ಚಳಿಗಾಲ ಅಧಿವೇಶನ | ‘ಸುವರ್ಣಸೌಧ’ ತಗೊಂಡು ಏನು ಮಾಡೋಣ, ‘ಬ್ರ್ಯಾಂಡ್‌ ಬೆಳಗಾವಿ’ ಯಾವಾಗ?

Date:

Advertisements
ಬೆಳಗಾವಿ ಜಿಲ್ಲೆ ಗೋವಾವನ್ನೂ ಮೀರಿಸುವ 'ಮಿನಿ ರಾಜ್ಯ' ಎನಿಸಿಕೊಂಡಿದೆ. ಪ್ರತಿ ಬಾರಿಯೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದಾಗ ಉತ್ತರ ಕರ್ನಾಟಕದ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಆದರೆ, ಅಧಿವೇಶನ ಮುಗಿಯುತ್ತಲೇ ಆ ನಿರೀಕ್ಷೆಗಳೆಲ್ಲ ಹುಸಿಯಾಗಿ ನೋವು ಜನರನ್ನು ಆವರಿಸುತ್ತದೆ. ಸುವರ್ಣ ವಿಧಾನಸೌಧ ನಿರ್ಮಾಣದ ಹಿಂದಿನ ಉದ್ದೇಶ ಈವರೆಗೂ ಸಾಕಾರಗೊಂಡಿಲ್ಲ. ಬರೀ 'ಬ್ರ್ಯಾಂಡ್‌ ಬೆಂಗಳೂರು' ನಿರ್ಮಾಣವಾದರೆ ಸಾಕೆ?, 'ಬ್ರ್ಯಾಂಡ್‌ ಬೆಳಗಾವಿ' ನಿರ್ಮಾಣ ಬೇಡವೇ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

ಮತ್ತೊಂದು ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧ ಸಾಕ್ಷಿಯಾಗುತ್ತಿದೆ. ಡಿಸೆಂಬರ್ 9 ರಿಂದ 20ರವರೆಗೆ 11ನೇ ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ.

ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ರೂಪಿಸುವುದು ಬೆಳಗಾವಿ ಚಳಿಗಾಲ ಅಧಿವೇಶನದ ಮುಖ್ಯ ಆಶಯ. ಆದರೆ, ಈ ನಿಟ್ಟಿನಲ್ಲಿ ಹಿಂದಿನ ಅಧಿವೇಶನಗಳಲ್ಲಿ ಗಮನಾರ್ಹ ಚರ್ಚೆ ನಡೆಯದಿರುವ ನೋವು ಆ ಭಾಗದ ಜನರಲ್ಲಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲೇ ಇರುವ ಹಲವು ಸಮಸ್ಯೆಗಳಿಗೆ ಈವರೆಗೂ ಪರಿಹಾರ ದೊರಕಿಲ್ಲ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುವ ಪ್ರತಿಭಟನೆಗಳ ತಾಣವಾಗಿದೆ ಎನ್ನುವ ಗಂಭೀರ ಆರೋಪ ಬೆಳಗಾವಿ ಅಧಿವೇಶನಕ್ಕೆ ಅಂಟಿಕೊಂಡಿದೆ.

ಉತ್ತರ ಕರ್ನಾಟಕ – ದಕ್ಷಿಣ‌ ಕರ್ನಾಟಕ ಎಂಬ ತಾರತಮ್ಯ ತೊಲಗಿಸಬೇಕು, ಉತ್ತರ ಕರ್ನಾಟಕದ ಜನರ ಹತ್ತಿರವೂ ಸರ್ಕಾರವನ್ನು ಕೊಂಡೊಯ್ಯಬೇಕು ಹಾಗೂ ಆ ಭಾಗದ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್‌ ಡಿ ಕುಮಾರಸ್ವಾಮಿ ಮೊದಲ ಬಾರಿಗೆ ಬೆಂಗಳೂರು ಬಿಟ್ಟು ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸಿದರು.

Advertisements

ಇಡೀ ರಾಜ್ಯದ ಆಡಳಿತದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧಕ್ಕೆ ಪರ್ಯಾಯವಾಗಿ ಉತ್ತರ ಕರ್ನಾಟಕದಲ್ಲೂ ಶಕ್ತಿ ಕೇಂದ್ರ ನಿರ್ಮಾಣವಾಗಲಿ ಎಂದು ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ 2007ರಲ್ಲಿ ಕುಮಾರಸ್ವಾಮಿ ಭೂಮಿಪೂಜೆ ನೆರವೇರಿಸಿದರು. ನಂತರ ಮುಖ್ಯಮಂತ್ರಿಯಾಗಿ ಬಂದ ಬಿ ಎಸ್ ಯಡಿಯೂರಪ್ಪ ಹೊಸ ಸ್ಥಳದಲ್ಲಿ 2009ರಲ್ಲಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಜಗದೀಶ್‌ ಶೆಟ್ಟರ್‌ ಸಿಎಂ ಆಗಿದ್ದಾಗ ಕಟ್ಟಡ ಪೂರ್ಣಗೊಂಡು, ಸುವರ್ಣ ವಿಧಾನಸೌಧವನ್ನು 2012 ಅಕ್ಟೋಬರ್ 11ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಿದರು.

