ಉದ್ಯಮಗಳನ್ನು ಸ್ಥಾಪಿಸಿದರು? ಯಾವ ಗುತ್ತಿಗೆ ಪಡೆದರು? ಶ್ರೀಲಂಕಾ, ಇಸ್ರೇಲ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಗೌತಮ್ ಅದಾನಿಯವರ ಉದ್ಯಮ ಸ್ಥಾಪನೆಗೂ ಆ ದೇಶಗಳಿಗೆ ನಿಮ್ಮ ಭೇಟಿಗೂ ಏನಾದರೂ ಸಂಬಂಧ ಇದೆಯೇ?” ಎಂದಿದ್ದಾರೆ.
“ಎಲ್ಐಸಿ ಮತ್ತಿತರ ಸಾರ್ವಜನಿಕ ಕ್ಷೇತ್ರದ ಹಣಕಾಸು ಸಂಸ್ಥೆಗಳು ಗೌತಮ್ ಅದಾನಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದೆಷ್ಟು? ಯಾರ ಸಲಹೆ ಮತ್ತು ಭರವಸೆಯಿಂದ ಜನರ ದುಡ್ಡನ್ನು ಈ ಸಂಸ್ಥೆಗಳು ಅದಾನಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದವು? ಇಲ್ಲಿಯವರೆಗೆ ಗೌತಮ್ ಅದಾನಿಯವರು ಖರೀದಿಸಿರುವ ಬಿಜೆಪಿಯ ಚುನಾವಣಾ ಬಾಂಡ್ ಗಳ ಒಟ್ಟು ಮೌಲ್ಯ ಎಷ್ಟು? ಇದನ್ನು ಹೊರತುಪಡಿಸಿ ಪಕ್ಷಕ್ಕೆ ಅವರು ಅಧಿಕೃತವಾಗಿ ಕೊಟ್ಟಿರುವ ದೇಣಿಗೆ ಎಷ್ಟು? ಎಂಬುದನ್ನು ಬಹಿರಂಗ ಪಡಿಸಿ” ಎಂದು ಆಗ್ರಹಿಸಿದ್ದಾರೆ.
“ದೇಶದ ಆರು ವಿಮಾನ ನಿಲ್ದಾಣಗಳನ್ನು ಗೌತಮ್ ಅದಾನಿ ಸಂಸ್ಥೆ ತಮ್ಮ ವಶಕ್ಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ನಿಯಮಾವಳಿಗಳಲ್ಲಿ ಮಾಡಿರುವ ಬದಲಾವಣೆ ಕಾರಣವೇ? ಕೆಲವು ವಿಮಾನ ನಿಲ್ದಾಣಗಳ ಮಾಲೀಕರು ತನಿಖಾ ಸಂಸ್ಥೆಗಳಿಗೆ ಹೆದರಿ ಷೇರು ವಿಕ್ರಯ ಮಾಡಿರುವುದು ನಿಜವೇ?” ಎಂದು ಪ್ರಶ್ನಿಸಿದ್ದಾರೆ.
“ಗೌತಮ್ ಅದಾನಿ ಶೆಲ್ ಕಂಪೆನಿಗಳಲ್ಲಿ ಹೂಡಿಕೆ ಮಾಡಲಾಗಿರುವ ಅಂದಾಜು 20,000 ಕೋಟಿ ರೂಪಾಯಿ ಯಾರದ್ದು? ಈ ಬಗ್ಗೆ ಇಡಿಗೆ ಏನಾದರೂ ಮಾಹಿತಿ ಇದೆಯೇ? ಈ ಶೆಲ್ ಕಂಪೆನಿಗಳಿಗೂ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿಯವರಿಗೂ ಏನು ಸಂಬಂಧ? ಭಾರತದ ಬ್ಯಾಂಕುಗಳಿಗೆ 13,500 ಕೋಟಿ ರೂಪಾಯಿ ವಂಚಿಸಿದ್ದ ಮೆಹೋಲ್ ಚೋಕ್ಸಿ ಮೇಲೆ ಇಂಟರ್ ಪೋಲ್ ಹೊರಡಿಸಿದ್ದ ಲುಕ್ ಔಟ್ ನೋಟಿಸನ್ನು ವಾಪಸು ಪಡೆದಿದ್ದು ಯಾಕೆ? ಎಂಬುದಕ್ಕೆ ಉತ್ತರಿಸಿ ಎಂದು ಒತ್ತಾಯಿಸಿದ್ದಾರೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.