ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮೂಹೂರ್ತ ಫಿಕ್ಸ್ ಆಗಿದೆ. ನವೆಂಬರ್ 13ರಂದು ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾಂವಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಉಪಚುನಾವಣೆ ರಾಜ್ಯದ ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ತಾವು ಗೆದ್ದ ಕ್ಷೇತ್ರವನ್ನ ಉಳಿಸಿಕೊಳ್ಳುವ, ಮತ್ತೊಬ್ಬರ ಕ್ಷೇತ್ರವನ್ನ ಕಿತ್ತುಕೊಳ್ಳುವ ಹಣಾಹಣಿಗೆ ವೇದಿಕೆಯಾಗಲಿದೆ. ರಾಜಕೀಯ ಪಕ್ಷಗಳ ಮುಖಂಡರು ಅಭ್ಯರ್ಥಿಗಳಾಗಲೂ ಈಗಾಗಲೇ ಪೈಪೋಟಿ ಶುರು ಮಾಡಿದ್ದಾರೆ. ಟಿಕೆಟ್‌ಗಾಗಿ ಬಂಡಾಯದ ಬಾವುಟ ಹಾರಿಸಲು ತಯಾರಿ ನಡೆಸುತ್ತಿದ್ದಾರೆ.
ಇನ್ನು ಸಂಸದರಾಗಿ ಆಯ್ಕೆಯಾಗಿದ್ದ ಎಚ್.ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ತುಕಾರಾಂ ಅವರು ರಾಜೀನಾಮೆ ನೀಡಿದ್ದರಿಂದ ಆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಜೆಡಿಎಸ್ ಭದ್ರಕೋಟೆಯಾಗಿರುವ ಚನ್ನಪಟ್ಟಣ, ಬಿಜೆಪಿ ಪ್ರಾಬಲ್ಯವಿರುವ ಶಿಗ್ಗಾವಿ ಹಾಗೂ ಕಾಂಗ್ರೆಸ್ ತೆಕ್ಕೆಯಲ್ಲಿರುವ ಸಂಡೂರು ಕ್ಷೇತ್ರಗಳು ರಾಜ್ಯದ ಚಿತ್ತ ಸೆಳೆಯುತ್ತಿವೆ.
ಈ ಮೂರರ ಪೈಕಿ, ಶಿಗ್ಗಾವಿಯಲ್ಲಿ ಬಿಜೆಪಿಯದ್ದೇ ಅಧಿಪತ್ಯವಿದೆ. ಮುಸ್ಲಿಂ ಪ್ರಾಬಲ್ಯ ಹೆಚ್ಚಿದ್ದರೂ ಕಳೆದ ಹಲವು ದಶಕಗಳಿಂದ ಬಿಜೆಪಿ ಗೆಲ್ಲುತ್ತಲೇ ಬಂದಿದೆ. ಇಲ್ಲಿ ಕಾಂಗ್ರೆಸ್ ನೆಲೆಯನ್ನೂ ಕಂಡುಕೊಂಡಿಲ್ಲ. ಸದ್ಯ, ಶಿಗ್ಗಾವಿ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಚರ್ಚೆ ಮುನ್ನೆಲೆಗೆ ಬಂದಿದೆ. ಜೊತೆಗೆ, ಎಲ್ಲ ಪಕ್ಷಗಳಲ್ಲಿಯೂ ಆಕ್ಷಾಂಕ್ಷಿಗಳ ದಂಡೂ ಇದೆ.
ದಾರ್ಶನಿಕ ಕವಿಗಳಾದ ಶಿಶುನಾಳ ಷರೀಫ ಮತ್ತು ಕನಕದಾಸರು ಜನ್ಮವೆತ್ತಿದ್ದ ಭೂಮಿ ಈ ಅರೆಮಲೆನಾಡು. ಶಿಗ್ಗಾವಿ ಕರ್ನಾಟಕ ವಿಶಿಷ್ಟ, ಸ್ವಾರಸ್ಯಕರ ಕ್ಷೇತ್ರಗಳಲ್ಲಿ ಒಂದು. ಮಾತ್ರವಲ್ಲದೆ, ಮಾಜಿ ಮುಖ್ಯಮಂತ್ರಿ ಸಿದ್ಧವನಹಳ್ಳಿ ನಿಜಲಿಂಗಪ್ಪ, ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿಗೆ ರಾಜಕೀಯ ಮರುಹುಟ್ಟು ಕೊಟ್ಟ ಮತ್ತು ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ ಕ್ಷೇತ್ರವಿದು. ವಿಶೇಷ ಎಂದರೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಮೈಲಾರ ಮಹದೇವಪ್ಪ ಅವರ ಜತೆಯಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರ ಫಕಿರಪ್ಪ ಸಿದ್ಧಪ್ಪ ತಾವರೆ ಅವರೂ ಈ ಕ್ಷೇತ್ರದಿಂದಲೇ ಸ್ಪರ್ಧಿಸಿ, ಶಾಸಕರಾಗಿದ್ದರು.
