ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಜೆಪಿ ಶಿಸ್ತುಸಮಿತಿ ಎರಡನೇ ಬಾರಿಗೆ ಶೋಕಾಸ್ ನೋಟಿಸ್ ನೀಡಿದೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಹೇಳಿದ್ದೀರಿ, ಆದರೆ ಸಮಜಾಯಿಷಿ ನೀಡಿದ ರೀತಿಯಲ್ಲಿ ನೀವು ನಡೆದುಕೊಂಡಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರೀಯ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಶೋಕಾಸ್ ನೋಟಿಸ್ ನೀಡಿದ್ದಾರೆ. ತಮ್ಮ ಭರವಸೆ ತಾವೇ ಮುರಿದು ಮತ್ತೆ ಪದೇ ಪದೇ ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ಕೊಡುತ್ತಿದ್ದ ಯತ್ನಾಳ್‌ಗೆ ಇಂದು ಎರಡನೇ ಶೋಕಾಸ್ ನೋಟಿಸ್ ಕೊಟ್ಟು ಮತ್ತೆ ಸ್ಪಷ್ಟನೆ ನೀಡುವಂತೆ ತಿಳಿಸಿದ್ದಾರೆ.
ಈ ಹಿಂದೆ ನೀಡಲಾಗಿದ್ದ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿದ್ದೀರಿ. ಮುಂದಿನ ದಿನಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಹೇಳಿದ್ದೀರಿ. ಆದರೆ ಸಮಜಾಯಿಷಿ ನೀಡಿದ ರೀತಿಯಲ್ಲಿ ನೀವು ನಡೆದುಕೊಂಡಿಲ್ಲ. ಪಕ್ಷ ವಿರೋಧ ಚಟುವಟಿಕೆಗಳನ್ನು ಮುಂದುವರಿಸಿದ್ದೀರಿ. ಹೀಗಾಗಿ ಈ ಬಗ್ಗೆ 72 ಗಂಟೆಗಳಲ್ಲಿ ಸ್ಪಷ್ಟನೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಪಾರದರ್ಶಕತೆ ನಗೆಪಾಟಲಿಗೀಡಾಯಿತೇ?
ಇದಕ್ಕೂ ಮುನ್ನ ಕಳೆದ ವರ್ಷದ ಡಿಸೆಂಬರ್ 02 ರಂದು ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ಮೊದಲ ಶೋಕಾಸ್ ನೋಟಿಸ್ ನೀಡಿತ್ತು. ಆಗ ಯತ್ನಾಳ್ ಬಹಿರಂಗ ಹೇಳಿಕೆ ಕೊಡುವುದಿಲ್ಲ ಎಂದು ಭರವಸೆ ನೀಡಿ, ಶೋಕಾಸ್ ನೋಟಿಸ್‌ಗೆ ಉತ್ತರಿಸಿದ್ದರು.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಯತ್ನಾಳ್ ಸಿಡಿದೆದ್ದಿದ್ದು, ಬಹಿರಂಗವಾಗಿಯೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿಯೂ ಯತ್ನಾಳ್‌ಗೆ ಶಿಸ್ತುಪಾಲನಾ ಸಮಿತಿ ಮೊದಲ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಆದರೆ ನೋಟಿಸ್‌ಗೆ ಯತ್ನಾಳ್ ಉತ್ತರ ನೀಡದೆ ಖುದ್ದು ಶಿಸ್ತು ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡಿದ್ದರು.