ಕೆಲಸಕ್ಕೆ ಬಾರದ ಸುವರ್ಣಸೌಧ!

2012ರಿಂದ ವರ್ಷಕ್ಕೊಮ್ಮೆ ಚಳಿಗಾಲದ ಅಧಿವೇಶನಕ್ಕೆ ಸುವರ್ಣ ವಿಧಾನಸೌಧ ಬಳಕೆಯಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದ ಜನ ಭ್ರಮನಿರಸನಗೊಂಡಿದ್ದಾರೆ. 10 ದಿನದ ಅಧಿವೇಶನಕ್ಕೆ ಕೋಟ್ಯಂತರ ಹಣ ವೆಚ್ಚವಾಗುತ್ತಿರುವುದು ಕಂಡಾಗ ಅಕ್ಷರಶಃ ಸುವರ್ಣ ವಿಧಾನಸೌಧ ಬಿಳಿಯಾನೆಯಂತಾಗಿದೆ.

ಐದುನೂರು ಕೋಟಿ ರೂ. ಖರ್ಚು ಮಾಡಿ ಕಟ್ಟಿರುವ ಸುವರ್ಣ ವಿಧಾನಸೌಧವನ್ನು ನಿರ್ವಹಿಸಲು ಪ್ರತಿ ವರ್ಷ 5 ಕೋಟಿ ರೂ. ಹಣ ವ್ಯಯಿಸಲಾಗುತ್ತಿದೆ. ಜೊತೆಗೆ ಪ್ರತಿ ವರ್ಷ 10 ದಿನದ ಅಧಿವೇಶನಕ್ಕೆ 10-15 ಕೋಟಿ ರೂ. ಪ್ರತ್ಯೇಕ ಖರ್ಚಾಗುತ್ತದೆ. ಈ ಸಲದ ಅಧಿವೇಶನಕ್ಕೆ 13.2 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದೆ. ಇದರಲ್ಲಿ ಸಚಿವರು, ಶಾಸಕರು, ಅಧಿಕಾರಿಗಳ ವಸತಿ, ಊಟ ಎಲ್ಲವೂ ಸೇರಿದೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಸುವರ್ಣಸೌಧದ ಎದುರು ಪ್ರತಿದಿನ ಹತ್ತಾರು ಪ್ರತಿಭಟನೆಗಳು ನಡೆಯುತ್ತವೆ. ಇವುಗಳನ್ನು ನಡೆಸಲೆಂದೇ ಸುವರ್ಣಸೌಧದ ಮುಂದೆ ಜಾಗವನ್ನು ಬಾಡಿಗೆಗೆ ಪಡೆದು, ಪ್ರತಿ ವರ್ಷ ಲಕ್ಷಗಟ್ಟಲೇ ಹಣ ಖರ್ಚು ಮಾಡಲಾಗುತ್ತದೆ.

ಇಷ್ಟೆಲ್ಲ ಖರ್ಚು ಮಾಡಿದರೂ ಸುವರ್ಣಸೌಧ ನಿರ್ಮಾಣದ ಹಿಂದಿನ ಉದ್ದೇಶ ಈವರೆಗೂ ಸಾಕಾರಗೊಂಡಿಲ್ಲ. ಸುವರ್ಣಸೌಧ ನಿರ್ಮಾಣವಾಗಿ 14 ವರ್ಷ ಕಳೆಯುತ್ತ ಬಂದರೂ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಅಭಿವೃದ್ಧಿ ನಡುವಿನ ಅಜಗಜಾಂತರ ವ್ಯತ್ಯಾಸ ಮುಂದುವರಿದಿದೆ. ಉತ್ತರ ಕರ್ನಾಟಕದ ಜನರ ಆಶೋತ್ತರಗಳು ಸರ್ಕಾರಿ ಪತ್ರಗಳಲ್ಲಿ ದಾಖಲಾಗಿ, ಆ ಫೈಲ್‌ಗಳೆಲ್ಲ ದೂಳು ಹಿಡಿದಿವೆ. ಪ್ರತಿಯೊಂದು ಕೆಲಸಕ್ಕೂ ಜನರು ಬೆಂಗಳೂರಿಗೆ ಅಲೆಯುವುದು ತಪ್ಪಿಲ್ಲ.

