ಬೀದರ್ ಲೋಕಸಭಾ ಕ್ಷೇತ್ರದ, ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಎನ್‌ಡಿಎ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಗೆಲ್ಲುವುದು ಅಗತ್ಯವಾಗಿದೆ ಎಂದು ಮಾಜಿ ಸಚಿವ, ಜೆಡಿಎಸ್ ನಾಯಕ ಬಂಡೆಪ್ಪ ಖಾಶೆಂಪುರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬಿಜೆಪಿ, ಜೆಡಿಎಸ್ ಜಂಟಿಯಾಗಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, “ಜೆಡಿಎಸ್ ವರಿಷ್ಠರಾದ ದೇವೇಗೌಡರು ಮೋದಿಯವರ ಕೈಯಲ್ಲಿ ದೇಶ ಇರಬೇಕು ಎಂದು ಕರೆ ಕೊಟ್ಟಿದ್ದಾರೆ. ದೇವೇಗೌಡರ ನಿರ್ಧಾರದಿಂದ ಕರ್ನಾಟಕದಲ್ಲಿ ಒಂದು ರೀತಿಯ ಸಂಚಲನ ಸೃಷ್ಟಿಯಾಗಿದೆ. ಈಗಿನ ಮೈತ್ರಿಯಲ್ಲಿ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಬೀದರ್ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಗಾಗಿ ಭಗವಂತ ಖೂಬಾ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕಾಗಿದೆ” ಎಂದರು.
“ರಾಜ್ಯದ ಸರ್ಕಾರದ ಪಂಚ ಗ್ಯಾರಂಟಿಗಳು ವಿಫಲವಾಗಿವೆ, ರೈತರಿಗೆ ಯಾವುದೇ ಗ್ಯಾರಂಟಿ ಕೊಟ್ಟಿಲ್ಲ. 55 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆ ಕೊಡಲು 1.9 ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ. ಈ ಪರಿಸ್ಥಿತಿ ನೋಡಿದರೆ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ನಮ್ಮ ದೇಶ, ನಮ್ಮ ರಾಜ್ಯ ರೈತರಿಂದ ಕೂಡಿದೆ. ಶೇ.70ರಷ್ಟು ಜನ ರೈತರು ಇರುವ ನಮ್ಮ ರಾಜ್ಯದಲ್ಲಿ ರೈತರಿಗೆ ಯಾವ ಗ್ಯಾರಂಟಿ ಕೊಟ್ಟಿದ್ದಾರೆ” ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಕ್ಷೇತ್ರ ಬದಲಾವಣೆ ಮಾಡುತ್ತಿರುವುದು ಕಾಂಗ್ರೆಸ್‌ನ ದುಸ್ಥಿತಿಯನ್ನು ತೋರಿಸುತ್ತದೆ. ದೇಶದಲ್ಲಿ ಈಗಾಗಲೇ ಕಾಂಗ್ರೆಸ್ ಮುಳುಗಿ ಹೋಗಿದೆ. ಇನ್ನೂ ಕೆಳಹಂತಕ್ಕೆ ಹೋಗುತ್ತೆ. ಯುಪಿಯಲ್ಲಿಯೇ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಯುಪಿ ಕಾಂಗ್ರೆಸ್ ತವರು ಮನೆಯಾಗಿದೆ. ತವರು ಮನೆಯಲ್ಲಿಯೇ ದಿಕ್ಕಿಲ್ಲದಂತಾಗಿದೆ. ರಾಹುಲ್ ಗಾಂಧಿ ಎಲ್ಲೆಲ್ಲಿ ಹೋಗಿದ್ದಾರೆ. ಅಲ್ಲಲ್ಲಿ ಕಾಂಗ್ರೆಸ್ ಸೋತಿದೆ. ರಾಜ್ಯದಲ್ಲಿ ಕೂಡ ಸೋಲುತ್ತದೆ. ಕಾಂಗ್ರೆಸ್‌ನವರು ಹಣಬಲ, ಅಧಿಕಾರ ಬಲದೊಂದಿಗೆ ಚುನಾವಣೆ ಮಾಡುತ್ತಿದ್ದಾರೆ. ಬೇರೆ ಪಕ್ಷದವರನ್ನು ಅಧಿಕಾರ ಬಲ, ಹಣ ಬಲದಿಂದ ಸೆಳೆಯುತ್ತಿದ್ದಾರೆ” ಎಂದು ಖಾಶೆಂಪುರ್ ಆರೋಪಿಸಿದರು.
