ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಣೆಗೆ ಅನುಮತಿ ನೀಡದೆ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಗಳೂರಿನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಧರಣಿ ಮುಂದುವರಿಸಿದ್ದಾರೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನಲ್ಲಿರುವ ಬಸನಗೌಡ ಪಾಟೀಲ್ ಯತ್ನಾಳ್ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದನೆಗೆ ಸಂಬಂಧಪಟ್ಟ ಪರವಾನಗಿ ನವೀಕರಣವಾಗಿಲ್ಲ ಎಂಬ ಕಾರಣಕ್ಕಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಖಾನೆಗೆ ಬೀಗ ಹಾಕಿತ್ತು. ಇದನ್ನು ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ದರು.
ಆ.21 ರಂದು ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆದು ಸಹಮತಿಯ ಮೇರೆಗೆ ಕಾರ್ಯಾಚರಣೆ ಪದ್ಧತಿಯಲ್ಲಿ ಕಾರ್ಖಾನೆ ಪುನರಾರಂಭಕ್ಕೆ ಅವಕಾಶ ಮಾಡಿಕೊಡುವಂತೆ ಆದೇಶಿಸಲಾಗಿದೆ. ಆದರೆ ನ್ಯಾಯಾಲಯದ ತೀರ್ಪಿನ ಪ್ರತಿ ತಮ ಕೈ ಸೇರಿಲ್ಲ ಎಂದು ನೆಪವೊಡ್ಡಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿ ಪ್ರತಿಭಟಿಸುತ್ತಿದ್ದಾರೆ.
ವಿರೋಧಪಕ್ಷದ ನಾಯಕ ಆರ್.ಅಶೋಕ್, ಸಂಸದ ಬಸವರಾಜ ಬೊಮ್ಮಾಯಿ, ಪರಿಷತ್ ಸದಸ್ಯ ಸಿ ಟಿ ರವಿ, ಶಾಸಕರಾದ ಅಶ್ವತ್ಥನಾರಾಯಣ, ಅರವಿಂದ ಬೆಲ್ಲದ ಸೇರಿದಂತೆ ಇನ್ನಿತರ ನಾಯರು ಯತ್ನಾಳ್ ಧರಣಿಗೆ ಸಾಥ್ ನೀಡಿದರು.
“ದ್ವೇಷದ ರಾಜಕಾರಣಕ್ಕಾಗಿ ಯತ್ನಾಳ್ ಅವರಿಗೆತೊಂದರೆ ನೀಡಲಾಗುತ್ತಿದೆ. ಶೀಘ್ರವೇ ಹೈಕೋರ್ಟ್ ಆದೇಶವನ್ನು ಮಾನ್ಯ ಮಾಡದೇ ಇದ್ದರೆ ಸರ್ಕಾರದ ವಿರುದ್ಧ ನಮ ಪಕ್ಷದ ಎಲ್ಲ ಶಾಸಕರು, ಜನಪ್ರತಿನಿಧಿಗಳು ಒಟ್ಟಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದೇವೆ. ನಾಡಿದ್ದು ರೈತರೊಡಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಆರ್ ಅಶೋಕ್ ಎಚ್ಚರಿಸಿದರು.
“ಹಲವು ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ಕೊಟ್ಟು, ಇವರಿಗೆ ತಾರತಮ್ಯ ಮಾಡಲಾಗುತ್ತಿದೆ. ಪಿಸಿಬಿ ಕಾನೂನು ಉಲ್ಲಂಘಿಸಿದ ಕಾರ್ಖಾನೆಗಳಿಗೆ ಅನುಮತಿ ಕೊಟ್ಟಿದೆ. ನಾವು ಇದನ್ನು ಇಲ್ಲಿಗೇ ಬಿಡುವುದಿಲ್ಲ, ಹೋರಾಟ ಮಾಡುತ್ತೇವೆ. ಈ ಕಾರ್ಖಾನೆ ನಂಬಿ ಸಾವಿರಾರು ರೈತರು ಇದ್ದಾರೆ. ಈ ಸಲ ಆ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆದಿದ್ದಾರೆ, ಈ ಕಾರ್ಖಾನೆ ತೆರೆಯಬೇಕಿದೆ. ಸರ್ಕಾರ ಒಂದು ಕಡೆ ಉತ್ತರ ಕರ್ನಾಟಕದ ಕಡೆಗೆ ಕೈಗಾರಿಕೆಗಳು ಬರಬೇಕು ಅಂತ ಹೇಳುತ್ತದೆ. ಆದರೆ, ಇನ್ನೊಂದು ಕಡೆ ಈ ರೀತಿಯ ರಾಜಕೀಯ ಮಾಡುತ್ತಿದೆ” ಎಂದು ಬೊಮ್ಮಾಯಿ ಆರೋಪಿಸಿದರು.