“ಕನ್ನಡ ಸಂಸ್ಕೃತಿ ಇಲಾಖೆಯಡಿ ಬರುವ ಅಕಾಡೆಮಿ, ಪ್ರಾಧಿಕಾರಗಳ ಸುಗಮ ಕಾರ್ಯ ನಿರ್ವಹಣೆಗಾಗಿ ಎಲ್ಲ ಅಧ್ಯಕ್ಷರನ್ನೂ ಒಳಗೊಂಡ ಸಮನ್ವಯ ಸಮಿತಿಯನ್ನು ಶೀಘ್ರದಲ್ಲೇ ರಚಿಸಲಾಗುವುದು” ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಕಾಡೆಮಿ-ಪ್ರಾಧಿಕಾರಗಳ ಅಧ್ಯಕ್ಷರಲ್ಲೇ ಒಬ್ಬರನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಅಥವಾ ಸಚಿವರೇ ಅಧ್ಯಕ್ಷರಾಗುವ ಕುರಿತು ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.
“ಪ್ರತಿ ತಿಂಗಳು ಕನಿಷ್ಠ ಎರಡು ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರನ್ನು ಕರೆದು ಸಭೆ ನಡೆಸಲಾಗುವುದು. ಸಂವಿಧಾನದ ಆಶಯಗಳಿಗೆ ಪೂರಕವಾಗಿ ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಅಕಾಡೆಮಿಗಳ ಪತ್ರ ವ್ಯವಹಾರದಲ್ಲಿ ‘ಕರ್ನಾಟಕ’ ಎಂದು ನಾಮಕರಣಗೊಂಡ ಸುವರ್ಣ ವರ್ಷದ ಲೋಗೋ ಕಡ್ಡಾಯವಾಗಿ ಬಳಸಲು ಸೂಚಿಸಲಾಗಿದೆ” ಎಂದರು.
ಡಿಸಿಎಂ ಅವರ ಸಭೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ
“ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರ ಸಭೆ ನಡೆಸಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ” ಎಂದು ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.
“ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಸಭೆ ನಡೆಸಿ ಸಭೆ ಸೂಚನೆ ನೀಡುವ ಅಧಿಕಾರ ಇದೆ. ಅದರಲ್ಲೂ ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ, ಸರ್ಕಾರದ ಘನತೆ ಹೆಚ್ಚಿಸುವಲ್ಲಿ ಸಾಹಿತಿಗಳ ಪಾತ್ರ ಕೂಡ ಮಹತ್ವವಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿ ಕೆಲವೊಂದು ಸಲಹೆ ನೀಡಿದ್ದಾರೆ” ಎಂದರು.
“ಸಾಹಿತಿಗಳ ಬಗ್ಗೆ ನಾನು ಯಾವುದೇ ವ್ಯಾಖ್ಯಾನ ಮಾಡುವುದಿಲ್ಲ. ಅನಗತ್ಯವಾಗಿ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ. ಈ ಬಗ್ಗೆ ನಾನು ರಾಜಕಾರಣ ಮಾತನಾಡಲು ಹೋಗುವುದಿಲ್ಲ. ಈ ಹಿಂದಿನ ಸರ್ಕಾರದಲ್ಲಿ ಯಾರೆಲ್ಲಾ ಎಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ನಡೆಸಿದ್ದರು ಎಂಬುದನ್ನು ಹೇಳುತ್ತಾ ಹೋದರೆ ಅದು ರಾಜಕೀಯವಾಗುತ್ತದೆ. ಹೀಗಾಗಿ ಈ ವಿಚಾರದಲ್ಲಿ ರಾಜಕಾರಣಗೊಳಿಸುವುದು ಬೇಡ” ಎಂದರು.
“ಹಿಂದಿನ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ವಿವಿಧ ಪ್ರಶಸ್ತಿಯನ್ನೇ ನೀಡಿರಲಿಲ್ಲ. ಘೋಷಣೆ ಮಾಡಿದ್ದವರಿಗೂ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ. ನಾನು ಸಚಿವನಾದ ಬಳಿಕ ಆ ಸರ್ಕಾರ ಘೋಷಣೆ ಮಾಡಿದವರಿಗೆ ಬದಲಾವಣೆ ಮಾಡದೆ ಪ್ರಶಸ್ತಿ ಪ್ರದಾನಿಸಿದ್ದೇನೆ. ಇದು ನಮ್ಮ ಸಾಂಸ್ಕೃತಿಕ ಬದ್ಧತೆ ತೋರಿಸುತ್ತದೆ” ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ: ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ
ಗಡಿ ಭಾಗವಾದ ಮಹಾರಾಷ್ಟ್ರದ ಜತ್ ಮತ್ತು ಸೊಲ್ಲಾಪುರ ಜಿಲ್ಲೆಗಳಲ್ಲಿನ ಕನ್ನಡ ಶಾಲೆಗಳಿಗೆ 24 ಮರಾಠಿ ಶಿಕ್ಷಕರನ್ನು ನೇಮಕ ಮಾಡಿರುವ ಬಗ್ಗೆ ಅಲ್ಲಿನ ಸರ್ಕಾರಕ್ಕೆ ಹೀಗಾಲೇ ಪತ್ರ ಬರೆದು ಆ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡುವಂತೆ ಒತ್ತಾಯಿಸಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
“ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಡ್ಡಾಯವಾಗಿ ಕನ್ನಡ ಭಾಷಾ ಮಾಧ್ಯಮದಲ್ಲಿ ಪಾಠ ಮಾಡುವ ಶಿಕ್ಷಕರನ್ನೇ ಕನ್ನಡ ಮಾಧ್ಯಮ ಶಾಲೆಗಳಿಗೆ ಮಹಾರಾಷ್ಟ್ರ ಸರಕಾರ ನೇಮಿಸಬೇಕು. ಈಗಾಗಲೇ ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಚರ್ಚೆ ನಡೆಸಿದ್ದೇನೆ. ಗಡಿಭಾಗದಲ್ಲಿ ಕನ್ನಡ ಭಾಷೆ ಹಾಗೂ ಕನ್ನಡ ಶಾಲೆ ಉಳಿವಿಗೆ ನಮ್ಮ ಸರ್ಕಾರ ವಿಶೇಷ ಕಾಳಜಿ ಹೊಂದಿದೆ” ಎಂದರು.
