- ತೆಲಂಗಾಣ ಹೈದರಾಬಾದ್ ಸಂತೋಷ್ ನಗರದ ಕೆ.ವಿ.ರಂಗಾರೆಡ್ಡಿ ಕಾಲೇಜಿನಲ್ಲಿ ಘಟನೆ
- ಘಟನೆಯ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಮೊಹಮ್ಮದ್ ಅಲಿ ಭರವಸೆ
ತೆಲಂಗಾಣ ರಾಜ್ಯದ ಹೈದರಾಬಾದ್‌ನಲ್ಲಿ ಪರೀಕ್ಷೆಗೆ ಹಾಜರಾಗುವ ಮುನ್ನ ಬುರ್ಖಾ ತೆಗೆಯುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಿ ಕಾಲೇಜು ಆಡಳಿತದ ವಿರುದ್ಧ ವಿದ್ಯಾರ್ಥಿನಿಯರು ಶನಿವಾರ (ಜೂನ್ 17) ಪ್ರತಿಭಟಿಸಿದ್ದಾರೆ.
ಸಂತೋಷ್ ನಗರದಲ್ಲಿರುವ ಕೆ.ವಿ. ರಂಗಾರೆಡ್ಡಿ ಪದವಿ ಕಾಲೇಜಿನಲ್ಲಿ ಉರ್ದು ಮಾಧ್ಯಮದ ಪದವಿಯ ಮಧ್ಯಂತರ ಪೂರಕ ಪರೀಕ್ಷೆ ವೇಳೆ ಈ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ತೆಲಂಗಾಣ ಹೈದರಾಬಾದ್ ಕಾಲೇಜಿನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಬುರ್ಖಾಧಾರಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಪ್ರವೇಶ ನಿರಾಕರಿಸಿರುವುದು ವಿದ್ಯಾರ್ಥಿನಿಯರು ಮತ್ತು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಡ್ಡಾಯವಾಗಿ ಬುರ್ಖಾ ತೆಗೆದು ಪರೀಕ್ಷೆಗೆ ಹಾಜರಾಗಬೇಕು ಎಂಬ ನಿಯಮ ತೆಲಂಗಾಣ ರಾಜ್ಯದ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ಇಲ್ಲ. ಆದರೆ ಕೆ.ವಿ. ರಂಗಾರೆಡ್ಡಿ ಕಾಲೇಜಿನಲ್ಲಿ ಮಾತ್ರ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
“ಪುರುಷ ಸಿಬ್ಬಂದಿಯ ಮುಂದೆಯೇ ಬುರ್ಖಾ ತೆಗೆಯುವಂತೆ ನಮ್ಮನ್ನು ಒತ್ತಾಯಿಸಲಾಯಿತು. ಸ್ವಲ್ಪ ಸಮಯ ನೀಡುವಂತೆ ಮನವಿ ಮಾಡಿದರೂ ಕಾಲೇಜು ಆಡಳಿತ ಪರಿಗಣಿಸಲಿಲ್ಲ” ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಅಲಿ ಘಟನೆಯನ್ನು ಖಂಡಿಸಿದ್ದು ಕಠಿಣ ಕ್ರಮದ ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ತಮಿಳುನಾಡು | ಸರ್ಕಾರ-ರಾಜ್ಯಪಾಲರ ನಡುವಿನ ತಿಕ್ಕಾಟಕ್ಕೆ ಕಾರಣವಾದ ಸೆಂಥಿಲ್ ಬಾಲಾಜಿ ಬಂಧನ
“ಕೆಲವು ಮುಖ್ಯ ಶಿಕ್ಷಕರು ಅಥವಾ ಪ್ರಾಂಶುಪಾಲರು ಈ ರೀತಿ ಮಾಡುತ್ತಿದ್ದಾರೆ. ಆದರೆ, ಸಂಪೂರ್ಣವಾಗಿ ಜಾತ್ಯತೀತವಾಗಿರುವುದು ನಮ್ಮ ಧೋರಣೆಯಾಗಿದೆ” ಎಂದು ಹೇಳಿದ್ದಾರೆ.
“ಜನರು ತಾವು ಬಯಸಿದ ಬಟ್ಟೆಗಳನ್ನು ತೊಡಬಹುದು. ಆದರೆ, ಯುರೋಪಿಯನ್ನರ ಉಡುಪುಗಳನ್ನು ಧರಿಸುವುದು ಸರಿಯಲ್ಲ. ನಾವು ಮುಖ್ಯವಾಗಿ ಮಹಿಳೆಯರು ಭಾರತೀಯ ಉತ್ತಮ ಉಡುಪುಗಳನ್ನು ಧರಿಸಬೇಕು. ಬುರ್ಖಾ ಹಾಕಿಕೊಳ್ಳಬಾರದು ಎಂದು ಎಲ್ಲಿಯೂ ಬರೆದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
“ಮಹಿಳೆಯರು ತುಂಡು ಬಟ್ಟೆ ಧರಿಸಿದರೆ ಆಗ ಸಮಸ್ಯೆಯಾಗಬಹುದು. ಅವರು ಪೂರ್ತಿ ಬಟ್ಟೆ ಧರಿಸುವುದರಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ” ಎಂದು ಸಚಿವ ಮೊಹಮ್ಮದ್ ಅಲಿ ಹೇಳಿದರು.