ಅಂತರಾಷ್ಟ್ರೀಯ ಮಹಿಳಾ ದಿನದಂದು ಕಾಂಗ್ರೆಸ್ ಶುಕ್ರವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ‘ಬಿಜೆಪಿ ಹಟಾವೋ – ಬೇಟಿ ಬಚಾವೋ’ ಎಂದು ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಏಕೆ ಭೇಟಿ ನೀಡಿಲ್ಲ. ಮಹಿಳಾ ಕುಸ್ತಿಪಟುಗಳ ಮೇಲೆ ಬಿಜೆಪಿ ಸಂಸದನ ಲೈಂಗಿಕ ಕಿರುಕುಳ ಪ್ರಕರಣ ಕುರಿತು ಅವರು ‘ಮೌನ’ವಾಗಿರುವುದು ಯಾಕೆ? ದೇಶಾದ್ಯಂತ ಮಹಿಳೆಯರು ಉತ್ತರಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದು ಹೇಳಿದೆ.
“ಇಂದು (ಮಾರ್ಚ್ 8) ಅಂತಾರಾಷ್ಟ್ರೀಯ ಮಹಿಳಾ ದಿನವಾಗಿದೆ. ಮಹಿಳೆಯರಿಗೆ ಶುಭಾಶಯ ಹೇಳುವುದನ್ನು ಮೀರಿ ಪ್ರಧಾನಿಯವರು ಏನನ್ನೂ ಮಾಡುತ್ತಾರೆ ಎಂದು ನಾವು ನಿರೀಕ್ಷಿಸುವುದಿಲ್ಲ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
“ಅದೇನೇ ಇದ್ದರೂ, ದೇಶಾದ್ಯಂತ ಮಹಿಳೆಯರು ಮೋದಿ ಅವರನ್ನು ಕೇಳುತ್ತಿರುವ ಕೆಲವು ಪ್ರಮುಖ ಪ್ರಶ್ನೆಗಳು ಇಲ್ಲಿವೆ: ಮಣಿಪುರದಲ್ಲಿ ಅಂತರ್ಯುದ್ಧ ನಡೆಯುತ್ತಿದೆ. ಅಲ್ಲಿನ ಮಹಿಳೆಯರು ಹೆಚ್ಚು ಹಿಂಸೆಗೆ ಒಳಗಾಗಿದ್ದಾರೆ. ಮಹಿಳೆಯರನ್ನು ಬೆತ್ತಲೆ ಮಾಡಿ, ಮೆರವಣಿಗೆ ಮಾಡುವ ವಿಡಿಯೋಗಳು ಹರಿದಾಡಿವೆ. ಆದರೆ, ಬಿಜೆಪಿಯೇ ಅಧಿಕಾರದಲ್ಲಿರುವ ಆ ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡುವು ಬಗ್ಗೆ ಯಾಕೆ ತಲೆಕೆಡಿಸಿಕೊಂಡಿಲ್ಲ” ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಆ ಬಗ್ಗೆಯೂ ಪ್ರಧಾನಿ ಮೌನವಾಗಿದ್ದಾರೆ. ಈ ಪ್ರಕರಣದಲ್ಲಿ ಪ್ರಧಾನಿಯವರ ನಿಲುವು ಏನು? ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ‘ಮೋದಿ ಕಾ ಪರಿವಾರ್’ ಸದಸ್ಯ ಎಂದು ಮೋದಿ ಪರಿಗಣಿಸುತ್ತಾರೆಯೇ” ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
“ಆಹಾರ ಮತ್ತು ಅಗತ್ಯ ವಸ್ತುಗಳ ಬೆಲೆಗಳಲ್ಲಿ ಕ್ಷಿಪ್ರ ಏರಿಕೆಯಾಗಿದೆ. ಈ ಬೆಲೆ ಏರಿಕೆಯ ಹೊರೆಯಿಂದ ಮನೆಗಳನ್ನು ರಕ್ಷಿಸುವ ಯೋಜನೆಯನ್ನು ಪ್ರಧಾನಿ ನೀಡುತ್ತಾರೆಯೇ?” ಎಂದಿದ್ದಾರೆ.
It is International Women’s Day today. We don’t expect the Prime Minister to do anything beyond paying salutary tributes to women. Nevertheless, here are some key questions that women across the country are asking him:
1. Manipur has been in a state of virtual civil war since…
— Jairam Ramesh (@Jairam_Ramesh) March 8, 2024
“‘ಅನ್ಯಾಯ ಕಾಲ’ದ ವಿಶಿಷ್ಟ ಲಕ್ಷಣವೆಂದರೆ ನಿರುದ್ಯೋಗದ ಬಿಕ್ಕಟ್ಟು. ವಿಶೇಷವಾಗಿ, ಉದ್ಯೋಗ ಹುಡುಕುವ ಮಹಿಳಾ ಉದ್ಯೋಗಾಕಾಂಕ್ಷಿಗಳು, ಉದ್ಯೋಗವನ್ನು ಹುಡುಕುವುದನ್ನೇ ಬಿಟ್ಟಿದ್ದಾರೆ. ಅವರು ನಿರುತ್ಸಾಹಗೊಂಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಗಿಂತ ಮೋದಿ ಅವಧಿಯಲ್ಲಿ ಕಾರ್ಮಿಕ ಶಕ್ತಿಯಲ್ಲಿ ಮಹಿಳೆಯರ ಸಂಖ್ಯೆ ಶೇ.20ರಷ್ಟು ಕಡಿಮೆಯಾಗಿದೆ. ಇದು ಆರ್ಥಿಕತೆಯ ದೀರ್ಘಾವಧಿಯ ಸಾಮರ್ಥ್ಯವನ್ನು ದುರ್ಬಲಗೊಳಿಸಬಹುದು. ಮಹಿಳೆಯರನ್ನು ಆರ್ಥಿಕ ಮುಖ್ಯವಾಹಿನಿಗೆ ಮರಳಿ ತರಲು ಪ್ರಧಾನಿ ಬಳಿ ಪರಿಹಾರವಿದೆಯೇ” ಎಂದು ಅವರು ಹೇಳಿದ್ದಾರೆ.
“2014ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಪ್ರಧಾನಿ ‘ಬೇಟಿ ಬಚಾವೋ – ಬೇಟಿ ಪಢಾವೋ’ ಅಭಿಯಾನ ಆರಂಭಿಸಿದ್ದರು. ಆದರೆ, ನಂತರ ಅಭಿಯಾನದ ಬಜೆಟ್‌ನಲ್ಲಿ ಸುಮಾರು 80%ಅನ್ನು ಜಾಹೀರಾತುಗಳಿಗೆ ವ್ಯಯಿಸಿದರು. ಹೆಣ್ಣು ಶಿಶುಹತ್ಯೆಯನ್ನು ನಿಲ್ಲಿಸಲು ಮತ್ತು ಮಹಿಳಾ ಶಿಕ್ಷಣವನ್ನು ಉತ್ತೇಜಿಸಲು ಪ್ರಧಾನ ಮಂತ್ರಿಗೆ ಹೆಚ್ಚು ಅರ್ಥಪೂರ್ಣವಾದ ದೃಷ್ಟಿ ಇದೆಯೇ? ಭಾರತದ ಮಹಿಳೆಯರು ಹಕ್ಕು ಮತ್ತು ಉತ್ತರಗಳಿಗೆ ಅರ್ಹರು. ‘ಬಿಜೆಪಿ ಹಟಾವೋ, ಬೇಟಿ ಬಚಾವೋ'” ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.