- ಸಿದ್ದರಾಮಯ್ಯನವರ ವರ್ಚಸ್ಸು ಕಡಿಮೆ ಮಾಡಲು ಪಕ್ಷಾಂತರದ ಹೊಸ ಗೇಮ್
- ‘ಸಿದ್ದರಾಮಯ್ಯರವರನ್ನು ಕೆಳಗೆ ಇಳಿಸುವುದಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ’
ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ನಲ್ಲಿ ಹೆಚ್ಚಿನ ಶಾಸಕರ ಬೆಂಬಲವಿದೆ. ಆದರೆ, ಡಿಕೆ ಶಿವಕುಮಾರ್ಗೆ ಶಾಸಕರ ಬೆಂಬಲವಿಲ್ಲ. ಹೀಗಾಗಿ ಸಿದ್ದರಾಮಯ್ಯನವರ ವರ್ಚಸ್ಸು ಕಡಿಮೆ ಮಾಡಲು ಪಕ್ಷಾಂತರದ ಹೊಸ ಗೇಮ್ ಆಡುತ್ತಿದ್ದಾರೆ. ಇದು ಸಿಎಂ ಪಟ್ಟವೇರಲು ಡಿಕೆ ಶಿವಕುಮಾರ್ ಮಾಡಿರುವ ತಂತ್ರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.
ವಿಜಯಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿ ರಾಜ್ಯದ ಸೂಪರ್ ಸಿಎಂ ಆಗಲು ತೆರೆಮರೆಯಲ್ಲಿ ಡಿಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ” ಎಂದು ದೂರಿದರು.
“ದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರು ಯಾರ್‍ಯಾರ ಮನೆಗೆ ತೆರಳಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯಿದೆ. ಸಿದ್ದರಾಮಯ್ಯರವರನ್ನು ಕೆಳಗೆ ಇಳಿಸುವುದಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಸೂಕ್ತ ಸಮಯದಲ್ಲಿ ಎಲ್ಲ ಮಾಹಿತಿ ಬಿಡುಗಡೆ ಮಾಡುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಯೋಜನೆಗೆ ಚಾಲನೆ ನೀಡಿದ ಸಚಿವರು
ಸಿದ್ದರಾಮಯ್ಯ ವಿರುದ್ಧ ಇರುವ ಶಾಸಕರನ್ನು ಪಕ್ಷಕ್ಕೆ ವಾಪಸ್ ಕರೆಸಿ ತಮ್ಮ ಶಾಸಕಾಂಗ ಬೆಂಬಲವನ್ನು ಹೆಚ್ಚಿಸಿಕೊಳ್ಳುವ ಗುರಿ ಹೊಂದಿದ್ದಾರೆ. ಈ ಬೆಳವಣಿಗೆಯ ಕುರಿತು ಸಿದ್ದರಾಮಯ್ಯರವರಿಗೆ ನೋವಿದೆ. ಆದರೆ ಯಾವುದೇ ಕಾರಣಕ್ಕೂ ಅವರು ಸಿಎಂ ಹುದ್ದೆಯನ್ನು ಬಿಟ್ಟುಕೊಡುವುದಿಲ್ಲ. 5 ವರ್ಷದ ಸರ್ಕಾರವಾಗಲಿ 5 ತಿಂಗಳ ಸರ್ಕಾರವಾಗಲಿ ಸಿದ್ದರಾಮಯ್ಯರವರೇ ಕೊನೆಯ ಮುಖ್ಯಮಂತ್ರಿಯಾಗಿರುತ್ತಾರೆ” ಎಂದು ಭವಿಷ್ಯ ನುಡಿದರು.
“ರಾಜ್ಯದ ಮುಖ್ಯಮಂತ್ರಿಗಳಿಗೆ ಮಾತ್ರ ಎಲ್ಲ ಇಲಾಖೆಗಳ ಸಭೆ ಕರೆಯಲು ಅವಕಾಶವಿದೆ. ಉಪಮುಖ್ಯಮಂತ್ರಿಗೆ ಆ ಅಧಿಕಾರ ಇಲ್ಲ. ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಸುಮ್ಮನೆ ಕುಳಿತಿದ್ದಾರಷ್ಟೇ, ಅವರದ್ದೇನು ನಡೆಯುತ್ತಿಲ್ಲ” ಎಂದರು.