ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಜಯಪುರದ ಮುಸ್ಲಿಂ ಧಾರ್ಮಿಕ ಮುಖಂಡ ಸೈಯ್ಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ ವಿರುದ್ಧ ಮಾಡಿದ ಭಾರೀ ಆರೋಪವೊಂದರ ಬೆನ್ನು ಹತ್ತಿ ಈ ದಿನ.ಕಾಮ್ ಫ್ಯಾಕ್ಟ್ ಚೆಕ್ ಮಾಡಿದೆ. ಆದರೆ, ಕೆಲವೇ ಗಂಟೆಗಳಲ್ಲಿ ಆ ಆರೋಪ ಸುಳ್ಳೆಂಬುದಕ್ಕೆ ಈ ದಿನ.ಕಾಮ್ ಗೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕವು. ಅಷ್ಟೇ ಅಲ್ಲದೇ ಯತ್ನಾಳ್ ಅವರು ಇಂತಹ ಆರೋಪ ಮಾಡಿದ್ದೇಕೆ ಎಂಬುದನ್ನೂ ಪತ್ತೆ ಹಚ್ಚಲು ನಾವು ಪ್ರಯತ್ನಿಸಿದೆವು.
ಬೆಳಗಾವಿ ಅಧಿವೇಶನಕ್ಕೆ ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೋಮವಾರ(ಡಿ.4) ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಭಾಗಿಯಾಗಿದ್ದರು. ಆ ಸಮಾವೇಶದ ಫೋಟೋವೊಂದನ್ನು ಇಟ್ಟುಕೊಂಡು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ‘ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
ಮುಖ್ಯಮಂತ್ರಿ @siddaramaiah ಅವರು ಹುಬ್ಬಳ್ಳಿಯ ಹಜರತ್ ಬಾದ್ ಶಾ ಪೀರಾನ್ ದರ್ಗಾದ ಆವರಣದಲ್ಲಿ ನಡೆದ ಬೃಹತ್ ಔಲಾದೇ ಗೌಸೆ ಅಜಮ್ (ಮೆಹಬೂಬೇ ಸುಭಾನೇ ಮಕ್ಕಳ ಸಮಾವೇಶ) ಉದ್ಘಾಟಿಸಿದರು.
ಅಲ್ಹಜ್ ಸಯ್ಯದ್ ತಾಜುದ್ದೀನ್ ಖಾದ್ರಿ ಅಲ್ ಜಿಲಾನಿ, ಗುಲ್ಬರ್ಗಾ ಷರೀಫ್ ನ ಹಜರತ್ ಕ್ವಾಜಾ ಬಂದನವಾಜ್ ದರ್ಗಾದ ಖುಸ್ರೂ ಹುಸೇನ್ ಸಾಬ್ ಖಿಲಾಬಿ ಅವರ ದಿವ್ಯ… pic.twitter.com/PjBcK7t235
— CM of Karnataka (@CMofKarnataka) December 4, 2023
ಅವರ ಆರೋಪ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಗೋದಿ ಮಾಧ್ಯಮಗಳು ಪೂರ್ವಾಪರವನ್ನು ಪರಿಶೀಲಿಸದೆಯೇ ಯತ್ನಾಳ್ ಆರೋಪವನ್ನೇ ದಾಳವಾಗಿಟ್ಟುಕೊಂಡು ಸುದ್ದಿ ಮಾಡುತ್ತಲೇ ಇರುವುದನ್ನು ನಾವು ಗಮನಿಸಿದೆವು. ಹಾಗಾಗಿ ಯತ್ನಾಳ್ ಆರೋಪವನ್ನು ಪರಿಶೀಲಿಸಲು ಈ ದಿನ.ಕಾಮ್ ಯತ್ನಿಸಿತು. ಅಷ್ಟೇ ಅಲ್ಲದೇ, ಕೆಲವು ಮುಸ್ಲಿಂ ಮುಖಂಡರನ್ನು ಕೂಡ ಮಾತನಾಡಿಸಿತು.
