ರಾಜೀನಾಮೆ ಕೊಡ್ತಾರಾ ಸಿದ್ದರಾಮಯ್ಯ?; ಮುಂದಿನ ಮುಖ್ಯಮಂತ್ರಿ ಯಾರು?

Date:

Advertisements

ಬಿಜೆಪಿಯ ದ್ವೇಷ ರಾಜಕಾರಣಕ್ಕೆ ರಾಜ್ಯದಲ್ಲಿ ಮುಡಾ ಪ್ರಕರಣ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಸಿದ್ದರಾಮಯ್ಯರನ್ನು ಸರಿಗಟ್ಟಲು, ಮೂಲೆಗೆ ದೂಡಲು ತಂತ್ರ ಹೆಣೆಯುತ್ತಿದೆ. ಮುಡಾ ಪ್ರಕರಣದ ಹಿನ್ನೆಲೆ, ವಾಸ್ತವಾಂಶಗಳನ್ನು ಅರಿಯದ, ಗೊತ್ತಿದ್ದೂ ಗೊತ್ತಿಲ್ಲದಂತೆ ವರ್ತಿಸುತ್ತಿರುವ ಮಾಧ್ಯಮಗಳು ಮುಡಾ ಪ್ರಕರಣದಲ್ಲಿ ಮೂಢರಂತೆ ನಡೆದುಕೊಳ್ಳುತ್ತಿವೆ. ‘ಅದು ಹಂಗಂತೆ – ಇಂದು ಹಿಂಗಂತೆ’ ಅಂತ ಬಿಜೆಪಿ-ಜೆಡಿಎಸ್‌ ನಾಯಕರು ಪುಂಖಾನುಪುಂಖವಾಗಿ ಪುಂಗುವ ಹೇಳಿಕೆಗಳನ್ನೇ ಸುದ್ದಿ ಮಾಡಿಕೊಂಡು, ಚರ್ಚೆ ಮಾಡಿಕೊಂಡು ಜನರನ್ನು ಹಾದಿತಪ್ಪಿಸುತ್ತಿವೆ.

ಅದೇನೇ ಇರಲಿ, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಹೈಕೋರ್ಟ್‌ನ ಆದೇಶ ಮತ್ತು ಎಫ್‌ಐಆರ್‌ ದಾಖಲಿಸಲು ವಿಶೇ‍ಷ ನ್ಯಾಯಾಲಯದ ಸಮ್ಮತಿಯ ಬಳಿಕ ಮೈಸೂರು ಲೋಕಾಯುಕ್ತದಲ್ಲಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಂತಹ ಸಂದರ್ಭದಲ್ಲಿ ಸಿದ್ಧರಾಮಯ್ಯರ ಪತ್ನಿ ಪಾರ್ವತಿ ಅವರು ತಮ್ಮ ಜಮೀನಿಗೆ ಪರಿಹಾರವಾಗಿ ಪಡೆದುಕೊಂಡಿದ್ದ ಮುಡಾ ಸೈಟುಗಳನ್ನು ಮುಡಾಗೆ ವಾಪಸ್ ಕೊಟ್ಟಿದ್ದಾರೆ.

ತಮ್ಮ ಪತಿ ಮುಖ್ಯಮಂತ್ರಿಯಾಗಿದ್ದರೂ ರಾಜಕೀಯವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಪಾರ್ವತಿ ಅವರು ಮುಡಾ ಪ್ರಕರಣದ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ತಮ್ಮ ಜಮೀನಿಗೆ ಪರಿಹಾರವಾಗಿ ಸೈಟು ಪಡೆದದ್ದೇ ಸಿದ್ದರಾಮಯ್ಯ ಅವರ ರಾಜಕೀಯಕ್ಕೆ ಕಳಂಕ ತರುತ್ತದೆ ಎನ್ನುವುದಾದರೆ, ಆ ಸೈಟುಗಳೇ ಬೇಡವೆಂದು ನಿರ್ಧರಿಸಿದ್ದಾರೆ. ಇಂದಿನ ವಿದ್ಯಮಾನಗಳ ಬಗ್ಗೆ ಮರುಕ ವ್ಯಕ್ತಪಡಿಸುತ್ತಿದ್ದಾರೆ.

