ಗಾಝಾವನ್ನು ಇಸ್ರೇಲ್ ಮತ್ತೊಮ್ಮೆ ವಶಪಡಿಸಿಕೊಳ್ಳುವ ತೀರ್ಮಾನ ದೊಡ್ಡ ತಪ್ಪು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಸಿಬಿಎಸ್ ನ್ಯೂಸ್‌ನ ’60 ಮಿನಿಟ್ಸ್’ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಅಧ್ಯಕ್ಷ ಈ ಮಾತನ್ನು ಹೇಳಿದ್ದಾರೆ.
ಭಾನುವಾರದ ನೀಡಿರುವ ಸಂದರ್ಶನದ ಸುಮಾರು 14 ನಿಮಿಷಗಳ ವಿಡಿಯೋವನ್ನು ಪ್ರಕಟಿಸಿರುವ ಸಿಬಿಎಸ್ ನ್ಯೂಸ್, ‘ಕಳೆದ ವಾರ ಹಮಸ್ ದಾಳಿಯ ನಂತರ ಇಸ್ರೇಲ್ ಪ್ರತಿಕ್ರಿಯಿಸಬೇಕಿತ್ತು. ಪ್ರತಿಕ್ರಿಯಿಸಿದೆ’ ಎಂದು ಬೈಡನ್ ತಿಳಿಸಿದ್ದಾರೆ.
ಗಾಝಾದ ಸಂಪೂರ್ಣ ಮುತ್ತಿಗೆಯನ್ನು ಒಪ್ಪುತ್ತೀರಾ ಎಂದು ಸಂದರ್ಶನಕಾರ ಕೇಳಿದಾಗ ಬೈಡನ್ ಅವರು, ‘ಗಾಝಾವನ್ನು ಪುನಃ ಇಸ್ರೇಲ್ ವಶಪಡಿಸಿಕೊಳ್ಳುವ ತೀರ್ಮಾನ ದೊಡ್ಡ ತಪ್ಪು. ಇಸ್ರೇಲ್ ಯುದ್ಧದ ನಿಯಮಗಳೊಳಗೆ ಕಾರ್ಯನಿರ್ವಹಿಸುತ್ತದೆ ಮತ್ತು ಗಾಜಾದಲ್ಲಿನ ಮುಗ್ಧರಿಗೆ ಔಷಧಿ, ಆಹಾರ, ನೀರು ಮತ್ತು ಔಷಧವನ್ನು ಪಡೆಯಲು ಸಾಧ್ಯವಾಗುವ ಸಾಮರ್ಥ್ಯವಿದೆ ಎಂದು ನಾನು ವಿಶ್ವಾಸ ಹೊಂದಿದ್ದೇನೆ’ ಎಂದು ಹೇಳಿದರು.
ಇದೇ ವೇಳೆ ಹಮಸ್ ನಡೆಸಿರುವ ದಾಳಿಯನ್ನು ಬೈಡನ್ ಹತ್ಯಾಕಾಂಡಕ್ಕೆ ಹೋಲಿಸಿದ್ದಾರೆ. ನನ್ನ ದೃಷ್ಟಿಯಲ್ಲಿ ಹಮಸ್ ಮತ್ತು ಹಮಸ್‌ನ ತೀವ್ರ ಅಂಶಗಳು ಎಲ್ಲ ಪ್ಯಾಲೆಸ್ತೀನ್ ಜನರನ್ನು ಪ್ರತಿನಿಧಿಸುವುದಿಲ್ಲ. ಆದರೆ ಜನರನ್ನು ಮಾನವ ಗುರಾಣಿಯನ್ನಾಗಿ ಬಳಸಿ, ಗುಪ್ತ ಸ್ಥಳಗಳಿಂದ ದಾಳಿ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ತಿಳಿಸಿದ್ದಾರೆ.
ಹಮಸ್ ನಡೆಸಿದ ದಾಳಿಯಲ್ಲಿ ಇರಾನ್ ಸಂಬಂಧಿಸಿರುವ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಆದರೂ ಅಮೆರಿಕದ ಗುಪ್ತಚರ ಇಲಾಖೆ ಇದರ ಬಗ್ಗೆಯೂ ಕಣ್ಣಿಟ್ಟಿದೆ ಎಂದು ಅಧ್ಯಕ್ಷ ಬೈಡನ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್ ಗಾಝಾದ ಭೂಪ್ರದೇಶವನ್ನು ದೀರ್ಘಾವಧಿಯವರೆಗೆ ನಿಯಂತ್ರಿಸುತ್ತದೆ ಎಂದು ನಾನು ನಂಬುವುದಿಲ್ಲ. ಬದಲಿಗೆ ಆ ಪ್ರದೇಶವನ್ನು ಪ್ಯಾಲೆಸ್ತೀನಿಯರೇ ತಮ್ಮ ಅಧಿಕಾರದಿಂದ ನಿಯಂತ್ರಿಸಬೇಕು ಎಂದು ಹೇಳಿದರು.