ಯತ್ನಾಳ್ ಆರೋಪ ಏನು:
ಮಂಗಳವಾರದ ಕಾರ್ಯಕ್ರಮದ ಚಿತ್ರ ಮತ್ತು ಕೆಲವು ಹಳೆಯ ಚಿತ್ರಗಳನ್ನು ಹಂಚಿಕೊಂಡಿರುವ ಯತ್ನಾಳ್, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಹುಬ್ಬಳ್ಳಿಯಲ್ಲಿ ಐಸಿಸ್ ಬೆಂಬಲಿಗರು ಮತ್ತು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವ ತನ್ವೀರ್ ಹಾಶ್ಮಿ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ. ತನ್ವೀರ್ ಅವರು ಮಧ್ಯಪ್ರಾಚ್ಯದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಹಲವು ಬಾರಿ ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಈ ಭಯೋತ್ಪಾದಕ ಸಹಾನುಭೂತಿಯ ಹಿನ್ನೆಲೆ ತಿಳಿದಿದೆಯೇ? ಭಯೋತ್ಪಾದಕರೊಂದಿಗೆ ತನ್ವೀರ್ ಅವರ ನಂಟಿನ ಬಗ್ಗೆ ತನಿಖೆ ನಡೆಸಲು ಗುಪ್ತಚರ ಸಂಸ್ಥೆಗಳು ಮತ್ತು ಎನ್‌ಐಎಯನ್ನು ಒತ್ತಾಯಿಸುತ್ತೇನೆ” ಅಂತ ಹೇಳಿದ್ದಾರೆ. ಅಲ್ಲದೇ, ಕೇಂದ್ರ ಗೃಹ ಸಚಿವ ಅವರಿಗೂ ಪತ್ರ ಬರೆದಿದ್ದಾರೆ. ಅಲ್ಲದೇ, ಎನ್‌ಐಎಯ ಅಧಿಕೃತ ‘ಎಕ್ಸ್’ ಖಾತೆಗೂ ಟ್ಯಾಗ್ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್:
ಯತ್ನಾಳ್ ಅವರು ಹಂಚಿಕೊಂಡಿರುವ ಈ ಚಿತ್ರ ಯಾವುದು ಗೊತ್ತೇ? ಅದು ಸ್ವತಃ ಇದೇ ತನ್ವೀರ್ ಹಾಶ್ಮಿ ಅವರ ಸಹಚರರೇ 2013ರ ಫೆಬ್ರವರಿ 10ರಂದು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿರುವ ಚಿತ್ರ. ಅವರು ಭೇಟಿ ಮಾಡುತ್ತಿರುವುದು ಯಾವ ಭಯೋತ್ಪಾದಕರನ್ನೂ ಅಲ್ಲ, ಬದಲಿಗೆ ಬಾಗ್ದಾದಿನ ಪ್ರಿನ್ಸ್ ಶೇಖ್ ಖಾಲಿದ್ ಅವರನ್ನು. ಆ ಎಲ್ಲ ವಿವರಗಳು ಅದೇ ಫೇಸ್‌ಬುಕ್ ಪೋಸ್ಟಿನಲ್ಲಿ ಇದೆ. ಸುನ್ನಿ ಜಮಾತ್‌ನ ಮುಖಂಡರಾಗಿರುವ ತನ್ವೀರ್ ಹಾಶ್ಮಿ ಅವರು ಸೂಫಿ ಪಂಗಡಕ್ಕೆ ಸೇರಿದವರು. ಈ ಬಾಗ್ದಾದಿನ ಮುಖಂಡರೂ ಅದೇ ಪಂಗಡಕ್ಕೆ ಸೇರಿದವರಾಗಿದ್ದಾರೆ.
ಇದಲ್ಲದೇ, ಇನ್ನೂ ಒಂದು ಫೋಟೋವನ್ನು ಯತ್ನಾಳ್ ಅವರು ಹಂಚಿಕೊಂಡಿದ್ದು, ಆ ಫೋಟೋದಲ್ಲಿ ಇರುವವರು ಸಜ್ಜಾದೇ ನಶೀನ್ ಹಜ್ರತ್ ಗೌಸ್ ಆಜಂ ಅವರು. ಸಜ್ಜಾದೇ ನಶೀನ್ ಅವರು ಇರಾಕ್ ಸರ್ಕಾರದ ಸೆಕ್ಯೂರಿಟಿ ಆಫೀಸರ್ ಆಗಿದ್ದಾರೆ. ಈ ಫೋಟೋ ತನ್ವೀರ್ ಅವರದ್ದೇ ಆದ ‘ಅಲ್ ಹಶ್ಮಿ ಟ್ರಸ್ಟ್ ನ ಆರ್‌ಒ ವಿಐಪಿ/ವಿಸಿಟರ್ಸ್‘ ವೆಬ್‌ಸೈಟ್‌ನಲ್ಲಿಯೇ ಪ್ರಕಟವಾಗಿದೆ.