Advertisements

ಅವರು ಮುಡಾಗೆ ಸೈಟುಗಳನ್ನು ಹಿಂದಿರುಗಿಸಿದ್ದನ್ನೂ ಬಿಜೆಪಿ ಲೇವಡಿ ಮಾಡುತ್ತಿದೆ. ತಪ್ಪನ್ನು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದೆ. ಸಿದ್ದರಾಮಯ್ಯರನ್ನು ಮೂಲೆಗಟ್ಟುವುದು ಬಿಜೆಪಿ-ಜೆಡಿಎಸ್‌ ತಂತ್ರ. ಅದಕ್ಕೆ ತಕ್ಕಂತೆಯೇ ಅವರು ಮಾತನಾಡುತ್ತಿದ್ದಾರೆ. ಆದರೆ, ಇದೇ ಹೊತ್ತಿನಲ್ಲಿ ಕಾಂಗ್ರೆಸ್‌ನಲ್ಲಿಯೂ ಮುಖ್ಯಮಂತ್ರಿ ಗಾದಿಗೆ ಗುಸು-ಗುಸು ಚರ್ಚೆ ನಡೆಯುತ್ತಿದೆ ಎಂದೂ ಹೇಳಲಾಗುತ್ತಿದೆ.

ರಾಜ್ಯದ ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅಲ್ಲದೆ, ನಾಲ್ವರ ನಡುವೆ ತಿಕ್ಕಾಟ ನಡೆಯುತ್ತಿದೆ ಎಂಬುದು ವರ್ಷಗಳ ಹಿಂದಿನ ಮಾತು. ಇದೀಗ, ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಾದ ಬಳಿಕ, ಈ ಮುಖ್ಯಮಂತ್ರಿ ಹುದ್ದೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಏನೇ ಆದರೂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದು ಕಾಂಗ್ರೆಸ್‌ ಬಲವಾಗಿ ಪ್ರತಿಪಾದಿಸುತ್ತಿದೆ. ದೆಹಲಿಯ ಕೇಜ್ರಿವಾಲ್‌ರಂತೆಯೇ ರಾಜ್ಯ ರಾಜಕಾರಣ ನಡೆಸಬೇಕೆಂದು ಕಾಂಗ್ರೆಸ್‌ ನಿರ್ಧರಿಸಿದೆ.

ಆದಾಗ್ಯೂ, ಒಂದು ವೇಳೆ, ಸಿದ್ದರಾಮಯ್ಯ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟರೆ, ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ಕಾಂಗ್ರೆಸ್‌ ಒಳಗೆ ನಡೆಯುತ್ತಿದೆ. ಇದೇ ವೇಳೆ, ಉಪ ಮುಖ್ಯಮಂತ್ರಿ, ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗೃಹ ಮಂತ್ರಿ ಜಿ ಪರಮೇಶ್ವರ ಅವರ ಮನೆಗೆ ಸೋಮವಾರ ಭೇಟಿ ನೀಡಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಎತ್ತಿನಹೊಳೆ ಯೋಜನೆ ಬಗ್ಗೆ ಚರ್ಚಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ, ಅವರ ಸಭೆ ಕೇವಲ ಅದೊಂದು ಯೋಜನೆಗಷ್ಟೇ ಸೀಮಿತವಾಗಿರಲಿಲ್ಲ. ಅವರು ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಚರ್ಚಿಸಿದ್ದಾರೆ ಎಂಬ ಊಹಾಪೋಹಗಳೂ ಇವೆ.

ಡಿ.ಕೆ ಶಿವಕುಮಾರ್ – ಹಳೇ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯ ನಾಯಕ. ಪರಮೇಶ್ವರ್ – ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿರುವ ದಲಿತ ಸಮುದಾಯದ ಮುಖಂಡ. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರುವಲ್ಲಿ ಡಿ.ಕೆ ಶಿವಕುಮಾರ್ ಅವರ ಪಾತ್ರವೂ ಹೆಚ್ಚಿನದ್ದು. ಚುನಾವಣೆ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದು ಕುಳಿತಿದ್ದರು. ಹೈಕಮಾಂಡ್ ಮನವೊಲಿಸಿ, ಉಪಮುಖ್ಯಮಂತ್ರಿ ಹುದ್ದೆ ಕೊಟ್ಟಿದೆ.

