ಪ್ರಧಾನಿ ನರೇಂದ್ರ ಮೋದಿ ಅವರು ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಅವರು ಕರ್ನಾಟಕ ಸರ್ಕಾರದ ಮೇಲೆ ಮಾಡಿರುವ ಆರೋಪಗಳನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಸವಾಲು ಹಾಕಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಹಾರಾಷ್ಟ್ರದ ಹಲವು ಕಡೆಗಳಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ನಡೆಸಿದ ಬಳಿಕ ಸೋಲಾಪುರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
“ಮಹಾರಾಷ್ಟ್ರ ಬಿಜೆಪಿ ಮುಖಂಡರು ಮತ್ತು ಬಿಜೆಪಿಯ ಸಚಿವರುಗಳು ಕರ್ನಾಟಕಕ್ಕೆ ಬಂದು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಪರೀಕ್ಷಿಸಲಿ. ಸುಳ್ಳಾದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ನಿಜ ಆಗಿದ್ದಲ್ಲಿ ನೀವು ಮಹಾರಾಷ್ಟ್ರ ಜನತೆಯ ಕ್ಷಮೆ ಕೋರಿ ರಾಜಕೀಯ ನಿವೃತ್ತಿ ಘೋಷಿಸುತ್ತೀರಾ” ಎಂದು ಪ್ರಧಾನಿಗೆ, ಬಿಜೆಪಿ ನಾಯಕರಿಗೆ ಸವಾಲೆಸೆದರು.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಬಿಜೆಪಿ ವಿರುದ್ಧ ಕೇಸ್ ದಾಖಲಿಸಿ ಪಾಠ ಕಲಿಸುತ್ತೇವೆ: ಸಿಎಂ ಸಿದ್ದರಾಮಯ್ಯ ಗುಡುಗು
“ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದ್ದೇವೆ. ನಮ್ಮ ಸರ್ಕಾರದ ವಿರುದ್ಧ ಪುಟಗಟ್ಟಲೆ ಸುಳ್ಳು ಜಾಹಿರಾತು ನೀಡಿರುವ ಮಹಾರಾಷ್ಟ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸುತ್ತೇವೆ” ಎಂದು ತಿಳಿಸಿದರು.
“ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ, ಯಶಸ್ವಿಯಾಗಿ ರಾಜ್ಯದ ಜನರ ಮನೆ ಮನೆ ತಲುಪಿದೆ. ಶಕ್ತಿ ಯೋಜನೆಯಡಿ 325 ಕೋಟಿ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಒಂದು ಕೋಟಿ 62 ಸಾವಿರ ಕುಟುಂಬಗಳು 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಅನ್ನಭಾಗ್ಯ ಯೋಜನೆಯಡಿ ಒಂದು ಕೋಟಿ 20 ಸಾವಿರ ಕುಟುಂಬಗಳು ಐದು ಕೆಜಿ ಉಚಿತ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಯ ಬಾಬ್ತು 170 ರೂಪಾಯಿಗಳನ್ನು ತಲಾ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಒಂದು ಕೋಟಿ 22 ಲಕ್ಷ ಕುಟುಂಬಗಳ ಯಜಮಾನಿಯರು ಪ್ರತಿ ತಿಂಗಳು 2000 ರೂಪಾಯಿ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದಾರೆ. ಹೆಚ್ಚೂ ಕಡಿಮೆ ಈ ಗ್ಯಾರಂಟಿಯಿಂದ ಪ್ರತೀ ತಿಂಗಳು 30 ಸಾವಿರ ಕೋಟಿ ರೂಪಾಯಿ ಹಣ ಮನೆ ಯಜಮಾನಿಯರ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ. ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೋಮಾ ಹೊಂದಿರುವವರು ಯುವನಿಧಿ ಅಡಿಯಲ್ಲಿ ಭತ್ಯೆ ಪಡೆಯುತ್ತಿದ್ದಾರೆ” ಎಂದು ಗ್ಯಾರಂಟಿ ಯೋಜನೆಗಳನ್ನು ವಿವರಿಸಿದರು.
ಇದನ್ನು ಓದಿದ್ದೀರಾ? ಮುಡಾ ಪ್ರಕರಣ | ನವೆಂಬರ್ 23ರಂದು ಸಿಎಂ ಸಿದ್ದರಾಮಯ್ಯ ಮೇಲ್ಮನವಿ ವಿಚಾರಣೆ
“ಗ್ಯಾರಂಟಿಗಳ ಜಾರಿಯಿಂದ ಆರ್ಥಿಕತೆ ನಾಶವಾಗುತ್ತದೆ ಎಂದು ಮೋದಿ ಭಾಷಣ ಮಾಡಿದ್ದಾರೆ. ಆದರೆ, ಇದೇ ಬಿಜೆಪಿ ಮಹಾರಾಷ್ಟ್ರ ಚುನಾವಣೆಯಲ್ಲೂ ಗ್ಯಾರಂಟಿಗಳನ್ನು ಘೋಷಿಸಿದೆ. ಮಧ್ಯಪ್ರದೇಶ ಚುನಾವಣೆಯಲ್ಲೂ ಗ್ಯಾರಂಟಿಗಳನ್ನು ಘೋಷಿಸಿತ್ತು. ಮೋದಿ ಯಾಕೆ ಈ ಮಟ್ಟದ ಸುಳ್ಳು ಹೇಳುತ್ತಾರೆ” ಎಂದು ಪ್ರಶ್ನಿಸಿದರು.
“ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರೂ ನಮ್ಮ ಗ್ಯಾರಂಟಿಗಳ ಅನುಕೂಲ ಪಡೆಯುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಸಾಮಾಜಿಕವಾಗಿ, ಆರ್ಥಿಕವಾಗಿ ದೊಡ್ಡ ರಾಜ್ಯ. ಆದ್ದರಿಂದ ಇಲ್ಲಿ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಆಘಾಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುತ್ತಾರೆ. ಅನುಮಾನ ಬೇಡ” ಎಂದು ಭರವಸೆ ನೀಡಿದರು.
