ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದು, ಸರ್ಕಾರ ರಚನೆಗೆ ಸಜ್ಜಾಗಿದೆ. 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯ ಗದ್ದುತೆಯ್ನು ತನ್ನ ವಶಕ್ಕೆ ಪಡೆದಿದೆ. ದೆಹಲಿಯಲ್ಲಿ ಬಿಜೆಪಿಯಿಂದ ಯಾರು ಮುಖ್ಯಮಂತ್ರಿ ಎಂಬ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಜಾತಿ, ಲಿಂಗ ಸಮೀಕರಣದೊಂದಿಗೆ ಮುಖ್ಯಮಂತ್ರಿ ನೇಮಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ, ಬಿಜೆಪಿ ಶಾಸಕಿ ರೇಖಾ ಗುಪ್ತಾ ಅವರ ಹೆಸರು ಮುನ್ನೆಲೆಯಲ್ಲಿದೆ.
ವಿದ್ಯಾರ್ಥಿಯಾಗಿದ್ದಾಗಲೇ ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿಯಲ್ಲಿ ತೊಡಗಿಸಿಕೊಂಡಿದ್ದ ರೇಖಾ ಗುಪ್ತ ಅವರು ವೈಶ್ಯ ಸಮುದಾಯಕ್ಕೆ ಸೇರಿದವರು. ಅವರು ಸ್ನಾತಕೋತ್ತರ ಪದವಿ ಪಡೆಯುವಾಗ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯೂ ಆಗಿದ್ದರು. ಅಲ್ಲದೆ, 2022ರಲ್ಲಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಾಗ, ರೇಖಾ ಗುಪ್ತಾ ಅವರನ್ನು ಬಿಜೆಪಿ ಮೇಯರ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಆದರೆ, ಎಎಪಿ ಬಹುಮತ ಪಡೆದು, ಆಡಳಿತ ರಚಿಸಿದ್ದರಿಂದ, ರೇಖಾ ಗುಪ್ತಾ ಅವರಿಗೆ ಮೇಯರ್ ಹುದ್ದೆ ಕೈತಪ್ಪಿತ್ತು.
ಜಾತಿ ಆಧಾರಿತವಾಗಿ ನೋಡದರೂ, ಲಿಂಗ ಆಧಾರತವಾಗಿ ನೋಡಿದರೂ ರೇಖಾ ಗುಪ್ತ ಅವರಿಗೆ ಅವಕಾಶ ದೊರೆಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಮುಖ್ಯಮಂತ್ರಿ ಹುದ್ದೆ ತಪ್ಪಿದರೂ, ಉಪಮುಖ್ಯಮಂತ್ರಿ ಹುದ್ದೆಯಾದರೂ ದೊರೆಯುವ ಸಾಧ್ಯತೆಗಳಿವೆ ಎಂಬುದು ದೆಹಲಿಯಲ್ಲಿನ ಚರ್ಚೆ.
ಆದಾಗ್ಯೂ, ಜಾಟ್ (ಎಸ್‌ಸಿ) ಸಮುದಾಯಕ್ಕೆ ಸೇರಿದ ರಾಜ್ ಕುಮಾರ್ ಚೌಹಾಣ್ ಅವರ ಹೆಸರು ಕೂಡ ಮುನ್ನೆಲೆಯಲ್ಲಿದೆ. ಸದ್ಯ, ದೆಹಲಿ, ಹರಿಯಾಣ, ಪಂಜಾಬ್ ಹಾಗೂ ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯದ ಪ್ರಾಬಲ್ಯ ಹೆಚ್ಚಿರುವ ಕಾರಣ, ಚೌಹಾಣ್ ಅವರನ್ನು ದೆಹಲಿ ಮುಖ್ಯಮಂತ್ರಿ ಮಾಡುವುದು, ಪಕ್ಕದ ರಾಜ್ಯಗಳಲ್ಲಿಯೂ ಬಿಜೆಪಿಗೆ ಹೆಚ್ಚು ನೆರವಾಗುತ್ತದೆ ಎಂದೂ ಹೇಳಲಾಗುತ್ತಿದೆ.
ಸದ್ಯ, ಬಿಜೆಪಿ ನಾಯಕರು ಮುಖ್ಯಮಂತ್ರಿ ಆಯ್ಕೆಗಾಗಿ ಚರ್ಚೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ವಿದೇಶಿ ಪ್ರವಾಸದಲ್ಲಿದ್ದು, ಅವರು ಭಾರತಕ್ಕೆ ಮರಳಿದ ಬಳಿಕ ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವ ಸಾಧ್ಯತೆಗಳಿವೆ. ಆ ವೇಳೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಹೈಕಮಾಂಡ್ ಫೈನಲ್ ಮಾಡಲಿದೆ ಎಂದು ವರದಿಯಾಗಿದೆ.