ಪರಮೇಶ್ವರ್ ಎಂದಿಗೂ ದಲಿತ ಸಮುದಾಯವನ್ನು ಪ್ರತಿನಿಧಿಸದೇ ಇದ್ದರೂ, ದಲಿತರ ಪರವಾಗಿ ಗಟ್ಟಿ ಧನಿಯಲ್ಲಿ ಮಾತನಾಡದೇ ಇದ್ದರೂ, ದಲಿತರ ಮೇಲಿನ ದೌರ್ಜನ್ಯಗಳನ್ನು ಬಲವಾಗಿ ಖಂಡಿಸದೇ ಇದ್ದರೂ, ಕಾಂಗ್ರೆಸ್‌ನಲ್ಲಿರುವ ನಾಯಕರಲ್ಲಿ ಅವರೇ ಹಿರಿಯರು. ಹಿರಿತನದ ಕಾರಣಕ್ಕಾದರೂ ಮುಖ್ಯಮಂತ್ರಿ ರೇಸ್‌ನಲ್ಲಿ ಅವರಿಗೆ ಸ್ಥಾನವುಂಟು.

ಪರಮೇಶ್ವರ್ ಈ ಹಿಂದೆ, ಕೆಪಿಸಿಸಿ ಅಧ್ಯಕ್ಷರಾಗಿದ್ದವರು. 2013ರಲ್ಲಿಯೂ ಕಾಂಗ್ರೆಸ್‌ ಗೆದ್ದಾಗ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ, ಮಂತ್ರಿ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. 2018ರ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿಯೂ ಮುಖ್ಯಮಂತ್ರಿ ಹುದ್ದೆ ಸಿಗದೆ, ಉಪ ಮುಖ್ಯಮಂತ್ರಿಯಾಗಿದ್ದರು. ಈಗ, ಗೃಹ ಮಂತ್ರಿ ಹುದ್ದೆಯಲ್ಲಿಯಲ್ಲಿದ್ದಾರೆ. ಏನೇ ಆಗಲಿ ಒಮ್ಮೆ ಮುಖ್ಯಮಂತ್ರಿ ಆಗಲೇಬೇಕೆಂಬ ಹಂಬಲ ಅವರಲ್ಲಿದೆ.

ಇನ್ನು, ಉತ್ತರ ಕರ್ನಾಟಕ ಭಾಗದಲ್ಲಿ ದಲಿತ ನಾಯಕರಾಗಿ ಗುರುತಿಸಿಕೊಂಡಿರುವ, ಮೌಢ್ಯಗಳ ವಿರುದ್ಧ ಹೋರಾಟ ನಡೆಸುತ್ತ ಜನರನ್ನು ಎಚ್ಚರಿಸುತ್ತಿರುವ ಸತೀಶ್ ಜಾರಕಿಹೊಳಿ ಕೂಡ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿದ್ದಾರೆ. ಆದರೆ, ಲೋಕಸಭಾ ಚುನಾವಣೆಯ ಬಳಿಕ, ಅವರು ಹೆಚ್ಚು ಮೌನಕ್ಕೆ ಶರಣಾಗಿದ್ದಾರೆ.

