ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್ಇಟಿ)ಯ ಮೋಸ್ಟ್ ವಾಂಟೆಡ್ ನಾಯಕರಲ್ಲಿ ಒಬ್ಬನಾದ ಹಾಗೂ 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖನಾದ ಮುಫ್ತಿ ಕೈಸರ್ ಫಾರೂಕ್ನನ್ನು ಕರಾಚಿಯಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.
ಕೈಸರ್ ಫಾರೂಕ್ ಎಲ್ಇಟಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬ ಮತ್ತು 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ರೂವಾರಿ ಹಫೀಜ್ ಸಯೀದ್ನ ನಿಕಟ ಸಹವರ್ತಿ.
ಶನಿವಾರ ಸಮನಾಬಾದ್ ಪ್ರದೇಶದ ಧಾರ್ಮಿಕ ಸಂಸ್ಥೆಯೊಂದರ ಬಳಿ ನಡೆದ ಉದ್ದೇಶಿತ ದಾಳಿಯಲ್ಲಿ 30 ವರ್ಷದ ಖೈಸರ್ ಫಾರೂಕ್ಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಮಹಿಳಾ ಮೀಸಲಾತಿ ಮಸೂದೆ 2034ರವರೆಗೂ ಜಾರಿಯಾಗುವುದಿಲ್ಲ, ಬಿಜೆಪಿ ಜನರನ್ನು ದಾರಿ ತಪ್ಪಿಸುತ್ತಿದೆ: ಖರ್ಗೆ
ಬೆನ್ನಿಗೆ ಗುಂಡು ತಗುಲಿದ್ದ ಫಾರೂಕ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ. ಫಾರೂಕ್ ಹತ್ಯೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದಾಳಿಯಲ್ಲಿ 10 ವರ್ಷದ ಬಾಲಕನೂ ಗಾಯಗೊಂಡಿದ್ದಾನೆ.
ಈ ಉದ್ದೇಶಿತ ದಾಳಿಯ ಹಿಂದಿನ ಉದ್ದೇಶಗಳನ್ನು ಪತ್ತೆ ಹಚ್ಚಲು ಸ್ಥಳೀಯ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ಘಟನೆಯು ಲಷ್ಕರ್-ಎ-ತೊಯ್ಬಾ ತಂಡಕ್ಕೆ ದೊಡ್ಡ ಆಘಾತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಅಸ್ಥಿರ ಪರಿಸ್ಥಿತಿಗಳ ನಡುವೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ಪಾಕಿಸ್ತಾನದ ಭದ್ರತಾ ಪಡೆಗಳು ಹೆಚ್ಚಿನ ಕಟ್ಟೆಚ್ಚರವನ್ನು ವಹಿಸಿವೆ.