ಪ್ರತ್ಯೇಕ ರಾಜ್ಯದ ಕೂಗು

ಡಿ.9ರಿಂದ ಆರಂಭವಾಗುವ ಅಧಿವೇಶನಕ್ಕೆ ಬರುವ ಮುನ್ನ ಆಳುವ ಸರ್ಕಾರ ಬೆಳಗಾವಿಯನ್ನು ಅಧಿಕೃತವಾಗಿ ಎರಡನೇ ರಾಜಧಾನಿ ಎಂದು ಘೋಷಿಸಲಿ. ಸೌಧಕ್ಕೆ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಲು ಆದೇಶ ಹೊರಡಿಸಿ ಬರಲಿ ಎನ್ನುತ್ತಿದ್ದಾರೆ ಬೆಳಗಾವಿ ಭಾಗದ ಹೋರಾಟಗಾರರು. ಕಬ್ಬು ಬೆಳೆಗಾರರ ಸಮಸ್ಯೆ, ಪ್ರವಾಹ ಸಂತ್ರಸ್ತರ ಸಂಕಟ, ನಿರುದ್ಯೋಗ ಸಮಸ್ಯೆಗಳು ಅಧಿವೇಶನ ಬಂದಾಗಲೊಮ್ಮೆ ಮಾತ್ರ ಸದ್ದು ಮಾಡಿ ಮತ್ತೆ ಮರೆಯಾಗುತ್ತವೆ. ಅಧಿವೇಶನದ ಸಂದರ್ಭದಲ್ಲಿ ಬೇರೆ ಎಲ್ಲೋ ಶಾಸಕರು ವಾಸ್ತವ್ಯ ಮಾಡುವ ಬದಲು ಶಾಸಕರ ಭವನ ನಿರ್ಮಾಣವಾಗಬೇಕಿದೆ.

ಗದಗ, ಧಾರವಾಡ ಹಾಗೂ ಬೆಳಗಾವಿಗೆ ಕುಡಿಯುವ ನೀರು ಒದಗಿಸುವ ಮಹದಾಯಿ ಯೋಜನೆಯ ಅನುಷ್ಠಾನ ಬಾಕಿ ಉಳಿದಿದೆ. ಲಕ್ಷಗಟ್ಟಲೆ ಹೆಕ್ಟೇರ್‌ ಭೂಮಿಗೆ ನೀರುಣಿಸುವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನ, ಇದನ್ನು ರಾಷ್ಟೀಯ ಯೋಜನೆ ಎಂದು ಘೋಷಿಸುವ ಕಾರ್ಯ ಹಾಗೂ ಇದರ ಉಪವಿಭಾಗೀಯ ಕಚೇರಿಗಳು ಸುವರ್ಣಸೌಧಕ್ಕೆ ಯಾವಾಗ ಸ್ಥಳಾಂತರವಾಗುತ್ತವೆ ಎಂಬುದನ್ನು ಜನ ಎದುರು ನೋಡುತ್ತಿದ್ದಾರೆ.

ಮಹದಾಯಿ ನದಿ

ನನೆಗುದಿಗೆ ಬಿದ್ದ ನೀರಾವರಿ ಯೋಜನೆಗಳು

ಉತ್ತರ ಕರ್ನಾಟಕ ಭಾಗದಲ್ಲಿ ಅದೆಷ್ಟೋ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಸಪ್ತನದಿಗಳು ಹರಿದರೂ ನೀರಾವರಿ ಯೋಜನೆಗಳ ಸದುಪಯೋಗ ಪಡೆಯಲು ರೈತರಿಗೆ ಆಗುತ್ತಿಲ್ಲ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಕರಗಾಂವ ಏತನೀರಾವರಿ ಯೋಜನೆ, ಅಥಣಿಯಲ್ಲಿ ಖಿಳೇಗಾಂವ ಬಸವೇಶ್ವರ ಏತನೀರಾವರಿ ಯೋಜನೆ, ಅಮ್ಮಾಜೇಶ್ವರಿ ಏತನೀರಾವರಿ, ರಾಮದುರ್ಗದಲ್ಲಿ ವೀರಭದ್ರೇಶ್ವರ ಯೋಜನೆ, ಕೆರೆ ಮರುಪೂರಣ ಯೋಜನೆಗಳು ಸೇರಿದಂತೆ ವಿವಿಧ ಏತ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ.

ಬೆಳಗಾವಿ-ಕಿತ್ತೂರು ರೈಲು ಮಾರ್ಗಕ್ಕೆ ಭೂಸ್ವಾಧೀನ, ಬಳ್ಳಾರಿ ನಾಲಾ ನಿರ್ಮಾಣ, ಬೆಳಗಾವಿ ನಗರದ ಮೂಲಕ ಹಾದುಹೋಗುವ ಪ್ರಮುಖ ಒಳಚರಂಡಿ ಮಾರ್ಗ ಮತ್ತು ಒಳಚರಂಡಿ ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಪ್ರಮುಖ ಬೇಡಿಕೆಗಳು ಇನ್ನೂ ಹಾಗೆಯೇ ಉಳಿದಿವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ವಿಫಲವಾಗಿದ್ದು, ಈ ಬಾರಿಯ ಅಧಿವೇಶನದಲ್ಲಿ ಚರ್ಚಿಸಿ ದುರಸ್ತಿ ಕಾರ್ಯಕ್ಕೆ ಹಾಗೂ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಜಾರಿಗೆ ಅನುದಾನ ಬಿಡುಗಡೆಯಾಗಬೇಕಿದೆ.

