’ಏಕಸ್ವಾಮ್ಯ ಖರೀದಿ ಬಂಡವಾಳಶಾಹಿ’ ಕೃತಿಯ ಹಸ್ತಪ್ರತಿ ಬಿಡುಗಡೆ ಮಾಡಲಾಯಿತು
“ಹೊರಗುತ್ತಿಗೆ ಮೂಲಕ ಕಾರ್ಮಿಕರ ಬಲ ಕಸಿಯಲಾಗಿದೆ. ಕಾರ್ಮಿಕರು ಒಗ್ಗೂಡುವುದನ್ನು ತಪ್ಪಿಸಲು ಹೊರಗುತ್ತಿಗೆ ಪದ್ಧತಿ ಆರಂಭವಾಯಿತು” ಎಂದು ಲೇಖಕ, ಚಿಂತಕ ಬಿ.ಆರ್.ಮಂಜುನಾಥ್ ತಿಳಿಸಿದರು.
’ಈದಿನ.ಕಾಂ’ ಕಚೇರಿಯ ತಾರಸಿಯಲ್ಲಿ ಭಾನುವಾರ ನಡೆದ “‘ಮೊನೊಪ್ಸೋನಿ ಕ್ಯಾಪಿಟಲಿಸಂ: ಪವರ್ ಅಂಡ್ ಪ್ರೊಡಕ್ಷನ್ ಇನ್ ದಿ ಟ್ವಿಲೈಟ್ ಆಫ್ ದಿ ಸ್ವೆಟ್‌ಶಾಪ್ ಏಜ್’ ಕೃತಿಯ ಲೇಖಕ ಅಶೋಕ್ ಕುಮಾರ್ ಅವರೊಂದಿಗೆ ಸಂವಾದ ಮತ್ತು ಆ ಪುಸ್ತಕದ ಅನುವಾದವಾಗಿರುವ ’ಏಕಸ್ವಾಮ್ಯ ಖರೀದಿ ಬಂಡವಾಳಶಾಹಿ’ಯ ಹಸ್ತಪ್ರತಿ ಬಿಡುಗಡೆ ಹಾಗೂ ಚರ್ಚೆ”ಯಲ್ಲಿ ಅವರು ಮಾತನಾಡಿದರು.
“ರಷ್ಯಾ ಕ್ರಾಂತಿಯ ಬಳಿಕ ಬೆಚ್ಚಿದ ಯುರೋಪ್ ರಾಷ್ಟ್ರಗಳು ಕಾರ್ಮಿಕ ಪರವಾದ ನಿಲುವುಗಳನ್ನು ತೆಗೆದುಕೊಳ್ಳಲು ಆರಂಭಿಸಿದವು. ರಷ್ಯಾದಲ್ಲಿ ಕಾರ್ಮಿಕರು ಭುಗಿಲೆದ್ದಂತೆ ಎಲ್ಲ ಕಡೆ ಕ್ರಾಂತಿ ಮಾಡುತ್ತಾರೆಂಬ ಆತಂಕದಲ್ಲಿ ಬಂಡವಾಳಶಾಹಿಗಳಿಗೆ ಒಂದಿಷ್ಟು ಕಡಿವಾಣ ಹಾಕಲು ಮುಂದಾದರು. ಆ ನಂತರದಲ್ಲಿ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ನವ ಉದಾರವಾದ ಶುರುವಾದ ಮೇಲೆ ಕಾರ್ಮಿಕರ ವಿಭಜನೆ ಆರಂಭವಾಯಿತು. ಹೊರಗುತ್ತಿಗೆಗಳನ್ನು ನೀಡಲು ಅಮೆರಿಕದಂತಹ ರಾಷ್ಟ್ರಗಳು ಪ್ರಾರಂಭಿಸಿದವು. ಇದರಿಂದ ಕಾರ್ಮಿಕರ ವಿಭಜನೆ ಮತ್ತು ನಿಯಂತ್ರಣವನ್ನು ಮಾಡಲಾಯಿತು. ಕಾರ್ಮಿಕರ ಶಕ್ತಿ ಕುಸಿಯಿತು” ಎಂದು ಅಭಿಪ್ರಾಯಪಟ್ಟರು.
