ಈ ದೇಶಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆಯನ್ನು ಹಾಡಿಹೊಗಳಿದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ನಾಯಕ ಸಂಜಯ್ ರಾವುತ್, “ಕಾಂಗ್ರೆಸ್ ನಾಯಕತ್ವ ಇರದಿದ್ದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲ. ದೇಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇಷ್ಟೊಂದು ಪ್ರಗತಿ ಸಾಧಿಸುತ್ತಿರಲಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ ಯಾತ್ರೆಯು ಕೊನೆಯಾಗುತ್ತಿರುವ ಸಂದರ್ಭದಲ್ಲೇ ಬಿಜೆಪಿಯು “ಕಾಂಗ್ರೆಸ್ ನಹಿ ಹೋತಿ ತೊ ಕ್ಯಾ ಹೋತಾ” (ಕಾಂಗ್ರೆಸ್ ಇರದಿದ್ದರೆ ಏನಾಗುತ್ತಿತ್ತು) ಎಂಬ ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆ ಮಾಡುತ್ತಿದೆ. ಈ ಪುಸ್ತಕದ ಬಗ್ಗೆ ಶಿವಸೇನೆ ನಾಯಕ ಸಂಜಯ್ ರಾವುತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ನಮ್ಮ ದೇಶದಲ್ಲಿ ಕಾಂಗ್ರೆಸ್ ಇರದಿದ್ದರೆ ದೇಶಕ್ಕೆ ಸ್ವಾತಂತ್ರ್ಯವೇ ಲಭಿಸುತ್ತಿರಲಿಲ್ಲ, ದೇಶಕ್ಕೆ ಒಂದು ನಾಯಕತ್ವವೇ ಇರುತ್ತಿರಲಿಲ್ಲ. ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟೊಂದು ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಹಲವಾರು ವಿಚಾರಗಳು ಇದೆ. ಆದರೆ ಇವೆಲ್ಲವೂ ಬಿಜೆಪಿಗೆ ಅರ್ಥವಾಗುವುದಿಲ್ಲ. ಯಾಕೆಂದರೆ ಬಿಜೆಪಿ ಪಕ್ಷದವರು ದೇಶದ ಬಗ್ಗೆ ಆಲೋಚಿಸುವುದಿಲ್ಲ, ಅವರು ಬರೀ ಉದ್ಯಮಿಗಳ ಬಗ್ಗೆ ಮಾತ್ರ ಆಲೋಚಿಸುತ್ತಾರೆ” ಎಂದು ಬಿಜೆಪಿ ವಿರುದ್ಧ ರಾವುತ್ ವಾಗ್ದಾಳಿ ನಡೆಸಿದ್ದಾರೆ.
“ಕಾಂಗ್ರೆಸ್ ಇಲ್ಲದಿದ್ದರೆ ಪಾಕಿಸ್ತಾನ ವಿಭಜನೆಯಾಗುತ್ತಿರಲಿಲ್ಲ. ನಮ್ಮ ದೇಶವು ಏಕತೆಯಿಂದ ಇರುತ್ತಿರಲಿಲ್ಲ” ಎಂದ ರಾವುತ್, “ಬಿಜೆಪಿ ಈ ದೇಶವನ್ನು ಬಡ ದೇಶವನ್ನಾಗಿಸುತ್ತಿದೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಮಹಾರಾಷ್ಟ್ರದ ಶಿಂಧೆ ಸರ್ಕಾರ 15 ದಿನದಲ್ಲಿ ಪತನ: ಸಂಜಯ್ ರಾವುತ್
“ನಮ್ಮ ದೇಶದಲ್ಲಿ ಬಿಜೆಪಿ ಇರದಿದ್ದರೆ ನಮ್ಮ ದೇಶದಲ್ಲಿ ಇಂತಹ ತೊಂದರೆಗಳು ಇರುತ್ತಿರಲಿಲ್ಲ. ನಮ್ಮ ದೇಶದಲ್ಲಿ ಗಲಭೆಗಳು ಆಗುತ್ತಿರಲಿಲ್ಲ. ನಮ್ಮ ದೇಶದ ರೂಪಾಯಿ ಮೌಲ್ಯವು ಕುಸಿಯುತ್ತಿರಲಿಲ್ಲ. ಸಾಲವೂ ಕೂಡಾ ಕಡಿಮೆ ಇರುತ್ತಿತ್ತು. ರಫೇಲ್‌ನಿಂದ ಹಿಡಿದು ಚುನಾವಣಾ ಬಾಂಡ್‌ವೆರೆಗಿನ ಹಗರಣಗಳು ಇರುತ್ತಿರಲಿಲ್ಲ” ಎಂದು ಬಿಜೆಪಿಗೆ ಶಿವಸೇನೆ ನಾಯಕ ತಿರುಗೇಟು ನೀಡಿದ್ದಾರೆ.
ಇನ್ನು ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ನಟಿ ಸ್ವರಾ ಭಾಸ್ಕರ್ ಮುಂಬೈನಲ್ಲಿ ಭಾನುವಾರ ನ್ಯಾಯ ಸಂಕಲ್ಪ ಪಾದಯಾತ್ರೆ ನಡೆಸುತ್ತಿದ್ದಾರೆ.