ಕೃಷ್ಣಾ ಮತ್ತು ಅದರ ಐದು ಉಪನದಿಗಳಲ್ಲಿ ಮಹಾರಾಷ್ಟ್ರದ ಗಡಿಯಿಂದ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟಿನವರೆಗೆ ಕನಿಷ್ಠ 11 ಅಣೆಕಟ್ಟುಗಳಿವೆ. ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಿ ಬೆಳೆ ನಷ್ಟ ಹಾಗೂ ಇತರೆ ಸಮಸ್ಯೆಗಳನ್ನು ಎದುರಿಸಬೇಕಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ಪ್ರವಾಹದಿಂದಾಗಿ ಬೆಳೆ ನಷ್ಟ ಮತ್ತು ಗ್ರಾಮಗಳ ಸ್ಥಳಾಂತರ ಹಾಗೂ ಅತಿವೃಷ್ಟಿಯಿಂದ ಮಾತ್ರವಲ್ಲದೆ, ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಅನಿರೀಕ್ಷಿತವಾಗಿ ನೀರನ್ನು ಬಿಡುಗಡೆ ಮಾಡುವುದರಿಂದಲೂ ಪ್ರವಾಹ ಉಂಟಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಸಮಸ್ಯೆಗಳಿಗೆ ಕೊನೆಯೇ ಇಲ್ಲವಾಗಿದೆ.

ಮೂಲ ಸೌಕರ್ಯಗಳೇ ಮರೀಚಿಕೆ

ಬೆಳಗಾವಿಯ ಮಿಲಿಟರಿ ದಂಡು ಪ್ರದೇಶ ನಗರ ಪಾಲಿಕೆಯ ವ್ಯಾಪ್ತಿಗೆ ಬರಲಿದೆ. ಅದನ್ನು ನಗರದ ಉಪನಗರವನ್ನಾಗಿ ಅಭಿವೃದ್ಧಿಪಡಿಸಬೇಕಿದೆ. ಇಲ್ಲಿ ಸುಮಾರು ಒಂದು ಸಾವಿರದ ನೂರು ಎಕರೆ ಪ್ರದೇಶದಲ್ಲಿ 200 ದೊಡ್ಡ ಬಂಗಲೆಗಳಿದ್ದು, ಇವುಗಳನ್ನು ಉಳಿಸಿಕೊಳ್ಳಬೇಕಿದೆ. ನೂರಾರು ಎಕರೆ ಪ್ರದೇಶದಲ್ಲಿ ಮಿಲಿಟರಿ ಫಾರ್ಮ್ ಇದೆ. ಅದನ್ನು ಕೃಷಿ ಕಾಲೇಜು ಆಗಿ ಪರಿರ್ವರ್ತನೆ ಮಾಡಿದರೆ ಅನುಕೂಲವಾಗಲಿದೆ ಎಂಬುದು ಸ್ಥಳೀಯ ಜನರ ಆಶಯ.

ಭಾರತದ ನಯಾಗಾರ ಜಲಪಾತ ಎಂದು ಕರೆಯಲ್ಪಡುವ ‘ಗೋಕಾಕ ಫಾಲ್ಸ್’ ಬಳಿ ಇರುವ 201 ಮೀಟರ್ ಉದ್ದದ ತೂಗು ಸೇತುವೆ ಸುಮಾರು ವರ್ಷಗಳಿಂದ ದುಃಸ್ಥಿತಿಯಲ್ಲಿದೆ. ಇದನ್ನು ಸರಿಪಡಿಸುವಂತೆ ಪ್ರವಾಸಿಗರಿಂದ ಬೇಡಿಕೆ ಇದೆಯಾದರೂ ಈವರೆಗೆ ಸೂಕ್ತ ಕ್ರಮ ಆಗಿಲ್ಲ. ಕಿತ್ತೂರು ರಾಣಿ ಚನ್ನಮ್ಮ ಕೋಟೆ ಸೇರಿದಂತೆ ಕಿತ್ತೂರು ನಾಡಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಕಿತ್ತೂರು ಕ್ರಾಂತಿಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯವಾಗಬೇಕಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಜನ ಭೇಟಿ ನೀಡುವ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲ.

ಬೆಳ

ಬೆಳಗಾವಿ ಎಂಬ ‘ಮಿನಿ ರಾಜ್ಯ’ ಗೋವಾಕ್ಕಿಂತ ದೊಡ್ಡದು!

ಹೊಸ ಜಿಲ್ಲೆಗಳಾಗಿ ಉದಯಿಸಿದ ಗದಗ ಮತ್ತು ರಾಮನಗರ ಜಿಲ್ಲೆಗಳ ಪ್ರದೇಶ ವ್ಯಾಪ್ತಿ 4,000 ಚ.ಕಿ.ಮೀ ಮತ್ತು ತಲಾ ಜನಸಂಖ್ಯೆ 10 ಲಕ್ಷ ಮೀರಿಲ್ಲ. ಅಲ್ಲದೆ 8,450 ಚ.ಕಿ.ಮೀ ವಿಸ್ತೀರ್ಣ, 24 ಲಕ್ಷ ಜನಸಂಖ್ಯೆ, 15 ಸ್ಥಳೀಯ ಸಂಸ್ಥೆ ಹಾಗೂ 627 ಗ್ರಾಮಗಳನ್ನು ಹೊಂದಿದ್ದ ಬಳ್ಳಾರಿ ಜಿಲ್ಲೆಯನ್ನೇ ವಿಭಜಿಸಿ ‘ವಿಜಯನಗರ’ ಹೊಸ ಜಿಲ್ಲೆ ರಚನೆಯಾಗಿದೆ. ಆದರೆ ಬೆಳಗಾವಿ ಜಿಲ್ಲೆಯ ವಿಭಜನೆ ಕೂಗು ಮಾತ್ರ ಹಾಗೇ ಉಳಿದಿದೆ.