ಇನ್ನೊಂದು ಕಡೆ, ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯದ ಎಂ.ಬಿ ಪಾಟೀಲ್ ಕೂಡ ಮುಖ್ಯಮಂತ್ರಿ ಹುದ್ದೆಗೆ ಲಾಬಿ ನಡೆಸುತ್ತಿದ್ದಾರೆ. ಅವರನ್ನು ಮೌನವಾಗಿಸಿ, ಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಳ್ಳಲು ಸ್ವತಃ ಪರಮೇಶ್ವರ್ ಮುಂದಾಗಿದ್ದಾರೆ. ಅದಕ್ಕಾಗಿ, ಎಂ.ಬಿ ಪಾಟೀಲರನ್ನು ಪರಮೇಶ್ವರ್ ಭೇಟಿ ಮಾಡಿ ಬಂದಿದ್ದಾರೆ. ಪಾಟೀಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಹೀಗಾಗಿ, ಪರಮೇಶ್ವರ್ ಅವರಿಗೇ ಡಿ.ಕೆ ಶಿವಕುಮಾರ್ ಗಾಳ ಹಾಕುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಆಗಬೇಕೆಂದು ಹಾತೊರೆಯುತ್ತಿದ್ದಾರೆ.

ದಕ್ಷಿಣದ ಒಕ್ಕಲಿಗ, ಉತ್ತರದ ಲಿಂಗಾಯತ ಹಾಗೂ ರಾಜ್ಯದ ಉದ್ದಗಲಕ್ಕೂ ಇರುವ ದಲಿತ ಸಮುದಾಯಗಳನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಳ್ಳುವುದು ಕಾಂಗ್ರೆಸ್‌ಗೆ ಅತ್ಯಗತ್ಯವಾಗಿದೆ. ಹಾಗೆ ನೋಡಿದರೆ, ಎಲ್ಲ ಸಮುದಾಯಗಳಿಗೂ ಸಲ್ಲುವ ನಾಯಕರಾಗಿ ಸಿದ್ದರಾಮಯ್ಯ ಕಾಂಗ್ರೆಸ್‌ಅನ್ನು ಮುನ್ನಡೆಸುತ್ತಿದ್ದಾರೆ. ಅವರ ನಂತರದಲ್ಲಿ, ಎಲ್ಲರಿಗೂ ಸಲ್ಲುವ ಯಾವುದೇ ನಾಯಕ ಕಾಂಗ್ರೆಸ್‌ನಲ್ಲಿಲ್ಲ.

ಹೀಗಾಗಿ, ಎಂ.ಬಿ ಪಾಟೀಲ್ – ಪರಮೇಶ್ವರ್ ಅವರ ಲಿಂಗಾಯತ-ದಲಿತ ಕಾಂಬಿನೇಷನ್, ಪರಮೇಶ್ವರ್-ಶಿವಕುಮಾರ್ ಅವರ ದಲಿತ-ಒಕ್ಕಲಿಗ ಕಾಂಬಿನೇಷನ್‌ನಲ್ಲಿ ಆಡಳಿತ ನಡೆಸಲು ಈ ಮೂವರೂ ಯತ್ನಿಸುತ್ತಿದ್ದಾರೆ.

ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ – ಪರಮೇಶ್ವರ್‌ಗೆ ಉಪಮುಖ್ಯಮಂತ್ರಿ, ಪರಮೇಶ್ವರ್ ಮುಖ್ಯಮಂತ್ರಿಯಾದರೆ – ತಮ್ಮ ಉಪಮುಖ್ಯಮಂತ್ರಿ ಸ್ಥಾನವನ್ನು ಹಾಗೆಯೇ ಉಳಿಸಿಕೊಳ್ಳುವುದು ಡಿ.ಕೆ ಶಿವಕುಮಾರ್ ಅವರ ಆಲೋಚನೆ. ಜೊತೆಗೆ, ಎಂ.ಬಿ ಪಾಟೀಲ್‌ರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲೇಬೇಕಿದೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿಬಿಟ್ಟರೆ, ಎರಡು ಡಿಸಿಎಂ ಹುದ್ದೆ ಸೃಷ್ಟಿಸುವುದು ಕಾಂಗ್ರೆಸ್‌ಗೆ ಸಮಸ್ಯೆಯೇ ಅಲ್ಲ. ಆದರೆ, ಪರಮೇಶ್ವರ್ ಏನಾದರೂ ಮುಖ್ಯಮಂತ್ರಿಯಾಗಿಬಿಟ್ಟರೆ, ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿಗೆ ಶಿವಕುಮಾರ್ ಸುತಾರಾಂ ಒಪ್ಪುವುದಿಲ್ಲ.