ಶಿಗ್ಗಾವಿಯ ಒಟ್ಟು ಜನಸಂಖ್ಯೆ 2,99,081. ಈ ಪೈಕಿ ಮುಸ್ಲಿಂ ಜನಸಂಖ್ಯೆಯೇ 81,853 ಇದೆ. ಆದರೂ ಕೂಡ ಈ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ಬಿಜೆಪಿಯೇ ಗೆಲ್ಲುತ್ತಿದೆ. ಇದು ಆಶ್ಚರ್ಯಕರವಾದರೂ ಸತ್ಯ. ಇದರಲ್ಲಿ ಕಾಂಗ್ರೆಸ್‌ನ ಪಾತ್ರವೂ ಇದೆ ಎಂಬುದು ಗಮನಾರ್ಹ. 2008ರಿಂದ ಸತತವಾಗಿ ಬಸವರಾಜ ಬೊಮ್ಮಾಯಿ ಅವರು ಗೆಲ್ಲುತ್ತಿದ್ದಾರೆ. ಮುಸ್ಲಿಂ ಮತದಾರರನ್ನು ಗಣನೀಯ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ನಾಲ್ಕು ಬಾರಿ ಮಾತ್ರವೇ ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ. ಅವರಲ್ಲಿ, ಕಾಂಗ್ರೆಸ್‌ನ ನದಾಫ್ ಎಂ ಮರ್ದಾನ್ ಸಾಬ್ ವರೇ ಸತತ ಮೂರು ಬಾರಿ ಗೆದ್ದು ಶಾಸಕರಾಗಿದ್ದರು.
ಕ್ಷೇತ್ರದ ಜನಸಂಖ್ಯೆಯಲ್ಲಿ ಮೊದಲನೇ ಸ್ಥಾನದಲ್ಲಿ ಮುಸ್ಲಿಮರಿದ್ದರೆ, ಎರಡನೇ ಸ್ಥಾನದಲ್ಲಿ ಪಂಚಮಸಾಲಿ ಲಿಂಗಾಯತ್, ಮೂರನೇ ಸ್ಥಾನದಲ್ಲಿ ಕುರುಬರಿದ್ದಾರೆ. ಲಿಂಗಾಯತ ಮತ್ತು ಮುಸ್ಲಿಂ ಸಮುದಾಯ ಹೊರತುಪಡಿಸಿ ಇತರ ಸಮುದಾಯದವರ ಪ್ರಭಾವ ಕಡಿಮೆಯಿದೆ. ಪಂಚಮಸಾಲಿ ಲಿಂಗಾಯತರ ಪ್ರಭಾವ ಹೆಚ್ಚಿದೆ. ಸವಣೂರು ಹೋಬಳಿಯಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್‌ಗೆ ಉತ್ತಮ ಅವಕಾಶಗಳೂ ಇವೆ. ಆದರೆ, ಈ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ಎಂದಿಗೂ ಗಂಭೀರವಾಗಿ ಪ್ರಯತ್ನಿಸಿಲ್ಲ. ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಉನ್ನತ ನಾಯಕರು ಈ ಕ್ಷೇತ್ರದಲ್ಲಿ ಪ್ರಚಾರವನ್ನೂ ನಡೆಸಿಲ್ಲ.