“ದೇಶದಲ್ಲಿ ನರೇಂದ್ರ ಮೋದಿಯವರ ಆಡಳಿತ ಮನೆಮನೆಗೆ ಮನೆ ಮಾತಾಗಿದೆ. ಭಗವಂತ ಖೂಬಾ ಅವರು ಎರಡನೇ ಬಾರಿಗೆ ಸಂಸದರಾಗಿ, ಕೇಂದ್ರದಲ್ಲಿ ಸಚಿವರಾದ ಬಳಿಕ ಉತ್ತಮ ಕೆಲಸ ಮಾಡಿದ್ದಾರೆ. ಸಾಮಾನ್ಯ ಜನರಿಗೂ ಸಿಗುತ್ತಾರೆ ಎಂಬುದು ಜನರಿಗೆ ಗೊತ್ತಿದೆ. ಎಲ್ಲ ಸಮಾಜದವರು ಕೂಡ ಖೂಬಾ ಅವರಿಗೆ ಬೆಂಬಲ ನೀಡಿದ್ದಾರೆ. ಬೀದರ್ ಲೋಕಸಭಾ ಕ್ಷೇತ್ರದ ಜನರು ಭಗವಂತ ಖೂಬಾ ಅವರನ್ನು ಮೂರನೇ ಬಾರಿಗೆ ಗೆಲ್ಲಿಸಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು” ಎಂದು ಖಾಶೆಂಪುರ್ ಮನವಿ ಮಾಡಿದರು.
ಪ್ರಜ್ವಲ್ ರೇವಣ್ಣ ತಪ್ಪು ಮಾಡಿದರೆ ಶಿಕ್ಷೆಯಾಗಲಿ:
ಪ್ರಜ್ವಲ್ ಲೈಂಗಿಕ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಬಂಡೆಪ್ಪ ಖಾಶೆಂಪುರ ತಪ್ಪು ಮಾಡಿದ್ರೆ ಶಿಕ್ಷೆ ಆಗಬೇಕು ಎಂದು ನಾವು ಹೇಳಿದ್ದೇವೆ. ರಾಜ್ಯ ಸರ್ಕಾರ ಈಗಾಗಲೇ ಈ ಪ್ರಕರಣ ಎಸ್ಐಟಿಗೆ ಕೊಟ್ಟಿದ್ದಾರೆ. ಅದನ್ನು ನಾವು ಸ್ವಾಗತಿಸಿದ್ದೇವೆ. ಅವರು ಏನೇನು ಕ್ರಮಕೈಗೊಳ್ಳುತ್ತಾರೆ ಎಂದು ಕಾಯ್ದು ನೋಡೋಣ” ಎಂದರು.
ಈ ಸುದ್ದಿ ಓದಿದ್ದೀರಾ? ಪ್ರಜ್ವಲ್-ರೇವಣ್ಣ ಲೈಂಗಿಕ ಹಗರಣ | ಶಾಸಕ ಎಚ್ ಡಿ ರೇವಣ್ಣ ಬಂಧನ
ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಪುರ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಪ್ರಮುಖರಾದ ಸೂರ್ಯಕಾಂತ್ ನಾಗಮಾರಪಳ್ಳಿ, ಬಸವರಾಜ್ ಪಾಟೀಲ್ ಹಾರೂರಗೇರಿ, ಬಾಬುವಾಲಿ, ಪೀರಪ್ಪ ಯರನಳ್ಳಿ, ಸಿದ್ದರಾಮಪ್ಪ ವಂಕೆ, ಅಶೋಕ್ ಕೊಡ್ಗೆ, ರಾಜಶೇಖರ ಜವಳೆ, ಶಶಿ ಹೊಸಳ್ಳಿ, ಶಿವಕುಮಾರ್, ಬಸವರಾಜ್, ಮಲ್ಲಿಕಾರ್ಜುನ ನೆಳಗೆ ಸೇರಿದಂತೆ ಇತರರಿದ್ದರು.