ಹೀಗಾಗಿಯೇ, ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾದ ಪ್ರಹಸನ ಒದಗಿಬಂದರೆ, ಆ ವೇಳೆಗೆ ತಮ್ಮ ದಾರಿಯನ್ನು ಸಂಪೂರ್ಣವಾಗಿ ಸುಗಮಗೊಳಿಸಿಕೊಳ್ಳಲು ಡಿ.ಕೆ ಶಿವಕುಮಾರ್ ಹವಣಿಸುತ್ತಿದ್ದಾರೆ. ಯಾರನ್ನು ಹೇಗೆ ಸಮಾಧಾನಿಸಬಹುದು ಎಂಬುದರ ಬಗ್ಗೆ ತಂತ್ರ ಹೆಣೆಯುತ್ತಿದ್ದಾರೆ.

ಈ ವರದಿ ಓದಿದ್ದೀರಾ?: ದ್ವೇಷ ರಾಜಕಾರಣ | ಕಟಕಟೆಯಲ್ಲಿ ಮೂವರು ಸಿಎಂಗಳು…!

ಅದೇನೇ ಇರಲಿ, ಸದ್ಯ, ಮುಡಾ ಪ್ರಕರಣವೊಂದು ರೆಕ್ಕೆ-ಪುಕ್ಕವಿಲ್ಲದ ಹಕ್ಕಿಯಂತಿದೆ. ಅದಕ್ಕಾಗಿಯೇ, ಎಫ್‌ಐಆರ್ ದಾಖಲಿಸುವುದರ ವಿರುದ್ಧ ಸಿದ್ದರಾಮಯ್ಯ ತಡೆಯಾಜ್ಞೆ ತರಲು ಸುಪ್ರೀಂ ಕೋರ್ಟ್‌ ಮೊರೆಹೋಗಿಲ್ಲ. ಅಕ್ರಮ ನಡೆದಿಲ್ಲ ಅಂದಮೇಲೆ, ಪ್ರಕರಣದ ತನಿಖೆ ನಡೆದರೆ, ತಮ್ಮ ವಿರುದ್ಧದ ಆರೋಪ ಸಾಬೀತಾಗುವುದಿಲ್ಲ. ಪ್ರಕರಣವೇ ಬಿದ್ದುಹೋಗುತ್ತದೆ ಎಂಬ ವಿಶ್ವಾಸ ಸಿದ್ದರಾಮಯ್ಯ ಅವರಲ್ಲಿದೆ. ಹೀಗಾಗಿ, ಮುಖ್ಯಮಂತ್ರಿ ಹುದ್ದೆಗೆ ಅವರು ರಾಜೀನಾಮೆ ಕೊಡುವುದು ದೂರದ ಮಾತೆಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಬೆನ್ನಿಗೆ ಹೈಕಮಾಂಡ್ ಬಲವಾಗಿ ನಿಂತಿದೆ. ಮುಡಾ ಆರೋಪದ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಆದಿಯಾಗಿ ರಾಜ್ಯದ ಎಲ್ಲ ನಾಯಕರು ಸಿದ್ದರಾಮಯ್ಯ ಪರವಾಗಿಯೇ ನಿಂತಿದ್ದಾರೆ. ಹೀಗಾಗಿ, ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲಾಗದು. ಅವರ ಸಿಎಂ ಹುದ್ದೆ ಖಾಲಿ ಮಾಡದೆ, ಆ ಹುದ್ದೆಗೆ ರೇಸ್‌ ನಡೆಸುವುದು, ಲಾಬಿ ನಡೆಸುವುದು ಅಪ್ರಯೋಜಕ… ಆದರೂ, ರಾಜಕಾರಣದಲ್ಲಿ ಏನು ಬೇಕಾದರೂ ಘಟಿಸಬಹುದು. ಅಂತಹ ವಿದ್ಯಮಾನಗಳನ್ನು ನಾವು ಕಾದುನೋಡಬೇಕಷ್ಟೇ…!

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X