ಆರಂಭದಲ್ಲಿ ಜನತಾದಳದಲ್ಲಿದ್ದ ಬಸವರಾಜ್ ಬೊಮ್ಮಾಯಿ ಅವರಿಗೆ ಮುಸ್ಲಿಮರೂ ಮತ ಹಾಕುತ್ತಿದ್ದರು. ಆದರೆ, ಯಡಿಯೂರಪ್ಪನವರ ಸಖ್ಯ ಬೆಳೆಸಿ, 2008ರಲ್ಲಿ ಜೆಡಿಎಸ್ ಸೇರಿದರು. ಬಿಜೆಪಿ ಅಭ್ಯರ್ಥಿಯಾಅಗಿ ಶಿಗ್ಗಾವಿಯಲ್ಲಿ ಸ್ಪರ್ಧಿಸಿದರು. ಕೋಮುವಾದಿ ಪಕ್ಷ ಸೇರಿದರೂ, ಬೊಮ್ಮಾಯಿ ಗೆಲ್ಲುತ್ತಲೇ ಇದ್ದಾರೆ. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ ಖಾದ್ರಿ ವಿರುದ್ಧ 12,862 ಮತಗಳ ಅಂತರದಲ್ಲಿ ಗೆದ್ದಿದ್ದರು. 2013ರ ಚುನಾವಣೆಯಲ್ಲಿಯೂ ಖಾದ್ರಿ ಅವರ ವಿರುದ್ಧ 73,007 ಮತಗಳನ್ನು ಗಳಿಸಿ ಗೆದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ವಿರುದ್ಧ 33,000 ಮತಗಳ ಅಂತರದಿಂದ ಗೆದ್ದರು.
ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಹಾಗೂ ನೆಲೆಯೇ ಇಲ್ಲದ ಜೆಡಿಎಸ್ ಕಾಟಾಚಾರಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕಾರಣ ಮುಸ್ಲಿಂ ಸಮುದಾಯದ ಮತಗಳು ವಿಭಜನೆಯಾಗುತ್ತಿವೆ. ಇದರಲ್ಲಿ, ಕಾಂಗ್ರೆಸ್‌ನ ನಿರ್ಲಕ್ಷ್ಯದ್ದೇ ಬಹುಮುಖ್ಯ ಪಾತ್ರವಿದೆ.
ಈಗ ಶಿಗ್ಗಾವಿಗೆ ಮತ್ತೆ ಚುನಾವಣೆ ಎದುರಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕ್ಷೇತ್ರವು ಮೈತ್ರಿಯಲ್ಲಿ ಬಿಜೆಪಿ ಪಾಲಿಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಆಡಳಿತಾರೂಢ ಕಾಂಗ್ರೆಸ್‌ಗೆ ಈ ಕ್ಷೇತ್ರವನ್ನೂ ಗೆಲ್ಲುವುದು ಅಗತ್ಯ. ಎರಡೂ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಹಲವರು ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಈ ಬಾರಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬಾರದು. ಮುಸ್ಲಿಮೇತರರಿಗೆ ಟಿಕೆಟ್ ನೀಡಬೇಕು ಎಂಬ ಚರ್ಚೆ ಇದೆ. ಹೆಚ್ಚಿನ ಜನಸಂಖ್ಯೆಯಲ್ಲಿರುವ ಶಿಗ್ಗಾವಿ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡಲೇಬೇಕೆಂದು ಮುಸ್ಲಿಂ ಸಮುದಾಯ ಒತ್ತಾಯಿಸುತ್ತಿದೆ.
ಆದರೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಡಿತದಲ್ಲಿದ್ದ ಶಿಗ್ಗಾವಿಯನ್ನು ಈ ಬಾರಿಯಾದರೂ ಕಸಿದುಕೊಳ್ಳಬೇಕೆಂಬ ಹವಣಿಕೆ ಕಾಂಗ್ರೆಸ್ ನಾಯಕರಲ್ಲಿದೆ. ಗೆಲುವು ತಂದುಕೊಡಬಲ್ಲ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸುತ್ತಿದೆ.
ಶಿಗ್ಗಾವಿ ಕ್ಷೇತ್ರದಲ್ಲಿ ಯಾಸೀರಖಾನ್ ಪಠಾಣ್, ಸೋಮಣ್ಣ ಬೇವಿನಮರದ, ಸಜ್ಜಂಪೀರ್ ಖಾದ್ರಿ, ಆರ್ ಶಂಕರ್, ವಿನೋದ್ ಅಸೂಟಿ, ರಾಜೇಶ್ವರಿ ಪಾಟೀಲ್, ಸಂಜಯ್ ಹಾಗೂ ಸಿಎಂ ಇಬ್ರಾಹಿಂ ಮಗ ಫೈಜ್ ಅವರೂ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅಹಿಂದ ಸಮುದಾಯ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಸತತವಾಗಿ ಬಿಜೆಪಿ ಗೆಲುವು ಸಾಧಿಸುತ್ತಿದೆ. ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಮುನ್ನೆಲೆಯಲ್ಲಿರುವ ಸಮಯದಲ್ಲಿ ತಮ್ಮ ಜನಪ್ರಿಯತೆಯನ್ನ ಒರೆಗಚ್ಚಿ ನೋಡಲು ಸಿದ್ದರಾಮಯ್ಯ ಅವರಿಗೆ ಉತ್ತಮ ಅವಕಾಶವನ್ನು ಶಿಗ್ಗಾವಿ ನೀಡಲಿದೆ. ಹೀಗಾಗಿ, ಈ ಕ್ಷೇತ್ರ ಕಾಂಗ್ರೆಸ್ ಮತ್ತು ಸಿಎಂ ಸಿದ್ಧರಾಮಯ್ಯ ಅವರಿಗೆ ಪ್ರಮುಖ ಕ್ಷೇತ್ರವಾಗಿದೆ.
