ಕೇಂದ್ರದಲ್ಲಿ ಒಂಬತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಮನಸ್ಸು ಮಾಡದ ಪ್ರಧಾನಿ ನರೇಂದ್ರ ಮೋದಿಯವರು ಈಗೇಕೆ ಅವಸರದಲ್ಲಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
ಟ್ವಿಟರ್ನಲ್ಲಿ ಬರೆದುಕೊಂಡಿರುವ ಕಪಿಲ್ ಸಿಬಲ್, ಪ್ರಧಾನ ಮಂತ್ರಿಗಳೇ, ಮುಸ್ಲಿಂ ಸಮುದಾಯದ ಆತಂಕಕ್ಕೆ ಹಾಗೂ ಪ್ರಚೋದನೆಗೆ ಕಾರಣವಾಗಿರುವ ಏಕರೂಪ ನಾಗರಿಕ ಸಂಹಿತೆ ಕಾಯ್ದೆಯನ್ನು ಒಂಬತ್ತು ವರ್ಷಗಳ ನಂತರ ಈಗೇಕೆ ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದೀರಿ. ಮುಂಬರುವ 2024ರ ಚುನವಣೆಗಾಗಿಯೆ? ನಿಮ್ಮ ಪ್ರಸ್ತಾವನೆಯಲ್ಲಿ ಏಕರೂಪ ಎಂದರೆ ಹೇಗೆ, ಕೇವಲ ಹಿಂದೂಗಳನ್ನು ಮಾತ್ರ ಒಳಗೊಂಡಿದೆಯೇ ಅಥವಾ ಬುಡಕಟ್ಟು ಸಮುದಾಯಗಳನ್ನೇ ಅಥವಾ ಈಶಾನ್ಯ ಭಾರತದವರೇ ಅಥವಾ ಎಲ್ಲ ಸಮುದಾಯದವರನ್ನು ಒಳಗೊಂಡಿದೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿಯವರು ಮಧ್ಯಪ್ರದೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, “ದೇಶದಲ್ಲಿ ಯುಸಿಸಿ ಅನುಷ್ಠಾನಕ್ಕೆ ಒಲವು ತೋರಿದ್ದಾರೆ ಮತ್ತು ವಿರೋಧ ಪಕ್ಷದ ನಾಯಕರು ದೇಶದಲ್ಲಿ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ” ಎಂದು ಆರೋಪಿಸಿದ್ದರು.
“ಇಂದು ಏಕರೂಪ ನಾಗರಿಕ ಸಂಹಿತೆಯ ಹೆಸರಿನಲ್ಲಿ ಜನರನ್ನು ಪ್ರಚೋದಿಸಲಾಗುತ್ತಿದೆ. ಎರಡು ಕಾನೂನುಗಳೊಂದಿಗೆ ದೇಶವನ್ನು ಹೇಗೆ ನಡೆಸಬಹುದು? ಸಂವಿಧಾನವು ಸಮಾನ ಹಕ್ಕುಗಳ ಬಗ್ಗೆಯೂ ಮಾತನಾಡುತ್ತದೆ. ಯುಸಿಸಿಯನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಕೂಡ ಕೇಳಿದೆ. ವಿರೋಧ ಪಕ್ಷದವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇಂದಿಗೂ ಪಸ್ಮಂದಾ ಮುಸ್ಲಿಂ ಸಮುದಾಯದವರಿಗೆ ಸಮಾನ ನ್ಯಾಯ ದೊರೆತಿಲ್ಲ. ಅವರನ್ನು ಅಸ್ಪೃಶ್ಯರೆಂದು ಭಾವಿಸಲಾಗಿದೆ,” ಎಂದು ಅವರು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಸರ್ಕಾರ ರಚಿಸಲು ಒಪ್ಪಿಕೊಂಡು ಮೋಸ ಮಾಡಿದ್ದ ಶರದ್ ಪವಾರ್: ದೇವೇಂದ್ರ ಫಡ್ನವಿಸ್
ಜೂನ್ 14 ರಂದು ಭಾರತದ 22ನೇ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಕೇಳಿದೆ. ಆಯೋಗವು ಹೊರಡಿಸಿದ ಸಾರ್ವಜನಿಕ ಪ್ರಕಟಣೆಯಲ್ಲಿ, ಆಸಕ್ತರು ಮತ್ತು ಇಚ್ಛೆಯುಳ್ಳವರು ತಮ್ಮ ಅಭಿಪ್ರಾಯಗಳನ್ನು 30 ದಿನಗಳಲ್ಲಿ ಮಂಡಿಸಬಹುದು ಎಂದು ಆಹ್ವಾನಿಸಲಾಗಿದೆ. ಸೂಚನೆಯ ಪ್ರಕಾರ, “ಸಾರ್ವಜನಿಕರು” ಮತ್ತು “ಮನ್ನಣೆ ಪಡೆದ ಧಾರ್ಮಿಕ ಸಂಸ್ಥೆಗಳು” 30 ದಿನಗಳಲ್ಲಿ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕಳುಹಿಸಬಹುದು ಎಂದು ತಿಳಿಸಲಾಗಿದೆ.