ಕನ್ನಡ ರಾಜ್ಯೋತ್ಸವದ ದಿನ, ನಾಡು/ನುಡಿಯ ಕುರಿತು ವಿಜೃಂಭಿಸಿ ಮಾತಾಡಿದ ಮಾತ್ರಕ್ಕೆ ಕನ್ನಡ ಉಳಿದೀತೆ? ಬದಲಾಗಿ ಕನ್ನಡವನ್ನು ನಿತ್ಯದ ಬದುಕಾಗಿಸುವುದು ಹೇಗೆ? ನಾಡನ್ನು ಭಾಷೆಯೊಂದಿಗೆ ಬೆರೆಸಿ ನಮ್ಮ ಉಸಿರಾಗಿಸಿಕೊಳ್ಳುವುದು ಹೇಗೆ? ಎಂದು ಪ್ರತಿಯೊಬ್ಬ ಕನ್ನಡಿಗನೂ ಯೋಚಿಸಿ, ಚಿಂತಿಸಿ ಮುಂದಿನ ರಚನಾತ್ಮಕ ಸಾಧ್ಯತೆಗಳ ಕಡೆಗೆ ಹೆಜ್ಜೆ ಇಡಬೇಕಲ್ಲವೇ? ಆಗ ಮಾತ್ರ ಕನ್ನಡದ ನಿತ್ಯೋತ್ಸವ. ಅದೇ ನಿಜವಾದ ರಾಜ್ಯೋತ್ಸವ!
ನವೆಂಬರ್ ಬಂತು ಅಂದರೆ ಕರ್ನಾಟಕ ರಾಜ್ಯೋತ್ಸವದ ಸಡಗರ, ಹಬ್ಬ ರಾಜ್ಯವನ್ನು ಆವರಿಸಿಬಿಡುತ್ತದೆ. ಸ್ವಾತಂತ್ರ್ಯಾ ನಂತರ, ನಮ್ಮ ಭಾರತ ದೇಶ ಗಣರಾಜ್ಯವಾದ ಮೇಲೆ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಪ್ರಕ್ರಿಯೆ ಪ್ರಾರಂಭವಾಯ್ತು. ಕನ್ನಡ ಭಾಷೆಯನ್ನು ಮಾತಾಡುವ ದಕ್ಷಿಣ ಭಾರತದ ಎಲ್ಲಾ ಪ್ರದೇಶಗಳನ್ನೂ ಒಗ್ಗೂಡಿಸಿ, 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಸ್ಥಾಪನೆ ಆಯ್ತು. ಹೀಗಾಗಿ ಇದನ್ನು ನಾಡು ಉದಯಿಸಿದ ಹಬ್ಬ- ನಾಡಹಬ್ಬ ಅಂತಲೇ ಆಚರಿಸಲಾಗುತ್ತದೆ. ಆದರೆ ‘ಮೈಸೂರು ರಾಜ್ಯ’ ಎನ್ನುವ ಹೆಸರು ಇಡಿಯಾಗಿ ರಾಜ್ಯದ ಎಲ್ಲ ಭಾಗವನ್ನೂ ಸಮರ್ಪಕವಾಗಿ ಪ್ರತಿನಿಧಿಸುವುದಿಲ್ಲ ಎನ್ನುವಂತಹ ಗೊಂದಲ ಜನರಲ್ಲಿ ಪ್ರಾರಂಭವಾಯ್ತು. ಆಗ ಮತ್ತೆ ಚಿಂತನ ಮಂಥನಗಳು ನಡೆದು 1973ರ ನವೆಂಬರ್ 1ರಂದು ‘ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಯ್ತು. ಆಗಲೇ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎನ್ನುವಂತಹ ಕವಿವಾಣಿ ಮೊಳಗಿದ್ದು. ಕನ್ನಡ ರಾಜ್ಯೋತ್ಸವ ನವೆಂಬರ್ ಒಂದರಂದು ಮಾತ್ರ ಆದರೂ, ನವೆಂಬರ್ ಇಡೀ ತಿಂಗಳೂ ಇದರ ಆಚರಣೆಯನ್ನು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ವಿಜೃಂಭಣೆಯಿಂದ ಆಚರಿಸುತ್ತಾ ಬರಲಾಗುತ್ತಿದೆ. ಇದರೊಂದಿಗೆ ಕಳೆದ ನವೆಂಬರ್‌ಗೆ ಕರ್ನಾಟಕ ಎಂದು ಮರು ನಾಮಕರಣಗೊಂಡ 50ನೆಯ ವರ್ಷಾಚರಣೆಯ ಸಂಭ್ರಮ ಕಾರ್ಯಕ್ರಮವನ್ನು ಬೇರೆ ಉದ್ಘಾಟನೆ ಮಾಡಿಕೊಳ್ಳಲಾಗಿದೆ. ಅಂದಿನಿಂದ ವರ್ಷವಿಡೀ ಸುವರ್ಣ ಮಹೋತ್ಸವ ಸಂಭ್ರಮವನ್ನು ಸರ್ಕಾರದಿಂದ ನಡೆಸುತ್ತಾ ಬರಲಾಗಿದೆ. ಈ ಎಲ್ಲ ಕನ್ನಡ ನಾಡಿನ ವೈಭವದ ಮಧ್ಯೆ ಕನ್ನಡ ಭಾಷೆಯ ಅಳಿವು ಉಳಿವಿನ ಪ್ರಶ್ನೆಗಳು ಬೃಹದಾಕಾರವಾಗಿ ರಾಜ್ಯವನ್ನು ಕಾಡುತ್ತಿದೆ.