ಇನ್ನು, ಬಿಜೆಪಿಯಲ್ಲಿಯೂ ಟಿಕೆಟಿಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಆಕಾಂಕ್ಷಿಗಳ ಪಟ್ಟಿ ಅರ್ಧ ಶತಕವನ್ನು ದಾಟಿದ್ದು, ಇದುವರೆಗೆ 57 ಜನ ಟಿಕೆಟಿಗಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಟಿಕೆಟ್ ಪೈಪೋಟಿ ಎಲ್ಲಿ ಬಂಡಾಯಕ್ಕೆ ಕಾರಣವಾಗುತ್ತೋ ಎನ್ನುವ ಭೀತಿಯೂ ಕಮಲ ಪಡೆಗೆ ಎದುರಾಗಿದೆ. ಇದರಲ್ಲಿ ಪ್ರಮುಖವಾಗಿ ನಾಲ್ವರಿದ್ದಾರೆ. ಮುರುಗೇಶ್ ನಿರಾಣಿ, ಶ್ರೀಕಾಂತ ದುಂಡೀಗೌಡ, ಶಶಿಧರ್ ಎಲಿಗಾರ್ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಹೆಸರು ಮುನ್ನೆಲೆಯಲ್ಲಿದೆ.
ಮಗನಿಗೆ ಟಿಕೆಟ್ ಕೇಳಿಲ್ಲ ಎಂದು ಬೊಮ್ಮಾಯಿ ಹೇಳಿದ್ದರೂ ಕೂಡ, ಅವರ ಪುತ್ರನ ಹೆಸರು ಮಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಬೊಮ್ಮಾಯಿ ಅವರು ರಾಜ್ಯದ ಗೃಹ ಸಚಿವರಾಗಿದ್ದ ಸಮಯದಲ್ಲಿ ಅವರ ಮಗ ಭರತ್ ಬೊಮ್ಮಾಯಿ ಮೇಜರ್ ಹಗರಣವೊಂದರಲ್ಲಿ ಭಾಗಿಯಾಗಿದ್ದರು. ಆದರೆ, ಅದು ಬೆಳಕಿಗೆ ಬರಲಿಲ್ಲ ಎಂಬ ಆರೋಪಗಳು ಗುಸು-ಗುಸು ಚರ್ಚೆ ಹುಟ್ಟುಹಾಕಿವೆ. ಈಗೇನಾದ್ರು ಅವರು ಕ್ಯಾಂಡಿಡೇಟ್ ಆದರೆ, ಆ ಮೇಜರ್ ಹಗರಣ ಹೊರಗೆ ಬರಬಹುದಾ ಎಂಬ ಕಳವಳ ಕೂಡ ಬೊಮ್ಮಾಯಿ ಕುಟುಂಬದಲ್ಲಿದೆ.
ಈ ಸುದ್ದಿ ಓದಿದ್ದೀರಾ? ಚನ್ನಪಟ್ಟಣ ಉಪಚುನಾವಣೆ | ಟಿಕೆಟ್ ಯಾರಿಗೆ? ಸಂದಿಗ್ಧದಲ್ಲಿ ‘ಸೈನಿಕ’
ಇನ್ನು, 2023ರ ವಿಧಾನಸಭಾ ಚುನಾವಣೆಯಲ್ಲಿ ಬೀಳಗಿಯಲ್ಲಿ ಸೋತಿದ್ದ ಮಾಜಿ ಸಚಿವ ಮುರುಗೇಶ ನಿರಾಣಿ ಶಿಗ್ಗಾವಿ ಕಡೆ ಮುಖ ಮಾಡಿದ್ದಾರೆ. ಬಿಜೆಪಿಯೊಳಗೆ ದುಡ್ಡು ಇರುವ ದೊಡ್ಡ ಕುಳಗಳಲ್ಲಿ ನಿರಾಣಿ ಪ್ರಮುಖರು. ಪವರ್ ಫುಲ್ ವ್ಯಕ್ತಿ. ಈಗ ನಿರಾಣಿ ಶಿಗ್ಗಾವಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ.
