2024ರ ಲೋಕಸಭಾ ಚುನಾವಣೆಯಲ್ಲಿ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ, ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದ ಕೈಸರ್‌ಗಂಜ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಆರೋಪಿ ಬ್ರಿಜ್ ಭೂಷಣ್ ಸಿಂಗ್, “2024 ಕಾ ಚುನಾವ್ ಕೈಸರ್‌ಗಂಜ್ ಸೆ ಲಡೂಂಗಾ (2024 ರ ಲೋಕಸಭೆ ಚುನಾವಣೆಯಲ್ಲಿ ನಾನು ಕೈಸರ್‌ಗಂಜ್‌ನಿಂದ ಸ್ಪರ್ಧಿಸುತ್ತೇನೆ)” ಎಂದು ಹೇಳಿದ್ದು, ‘ಲಡೂಂಗಾ‘ (ಸ್ಪರ್ಧಿಸುತ್ತೇನೆ) ಪದವನ್ನು ಮೂರು ಬಾರಿ ಉಚ್ಛರಿಸಿದ್ದಾರೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ ಎಂದೂ ಹೇಳಿದ್ದಾರೆ.
ಕುಸ್ತಿಪಟುಗಳ ಪ್ರತಿಭಟನೆ ಕುರಿತು ಅವರು, “ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇನೆ” ಎಂದು ಹೇಳಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳು, “ಜೂನ್ 15ರೊಳಗೆ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಎಲ್ಲ ತನಿಖೆಗಳನ್ನು ಪೂರ್ಣಗೊಳಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ” ಎಂದು ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ರೈತರ ಪ್ರತಿಭಟನೆ ಬೆಂಬಲಿಸುವವರ ಟ್ವಿಟ್ಟರ್ ಖಾತೆ ರದ್ದು ಮಾಡಲು ಕೇಂದ್ರ ಸರ್ಕಾರ ಒತ್ತಡ ಹಾಕಿತ್ತು: ಜಾಕ್ ಡೋರ್ಸಿ
ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂಡೋನೇಷ್ಯಾ, ಬಲ್ಗೇರಿಯಾ, ಕಿರ್ಗಿಸ್ತಾನ್, ಮಂಗೋಲಿಯಾ ಮತ್ತು ಕಝಾಕಿಸ್ತಾನ್‌ನಲ್ಲಿ ನಡೆದ ಪಂದ್ಯಾವಳಿಗಳ ಮೇಲೆ ತಮಗೆ ಬ್ರಿಜ್ ಭೂಷಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಕುಸ್ತಿಪಟುಗಳು ಆರೋಪಿಸಿದ್ದಾರೆ. ಕುಸ್ತಿಪಟುಗಳ ದೂರಿನ ಆಧಾರದ ಮೇಲೆ ಆ 5 ರಾಷ್ಟ್ರಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಲ್ಲಿನ ಕುಸ್ತಿ ಫೆಡರೇಷನ್‌ಗಳಿಗೆ ಪತ್ರ ಬರೆದಿದ್ದಾರೆ.