ಕನ್ನಡ ಭಾಷೆಯನ್ನು ಆಧರಿಸಿಯೇ ನಮ್ಮ ರಾಜ್ಯ ರೂಪುಗೊಂಡಿರುವುದರಿಂದ ಭಾಷೆ ಹಾಗೂ ನಾಡಿಗೆ ಅವಿನಾಭಾವ ಸಂಬಂಧ ತನ್ನಷ್ಟಕ್ಕೇ ಒಡಮೂಡಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಹೀಗಾಗಿ ಇದು ಅತ್ಯಂತ ಶ್ರೀಮಂತ ಭಾಷೆಯಾಗಿ ರೂಪುಗೊಂಡಿದೆ. ಅನೇಕ ಧೀಮಂತ, ಮಹತ್ವದ ಕವಿಗಳು, ವಿದ್ವಾಂಸರು, ಸಾಹಿತಿಗಳು ಕನ್ನಡದ ಪರಂಪರೆಯಲ್ಲಿ ಆಗಿಹೋಗಿದ್ದಾರೆ. ಹಾಗೂ ಇವತ್ತಿಗೂ ಇಂತಹ ಧೀಮಂತರು ಇದ್ದಾರೆ. ಕನ್ನಡ ಎನ್ನುವುದು ಕೇವಲ ಭಾಷೆಯಷ್ಟೇ ಅಲ್ಲ. ಅದು ಈ ನಾಡಿನ ಪರಂಪರೆ, ಪರಿಸರ, ಇತಿಹಾಸ, ಜನಜೀವನ, ಸಾಹಿತ್ಯ, ಕಲೆ, ಶಿಕ್ಷಣ, ಸಂಸ್ಕೃತಿ, ಭವಿಷ್ಯ… ಹೀಗೆ ಎಲ್ಲದರ ಬೆಳಕು. ಎಲ್ಲಕ್ಕೂ ಭಾಷೆಯೇ ಪ್ರಮುಖ ಅಡಿಪಾಯ. ಹಾಗೇ ಕರ್ನಾಟಕ ಎನ್ನುವುದು ಅಲ್ಲಿನ ನೆಲ, ಜಲ, ಕಾಡು, ಖನಿಜ, ಗಾಳಿ, ಮಣ್ಣು, ಭಾಷೆ, ಜನ… ಎಲ್ಲವುಗಳ ಸಮ್ಮಿಳಿತಗೊಂಡ ಮೂರ್ತರೂಪದ ನಾಡು! ಹೀಗಾಗೇ ನಾಡು ಮತ್ತು ಭಾಷೆ ಒಂದಕ್ಕೊಂದು ಬೇರ್ಪಡದ ಹಾಗೆ ಮಿಳಿತಗೊಂಡಿವೆ.
ಇದನ್ನು ಓದಿದ್ದೀರಾ?: ಕನ್ನಡ ಬೆಳೆಯಲು ಸರ್ಕಾರಿ ಶಾಲೆಗಳು ಉಳಿಯಬೇಕು; ಆದರೆ…
ಶಿಷ್ಟ ಸಾಹಿತ್ಯ ರಚನೆಯಾಗುವ ಎಷ್ಟೋ ಕಾಲದ ಮೊದಲಿನಿಂದಲೇ ಜನಪದ ಹಾಗೂ ತತ್ವಪದಗಳು ಮೌಖಿಕವಾಗಿ ಭಾರತೀಯ ಸಾಹಿತ್ಯದ ಒಂದು ವಿಶಿಷ್ಟ ಅಂಗವಾಗಿ ಬೆಳೆದುಬಂದಿದೆ. ಅದರಂತೆ ತತ್ವಪದ ಹಾಗೂ ಜನಪದ ಸಾಹಿತ್ಯವು ಕನ್ನಡ ಭಾಷೆಗೆ ಅಗಣಿತ ಕೊಡುಗೆಯನ್ನು ನೀಡಿದೆ. ಮುಂದೆ ವಚನ ಸಾಹಿತ್ಯ, ದಾಸಸಾಹಿತ್ಯಗಳೂ ಈ ಪರಂಪರೆಯ ಮುಂದುವರಿಕೆಯಾಗಿ ಬೆಸೆಯಲ್ಪಟ್ಟಿದೆ. ಹಳ್ಳಿಗಳಲ್ಲಿನ ಜನರ ಸಾಂಸ್ಕೃತಿಕ ಜೀವನ, ನಾಡಿನ ಪರಂಪರೆ ಮತ್ತು ಪ್ರಾಕೃತಿಕ ಸೌಂದರ್ಯವನ್ನು ಕನ್ನಡ ಪದಗಳಲ್ಲಿ ಪೋಣಿಸಿ ಬಾಯಿಂದ ಬಾಯಿಗೆ ಅದನ್ನು ತಲುಪಿಸುತ್ತಾ ಹಾಡಿಕೊಂಡು ಬರಲಾದ ಕನ್ನಡದ ಜಾನಪದ ಹಾಡುಗಳು, ವಚನ, ಕಾವ್ಯ, ಪುರಾಣಗಳು ಜನಜನಿತವಾಗಿವೆ. ಇವೆಲ್ಲವೂ ಹಲವು ಆಯಾಮಗಳಲ್ಲಿ ನಮ್ಮ ನಾಡಿನ ಮಾತೃಭಾಷೆಯನ್ನು ಶ್ರೀಮಂತಗೊಳಿಸುತ್ತಾ ಬಂದಿವೆ. ಹಾಗೆ ಕರ್ನಾಟಕದಲ್ಲೇ ಹಲವು ಪ್ರಾಂತ್ಯ, ಪ್ರದೇಶ, ಜನಾಂಗಕ್ಕೆ ಸೇರಿದಂತೆ ಪ್ರತ್ಯೇಕ ಮಾತೃಭಾಷೆಗಳು ಇದ್ದರೂ, ಬಹುಸಂಖ್ಯಾತರು ಬಳಸುವ ಭಾಷೆಯಾದ್ದರಿಂದ ಕನ್ನಡ ನಾಡು ಅಂಗೀಕರಿಸಲ್ಪಟ್ಟ ರಾಜ್ಯ ಭಾಷೆ ಕನ್ನಡ ಮಾತ್ರ. ಹೀಗೆಂದೇ ಅದನ್ನು ಸಮರ್ಪಕವಾಗಿ ಕಲಿಯುವಂತಹ, ಬಳಸುವಂತಹ, ಬೆಳೆಸುವಂತಹ ಇಚ್ಛಾಶಕ್ತಿ ಕನ್ನಡಿಗರಾದ ನಮಗೆ ಇರಬೇಕು. ಭಾಷೆ ಎಂದಿಗೂ ಬದುಕಿಗೆ ಪೂರಕ ಮತ್ತು ಪ್ರೇರಕ ಎಂಬುದನ್ನು ಮರೆಯಬಾರದು.
ಜಗತ್ತು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಅದಕ್ಕೆ ತಕ್ಕಂತೆ ಕನ್ನಡ ಕೂಡ ಕಾಲಕಾಲಕ್ಕೆ ಹಲವು ಸಾಧ್ಯತೆಗಳಿಗೆ ತೆರೆದುಕೊಂಡಿದೆ. ಆಧುನಿಕ ಜಗತ್ತಿನ ಸವಾಲಿಗೆ ತಕ್ಕಂತೆ ಕನ್ನಡ ತನ್ನನ್ನು ಬದಲಾಯಿಸಿಕೊಂಡಿದೆ. ಒಗ್ಗಿಸಿಕೊಂಡಿದೆ. ಕನ್ನಡಕ್ಕೆ ಹಲವು ಭಾಷೆಗಳಿಂದ ಹೊಸ ಶಬ್ಧಗಳ ಸೇರ್ಪಡೆಯಾಗಿದೆ. ಮೊಬೈಲ್, ಕಂಪ್ಯೂಟರ್, ಅಂತರ್ಜಾಲ ಯುಗದಲ್ಲಿ ಕನ್ನಡದ ಸವಾಲುಗಳು ಹಲವಾರಿವೆ. ಅದನ್ನೆದುರಿಸಲು ಯೂನಿಕೋಡ್ ಬಳಕೆ, ಕನ್ನಡ ತಂತ್ರಾಂಶಗಳ ಆವಿಷ್ಕಾರದ ಜೊತೆಗೆ ಆಂಡ್ರಾಯ್ಡ್, ವಿಂಡೋಸ್, ಆಪಲ್ ಸೇರಿದಂತೆ ಖ್ಯಾತ ಮೊಬೈಲ್ ಆಪರೇಟಿಂಗ್ ವ್ಯವಸ್ಥೆಗಳಲ್ಲಿ ಕನ್ನಡ ಅಳವಡಿಕೆ ಸಾಧ್ಯವಾಗಿದೆ.