13,433 ಚ.ಕಿ.ಮೀ. ವಿಸ್ತೀರ್ಣ, 15 ತಾಲೂಕು, 33 ಸ್ಥಳೀಯ ಸಂಸ್ಥೆ ಮತ್ತು 10,208 ಗ್ರಾಮಗಳನ್ನು ಹೊಂದಿದೆ. ಮಾತ್ರವಲ್ಲ, ಜಿಲ್ಲೆಯ ಜನಸಂಖ್ಯೆ 47 ಲಕ್ಷಕ್ಕೂ ಅಧಿಕವಿದೆ. ಹೀಗಿದ್ದರೂ ಬೆಳಗಾವಿ ಜಿಲ್ಲೆಯನ್ನು ಆಡಳಿತಾತ್ಮಕ ನಿರ್ವಹಣೆಗಾಗಿ ವಿಭಜಿಸುವ ಪ್ರಯತ್ನಕ್ಕೆ ಯಾವ ಸರ್ಕಾರವೂ ಕೈ ಹಾಕದಿರುವುದು ಜಿಲ್ಲಾ ರಚನಾ ಹೋರಾಟ ಸಮಿತಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಗಡಿ ಪ್ರದೇಶದಿಂದ ಬೆಳಗಾವಿ ಜಿಲ್ಲಾ ಕೇಂದ್ರಕ್ಕಿರುವ ಅಂತರ 190 ಕಿ.ಮೀ, ವಿಜಯಪುರ ಗಡಿ ಸಮೀಪವಿರುವ ಹೊನವಾಡ ಗ್ರಾಮ, ಬೆಳಗಾವಿಯಿಂದ 194 ಕಿ.ಮೀ. ದೂರವಿದೆ. ಬಾಗಲಕೋಟೆ ಜಿಲ್ಲೆ ಗಡಿಗೆ ಅಂಟಿಕೊಂಡಿರುವ ಹಾಲಳ್ಳಿ ಕೂಡ ಬೆಳಗಾವಿಯಿಂದ 180 ಕಿ.ಮೀ. ದೂರದಲ್ಲಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಗೆ ಹತ್ತಿರವಿರುವ ಕೊಟ್ಟಲಗಿಯಿಂದಲೂ ಬೆಳಗಾವಿ ಜಿಲ್ಲಾ ಕೇಂದ್ರದ ದೂರ 185 ಕಿ.ಮೀ. ದಕ್ಷಿಣ ಕರ್ನಾಟಕದಲ್ಲಿ ಪ್ರತಿ 150 ಕಿ.ಮೀ. ಅಂತರದಲ್ಲಿ ಮೂರ್ನಾಲ್ಕು ಜಿಲ್ಲೆಗಳಿದ್ದರೆ, ಬೆಳಗಾವಿ ಜಿಲ್ಲೆಯ ಜಿಲ್ಲಾ ಕೇಂದ್ರದಿಂದ ಗಡಿ ಗ್ರಾಮಗಳ ಅಂತರವೇ 200 ಕಿ.ಮೀ.ಗೂ ಅಧಿಕವಿದೆ. ಹೀಗಾಗಿಯೇ ಬೆಳಗಾವಿ ಗಡಿ ಗ್ರಾಮಗಳಿಗೆ ಸರಕಾರದ ಯೋಜನೆಗಳು ತಲುಪಲು ಸಾಧ್ಯವಾಗುತ್ತಿಲ್ಲ. ಇನ್ನು ವ್ಯಾಪಾರ, ವಹಿವಾಟಿಗೆ ಅನ್ಯ ಜಿಲ್ಲೆ, ನೆರೆ ರಾಜ್ಯವನ್ನೇ ಅವಲಂಬಿಸಬೇಕಿದೆ.

