ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ರಾಜ್ಯದಲ್ಲಿ ಯಾವುದೇ ಪ್ರತಿಭಟನೆ ಅಥವಾ ಕಾರ್ಯಕ್ರಮ ನಡೆಸಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ಹೇಳಿದ್ದಾರೆ.
ವಕ್ಫ್ ಮಸೂದೆಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಹಿಮಂತ ಬಿಸ್ವಾ, “ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ಯಾರಾದರೂ ಅದರ ಪರವಾಗಿ ಅಥವಾ ವಿರುದ್ಧವಾಗಿ ಏನಾದರೂ ಹೇಳಬೇಕಾದರೆ ಅವರು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಬಹುದು. ಅಲ್ಲಿ ನ್ಯಾಯಾಧೀಶರು ಸರಿಯಾದ ಚರ್ಚೆ ನಡೆಸುತ್ತಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ವಕ್ಫ್ ಮಸೂದೆ | ಮುರ್ಶಿದಾಬಾದ್ ಕೋಮುಗಲಭೆ: ಊರು ಬಿಡುವುದೊಂದೇ ಜನರಿಗೆ ಕಂಡ ದಾರಿ
“ಕಾಯ್ದೆಯನ್ನು ವಿರೋಧಿಸಿ ಕೆಲವರು ರಸ್ತೆಗಿಳಿದರೆ, ಕಾಯ್ದೆಯನ್ನು ಬೆಂಬಲಿಸುವವರೂ ಬೀದಿಗಳಿಯುತ್ತಾರೆ. ಆಗ ಘರ್ಷಣೆಯುಂಟಾಗುತ್ತದೆ. ಅಸ್ಸಾಂನಲ್ಲಿ ನಮಗೆ ಯಾವುದೇ ಹೋರಾಟ ಅಥವಾ ಸಂಘರ್ಷ ಬೇಡ. ನಾವೆಲ್ಲರೂ ನಮ್ಮ ಸಹೋದರ ಭಾವನೆಯ ಸಂಬಂಧವನ್ನು ಕಾಪಾಡಿಕೊಳ್ಳಬೇಕು. ರಾಜ್ಯವನ್ನು ಮುಂದಕ್ಕೆ ಕೊಂಡೊಯ್ಯಬೇಕು” ಎಂದು ಶರ್ಮಾ ಹೇಳಿದರು.
“ಯಾರಾದರೂ ಕಾಯ್ದೆಯನ್ನು ವಿರೋಧಿಸುತ್ತಿದ್ದರೆ ಅಥವಾ ಬೆಂಬಲಿಸುತ್ತಿದ್ದರೆ ಅದರ ಬಗ್ಗೆ ನಾವು ಏನೂ ಹೇಳುವುದಿಲ್ಲ. ಆದರೆ ಯಾರಿಗೂ ಕೂಡಾ ಬೀದಿಗಿಳಿದು ಹೋರಾಟ ನಡೆಸುವ ಅವಕಾಶ ನೀಡಲಾಗುವುದಿಲ್ಲ” ಎಂದು ತಿಳಿಸಿದರು.
ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಒಕ್ಕೂಟದ (AAMSU) ಮಾತುಕತೆಗೆ ಆಹ್ವಾನಿಸುತ್ತೀರಾ ಎಂದೂ ಮುಖ್ಯಮಂತ್ರಿ ಅವರನ್ನು ಮಾಧ್ಯಮಗಳು ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿದ ಸಿಎಂ, “ಸಂಘಟನೆಯು ಸುಪ್ರೀಂ ಕೋರ್ಟ್‌ಗೆ ಹೋಗಬಹುದು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬೀದರ್ | ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿ : ರಮೇಶ ಡಾಕುಳಗಿ
ಕಳೆದ ಬುಧವಾರ ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಲು ಗುವಾಹಟಿಗೆ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ವಿವಿಧ ಪ್ರದೇಶಗಳಲ್ಲಿ ಪೊಲೀಸರು ಬಂಧಿಸಿದ್ದರು. AAMSU ಈ ಪ್ರತಿಭಟನೆಯ ಆಯೋಜನೆ ಮಾಡಿತ್ತು. ಭಾನುವಾರ ದಕ್ಷಿಣ ಅಸ್ಸಾಂನ ಕ್ಯಾಚರ್ ಜಿಲ್ಲೆಯ ಸಿಲ್ಚಾರ್ ಪಟ್ಟಣದಲ್ಲಿ ಕಾಯ್ದೆಯ ವಿರುದ್ಧ ನಡೆದ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದಿತ್ತು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸಿದಾಗ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ.
ಸಿಎಂ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಮಂತ್ ನಿರ್ಧಾರವು ಯಾವುದೇ ಕಾನೂನಿನ ವಿರುದ್ಧವಾಗಿ ಪ್ರತಿಭಟಿಸುವ ಜನರ ಹಕ್ಕನ್ನು ಕಿತ್ತುಕೊಂಡಂತೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಪ್ರತಿಭಟನೆಯಿಂದಾಗುವ ಹಿಂಸಾಚಾರ ತಡೆಯಲು ಈ ಕ್ರಮ ಮುಖ್ಯವೆಂದಿದ್ದಾರೆ. ಇನ್ನೂ ಕೆಲವರು ಜನವಿರೋಧಿ ವಕ್ಫ್ ಮಸೂದೆ ವಿರುದ್ಧದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ, ಇದು ಸರ್ವಾಧಿಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