ಹಾಗೇ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಿಣಿಕವಾಗಿ, ಆಡಳಿತಾತ್ಮಕವಾಗಿ- ಕನ್ನಡ ಭಾಷೆ 500 ವರ್ಷಕ್ಕೂ ಮೇಲ್ಪಟ್ಟ ಇತಿಹಾಸವನ್ನು ಹೊಂದಿದೆ. ಇಷ್ಟೆಲ್ಲ ಕನ್ನಡ ಭಾಷೆಯಲ್ಲಿ ಉನ್ನತ ಪ್ರಾಚೀನ ಇತಿಹಾಸವನ್ನು ಹೊಂದಿದ ನಮ್ಮ ರಾಜ್ಯ, ಇಂದು- ಕನ್ನಡದಲ್ಲಿಯೇ ಶಿಕ್ಷಣ ಕೊಡಬೇಕು, ಕನ್ನಡದಲ್ಲಿಯೇ ಆಡಳಿತ ನಡೆಸಬೇಕು, ಕನ್ನಡದಲ್ಲಿಯೇ ವ್ಯವಹರಿಸಬೇಕು ಎನ್ನುವ ಏಕೀಕರಣದ ಮೂಲ ಆಶಯದಿಂದ ದೂರವಾಗುತ್ತಿರುವುದು ಆತಂಕಕಾರಿಯಾದ ವಿಚಾರವಾಗಿದೆ. ಕರ್ನಾಟಕ ಏಕೀಕರಣಗೊಂಡು 67-68 ವರ್ಷಗಳಾದ ನಂತರವಿಂದು, ಕನ್ನಡದ ಏಳಿಗೆ, ಉಳಿವಿಗಾಗಿ ಹೋರಾಟ ಮಾಡಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿರುವುದು ದುರದೃಷ್ಟಕರ. ಆಂಗ್ಲ ಭಾಷಾ ಕವಿ ಕೀಟ್ಸ್ ”ಭಾಷೆಯ ನಾಶವೆಂದರೆ ಅದು ಸಂಸ್ಕೃತಿಯ ನಾಶ” ಎಂದಿದ್ದಾನೆ. ಇಂದು ಕನ್ನಡ ಭಾಷೆ ವಿನಾಶದ ಕಡೆಗೆ ಸಾಗುತ್ತಿದೆ ಅಂದರೆ ಅದು ಕೇವಲ ಅಕ್ಷರಗಳ ನಾಶ, ಸಾಹಿತ್ಯ ನಾಶ ಎಂದು ಅರ್ಥವಲ್ಲ. ಅದು ಸಂಸ್ಕೃತಿಯ ನಾಶಕ್ಕೆ ಮುನ್ನುಡಿ! ಇದರೊಂದಿಗೆ ಕನ್ನಡದ ಪರಿಸರ, ಆಚಾರ-ವಿಚಾರ, ಕಲೆ-ಸಂಗೀತ, ಸಾಹಿತ್ಯ-ಸಂಸ್ಕೃತಿಗಳ ನಾಶದೆಡೆಗಿನ ದಾರಿ ಎಂದೇ ಪರಿಗಣಿಸಬೇಕು. ಒಟ್ಟಾರೆಯಾಗಿ ಒಂದು ಜೀವಂತ ನಾಗರಿಕತೆಯ ನಾಶದ ಹಾದಿ ಇದು ಎಂದೇ ಭಾವಿಸಬೇಕು. ಹೀಗೆಂದೇ ಯಾವುದೇ ರಾಜ್ಯದ ಭಾಷೆ ಅವನತಿಯ ಕಡೆಗೆ ಹೋಗುತ್ತಿದೆ ಅಂದರೆ, ಇಡೀ ರಾಜ್ಯವೇ ಅವನತಿಯ ಕಡೆಗೆ ಹೋಗುತ್ತಿದೆ ಎಂದೇ ಅರ್ಥ.
ಕುವೆಂಪು ಅವರು ಸುಮಾರು 4-5 ದಶಕಗಳ ಹಿಂದೆಯೇ ”ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ, ಹೊರ ನುಡಿಯ ಹೊರೆಯಿಂದ ಕುಸಿದು ಕುಗ್ಗಿ! ರಾಜ ನುಡಿಯೆಂದೊಂದು, ರಾಷ್ಟ್ರ ನುಡಿಯೆಂದೊಂದು, ದೇವನುಡಿಯೆಂದೊಂದು ಹತ್ತಿ ಜಗ್ಗಿ, ನಿರಿನಿಟಿಲು ನಿಟಿಲೆಂದು ಮಂದಿ ಮೂಳೆ ಮುರಿಯುತಿದೆ ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ, ಕೂಗಿಕೊಳ್ಳಲು ಕೂಡ ಬಲವಿಲ್ಲ: ಮಕ್ಕಳೇ, ಬಾಯ್ಮುಚ್ಚಿ ಹಿಡಿದಿಹರು ಕೆಲರು ನುಗ್ಗಿ!” ಎಂದು ತೀವ್ರ ನೋವಿನಿಂದ ಬರೆದಿದ್ದಾರೆ ಅಂದರೆ, ಇಂದಿನ ಸ್ಥಿತಿ ಇನ್ನು ಹೇಗೆ ವಿಪರೀತಕ್ಕೆ ಹೋಗಿದೆ ಎಂದು ಊಹಿಸಿಕೊಳ್ಳಲು ಸಾಧ್ಯವಿದೆ.