“ಹೊರಗುತ್ತಿಗೆಯಿಂದ ಬಂಡವಾಳಶಾಹಿ ವ್ಯವಸ್ಥೆಗೆ ಅನುಕೂಲಗಳಿವೆ. ಮೊದಲೆಲ್ಲ ಸಾರ್ವಜನಿಕ ವಲಯದಲ್ಲಿ ಲಕ್ಷಾಂತರ ಕಾರ್ಮಿಕರಿದ್ದರು. ಒಂದು ಚಾವಣಿ ಅಡಿಯಲ್ಲಿ ಸಾವಿರಾರು ಕಾರ್ಮಿಕರು ಇದ್ದಾಗ ಒಟ್ಟಾಗಿ ಚೌಕಾಸಿ ಮಾಡುತ್ತಿದ್ದರು. ಆದರೆ ಕಾರ್ಮಿಕರನ್ನು ಘಟಕಗಳನ್ನಾಗಿ ವಿಭಾಗಿಸಲಾಯಿತು. ಇಂಜಿನ್ ಮಾಡೋರು ಬೇರೆ, ಮೊಳೆ ಮಾಡೋದು ಬೇರೆ ಎಂದು ಬೇರ್ಪಡಿಸಲಾಯಿತು. ಕಾರ್ಮಿಕರು ಒಗ್ಗೂಡಲು ಸಾಧ್ಯವಾಗದೆ ಚೌಕಾಸಿ ಶಕ್ತಿ ಇಲ್ಲವಾಯಿತು. ಹೊರಗುತ್ತಿಗೆಯಿಂದ ಬಂಡವಾಳಶಾಹಿಗಳಿಗೆ ಆದ ಅನುಕೂಲವಿದು” ಎಂದು ವಿವರಿಸಿದರು.
“ಬಟ್ಟೆ ಉತ್ಪಾದನೆ, ಶೂ ಉತ್ಪಾದನೆಯಲ್ಲಿ ವಿಪರೀತವಾಗಿ ಹೊರಗುತ್ತಿಗೆ ಬಂತು. ಈ ಕ್ಷೇತ್ರದಲ್ಲಿ ಬಹಳ ಅಮಾನೀಯವಾದ ಶೋಷಣೆ ಮಾಡಲಾಯಿತು. ಸ್ಪೆಟ್ ಶಾಪ್ (ಬೆವರಿನ ಕಾರ್ಖಾನೆಗಳು) ಬಂದವು. ಬಾಂಗ್ಲಾದೇಶದಲ್ಲಿ 1200 ಕಾರ್ಮಿಕರು ಬಿಲ್ಡಿಂಗ್ ಕುಸಿದು ಒಮ್ಮೆಲೇ ಸಾಯುತ್ತಾರೆ. ಇದು ಗಂಭೀರ ಸಂಗತಿಯಾಗಿ ಚರ್ಚೆಯಾಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಮುಂದಿನ ದಿನಗಳಲ್ಲಿ ಚಳವಳಿಗಳು ಯಶಸ್ವಿಯಾಗಬೇಕೆಂದರೆ ಶೋಷಿತ ವರ್ಗಗಳ ನಡುವೆ ಅಂತಾರಾಷ್ಟ್ರೀಯ ಸಂಬಂಧ ಏರ್ಪಡಬೇಕು. ಮಿಂಚಿನ ವೇಗದ ಹೋರಾಟಗಳು ಕೂಡ ಅಗತ್ಯ” ಎಂದು ಹೇಳಿದರು.
“ಒಂದು ಕ್ಷೇತ್ರದಲ್ಲಿ ಬೇರೆಯವರು ಬೆಳೆಯದಂತೆ ಮುಗಿಸಲು ಪ್ರಯತ್ನ ಮಾಡುತ್ತಾರೆ. ಮೊದಲೆಲ್ಲ ಟಾಟಾ, ಬಿರ್ಲಾ ಎಂದು ಹೇಳುತ್ತಿದ್ದೆವು. ಈಗ ಅದಾನಿ, ಅಂಬಾನಿ ಎನ್ನುತ್ತೇವೆ. ಇಬ್ಬರು ಅಥವಾ ಮೂವರ ಕೈಯಲ್ಲಿ ಮಾರುಕಟ್ಟೆ ಇದೆ. ಇದನ್ನು ಮನೋಪಲಿ ಎನ್ನುತ್ತೇವೆ. ಇದರ ಮುಂದುವರಿದ ಭಾಗವಾದ ಮನೋಪ್ಸೊನಿಯು ಬ್ಯಾಂಕ್ ಕ್ಷೇತ್ರಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ. ಇಡೀ ಜನಜೀವನವನ್ನು ನಿಯಂತ್ರಣ ಮಾಡುತ್ತದೆ” ಎಂದು ವಿಶ್ಲೇಷಿಸಿದರು.
