ಕಳೆದ ವಿಧಾನಸಭೆ ಚುನಾವಣೆಯಲ್ಲಿ ʻಅಡ್ಜಸ್ಟ್ ಮೆಂಟ್ ರಾಜಕೀಯʼದ ಬಗ್ಗೆ ಸ್ವತಃ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರೇ ಮಾತನಾಡಿದ್ದು, ಈ ಕುರಿತು ನೂತನ ಕಾಂಗ್ರೆಸ್ ಸರ್ಕಾರ ತನಿಖೆ ನಡೆಸಲಿದೆಯೇ? ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಜಡಿಎಸ್ ಕಚೇರಿಯಲ್ಲಿ ಸುದ್ದಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ, “ಹಿಂದಿನ ಸರ್ಕಾರದ ಎಲ್ಲ ನಿರ್ಧಾರಗಳನ್ನು ಈಗಿನ ಸರಕಾರ ತನಿಖೆ ನಡೆಸುವುದಾಗಿ ಹೇಳುತ್ತಿದೆ. ಹಾಗಾದರೆ, ಚುನಾವಣಾ ಒಳಒಪ್ಪಂದದ ಬಗ್ಗೆಯೂ ತನಿಖೆ ಮಾಡಿಸಬೇಕಲ್ಲವೇ” ಎಂದು ಪ್ರಶ್ನಿಸಿದ್ದಾರೆ.
“ಸಿ ಟಿ ರವಿ ಒಂದು ಹೇಳಿಕೆ ಗಮನಿಸಿದ್ದೇನೆ. ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ನಾನು ಕಾಂಗ್ರೆಸ್ ನಾಯಕರನ್ನು ಕೇಳುತ್ತೇನೆ ಯಾವ ಜತೆ ಒಪ್ಪಂದ ಮಾಡಿಕೊಂಡಿದ್ದಿರಿ, ನಮ್ಮನ್ನು ಬಿಜೆಪಿ ಬೀ ಟೀಮ್ ಎಂದು ಹೇಳುತ್ತಿದ್ದವರು ನೀವು. ಹಿಂದೆಯೇ ನಾನು ಈ ಬಗ್ಗೆ ಹೇಳಿದ್ದೆ. ಅದು ಸತ್ಯವಾಗಿದೆ. ಈಗ ಹೇಳಿ ನೀವು ಯಾವ ಟೀಮ್? ನೀವು ಇದನ್ನು ತನಿಖೆ ಮಾಡಿಸುತ್ತೀರಾ?” ಎಂದು ಕುಮಾರಸ್ವಾಮಿ ಕೇಳಿದರು.
ನಾವು ಯಾವ ಪಕ್ಷದ ಜತೆಯೂ ಒಪ್ಪಂದ ಮಾಡಿಕೊಳ್ಳದೆ 20 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದರು.
ಬೆಂಗಳೂರು ಘಟಕದ ಸಭೆ:
ಪಕ್ಷದ ಸಂಘಟನೆ ದೃಷ್ಟಿಯಿಂದ ಬೆಂಗಳೂರು ಮಹಾನಗರದ ಮುಖಂಡರ ಸಭೆ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಶನಿವಾರ ನಡೆಯಿತು.
ʻಸಂಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯುವಕರಿಗೆ ಶಕ್ತಿ ತುಂಬು ಕೆಲಸ ಮಾಡುತ್ತಿದ್ದೇನೆ. ಪಕ್ಷ ಸಂಘಟನೆಯಲ್ಲಿ ಭಾಗಿಯಾಗದವರನ್ನು ಪಕ್ಷದಿಂದ ತೆಗೆಯುತ್ತೇವೆ. ಅರ್ಹತೆ ಆಧಾರ ಮತ್ತು ಸಮುದಾಯದ ಆಧಾರದ ಮೇಲೆ ನಾನು ಅಧಿಕಾರ ಹೊಣೆಗಾರಿಕೆ ಕೊಡುತ್ತೇವೆʼ ಎಂದು ಎಚ್‌ಡಿಕೆ ಹೇಳಿದ್ದಾರೆ.
ಮುಂದಿನ ಬಿಬಿಎಂಪಿ ಚುನಾವಣೆಗೆ ಪಕ್ಷವನ್ನು ಸಜ್ಜು ಮಾಡಲಾಗುತ್ತಿದೆ. ಆ ನಿಟ್ಟಿನಲ್ಲಿ ಮುಖಂಡರ ಜತೆ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಬಂಡೆಪ್ಪ ಕಾಶೇಂಪೂರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್ ಎಂ ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಯಶವಂತಪುರದ ಅಭ್ಯರ್ಥಿ ಜವರಾಯಿ ಗೌಡ ಸೇರಿದಂತೆ ಬೆಂಗಳೂರು ನಗರದ ಅನೇಕ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.