ಬರ ಪರಿಸ್ಥಿತಿ ಹಿನ್ನಲೆಯಲ್ಲಿ ರೈತರ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು
ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಭರವಸೆ ನೀಡಿದ್ದಾರೆ.
ಬೆಳಗಾವಿಯ ಸುವರ್ಣಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ರೈತ ಸಂಘಟನೆಗಳ ಪ್ರತಿನಿಧಿಗಳ ಅಹವಾಲು ಅಲಿಸಿದ ಸಚಿವರು, “ಸಮಸ್ಯೆಗಳನ್ನು ಕಾನೂನಿನ ಪರಿಮಿತಿ ಹಾಗೂ ಸಂಪನ್ಮೂಲಗಳ ಲಭ್ಯತೆ ಆಧಾರದ ಮೇಲೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ತಿಳಿಸಿದರು.
ರೈತರ ಪಂಪ್‌ಸೆಟ್‌ಗಳಿಗೆ ಏಳು ಗಂಟೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಉತ್ಪಾದನೆ, ಲಭ್ಯತೆ ಆಧಾರದ ಮೇಲೆ ಇದರ ಅವಧಿ ಹೆಚ್ಚಳದ ಬಗ್ಗೆ ಪರಿಶೀಲಿಸಲಾಗುವುದು ಎಂದು ಕೃಷಿ ಸಚಿವರು ಹೇಳಿದರು.
“ಎಪಿಎಂಸಿ ಕಾಯಿದೆ ತಿದ್ದುಪಡಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಗೆ ಬರಲಿದ್ದು, ಈಗಾಗಲೇ ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಪರಿಹಾರ ಹೆಚ್ಚಳದ ಬಗ್ಗೆಯೂ ಸರ್ಕಾರದ ಹಂತದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ” ಎಂದು ಕೃಷಿ ಸಚಿವರು ಹೇಳಿದರು.
“ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ರೈತರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಲಾಗುವುದು. ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ಮಹಿಳಾ ಕೇಂದ್ರಿತವಾಗಿರದೆ ಗ್ರಾಮೀಣ ರೈತರು ಹಾಗೂ ಬಡಜನರ ಏಳಿಗೆಯ ಆಶಯದೊಂದಿಗೆ ರೂಪಿಸಲಾಗಿದೆ” ಎಂದು ಸಚಿವ ಚಲುವರಾಯಸ್ವಾಮಿ ರೈತರ ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟರು.
ನಿಯೋಗದಲ್ಲಿ ರೈತ ಮುಖಂಡರಾದ ಬೀರಪ್ಪ ದೇಶನೂರ, ಬಸವರಾಜ ರುದ್ರಪ್ಪ ಮೊಕಾಶಿ, ಸಿದ್ದಮಗೌಡ ಸಿ ಪಾಟೀಲ್, ಶಂಕ್ರಪ್ಪ ರುದ್ರಪ್ಪ ಅಂಬಲಿ, ಪ್ರೇಮ ಎಂ ಚೌಗಲ, ಬಸವನಗೌಡ ಪಾಟಿಲ, ಮಹಂತೇಶ ರುದ್ರಪ್ಪ ಗೌರಿ, ದಯಾನಂದ ಪಾಟೀಲ್ , ಧರ್ಮರಾಜ ಗೌಡರ, ಸೋಮಶೇಖರ್ ಮಹದೇವಪ್ಪ ಕೊತಂಬರಿ , ಮಲ್ಲಿಕಾರ್ಜುನ ಬ್ರವಾಲಿ, ಬಸನಗೌಡ ಎಂ ಚಿಕ್ಕನಗೌಡರ,ಬಸವರಾಜ ಉಪ್ಪಾರ ಮತ್ತಿತರರು ಇದ್ದರು.