ಇದೆಲ್ಲದರ ನಡುವೆ, ರವಿಕೃಷ್ಣಾರೆಡ್ಡಿ ಅವರು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಆಗಿದೆ. ರವಿಕೃಷ್ಣಾರೆಡ್ಡಿ ಅವರು ಸ್ಥಳೀಯ ವ್ಯಕ್ತಿ ಅಲ್ಲ. ಆದರೆ, ಬೈ ಎಲೆಕ್ಷನ್ ನಲ್ಲಿ ತಮ್ಮ ಛಾಪನ್ನ ಒರೆಗಚ್ಚಬೇಕು ಎಂದು ಹೊರಟಿದ್ದಾರೆ.
ಮೇಲ್ನೋಟಕ್ಕೆ, ಬಿಜೆಪಿ ಸೀಟು ಕರಾರು ಕಾಣಿಸುತ್ತದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಯಾವುದೇ ಪ್ರಚಾರ ನಡೆಸಿಲ್ಲ. ಇದೀಗ, ಮೂರೇ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಪ್ರತಿ ಕ್ಷೇತ್ರವೂ ಗಮನ ಸೆಳೆಯುತ್ತವೆ. ಅಹಿಂದ ಸಮುದಾಯ ಹೆಚ್ಚಾಗಿರುವ ಶಿಗ್ಗಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚರಕ್ಕೆ ಹೋಗಲೇಬೇಕಾಗುತ್ತದೆ. ಸಿದ್ಧರಾಮಯ್ಯ ಈಗಾಗಲೇ ಸಂಡೂರು ಕ್ಷೇತ್ರದಲ್ಲಿ ಒಂದು ರೌಂಡ್ ಪ್ರಚಾರ ನಡೆಸಿದ್ದಾರೆ. ಚನ್ನಪಟ್ಟಣವನ್ನು ಡಿ.ಕೆ.ಶಿವಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಶಿಗ್ಗಾವಿ ಕ್ಷೇತ್ರದಲ್ಲಿ ಸಿಎಂ ಸಿದ್ಧರಾಮಯ್ಯ, ಧಾರವಾಡ ಉಸ್ತುವಾರಿ ಸಚಿವ ಪ್ರಬಲ ಒಬಿಸಿ ನಾಯಕರಾಗಿ ಗುರುತಿಸಿಕೊಳ್ಳುತ್ತಿರುವ ಸಂತೋಷ್ ಲಾಡ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಲಿಂಗಾಯತ ಸಮುದಾಯಕ್ಕೆ ಸೇರಿದ್ದ ಶಿವಾನಂದ ಪಾಟೀಲ್ ಅವರ ಪ್ರಭಾವದೊಂದಿಗೆ ಚುನಾವಣೆ ಎದುರಿಸಬೇಕಾಗಿದೆ.
ಒಟ್ಟಾರೆಯಾಗಿ, ಈ ಬಾರಿ ಶಿಗ್ಗಾವಿ ಕ್ಷೇತ್ರದಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರುವ ಗುರಿ ಹಾಕಿಕೊಂಡಿದೆ. ಬಿಜೆಪಿಗೆ ಫೈಟ್ ಕೊಟ್ಟು ಗೆಲೋದಕ್ಕೆ ಪ್ರಯತ್ನ ಪಡುತ್ತೆ ಅನ್ನೋ ಹೋಪ್ ಇದೆ. ಇನ್ನು ಮುಸ್ಲಿಂ ಕ್ಯಾಂಡಿಡೇಟ್ಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದು ಸಾಮಾಜಿಕ ನ್ಯಾಯದ ಪರವಾದ ತಮ್ಮ ನಿಲುವನ್ನ ಸಾಬೀತು ಪಡಿಸುತ್ತಾ ಇಲ್ಲವಾ ಎಂಬುದನ್ನ ಕಾದು ನೋಡಬೇಕಿದೆ.