ಇದನ್ನು ಓದಿದ್ದೀರಾ?: ಫಾಸ್ಟ್‌ಫುಡ್ ಇಂಗ್ಲಿಷ್ ಮುಂದೆ ದೇಸೀ ತಿನಿಸಿನ ಸವಿ ಕನ್ನಡ
ಭಾರತದ ಸಂವಿಧಾನದಿಂದ ಅಂಗೀಕರಿಸಲ್ಪಟ್ಟ 22 ದೇಶೀ ಭಾಷೆಗಳು ಹಾಗೂ ದೇಶದಾದ್ಯಂತ ಇರುವ ಅನೇಕಾನೇಕ ಅಲ್ಪಸಂಖ್ಯಾತ ಭಾಷೆಗಳು ಸಹ, 2014ರಲ್ಲಿ ಸುಪ್ರಿಂ ಕೋರ್ಟ್ ನೀಡಿದ ಭಾಷಾಮಾಧ್ಯಮ ಕುರಿತ ಅಂತಿಮ ತೀರ್ಪಿನಿಂದಾಗಿ ದನಿಯನ್ನೇ ಕಳೆದುಕೊಂಡು ಮೂಕವಾದಂತಹ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ”ತಮ್ಮ ಮಕ್ಕಳಿಗೆ ಯಾವ ಭಾಷೆಯಲ್ಲಿ, ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ಆಯ್ಕೆ ಪೋಷಕರದ್ದು” ಎಂಬ ನ್ಯಾಯಾಲಯದ ತೀರ್ಮಾನವು ದೇಶದ ಎಲ್ಲ ಮಾತೃಭಾಷೆಗಳ ಭವಿಷ್ಯವನ್ನು ಅಳಿವು-ಉಳಿವಿನ ತೂಗುಯ್ಯಾಲೆಯಲ್ಲಿ ಇರಿಸಿಬಿಟ್ಟಿದೆ. ಆದರೆ ಜಗತ್ತಿನ ಹೆಚ್ಚಿನ ಹಲವು ದೇಶಗಳಲ್ಲಿ ಇವತ್ತಿಗೂ ಆಯಾ ದೇಶಗಳ ಮಾತೃಭಾಷೆಯಲ್ಲಿಯೇ ಮೂಲ ಶಿಕ್ಷಣ ಮಾತ್ರವಲ್ಲ, ಉನ್ನತ ಶಿಕ್ಷಣವನ್ನೂ ನೀಡಲಾಗುತ್ತಿದೆ. ಅಲ್ಲೆಲ್ಲಾ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಮಾತ್ರ ಕಲಿಸಲಾಗುತ್ತಿದೆ. ಇದರ ನಿರ್ಧಾರವನ್ನು ಆಯಾ ದೇಶಗಳ ಸರ್ಕಾರವು ತೆಗೆದುಕೊಳ್ಳುತ್ತಿದೆಯೇ ಹೊರತು ನ್ಯಾಯಾಲಯವಲ್ಲಾ! ಪ್ರತಿ ಮಗುವಿಗೂ ಅದರ ಮಾತೃಭಾಷೆಯಲ್ಲಿ ಕಲಿಸಬೇಕು ಎನ್ನುವುದು ಅದರ ಹಕ್ಕು ಹೌದು. ಹಾಗೇ ನಾಗರಿಕ ಕರ್ತವ್ಯವೂ ಹೌದು. ಮಕ್ಕಳಲ್ಲಿ ಚಿಂತನಶೀಲತೆ ಬೆಳೆಯಲು, ಅದು ಯಾವುದೇ ವಿಷಯವನ್ನು ಸಮರ್ಪಕವಾಗಿ, ಆಳವಾಗಿ ಅರ್ಥ ಮಾಡಿಕೊಳ್ಳಲು ಮಾತೃಭಾಷಾ ಶಿಕ್ಷಣ ಅತ್ಯಂತ ಅವಶ್ಯಕವಾದುದು ಎಂದು ಎಲ್ಲ ದೇಶದ ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು, ಸಮಾಜವಿಜ್ಞಾನಿಗಳು ಸಾಕ್ಷ್ಯಾಧಾರ ಸಮೇತವಾಗಿ ಸಾಬೀತುಪಡಿಸಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕನ್ನಡವನ್ನೂ ಒಳಗೊಂಡು, ದೇಶದ ಎಲ್ಲ ದೇಶೀ ಭಾಷೆಗಳನ್ನೂ ನುಂಗಿ ಹಾಕಿ, ಭಾರತ ಇವತ್ತು ವಿದೇಶಿ ಇಂಗ್ಲಿಷ್ ಏಕಸ್ವಾಮ್ಯಕ್ಕೆ ಒಳಪಡುವಂತಾಗಿದೆ ಅಂದರೆ ವಿಪರ್ಯಾಸ ಅಲ್ಲವೇ? ನಾವು ಇಂಗ್ಲಿಷ್ ಗುಲಾಮರಾದಂತೆ ಅಲ್ಲವೇ?
ಇದರ ಜೊತೆಗೆ ಕನ್ನಡವನ್ನು ಸ್ನಾತಕೋತ್ತರವಾಗಿ ಹಾಗೂ ಸಂಶೋಧನೆಗಾಗಿ ಕಲಿಯುವವರ ಸಂಖ್ಯೆಯ ಬಗ್ಗೆ ಹೇಳಲೇಬೇಕಿಲ್ಲ. ಅನೇಕ ಕಾಲೇಜುಗಳಲ್ಲಿ ಕನ್ನಡ ವಿಭಾಗಕ್ಕೆ ವಿದ್ಯಾರ್ಥಿಗಳಿಲ್ಲದೇ ಮುಚ್ಚಲಾಗುತ್ತಿದೆ. ವೃತ್ತಿಪರ ಶಿಕ್ಷಣ ಪಡೆಯುವವರಿಗೆ ಭಾಷೆಯನ್ನು ಕಡ್ಡಾಯವಾಗಿ ಕಲಿಯಲೇಬೇಕು, ಉತ್ತಿರ್ಣವಾಗಲೇಬೇಕು ಎಂಬಂತಹ ಒತ್ತಾಯ, ಒತ್ತಡಗಳಿಲ್ಲ. ಎಲ್ಲಿ ಪ್ರೀತಿ ಇಲ್ಲವೋ ಅಲ್ಲಿ ಕಾನೂನು ತಂದು ಬಲವಂತವಾಗಿ ಹೇರಬಹುದು. ಆದರೆ ಅಲ್ಲಿ ಸಹಜ ಪ್ರೀತಿ ಹುಟ್ಟಲಿಕ್ಕೆ ಸಾಧ್ಯವಿಲ್ಲ, ಮೂಲ ಬದಲಾವಣೆ ಸಾಧ್ಯವಿಲ್ಲ ಅಲ್ಲವೇ?
