ಜಾತಿ ಆಧಾರಿತ ಮೀಸಲಾತಿಗೆ ಇರುವ ಶೇ.50 ರಷ್ಟು ಮಿತಿಯನ್ನು ಕಾಂಗ್ರೆಸ್ ತೆಗೆದುಹಾಕುತ್ತದೆ. ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ಜನರಿಗೆ ಅಗತ್ಯವಿರುವಷ್ಟ ಮೀಸಲಾತಿ ಕೋಟಾವನ್ನು ಹೆಚ್ಚಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು. “ಈ ಚುನಾವಣೆಯು ಸಂವಿಧಾನದ ಉಳಿವಿಗಾಗಿನ ಹೋರಾಟವಾಗಿದೆ. ಸಂವಿಧಾನವನ್ನು ಬದಲಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಯಸಿವೆ. ಕಾಂಗ್ರೆಸ್ ಮತ್ತು ‘ಇಂಡಿಯಾ’ ಮೈತ್ರಿಕೂಟವು ಸಂವಿಧಾನವನ್ನು ಉಳಿಸಲು ಹೋರಾಡುತ್ತಿವೆ. ನಮ್ಮ ಸಂವಿಧಾನವು ದೇಶದ ಜನರಿಗೆ ನೀರು, ಅರಣ್ಯ, ಭೂಮಿ ಮೇಲೆ ಹಕ್ಕುಗಳನ್ನು ನೀಡಿದೆ. ಈ ಹಕ್ಕುಗಳನ್ನು ತೆಗೆದು ಹಾಕಲು ಮತ್ತು ಸಂಪೂರ್ಣ ಅಧಿಕಾರಕ್ಕಾಗಿ ನರೇಂದ್ರ ಮೋದಿ ಬಯಸುತ್ತಾರೆ” ಎಂದು ಆರೋಪಿಸಿದ್ದಾರೆ.
“ಗೆದ್ದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ನಾಯಕರು ಘೋಷಿಸಿದ್ದರು. ಅದಕ್ಕಾಗಿಯೇ ಅವರು ‘400 ಸೀಟು’ ಘೋಷಣೆ ಮಾಡಿದರು. ಆದರೆ, 400 ಸ್ಥಾನವನ್ನು ಮರೆತುಬಿಡಿ, ಅವರಿಗೆ 150 ಸೀಟುಗಳು ಸಿಗುತ್ತಿಲ್ಲ” ಎಂದು ಹೇಳಿದರು.
” ಅವರು ಮೀಸಲಾತಿಯನ್ನು ತೆಗೆದುಹಾಕುತ್ತೇವೆ ಎಂದು ಹೇಳುತ್ತಾರೆ. ನಾನು ಈಗಲೇ ಭರವಸೆ ನೀಡುತ್ತಿದ್ದೇನೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಮೀಸಲಾತಿಯ 50% ಮಿತಿಯನ್ನು ತೆಗೆದು, ಮೀಸಲಾತಿಯ್ನು ಹೆಚ್ಚಿಸುತ್ತೇವೆ. ಬಡವರು, ಹಿಂದುಳಿದವರು, ದಲಿತರು, ಆದಿವಾಸಿಗಳಿಗೆ ಅಗತ್ಯವಿರುವಷ್ಟು ಮೀಸಲಾತಿ ನೀಡುತ್ತೇವೆ,’’ ಎಂದು ರಾಹುಲ್ ಭರವಸೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ‘ಕಾಂಗ್ರೆಸ್ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಸಿದುಕೊಂಡು ಮುಸ್ಲಿಮರಿಗೆ ನೀಡುತ್ತದೆ’ ಎಂದು ಆರೋಪಿಸುತ್ತಿದೆ. ಈ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ.
ಆದಿವಾಸಿಗಳ ಮೇಲಿನ ದೌರ್ಜನ್ಯಗಳ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡದೇ ಇರುವ ಬಗ್ಗೆ ಮಾತನಾಡಿದ ರಾಹುಲ್, “ನಿಮ್ಮ (ಆದಿವಾಸಿಗಳು) ಮಕ್ಕಳ ಮೇಲೆ ಅತ್ಯಾಚಾರ ಎಸಗಲಾಗಿದೆ. ನಿಮ್ಮ ಭೂಮಿ ಕಿತ್ತುಕೊಳ್ಳಲಾಗಿದೆ. ಆದರೆ ಮಾಧ್ಯಮಗಳು ವರದಿ ಮಾಡುವುದಿಲ್ಲ. ಯಾಕೆಂದರೆ, ಈ ಮಾಧ್ಯಮ ಸಂಸ್ಥೆಗಳಲ್ಲಿ ಆದಿವಾಸಿಗಳಿಲ್ಲ” ಎಂದು ಹೇಳಿದ್ದಾರೆ.