ದೆಹಲಿ ವಿಧಾನಸಭಾ ಚುನಾವಣೆ ಮುನ್ನ ಇಂಡಿಯಾ ಒಕ್ಕೂಟದ ಅನಿಶ್ಚಿತ ಭವಿಷ್ಯದ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, “ಬರೀ ಲೋಕಸಭೆ ಚುನಾವಣೆಯ ಉದ್ದೇಶದಿಂದ ಈ ಮೈತ್ರಿಯನ್ನು ಮಾಡಿದ್ದರೆ ಇಂಡಿಯಾ ಒಕ್ಕೂಟವನ್ನು ರದ್ದುಗೊಳಿಸಿ” ಎಂದು ಹೇಳಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಭಾಗವಾಗಿರುವ ಎಎಪಿ ಮತ್ತು ಕಾಂಗ್ರೆಸ್ ಪರಸ್ಪರ ಎದುರಾಳಿಯಾಗಿ ಸ್ಪರ್ಧಿಸುತ್ತಿದೆ. ಇಂಡಿಯಾ ಒಕ್ಕೂಟದ ಕೆಲವು ಮಿತ್ರಪಕ್ಷಗಳು ಎಎಪಿಗೆ ಬೆಂಬಲ ಸೂಚಿಸಿದೆ. ಈ ನಡುವೆ “ಮೈತ್ರಿಕೂಟ ಇನ್ನೂ ಕೂಡಾ ಉಳಿಯಬೇಕೇ” ಎಂದು ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ದಿನಾಚರಣೆಗೆ ಸಿಎಂ ಒಮರ್ ಅಬ್ದುಲ್ಲಾ ಗೈರು
“ಈ ಮೈತ್ರಿಕೂಟವು ಸಂಸತ್ತಿನ ಚುನಾವಣೆಗೆ ಮಾತ್ರವಾಗಿದ್ದರೆ, ಅದನ್ನು ರದ್ದುಗೊಳಿಸಿ, ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತೇವೆ. ಆದರೆ ಈ ಮೈತ್ರಿ ವಿಧಾನಸಭೆ ಚುನಾವಣೆಗೂ ಅನ್ವಯವಾಗುವುದಾದರೆ ನಾವು ಒಟ್ಟಿಗೆ ಕುಳಿತು ಸಾಮೂಹಿಕವಾಗಿ ಕೆಲಸ ಮಾಡಬೇಕಾಗುತ್ತದೆ” ಎಂದು ಅಭಿಪ್ರಾಯಿಸಿದ್ದಾರೆ.
ಕಳೆದ ವರ್ಷದ ಲೋಕಸಭೆ ಚುನಾವಣೆಗಾಗಿ ಮಾತ್ರ ಮೈತ್ರಿಕೂಟ ರಚಿಸಲಾಗಿದೆ ಎಂಬರ್ಥದಲ್ಲಿ ಆರ್‌ಜೆಡಿ ನಾಯಕ ಸೇರಿದಂತೆ ಇತರ ಬಣ ಸದಸ್ಯರ ಹೇಳಿಕೆಯಿಂದಾಗಿ ಇಂಡಿಯಾ ಒಕ್ಕೂಟ ಬರ್ಕಾಸ್ತು ಮಾಡುವ ಬಗ್ಗೆ ಊಹಾಪೋಹಗಳು ಹರಡುತ್ತಿದೆ.
ಈ ನಡುವೆ ಒಮರ್ ಮಾಧ್ಯಮಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ನನಗೆ ನೆನಪಿರುವಂತೆ, ಇಂಡಿಯಾ ಒಕ್ಕೂಟಕ್ಕೆ ಯಾವುದೇ ಸಮಯ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಇಂಡಿಯಾ ಒಕ್ಕೂಟದ ಯಾವುದೇ ಸಭೆಯನ್ನು ಕರೆಯದಿರುವುದೇ ಸಮಸ್ಯೆಯಾಗಿದೆ” ಎಂದು ಅಭಿಪ್ರಾಯಿಸಿದ್ದಾರೆ. ಹಾಗೆಯೇ ನಾಯಕತ್ವ ಮತ್ತು ಒಗ್ಗಟ್ಟಿನ ಕೊರತೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯ ನಂತರ ಮೈತ್ರಿಕೂಟದ ಸಭೆಯನ್ನು ಕರೆಯಬಹುದು ಎಂದು ಹೇಳಿರುವ ಒಮರ್, ಸಭೆಗೆ ವಿಳಂಬ ಮಾಡುತ್ತಿರುವುದನ್ನು ಟೀಕಿಸಿದರು. ಇದು ನಮ್ಮ ಮೈತ್ರಿಕೂಟದ ಒಗ್ಗಟ್ಟನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರು.