ಸುಪ್ರೀಂ ತೀರ್ಪಿನಿಂದ ಕನ್ನಡ ಭಾಷೆಗೆ ಮಾತ್ರ ಕುತ್ತಲ್ಲ, ಸಾಂವಿಧಾನಿಕವಾಗಿ ಅಂಗೀಕರಿಸಲ್ಪಟ್ಟ ದೇಶದ ಎಲ್ಲ ರಾಜ್ಯ ಭಾಷೆಗಳೂ, ದೇಶೀ ಭಾಷೆಗಳೂ ಅಳಿವಿನಂಚನ್ನು ತಲುಪುತ್ತಿವೆ. ಕನಿಷ್ಠ ಪ್ರಾಥಮಿಕ ಹಂತದವರೆಗಾದರೂ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷೆಯ ಮಾಧ್ಯಮ ಕಡ್ಡಾಯವಾಗಬೇಕು ಎಂದು ನ್ಯಾಯಾಲಯದಲ್ಲಿ ಹೋರಾಟ ನಡೆಸಿ, ಮೊದಲಿಗೆ ಸುಪ್ರೀಂ ಕೋರ್ಟ್‌ವರೆಗೆ ಹೋಗಿದ್ದು ಕರ್ನಾಟಕವೇ! ಆದರೆ ಕೊನೆಗೆ ನ್ಯಾಯಸ್ಥಾನವೇ ತನ್ನ ದೇಶದ ಮಾತೃಭಾಷೆಗಳ ಉಳಿವಿಗೆ ವಿರುದ್ಧವಾಗಿ ನಿಂತಿದ್ದು, ಚರಿತ್ರೆಯಲ್ಲಿ ಕರಾಳವಾಗಿ ದಾಖಲಾಗುವಂತಾದ ನೋವಿನ ಅಂಶ. ಇದರಿಂದ ಮೂಲಭೂತ ಶಿಕ್ಷಣವನ್ನಾದರೂ ತನ್ನ ಮಾತೃಭಾಷೆಯಲ್ಲಿ ಕಲಿಯುವಂತಹ ಸಾಧ್ಯತೆಯನ್ನು ದೇಶದ ಮಕ್ಕಳು ಕಳೆದುಕೊಂಡುಬಿಟ್ಟಿದ್ದಾರೆ.
ಮೊದಲೇ ದಶಕಗಳಿಂದ ಇಂಗ್ಲಿಷ್ ವ್ಯಾಮೋಹದಿಂದಾಗಿ, ತಮ್ಮ ಮಕ್ಕಳಿಗೆ ಪೋಷಕರು ಕನ್ನಡದಲ್ಲಿ ಶಿಕ್ಷಣ ಕೊಡಿಸುವ ಪ್ರಮಾಣ ಕಡಿಮೆ ಆಗುತ್ತಾ, ಕನ್ನಡ ಸರ್ಕಾರಿ ಶಾಲೆಗಳು ನೂರಾರು ಸಂಖ್ಯೆಯಲ್ಲಿ ಮುಚ್ಚಲ್ಪಡುತ್ತಾ ಬಂದಿದ್ದವು. ಅದಕ್ಕೆ ಪರ್ಯಾಯವಾಗಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಎಲ್ಲೆಡೆ ವ್ಯಾಪಕವಾಗಿ, ನಾಯಿಕೊಡೆಗಳಂತೆ ತಲೆ ಎತ್ತುತ್ತಾ ಬಂದಿದ್ದವು. ಈ ರೀತಿಯ ನ್ಯಾಯಾಲಯದ ವ್ಯತಿರಿಕ್ತ ತೀರ್ಪಿನಿಂದಾಗಿ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಕನ್ನಡ ಶಾಲೆಗಳು ಮುಚ್ಚಿ ಹೋದವು. ಹೀಗಾಗಿ ಕನ್ನಡ ಕಲಿಕೆಯ ದಾರಿಗಳೇ ಶಾಶ್ವತವಾಗಿ ಮುಚ್ಚಲ್ಪಡುತ್ತಾ ಬಂದಿವೆ. ಸರ್ಕಾರಿ ಶಾಲೆಗಳಲ್ಲೂ ಕೂಡ ಈಗ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮದ ಕಲಿಕೆಯನ್ನು ಪ್ರಾರಂಭಿಸಿ ಬಿಟ್ಟಿರುವುದರಿಂದ, ಶಿಕ್ಷಣ ಮಾಧ್ಯಮವಾಗಿ ಕನ್ನಡ ಕಲಿಸುವ ಸಾಧ್ಯತೆಗಳು ಕೊನೆಯ ಉಸಿರು ಬಿಡುವ ಹಂತಕ್ಕೆ ಬಂದು ನಿಂತುಬಿಟ್ಟಿರುವುದು, ಅತ್ಯಂತ ನೋವಿನ ಸಂಗತಿ. ಹೀಗಾಗಿ ಶಿಕ್ಷಣದಲ್ಲೇ ಕನ್ನಡ ಉಳಿಯಲಿಲ್ಲ ಎಂದರೆ, ಮುಂದೆ ನಾಡಿನಲ್ಲಿ ಕನ್ನಡ ಅಥವಾ ಯಾವುದೇ ಮಾತೃಭಾಷೆಗೆ ಉಳಿವಿದೆಯೇ ಎನ್ನುವ ಪ್ರಶ್ನೆಗಳನ್ನಿಟ್ಟುಕೊಂಡು ನಾವಿಂದು ತುರ್ತಾಗಿ ಚಿಂತಿಸಬೇಕಿದೆ.

ಇದರೊಂದಿಗೆ ಜಾಗತೀಕರಣದ ಭಾಗವಾಗಿರುವ ವಿಜ್ಞಾನ/ತಂತ್ರಜ್ಞಾನದ ಕ್ರಾಂತಿ ಜನರ ಬದುಕನ್ನೇ ಬದಲಾಯಿಸಲಾರಂಭಿಸಿದೆ. ಖಾಸಗೀಕರಣ, ಬಂಡವಾಳಶಾಹಿ ಆಡಳಿತ, ವ್ಯಾಪಕವಾಗಿ ಜಗತ್ತನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಹೀಗಾಗಿ ಆಂಗ್ಲ ಭಾಷೆಯ ಪಾರಮ್ಯದಿಂದಾಗಿ ಕೂಡ ದೇಶದ ಹಲವು ಮಾತೃಭಾಷೆಗಳು ಇವತ್ತು ಅವನತಿಯೆಡೆಗೆ ಸಾಗುತ್ತಿವೆ. ಇದರಿಂದ ನಮ್ಮ ಸಂಸ್ಕೃತಿಯ ಬೇರುಗಳಾದ ಮಾತೃಭಾಷೆಯನ್ನು ಉಳಿಸಿಕೊಂಡು ಆಧುನಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆಯೇ ಎಂದು ಮೊದಲು ಯೋಚಿಸಬೇಕಾಗಿದೆ. ನಮ್ಮ ಬದುಕು ಸುಧಾರಣೆಯಾಗಲಿಕ್ಕೆ ಭಾಷಾಭಿವೃದ್ಧಿಯೊಂದೇ ಸುಲಭದ ದಾರಿಯಾಗಿದೆ ಎನ್ನುವ ಅಂಶವನ್ನು ನಾವಿಂದು ಮನಗಾಣಬೇಕಾಗಿದೆ.