ಇಷ್ಟೆಲ್ಲ ಸಮಸ್ಯೆಗಳು ನಿವಾರಣೆಯಾಗಬೇಕೆಂದರೆ ಬೆಳಗಾವಿ ಮೂರು ಜಿಲ್ಲೆಗಳಾಗಿ ಮೈದಾಳಿದಾಗ ಮಾತ್ರ ಸಾಧ್ಯ ಎಂಬುದು ಜಿಲ್ಲಾ ರಚನಾ ಹೋರಾಟ ಸಮಿತಿಯ ಆಗ್ರಹ. ಇದಕ್ಕಾಗಿ ದಶಕಗಳಿಂದ ನಡೆಯುತ್ತಿರುವ ದೊಡ್ಡ ದೊಡ್ಡ ಹೋರಾಟಗಳಿಗೆ ಯಾರೊಬ್ಬರೂ ಕಿವಿಗೊಡುತ್ತಿಲ್ಲ. ಜನರ ತಾಪತ್ರಯಗಳಿಗೆ ಮುಕ್ತಿಯೇ ಇಲ್ಲ. ಗಡಿ ಗ್ರಾಮಗಳಿಗೆ ಭೇಟಿ ನೀಡಿದರೆ ಇಡೀ ದಿನ ಮೀಸಲಿಡಬೇಕಾಗಿರುವುದರಿಂದ ಅಧಿಕಾರಿಗಳ ಭೇಟಿ ನೀಡುವುದೇ ಅಪರೂಪವಾಗಿದೆ. ಆರೋಗ್ಯ ರಕ್ಷಣೆ ವಿಷಯದಲ್ಲಂತೂ ಜಿಲ್ಲಾ ಕೇಂದ್ರ ನೆಚ್ಚಿಕೊಂಡರೆ ಅಪಾಯವೇ ಹೆಚ್ಚು ಎನ್ನುವ ಆತಂಕ ಗಡಿ ಗ್ರಾಮಗಳಲ್ಲಿದೆ. ಇದೇ ಕಾರಣದಿಂದ ಅಥಣಿ, ಕಾಗವಾಡ, ಕುಡಚಿ, ರಾಯಬಾಗ, ನಿಪ್ಪಾಣಿ ತಾಲೂಕುಗಳ ಬಹುತೇಕರು ಇಂದಿಗೂ ಅನಾರೋಗ್ಯ ಎದುರಾದರೆ ಪಕ್ಕದ ಮಹಾರಾಷ್ಟ್ರ ರಾಜ್ಯದ ಆಸ್ಪತ್ರೆಗಳನ್ನೇ ಹೆಚ್ಚು ಆಶ್ರಯಿಸಿದ್ದಾರೆ.

ಬೆಳಗಾವಿಯಲ್ಲಿ ಐಟಿ-ಬಿಟಿ ಪಾರ್ಕ್ ಸ್ಥಾಪನೆಯಾಗಿಲ್ಲ, ಇದರಿಂದ ಈ ಪ್ರದೇಶದ ಸಾವಿರಾರು ನುರಿತ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಮರೀಚಿಕೆಯಾಗಿದೆ. ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಅವಕಾಶವಿದ್ದರೂ ಆಡಳಿತಾತ್ಮಕ ನಿರ್ವಹಣೆ ಕೊರತೆಯಿಂದ ಬೆಳಗಾವಿ ಜಿಲ್ಲೆ ಆರಕ್ಕೇರದ, ಮೂರಕ್ಕಿಳಿಯದ ಪರಿಸ್ಥಿತಿ ಎದುರಿಸುತ್ತಿದೆ. ಇದರ ದುಷ್ಪರಿಣಾಮ ಯುವಕರು, ಕಾರ್ಮಿಕರ ಮೇಲೆ ಹೆಚ್ಚಾಗಿ ಕಂಡು ಬರುತ್ತಿದ್ದು, ಗಡಿ ಭಾಗದ ಜನರು ಉದ್ಯೋಗ ಅರಸಿ ಹೊರ ರಾಜ್ಯಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಇಚಲಕರಂಜಿಯ ನೇಕಾರಿಕೆ ಕಾರ್ಮಿಕರು, ಪುಣೆ – ಕೊಲ್ಲಾಪುರದ ಯಂತ್ರೋಪಕರಣ ಘಟಕಗಳು ಮತ್ತು ಜೈಸಿಂಗ ಪುರದ ತಂಬಾಕು ಉತ್ಪಾದನಾ ಘಟಕಗಳಲ್ಲಿನ ಶೇ.60ಕ್ಕೂ ಹೆಚ್ಚು ಕಾರ್ಮಿಕರು ಬೆಳಗಾವಿ ಜಿಲ್ಲೆಗೆ ಸೇರಿದವರು ಎನ್ನುವುದು ಗಮನಾರ್ಹ ಸಂಗತಿ.

