ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ಆಸ್ಪತ್ರೆಯ ವೈದ್ಯರು ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿದ್ದು, ಪ್ರತಿಭಟನಾನಿರತ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. “ಪ್ರಕರಣಕ್ಕೆ ತಮ್ಮ ‘ಕುರ್ಚಿ’ ಬಿಡುವುಡು ನ್ಯಾಯವಲ್ಲ. ತಮ್ಮ ಕುರ್ಚಿಯನ್ನು ಬಿಡಲೇಬೇಕು ಎಂದಿದ್ದರೆ, ರಾಜೀನಾಮೆ ನೀಡಲು ಸಿದ್ದನಿದ್ದೇನೆ” ಎಂದು ಹೇಳಿದ್ದಾರೆ.
ಪ್ರತಿಭಟನಾನಿರತ ವೈದ್ಯರೊಂದಿಗೆ ಗುರುವಾರ ಸಭೆ ನಡೆಸಲು ಮಮತಾ ಬ್ಯಾನರ್ಜಿ ಮುಂದಾಗಿದ್ದರು. ಆದರೆ, ಮಾತುಕತೆಗೆ ವೈದ್ಯರು ನಿರಾಕರಿಸಿದ್ದರು. ಇದರಿಂದಾಗಿ, ರಾಜ್ಯ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಬಿಕ್ಕಟ್ಟು ಹದಗೆಟ್ಟಿದೆ.
ಇಂತಹ ಪರಿಸ್ಥಿತಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಮಮತಾ ಭೇಟಿ ನೀಡಿದ್ದಾರೆ. ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, “ಇಲ್ಲಿಗೆ ಬಂದಿರುವುದು ನಿಮ್ಮ ‘ದೀದಿ’ಯೇ ಹೊರತು. ಮುಖ್ಯಮಂತ್ರಿ ಅಲ್ಲ. ಸಮಸ್ಯೆಗಳನ್ನು ಪರಿಹರಿಸಲು ಸ್ವಲ್ಪ ಸಮಯಬೇಕು. ಎಲ್ಲವನ್ನು ನಿಭಾಯಿಸಲು ಕಾಲಾವಕಾಶ ಕೊಡಿ. ಕೆಲಸಕ್ಕೆ ಮರಳಿ” ಎಂದು ಮನವಿ ಮಾಡಿದ್ದಾರೆ.
“ನಾನು ನಿನ್ನನ್ನು ಒತ್ತಾಯಿಸಲು ಸಾಧ್ಯವಿಲ್ಲ. ನಾನು ನಿಮ್ಮಲ್ಲಿ ಮನವಿಯನ್ನು ಮಾತ್ರ ಮಾಡಬಹುದು. ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಇದು ಉತ್ತರ ಪ್ರದೇಶವಲ್ಲ. ನಾವು ನಿಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.
“ಸಿಪಿಎಂ ಅಧಿಕಾರದಲ್ಲಿದ್ದಾಗ ನಾನೂ ಕೂಡ 26 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದೆ. ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಯಾವುದೇ ಅನ್ಯಾಯವಾಗುವುದಿಲ್ಲ. ನ್ಯಾಯ ದೊರೆಯುತ್ತದೆ. ನಾನು ಭರವಸೆ ನೀಡುತ್ತಿದ್ದೇನೆ” ಎಂದು ಮಮತಾ ಹೇಳಿದ್ದಾರೆ.
“ನಾನು ನಿಮ್ಮ ಬೇಡಿಕೆಗಳನ್ನು ಪರಿಶೀಲಿಸುತ್ತೇನೆ. ಅವುಗಳ ಈಡೇರಿಕೆಗೆ ಪ್ರಯತ್ನಿಸುತ್ತೇವೆ” ಎಂದಿದ್ದಾರೆ.