ಇದಕ್ಕಾಗಿ ಕನ್ನಡವನ್ನು ಉಳಿಸುವ ಮತ್ತು ಅಭಿವೃದ್ಧಿಪಡಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎನ್ನುವ ಅರಿವು ನಮ್ಮಲ್ಲಿ ಮೊದಲು ಮೂಡಬೇಕಿದೆ. ಇತರ ಭಾಷೆಗಳಿಗೆ ಬೆಂಬಲ ನೀಡುವುದು ತಪ್ಪಲ್ಲ. ಆದರೆ ಕನ್ನಡಕ್ಕೆ ಪ್ರಥಮ ಆದ್ಯತೆಯಾಗಿ ಅದನ್ನು ಕಲಿಯುವುದು, ಪ್ರೀತಿ ಮತ್ತು ಗೌರವವನ್ನು ನೀಡುವುದು ಮುಖ್ಯವಾಗಿದೆ. ಕನ್ನಡವನ್ನು ಮುಂದಿನ ತಲೆಮಾರಿಗೆ ಶ್ರೇಷ್ಠವಾದ ರೀತಿಯಲ್ಲಿ- ನಮ್ಮ ಹಿರಿಯರು ನಮಗೆ ಹೇಗೆ ನೀಡಿದ್ದರೋ ಹಾಗೇ ನಾವು ನೀಡುವುದು ತುಂಬಾ ಮುಖ್ಯ. ಇದಕ್ಕೆ ಮೊದಲು ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಅಳವಡಿಸುವ ಸಾಧ್ಯತೆಯ ಕಡೆಗೆ ಗಮನಹರಿಸಬೇಕು. ಅದಕ್ಕಾಗಿ ತುರ್ತಾಗಿ ಸಂವಿಧಾನ ತಿದ್ದುಪಡಿಗಾಗಿ, ಶಿಕ್ಷಣ ಹಕ್ಕು ಕಾಯ್ದೆ ತಿದ್ದುಪಡಿಗಾಗಿ, ಸಮಾನ ಶಿಕ್ಷಣಕ್ಕಾಗಿ ಹಾಗೂ ಶಿಕ್ಷಣ ರಾಷ್ಟ್ರೀಕರಣಕ್ಕಾಗಿ ಹೋರಾಟಗಳನ್ನು ರಾಜ್ಯಾದ್ಯಂತ ರೂಪಿಸಬೇಕಿದೆ. ತನ್ಮೂಲಕ ರಾಜ್ಯ ಹಾಗೂ ಒಕ್ಕೂಟ ಸರ್ಕಾರದ ಮೇಲೆ ಒತ್ತಡ ಹೇರಿ, ಶತಾಯಗತಾಯ ಎಲ್ಲ ಮಕ್ಕಳಿಗೂ ಭೇದವಿಲ್ಲದೇ ಪ್ರಾಥಮಿಕ ಹಂತದಲ್ಲಾದರೂ ಮಾತೃಭಾಷಾ ಮಾಧ್ಯಮದ ಶಿಕ್ಷಣವನ್ನು ಸಮಾನ ಶಿಕ್ಷಣವಾಗಿ ನೀಡುವಂತೆ ಮಾಡುವುದು ನಮ್ಮ ತುರ್ತು ಆದ್ಯತೆಯಾಗಬೇಕಿದೆ.
ಇವತ್ತು ಉದ್ಯೋಗ ಗಳಿಸಲಿಕ್ಕೆ ಆಂಗ್ಲ ಭಾಷೆ ಅನಿವಾರ್ಯ ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕೆ ಬದಲಾಗಿ ಕನ್ನಡವನ್ನು ಸಶಕ್ತ ಅನ್ನದ ಭಾಷೆಯಾಗಿ ಮಾಡುವುದು ಹೇಗೆ ಎಂದು ನಮ್ಮ ಸರ್ಕಾರಗಳು ಯೋಚಿಸುತ್ತಿಲ್ಲ. ಇದಕ್ಕಾಗಿ ತುರ್ತಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗಾಗಿ ಎಲ್ಲ ಕ್ಷೇತ್ರದಲ್ಲೂ ಉದ್ಯೋಗ ಮೀಸಲಾತಿಯನ್ನು ಖಾತ್ರಿಗೊಳಿಸಬೇಕು. ಹಾಗೇ ಬಹುತ್ವ ಭಾರತದಲ್ಲಿ ವೈವಿಧ್ಯತೆಯೇ ಉಸಿರಾಗಿರುವ ದೇಶದ ಜನರಿಗೆ, ಹಿಂದಿಯನ್ನು ರಾಷ್ಟ್ರಭಾಷೆ ಎಂದು ಅನಾದಿಯಿಂದ ಅಸತ್ಯವನ್ನು ಹೇಳುತ್ತಾ ಬರಲಾಗುತ್ತಿದೆ. ಹೀಗೆ ದೇಶದ ಹಿಂದೀ ಭಾಷಿಕರಲ್ಲದವರ ಮೇಲೂ ಹಿಂದಿಯನ್ನು ಒತ್ತಾಯಪೂರ್ವಕವಾಗಿ ಹೇರುವುದು ಅಕ್ಷಮ್ಯವಾಗಿದೆ. ಈ ಕುರಿತೂ ಕೇಂದ್ರ ಒಕ್ಕೂಟ ಸರ್ಕಾರ ಸ್ಪಷ್ಟ ನಿಲುವನ್ನು ತೆಗೆದುಕೊಂಡು, ಪ್ರಾದೇಶಿಕ ಭಾಷೆಗಳ ಸ್ವಾಯತ್ತತೆ ಉಳಿಯುವ ಹಾಗೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅದರ ಮೇಲಿದೆ. ಹೀಗೆ ಇಂಗ್ಲಿಷ್, ಹಾಗೇ ಹಿಂದಿಯ ದಾಳಿಯಿಂದ ಹೆದರಿ ನಾವು ಕನ್ನಡವನ್ನು ನಿರ್ಲಕ್ಷಿಸಬೇಕಾಗಿಲ್ಲ. ಶತಾಯಗತಾಯ ನಾವು ಕನ್ನಡತನವನ್ನು ಉಳಿಸಿಕೊಳ್ಳಬೇಕು. ಕನ್ನಡದೊಂದಿಗೆ ಲೋಕಜ್ಞಾನಕ್ಕಾಗಿ ಇತರೆ ಭಾಷೆಗಳನ್ನು ಕಲಿಯಬೇಕು. ನಮ್ಮ ಭಾಷೆಯ ಬಗ್ಗೆ ದುರಭಿಮಾನವಿರದ ಸ್ವಾಭಿಮಾನವನ್ನು, ಅಭಿಮಾನವನ್ನು ನಾವು ನಿಷ್ಪಕ್ಷಪಾತವಾಗಿ ಬೆಳೆಸಿಕೊಳ್ಳಬೇಕು. ದುರ್ದೈವದ ಸಂಗತಿಯೆಂದರೆ, ಬಹಳಷ್ಟು ಸಂದರ್ಭಗಳಲ್ಲಿ ನಾವು ಕಾಣುವುದು ಕನ್ನಡದ ಬಗ್ಗೆ ಕನ್ನಡಿಗರಿಗೇ ಇರುವ ನಿರಭಿಮಾನವನ್ನು ಮಾತ್ರ! ಇದೇ ಹೆಚ್ಚು ಆತಂಕಕಾರಿಯಾದುದು. ಕನ್ನಡಿಗರಿಗೇ ಕನ್ನಡ ಬೇಡವೆಂದಾದರೆ ಮತ್ಯಾರು ಕನ್ನಡವನ್ನು ಪ್ರೀತಿಸುತ್ತಾರೆ?