ಗೋವಾ ರಾಜ್ಯಕ್ಕೆ ಹೋಲಿಸಿದರೆ ಬೆಳಗಾವಿ ಗೋವಾವನ್ನೂ ಮೀರಿಸುವ ‘ಮಿನಿ ರಾಜ್ಯ’ ಎನಿಸಿಕೊಂಡಿದೆ. ಬೆಳಗಾವಿ ಇನ್ನೂ ಎರಡು ಜಿಲ್ಲೆಗಳಾಗುವಷ್ಟು ವಿಸ್ತಾರ – ವ್ಯಾಪ್ತಿ ಹೊಂದಿದೆ. ಸರ್ಕಾರಗಳೇ ನೇಮಕ ಮಾಡಿದ್ದ ವಾಸುದೇವನ್‌ ಆಯೋಗ, ಹುಂಡೇಕರ ಸಮಿತಿ, ಗದ್ದಿಗೌಡರ ಆಯೋಗ ಹಾಗೂ ಎಂ ಬಿ ಪ್ರಕಾಶ್‌ ಆಯೋಗಗಳು ಬೆಳಗಾವಿಯಲ್ಲಿ ಹೊಸ ಜಿಲ್ಲೆಗಳ ರಚನೆಗೆ ಗ್ರೀನ್‌ ಸಿಗ್ನಲ್‌ ನೀಡಿವೆ. ಆದರೆ ಆಡಳಿತದ ಎಲ್ಲ ವಿಭಾಗದಲ್ಲೂ ಅಧಿಕಾರ ವಿಕೇಂದ್ರೀಕರಣಗೊಳಿಸಿ ನಿರ್ವಹಣೆ ಸುಲಭವಾಗುತ್ತಿರುವ ಸಂದರ್ಭದಲ್ಲಿ ಬೆಳಗಾವಿ ಮಾತ್ರ ದೊಡ್ಡ ಜಿಲ್ಲೆಯಾಗಿಯೇ ಉಳಿದುಕೊಂಡಿರುವುದು ವಿಪರ್ಯಾಸ ಮತ್ತು ಅದೊಂದು ರಾಜಕಾರಣ. ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಪೂರ್ಣ ಪ್ರಮಾಣದ ಜಿಲ್ಲೆಯಾಗಬೇಕು ಎಂದು ಆಗ್ರಹಕ್ಕೆ ದಶಕಗಳೇ ಕಳೆದಿದೆ.

ಒಟ್ಟಾರೆಯಾಗಿ ಪ್ರತಿ ಬಾರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದಾಗ ಉತ್ತರ ಕರ್ನಾಟಕದ ಜನ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ಅಧಿವೇಶನ ಮುಗಿಯುವ ವೇಳೆ ತಾವು ಇಟ್ಟ ನಿರೀಕ್ಷೆ ಹುಸಿಯಾದ ಬಳಿಕ ನಿರಾಸೆಯಾಗುತ್ತಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನ ಕೇವಲ ಪ್ರವಾಸದ ಅಧಿವೇಶನ ಆಗಿದೆ ಹೊರತು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಅಧಿವೇಶನ ನಡೆಯುತ್ತಿಲ್ಲ ಎಂಬುದು ಉತ್ತರ ಕರ್ನಾಟಕದ ಜನರ ಆರೋಪ

ಅಶೋಕ ಚಂದರಗಿ
ಅಶೋಕ್​ ಚಂದರಗಿ, ಹಿರಿಯ ಕನ್ನಡ ಹೋರಾಟಗಾರ

ಮಾರಾಠಿ ಮಾಧ್ಯಮ ಶಾಲೆಗಳೇ ಹೆಚ್ಚಿವೆ

“ಸುವರ್ಣ ವಿಧಾನಸೌಧ ನಿರ್ಮಾಣವಾಗಿ 14 ವರ್ಷ ಆಗಿದೆ. ಇದರಿಂದ ಉತ್ತರ ಕರ್ನಾಟಕ್ಕೆ ಆದ ಫಲಶೃತಿ ಏನು? ನಮ್ಮ ಭಾಗದ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. ಕಬ್ಬಿಗೆ ನ್ಯಾಯಯುತ ದರ ಸಿಕ್ಕಿಲ್ಲ. ನೀರಾವರಿ ಯೋಜನೆಗಳಿಗೆ ಮುಕ್ತಿಯಿಲ್ಲ. ಶಿಕ್ಷಣದ ಬಗ್ಗೆ ಚರ್ಚೆಯಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಮಾರಾಠಿ ಮಾಧ್ಯಮ ಶಾಲೆಗಳೇ ಹೆಚ್ಚಿವೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ನಡೆಯುವ ಚಳಿಗಾಲ ಅಧಿವೇಶನ ಶಾಸಕರಿಗೆ, ಸಚಿವರಿಗೆ ಮೋಜು ಮಸ್ತಿಯ ತಾಣವಾಗಿದೆ. ಪಕ್ಕದಲ್ಲೇ ಗೋವಾವಿದೆ. ಅವರೆಲ್ಲ ಮಜ ಮಾಡಲು ಬೆಳಗಾವಿಗೆ ಬರುತ್ತಾರೆ” ಎಂದು ಹಿರಿಯ ಕನ್ನಡ ಹೋರಾಟಗಾರ ಅಶೋಕ್​ ಚಂದರಗಿ ಅವರು ಈ ದಿನ.ಕಾಮ್‌ ಜೊತೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