“ಲೇಖಕ ನಾ.ದಿವಾಕರ ಅವರು ಸೊಗಸಾಗಿ ಈ ಕೃತಿಯನ್ನು ಅನುವಾದ ಮಾಡಿದ್ದಾರೆ. ಹೊಸ ಪದಗಳನ್ನು ಟಂಕಿಸಿದ್ದಾರೆ. ಇದು ಅಪರೂಪದ ಕೃತಿ” ಎಂದು ಬಣ್ಣಿಸಿದರು.
ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅಶೋಕ್‌ಕುಮಾರ್, “ಸ್ಟ್ರಕ್ಚರ್ ಪವರ್ ಇಲ್ಲವಾದರೆ ಯಾವ ಹೋರಾಟವೂ ಯಶಸ್ವಿಯಾಗುವುದಿಲ್ಲ. ಬಂಡವಾಳಶಾಹಿಗಳಿಗೆ ಅನುಕೂಲವಾಗುವ ಜೊತೆಗೆ ಕಾರ್ಮಿಕರಿಗೂ ಉಪಯೋಗವಾಗುತ್ತದೆ ಎನ್ನಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿಯನ್ನು ಕೊಟ್ಟಾಗ ವಲಸೆ ಕಾರ್ಮಿಕರು ಬೆಂಗಳೂರಿನಿಂದ ವಾಪಸ್ ಹೋದರು. ಇದನ್ನು ಕಂಡು ಬಂಡವಾಳಶಾಹಿಗಳು ಗೊಣಗಿದರು. ಕಡಿಮೆ ಕೂಲಿ, ಸಂಬಳವನ್ನು ಜನರು ಸ್ವಯಂಪ್ರೇರಿತವಾಗಿ ಒಪ್ಪಿಕೊಂಡಿದ್ದಾರೆಂದು ಹೇಳಲಾಗದು. ಅದು ಅವರಿಗೆ ಅನಿವಾರ್ಯವಾಗಿರುತ್ತದೆ ಅಷ್ಟೇ. ಒಂದು ರೂಪಾಯಿಗೆ ಅಕ್ಕಿ ಕೊಟ್ಟಾಗ ವಾಪಸ್ ಹೋಗುತ್ತಾರೆಂಬ ಘಟನೆ ಹೇಳುವ ಸತ್ಯವೇ ಬೇರೆ” ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಕಾಶಕರು ಹಾಗೂ ’ನ್ಯಾಯಪಥ’ ಪಾಕ್ಷಿಕದ ಸಂಪಾದಕರೂ ಆದ ಡಿ.ಎನ್.ಗುರುಪ್ರಸಾದ್, “ಮನೋಪಲಿ ಬಗ್ಗೆ ನಾವು ಕೇಳಿದ್ದೆವು. ಮನೋಪ್ಸೊನಿ ಕುರಿತು ನಮ್ಮಲ್ಲಿ ಗಂಭೀರ ಚರ್ಚೆಗಳು ಶುರುವಾಗಬೇಕಿದೆ” ಎಂದು ಆಶಿಸಿದರು.
ಲೇಖಕ ಅಶೋಕ್‌ಕುಮಾರ್ ಮತ್ತು ನಟ ಚೇತನ್ ಅಹಿಂಸಾ ಅವರ ತಾಯಿ ಡಾ.ಮಂಗಳಾ ಹಾಜರಿದ್ದರು. ಬರಹಗಾರರಾದ ವಡ್ಡಗೆರೆ ನಾಗರಾಜಯ್ಯ, ಕೇಸರಿ ಹರವೂ, ನಾಗೇಗೌಡ ಕೀಲಾರ, ಪ್ರಸನ್ನ ಲಕ್ಷ್ಮೀಪುರ, ವಿ.ಎಲ್.ನರಸಿಂಹಮೂರ್ತಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
