ಸರ್ಕಾರಿ ಪ್ರಶಸ್ತಿಗಳಿಗೆ ಅರ್ಜಿ ಹಾಕುವ ಪದ್ಧತಿ ನಿಲ್ಲಿಸಲು ಚಿಂತನೆ ನಡೆಸಿರುವ ಬಗ್ಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ‘ಇಷ್ಟು ದಿನ ಸರ್ಕಾರ ನೀಡುವ ಪ್ರಶಸ್ತಿಗಳಿಗೆ ಆಸಕ್ತರು ಅರ್ಜಿ ಸಲ್ಲಿಸಿ ಅದನ್ನು ಪಡೆಯುವ ಪದ್ಧತಿ ಇತ್ತು. ಆದರೆ, ಇನ್ನು ಆ ಪದ್ಧತಿಯನ್ನು ಕೈಬಿಟ್ಟು ಪರಿಣಿತರ ಸಮಿತಿ ಮುಖಾಂತರ ಆಯ್ಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ’ ಎಂದು ತಿಳಿಸಿದ್ದಾರೆ.
ನಗರದ ಗಾಂಧಿಭವನದಲ್ಲಿ ಶನಿವಾರ ನಡೆದ ಸಂಸ್ಕೃತಿ ಸಂಗಮ- 23 ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ಪ್ರಶಸ್ತಿ ಆಯ್ಕೆಗೆ ಹೊಸ ವ್ಯವಸ್ಥೆ ಜಾರಿಗೆ ತರಬೇಕಿದೆ. ಯಾವುದೇ ಪ್ರಶಸ್ತಿಯಾದರೂ ಅದಕ್ಕೆ ಗೌರವ ಇರಬೇಕು. ಯಾವುದೇ ಒತ್ತಡಕ್ಕೆ ಒಳಗಾಗಿ ಪ್ರಶಸ್ತಿ ನೀಡಬಾರದು. ರಾಜ್ಯೋತ್ಸವದಷ್ಟೇ ವರ್ಷದ ಸಂಖ್ಯೆಯ ಪ್ರಶಸ್ತಿ ನೀಡುವ ಆಲೋಚನೆಯಿದೆ. ಆಯ್ಕೆ ಮಾಡುವ ವಿಧಾನದ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ತಿಳಿಸಿದರು.
ಡಾ. ಸಿ. ಸೋಮಶೇಖರ ಹಾಗೂ ಶ್ರೀ ಎನ್. ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ಸಾಧಕರಿಗೆ ನೀಡಲಾಗುವ ‘ಸಂಸ್ಕೃತಿ ಸಂಗಮ’ – 2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆ.
ಜ್ಞಾನಭಂಡಾರದಲ್ಲಿ ಕುಳಿತಿರುವ ಹಿರಿಯ ಸಾಧಕರು,… pic.twitter.com/fCxo78JAqW
— DK Shivakumar (@DKShivakumar) October 21, 2023
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆನ್‌ಲೈನ್ ಅರ್ಜಿ ಕರೆದಿದ್ದೆವು. ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಜಾತಿ, ಜಿಲ್ಲಾವಾರು ಮತ್ತು ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು. ಎಲ್ಲವನ್ನೂ ಲೆಕ್ಕ ಹಾಕುವಾಗ, ಯಾರನ್ನು ಆಯ್ಕೆ ಮಾಡುವುದು, ಯಾರನ್ನು ಬಿಡುವುದು ಎನ್ನುವ ಸವಾಲು ನಮ್ಮ ಮುಂದಿದೆ. ನಾವೀಗ ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ ಎಂದು ಉಪಮುಖ್ಯಮಂತ್ರಿ ಹೇಳಿದರು.
ಪ್ರಸ್ತುತ ವರ್ಷದ ಪ್ರಶಸ್ತಿ ನೀಡಲು ಎಲ್ಲ ಕ್ಷೇತ್ರಗಳ 20-30 ತಜ್ಞರ ಸಮಿತಿಯನ್ನು ಮಾಡಲಾಗಿದೆ. ಸರ್ಕಾರ ನೀಡುವ ಯಾವುದೇ ಪ್ರಶಸ್ತಿಯನ್ನು ಸಮಿತಿಯೇ ಪರಿಶೀಲನೆ ಮಾಡಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಹಿಂದೆ ಕೆಲವು ಸಲ ಪ್ರಶಸ್ತಿ ಪುರಸ್ಕೃತರ ಸಂಖ್ಯೆ 200- 300ಕ್ಕೆ ಮುಟ್ಟಿದ್ದಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಸರ್ಕಾರ ಮಾಡಲು ಆಗದೇ ಇರುವ ಕೆಲಸಗಳನ್ನು ಸಂಘ- ಸಂಸ್ಥೆಗಳು, ಮಠಗಳು ಮಾಡುತ್ತಿವೆ. ಅನೇಕ ಸಾಧಕರನ್ನು ಗುರುತಿಸಿ, ಸಮಾಜದ ಒಳಿತಿಗೆ ಕೆಲಸ ಮಾಡುತ್ತಿವೆ. ಇಲ್ಲಿ ನಾನೊಬ್ಬನೇ ಅಲ್ಲ, ನಮ್ಮ ಹಿರಿಯರನ್ನು ನೆನಪಿಸಿಕೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ಅದರಂತೆ ಸಿ. ಸೋಮಶೇಖರ್ ಅವರು ಜ್ಞಾನ ಭಂಡಾರದಲ್ಲಿ ಮುಳುಗೆದ್ದವರು. ಇವರಲ್ಲಿ ಸರಸ್ವತಿ ಮನೆ ಮಾಡಿದ್ದಾಳೆ. ಅವರಲ್ಲಿ ಇರುವ ಜ್ಞಾನವನ್ನು ಸಮಾಜಕ್ಕೆ ಮರಳಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.