“ಮಹದಾಯಿ, ಕೃಷ್ಣ ನೀರಾವರಿ ಯೋಜನೆ ವಿಚಾರವಾಗಿ ಸರ್ವಪಕ್ಷ ನಿಯೋಗ ದೆಹಲಿಗೆ ಹೋಗಿದ್ದು ಇದೆಯಾ? ಅಧಿವೇಶನದ ಕೊನೆಯ ಎರಡು ದಿನ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಅವಕಾಶ ಕೊಡಲಾಗುತ್ತದೆ. ಭಾಷಣ ಮಾಡಿ ಮನೆ ಕಡೆಗೆ ಎಲ್ಲ ಜನಪ್ರತಿನಿಧಿಗಳು ತೆರಳುತ್ತಾರೆ. ನಾವು ಹೀಗೆ ಹೋರಾಟ ಮಾಡುತ್ತ ಕುಳಿತುಕೊಳ್ಳುತ್ತೇವೆ. ಸುವರ್ಣಸೌಧದ ನಿಜವಾದ ಆಶಯ ಯಾರಿಗೂ ಈಡೇರಬೇಕಿಲ್ಲ. ಜನರ ತೆರಿಗೆ ಹಣಕ್ಕೆ ಬೆಲೆಯೇ ಇಲ್ಲ. ಕೋಟಿ ಕೋಟಿ ಖರ್ಚು ಮಾಡಿ ನಿರ್ವಹಿಸುವ ಬದಲು ನಮಗೆ ಪ್ರತ್ಯೇಕ ರಾಜ್ಯ ಕೊಟ್ಟು ಬಿಡಲಿ” ಎಂದು ಆಗ್ರಹಿಸಿದರು.

ಸಿದಗೌಡ ಮೋದಗಿ
ಸಿದಗೌಡ ಮೋದಗಿ, ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರು

ಸರ್ಕಾರಿ ಕಚೇರಿಗಳು ಸ್ಥಳಾಂತರವಾಗಲಿ

“ಉತ್ತರ ಕರ್ನಾಟಕಕ್ಕೆ ಸಂಬಂಧಿಸಿ ಸರ್ಕಾರಿ ಕಚೇರಿಗಳನ್ನು ಬೆಳಗಾವಿ ಸುವರ್ಣಸೌಧಕ್ಕೆ ಸರ್ಕಾರ ಸ್ಥಳಾಂತರ ಮಾಡಬೇಕು. ನಾವು ಎಲ್ಲ ಕೆಲಸಗಳಿಗೂ ಬೆಂಗಳೂರಿಗೆ ಅಲೆಯಬೇಕಿದೆ. ಅಲ್ಲಿಗೆ ಬಂದರೂ ಶಾಸಕರು, ಸಚಿವರು ಸಿಗುವುದಿಲ್ಲ. ವರ್ಷದಲ್ಲಿ 10 ಸಾರಿ ಬೆಂಗಳೂರಿಗೆ ಬಂದು ಹೋದರೆ ಲಕ್ಷ ರೂ. ಖರ್ಚಾಗುತ್ತದೆ. ನಾವು ದುಡಿದಿದ್ದನ್ನು ಪ್ರಯಾಣ, ಊಟ, ರೂಮ್‌ ಬಾಡಿಗೆಗೆ ಇಡಬೇಕು. ನಮ್ಮ ಭಾಗಕ್ಕೆ ಸಂಬಂಧಿಸಿದ ಸರ್ಕಾರಿ ಕಚೇರಿಗಳು ನಮಗೆ ಸಿಗಲಿ” ಎಂದು ಭಾರತೀಯ ಕೃಷಿಕ ಸಮಾಜ (ಸಂ) ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಒತ್ತಾಯಿಸಿದರು.

“ಬರೀ ‘ಬ್ರ್ಯಾಂಡ್‌ ಬೆಂಗಳೂರು’ ಎಂದರೆ ಸಾಕೇ? ‘ಬ್ರ್ಯಾಂಡ್‌ ಬೆಳಗಾವಿ’ ಆಗುವುದು ಬೇಡವೇ? ಗೋವಾ ರಾಜ್ಯಕ್ಕಿಂತಲೂ ಬೆಳಗಾವಿ ದೊಡ್ಡದಿದೆ. ಆದರೆ ಬೆಳಗಾವಿಗೆ ಏನು ಸಿಕ್ಕಿದೆ. ಕೆಲಸಕ್ಕೆ ಬಾರದ ಸುವರ್ಣಸೌಧ ತಗೊಂಡು ನಾವೇನು ಉಪ್ಪಿನಕಾಯಿ ಹಾಕಬೇಕಾ? ನಮ್ಮ ಭಾಗದ ಜನರಿಗೆ ಅದರ ಉಪಯೋಗವಾಗಬೇಕು. ಅರ್ಧ ಸಚಿವಾಲಯ ಇಲ್ಲಿ ಕಾರ್ಯ ನಿರ್ವಹಿಸಬೇಕು. ಬೆಳಗಾವಿಗೆ ಮಾಹಿತಿ ಹಕ್ಕು ಆಯೋಗ ಒಂದು ಸಿಕ್ಕಿದೆ. ಆದರೆ ಅದಕ್ಕೆ ಆಯುಕ್ತರೇ ಇಲ್ಲ. ಶೇ.60 ರಷ್ಟು ಸರ್ಕಾರಿ ಕಚೇರಿಗಳು ಬಾಡಿಗೆ ಮೂಲಕ ನಡೆಯುತ್ತಿವೆ. ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಯಾವಾಗ? ಸಚಿವ ಸಂಪುಟಗಳು ಬೆಳಗಾವಿಯಲ್ಲೂ ನಡೆಯಬೇಕು” ಎಂದು ಆಗ್ರಹವನ್ನು ಮುಂದಿಟ್ಟರು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X