ಹೀಗಾಗಿ ಹಲವು ಆಯಾಮಗಳಲ್ಲಿ ಕನ್ನಡ ಉಳಿವಿನ ಸಾಧ್ಯತೆಗಳ ಕುರಿತು ನಾವಿಂದು ಯೋಚಿಸಲೇಬೇಕಿದೆ. ತುಂಬಾ ಮುಖ್ಯವಾಗಿ ಇಂದು ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ತರುವ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು. ಉದ್ಯೋಗದಲ್ಲಿ ಕನ್ನಡಿಗರಿಗೇ ಆದ್ಯತೆಯನ್ನು ಕೊಡುವುದಕ್ಕೆ ಹೆಚ್ಚಿನ ಮಾನ್ಯತೆ ನೀಡಬೇಕು. ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಅವಕಾಶಕ್ಕಾಗಿ ಮೀಸಲು ನೀತಿ ಜಾರಿಯಾಗಬೇಕು. ಹಾಗೆ ಸರ್ಕಾರದ ಎಲ್ಲ ಕಚೇರಿಗಳು, ಅಂಗಸಂಸ್ಥೆಗಳಲ್ಲಿ ಆಡಳಿತ ಹಾಗೂ ವ್ಯವಹಾರಕ್ಕೆ ಕನ್ನಡವನ್ನೇ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಎಲ್ಲ ಸರ್ಕಾರಿ ಆದೇಶಗಳು, ನೀತಿನಿಯಮಗಳನ್ನು ಕನ್ನಡದಲ್ಲೇ ಜಾರಿಗೊಳಿಸಬೇಕು. ಕರ್ನಾಟಕದ ಎಲ್ಲ ಕಚೇರಿ, ಅಂಗಡಿ, ಮುಂಗಟ್ಟು, ಸಾರ್ವಜನಿಕ ಸ್ಥಳಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕ್ ಮುಂತಾದೆಡೆಯೆಲ್ಲಾ ವ್ಯಾವಹಾರಿಕವಾಗಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಎಲ್ಲೆಡೆ ನಾಮಫಲಕಗಳು, ಜಾಹಿರಾತುಗಳು, ವಿವರಗಳೆಲ್ಲವೂ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು. ಇದರ ಜೊತೆಗೆ ಅವಶ್ಯಕತೆ ಇರುವ ಕಡೆ ಇಂಗ್ಲಿಷ್ ಮತ್ತು ಹಿಂದಿಯನ್ನು ಅಳವಡಿಸಿಕೊಳ್ಳಬಹುದು. ಕೆಳಹಂತದ ನ್ಯಾಯಾಲಯಗಳಲ್ಲಿ ವಾದವಿವಾದಗಳು ಕನ್ನಡದಲ್ಲೇ ನಡೆಯುವಂತಾಗಬೇಕು. ತೀರ್ಪು ಕೂಡ ಕನ್ನಡದಲ್ಲೇ ಘೋಷಿಸಬೇಕು. ಕನ್ನಡ ಅಂದರೆ ಅದು ಹೊರಗಿನ ವ್ಯವಹಾರಕ್ಕಿರುವ ಒಂದು ಸಂಪರ್ಕ ಮಾಧ್ಯಮ ಅಲ್ಲ! ಅದು ಈ ನಾಡಿನ ಗಾಳಿ, ನೀರು, ಮಣ್ಣು, ಬೆಳಕು ಎಲ್ಲವೂ ಹೇಗೆ ಅತ್ಯಂತ ಸ್ವಾಭಾವಿಕವಾಗಿ ಹಾಗೂ ಸಹಜವಾಗಿ ಈ ಜನಜೀವನದ ಜೊತೆಗೆ ಬೆರೆತು ಹೋಗಿದೆಯೋ ಅಷ್ಟೇ ಸಹಜವಾದ ಮಿಳಿತವಾಗಿ ಕನ್ನಡವೂ ಒಂದಾಗಿ ಹೋಗಬೇಕು. ಆಗ ಮಾತ್ರ ಅದು ಕರ್ನಾಟಕ! ಇವೆಲ್ಲವೂ ಸಿದ್ಧಿಸಿದಾಗ ಮಾತ್ರ ಕರ್ನಾಟಕ, ಕನ್ನಡ ಉಳಿಯಲು ಸಾಧ್ಯ.
