ಹರಿಯಾಣ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ನಾವು ಒಪ್ಪಿಕೊಳ್ಳುವುದಿಲ್ಲ, ಕೆಲವೆಡೆ ಇವಿಎಂ ‘ಮ್ಯಾನಿಪುಲೇಷನ್’ ಆಗಿದೆ ಎಂದು ಕಾಂಗ್ರೆಸ್ ಹೇಳಿದೆ. ಜೊತೆಗೆ ಈ ಫಲಿತಾಂಶವು ‘ಆಘಾತ’ ಮತ್ತು ‘ಆಶ್ಚರ್ಯ’ ಉಂಟು ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಸುಮಾರು 14 ಕ್ಷೇತ್ರಗಳಲ್ಲಿ ಎಣಿಕೆ ಪ್ರಕ್ರಿಯೆ ಮತ್ತು ಇವಿಎಂಗಳ (ವಿದ್ಯುನ್ಮಾನ ಮತಯಂತ್ರಗಳು) ಕಾರ್ಯನಿರ್ವಹಣೆಯಲ್ಲಿ ಗಂಭೀರವಾದ ವ್ಯತ್ಯಾಸಗಳನ್ನು ಕಾಂಗ್ರೆಸ್ ಬೊಟ್ಟು ಮಾಡಿದೆ. ಈ ವಿಚಾರದಲ್ಲಿ ಚುನಾವಣಾ ಆಯೋಗವನ್ನು ಸಂಪರ್ಕಿಸುವುದಾಗಿಯೂ ಹೇಳಿದೆ.
ಈ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಹರಿಯಾಣ ಫಲಿತಾಂಶವು ‘ಮ್ಯಾನಿಪುಲೇಷನ್’ ಗೆಲುವಾಗಿದೆ ಮತ್ತು ಜನರ ಇಚ್ಛೆಯನ್ನು ಬುಡಮೇಲು ಮಾಡಿದೆ. ಇದು ಪಾರದರ್ಶಕ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಸೋಲು ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ʼಈ ದಿನʼ ವಿಶ್ಲೇಷಣೆ | ಹರಿಯಾಣ ಚುನಾವಣೆ ಕಾಂಗ್ರೆಸ್ ಕೈ ತಪ್ಪಿದ್ದೇಕೆ?
“ಹರಿಯಾಣದಲ್ಲಿ ಫಲಿತಾಂಶಗಳು ಸಂಪೂರ್ಣವಾಗಿ ಅನಿರೀಕ್ಷಿತವಾಗಿದೆ. ಇದು ನೆಲದ ವಾಸ್ತವಕ್ಕೆ ವಿರುದ್ಧವಾಗಿದೆ. ಹರಿಯಾಣದ ಜನರು ಬದಲಾವಣೆ ಮತ್ತು ಪರಿವರ್ತನೆಯ ಮನಸ್ಸು ಮಾಡಿದ್ದಾರೆ. ಇದು ಅದರ ವಿರುದ್ಧವಾಗಿದೆ. ಈ ಪರಿಸ್ಥಿತಿಯಲ್ಲಿ ಇಂದು ಪ್ರಕಟವಾಗಿರುವ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ರಮೇಶ್ ಹೇಳಿದರು.
“ಕನಿಷ್ಠ ಮೂರು ಜಿಲ್ಲೆಗಳಲ್ಲಿ ಎಣಿಕೆ ಪ್ರಕ್ರಿಯೆ ಮತ್ತು ಇವಿಎಂಗಳ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಕಾಂಗ್ರೆಸ್ ಗಂಭೀರವಾದ ದೂರು ಸ್ವೀಕರಿಸಿದೆ. ಶೇಕಡ 99ರಷ್ಟು ಬ್ಯಾಟರಿ ಹೊಂದಿರುವ ಇವಿಎಂಗಳಲ್ಲಿ ಕಾಂಗ್ರೆಸ್ ಸೋಲುತ್ತಿದೆ ಎಂಬ ಫಲಿತಾಂಶ ತೋರಿಸಿದೆ. ಆದರೆ ಅದಕ್ಕಿಂತ ಕಡಿಮೆ ಬ್ಯಾಟರಿ ಇದ್ದ ಯಂತ್ರಗಳು ಕಾಂಗ್ರೆಸ್ ಗೆಲುವಿನತ್ತ ಮುಖ ಮಾಡಿದಂತೆ ತೋರಿಸಿದೆ” ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
ಹರಿಯಾಣದ ಕೆಲವು ಭಾಗಗಳಲ್ಲಿ ಇವಿಎಂ ದುರ್ಬಳಕೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.
ಇನ್ನು ಮತ ಎಣಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಚುನಾವಣಾ ಫಲಿತಾಂಶದ ಅಪ್‌ಡೇಟ್ ವಿಳಂಬವಾಗುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಎಕ್ಸ್‌ನಲ್ಲಿ ದೂರು ಪ್ರತಿಯನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಜೈರಾಮ್ ರಮೇಶ್, “ಚುನಾವಣಾ ಆಯೋಗಕ್ಕೆ ನಾನು ಪತ್ರ ಬರೆದಿದ್ದೇನೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಟ್ರೆಂಡ್‌ಗಳನ್ನು ಅಪ್‌ಡೇಟ್ ಮಾಡುವಲ್ಲಿ ವಿಳಂಬದ ಬಗ್ಗೆ ನಾನು ಪತ್ರ ಬರೆದಿದ್ದೇನೆ” ಎಂದು ತಿಳಿಸಿದ್ದರು. ಆದರೆ ಚುನಾವಣಾ ಆಯೋಗ ಮಾತ್ರ ಈ ಆರೋಪವನ್ನು ನಿರಾಕರಿಸಿದೆ.
Like the Lok Sabha elections, in Haryana we are again witnessing slowing down of uploading up-to- date trends on the ECI website. Is the BJP trying to build pressure on administration by sharing outdated and misleading trends @ECISVEEP?
— Jairam Ramesh (@Jairam_Ramesh) October 8, 2024