ಅದೇ ರೀತಿ ಆಡುಭಾಷೆಯಾಗಿ ಸಹ ಸ್ವಚ್ಛ ಕನ್ನಡವನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ. ವೃತ್ತಿಶಿಕ್ಷಣದಲ್ಲಿ ಕನ್ನಡ ಕಲಿಕೆ ಮತ್ತು ಪರೀಕ್ಷೆಯನ್ನು ಕಡ್ಡಾಯಗೊಳಿಸಬೇಕು. ಸರ್ಕಾರಿ ಕನ್ನಡ ಶಾಲೆಗಳನ್ನು ಮತ್ತು ಪಠ್ಯವನ್ನು ಆಕರ್ಷಕಗೊಳಿಸಬೇಕು. ವಿವಿಧ ಸಮೂಹ ಮಾಧ್ಯಮಗಳಲ್ಲಿ ದುಡಿಯುತ್ತಿರುವವರಿಗೆ ಕನ್ನಡ ಸಂಸ್ಕೃತಿ ಶಿಬಿರಗಳನ್ನು ನಡೆಸುವ ಮೂಲಕ ಅವರಿಗೆ ಕನ್ನಡ ಭಾಷಾ ಚರಿತ್ರೆ, ಕರ್ನಾಟಕ ಚರಿತ್ರೆಯನ್ನು ಕೂಲಂಕಷವಾಗಿ, ಸೂಕ್ಷ್ಮವಾಗಿ ತಿಳಿಸಿಕೊಡುವ ಏರ್ಪಾಡಾಗಬೇಕು. ಆಧುನಿಕ ತಂತ್ರಜ್ಞಾನದಲ್ಲಿ ಕೂಡ ವಿವಿಧ ಹಂತದಲ್ಲಿ ಪ್ರಾಯೋಗಿಕವಾಗಿ ಸಮರ್ಪಕವಾಗಿ ಕನ್ನಡ ಬಳಕೆಯ ಬಗ್ಗೆ ಪ್ರಯೋಗಗಳು ನಡೆಯಬೇಕು. ಹೀಗೆ ಕನ್ನಡದ ಉಳಿವಿಗಾಗಿ ಸಮಗ್ರವಾಗಿ, ಎಲ್ಲ ರೀತಿಯಲ್ಲೂ ಚಿಂತಿಸಿ, ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಕರ್ತವ್ಯವನ್ನು ಸರ್ಕಾರ ಮತ್ತು ನಾವು ಕನ್ನಡಿಗರೆಲ್ಲರೂ ಮಾಡಲೇಬೇಕಿದೆ.
ಇದನ್ನು ಓದಿದ್ದೀರಾ?: ರಾಜ್ಯೋತ್ಸವ ವಿಶೇಷ | ನಮ್ಮ ‘ಕನ್ನಡ’ದ ಐದು ಮುಖ್ಯ ಗುಣಗಳು
ಸರಕಾರ ಕೂಡ ಕನ್ನಡ ಉಳಿವಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಯೋಜನೆಗಳನ್ನು ಹಿಂದಿನಿಂದಲೂ ಘೋಷಿಸುತ್ತಾ ಬರುತ್ತಿದೆ. ಅಲ್ಲದೇ ಈಗ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಕೂಡ ಸಿಕ್ಕಿದೆ. ಸರಕಾರದೊಂದಿಗೆ ಹಲವಾರು ಕನ್ನಡ ಸಂಘ, ಸಂಸ್ಥೆಗಳು, ಅಕಾಡೆಮಿ, ಪ್ರಾಧಿಕಾರ, ಸಾಹಿತ್ಯ ಪರಿಷತ್ತು ಕೂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ವೈಭವದಿಂದ ಆಚರಿಸುತ್ತಾ ‘ಕನ್ನಡಕ್ಕೆ ಸಾವಿಲ್ಲ’ ಎಂದು ಘೋಷಣೆಗಳನ್ನು ಕೂಗುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವರ್ಷವಿಡೀ ವಿಕೇಂದ್ರೀಕೃತವಾಗಿ ಹಾಗೂ ವರ್ಷಕ್ಕೊಮ್ಮೆ ಅಖಿಲ ಭಾರತ ಮಟ್ಟದಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ, ಅತ್ಯಂತ ವೈಭವದಿಂದ, ಅದ್ಧೂರಿಯಾಗಿ, ವಿಜೃಂಭಣೆಯಿಂದ, ಬೃಹತ್ ಜಾತ್ರೆಯ ರೀತಿಯಲ್ಲಿ ಆಚರಿಸುತ್ತಾ ಬರಲಾಗುತ್ತಿದೆ. ಆದರೆ ಕನ್ನಡ ವಿನಾಶದ ಹಾದಿಯನ್ನು ಹಿಡಿದಿರುವ ಈ ಹೊತ್ತಲ್ಲಿ, ಹೀಗೆ ಭಾಷೆ ಅಥವಾ ನಾಡಿನ ಹೆಸರಿನಲ್ಲಿ ವೈಭವಪೂರ್ಣ ಕಾರ್ಯಕ್ರಮಗಳಿಂದ ಏನು ಪ್ರಯೋಜನ? ಕೇವಲ ಕನ್ನಡ ರಾಜ್ಯೋತ್ಸವದ ದಿನ, ನಾಡು/ನುಡಿಯ ಕುರಿತು ವಿಜೃಂಭಿಸಿ ಮಾತಾಡಿದ ಮಾತ್ರಕ್ಕೆ ಕನ್ನಡ ಉಳಿದೀತೆ? ಬದಲಾಗಿ ಕನ್ನಡವನ್ನು ನಿತ್ಯದ ಬದುಕಾಗಿಸುವುದು ಹೇಗೆ? ನಾಡನ್ನು ಭಾಷೆಯೊಂದಿಗೆ ಬೆರೆಸಿ ನಮ್ಮ ಉಸಿರಾಗಿಸಿಕೊಳ್ಳುವುದು ಹೇಗೆ? ಎಂದು ಪ್ರತಿಯೊಬ್ಬ ಕನ್ನಡಿಗನೂ ಯೋಚಿಸಿ, ಚಿಂತಿಸಿ ಮುಂದಿನ ರಚನಾತ್ಮಕ ಸಾಧ್ಯತೆಗಳ ಕಡೆಗೆ ಹೆಜ್ಜೆ ಇಡಬೇಕಲ್ಲವೇ? ಆಗ ಮಾತ್ರ ಕನ್ನಡದ ನಿತ್ಯೋತ್ಸವ. ಅದೇ ನಿಜವಾದ ರಾಜ್ಯೋತ್ಸವ!

ರೂಪ ಹಾಸನ
ಲೇಖಕಿ, ಸಂಘಟಕಿ. ಮೂಲತಃ ಮೈಸೂರಿನವರು. ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಗಳಿಗೆ ಬಟ್ಟಲ ತಿರುವುಗಳಲ್ಲಿ, ಕಡಲಿಗೆಷ್ಟೊಂದು ಬಾಗಿಲು, ಲಹರಿ, ಮಹಿಳೆ ಮತ್ತುಆಧುನಿಕತೆಯ ಸವಾಲುಗಳು, ಹೇಮಯೊಡಲಲ್ಲಿ, ತನ್ನಷ್ಟಕ್ಕೆ, ಇವಳ ಭಾರತ, ಒಂದು ನಿಸ್ತಂತುವಿನೆಳೆ, ಮಹಾಸಂಗ್ರಾಮಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಲವು ಪ್ರಶಸ್ತಿಗಳು ದೊರಕಿವೆ. ಮಹಿಳೆ ಮಕ್ಕಳು ಶಿಕ್ಷಣ ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯದ ನೆಲೆ ಹಾಸನ.