ಅಂದರೆ, ಸ್ವತಃ ತನ್ವೀರ್ ಹಾಶ್ಮಿ ಅವರ ಫೇಸ್ ಬುಕ್ ಖಾತೆಯಿಂದ ಹಾಗೂ ವೆಬ್ ಸೈಟ್ ನಿಂದ ತೆಗೆದ 10 ವರ್ಷಗಳ ಹಿಂದಿನ ಫೋಟೋಗಳನ್ನೇ ಯತ್ನಾಳ್, ಭಯೋತ್ಪಾದಕರ ಜೊತೆಗಿನ ಚಿತ್ರ ಎಂಬಂತೆ ಬಿಂಬಿಸಿದ್ದಾರೆ.
ಯತ್ನಾಳ್ ಆರೋಪ ತಳ್ಳಿ ಹಾಕಿದ ಇಸ್ಲಾಂ ಧರ್ಮ ಗುರುಗಳು:
ಯತ್ನಾಳ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್ ಹಲವಾರು ಇಸ್ಲಾಂ ಮುಖಂಡರನ್ನ ಮಾತನಾಡಿಸಿದೆ. ಅವರೆಲ್ಲರೂ ಆರೋಪವನ್ನ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ವೈಯಕ್ತಿಕ ದ್ವೇಷದ ಕಾರಣದಿಂದಾಗಿ ಯತ್ನಾಳ್ ಅವರು ತನ್ವೀರ್ ಹಾಶ್ಮಿ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ವಿಜಯಪುರದಲ್ಲಿ ಸಾಮಾಜಿಕವಾಗಿ ತನ್ವೀರ್ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ, ಅವರ ವಿರುದ್ಧ ಯತ್ನಾಳ್ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡರು ಹೇಳಿದ್ದಾರೆ.
ಈ ದಿನ.ಕಾಮ್ ಜೊತೆ ಮಾತನಾಡಿದ ಮುಸ್ಲಿಂ ಮುಖಂಡ, ಗುಮ್ಮಟ ನಗರಿ ಪತ್ರಿಕೆಯ ಸಂಸ್ಥಾಪಕ ಇರ್ಫಾನ್ ಶೇಖ್, “ತನ್ವೀರ್ ಅವರು ಇರಾಕ್‌ನ ಬಾಗ್ದಾದ್ ಪ್ರವಾಸಕ್ಕೆ ಹೋಗಿದ್ದರು. ಬಾಗ್ದಾದ್‌ನಲ್ಲಿರುವ ಇಸ್ಲಾಂ ಧರ್ಮಗುರುಗಳನ್ನು ಮೆಹಬೂಬ್ ಸುಬಾನಿ ಎಂದು ಕರೆಯುತ್ತಾರೆ. ಅವರನ್ನು ತನ್ವೀರ್ ಅವರು ಭೇಟಿ ಮಾಡಿದ್ದಾರೆ. ಅಲ್ಲದೆ, ಪೈಗಂಬರ್ ಮುಹಮ್ಮದ್ ಅವರ ಮೊಮ್ಮಕ್ಕಳಾದ ಹಸನ್ ಹುಸೇನ್ ಕುಟುಂಬದ ಸದಸ್ಯರು ಹಾಗೂ ಮುಸ್ಲಿಂ ಧಾರ್ಮಿಕರ ಮುಖಂಡರನ್ನು ತನ್ವೀರ್ ಅವರು ಭೇಟಿ ಮಾಡಿದ್ದರು.

“ಅಲ್ಲದೆ, ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅಂತಾರಾಷ್ಟ್ರೀಯ ಮಟ್ಟದ ಹಲವಾರು ಕಾರ್ಯಕ್ರಮಗಳಲ್ಲಿ ತನ್ವೀರ್ ಅವರು ಭಾಗಿಯಾಗಿದ್ದಾರೆ. ಆ ಸಂದರ್ಭದ ಕೆಲವು ಫೋಟೋಗಳನ್ನು ತನ್ವೀರ್ ಮತ್ತು ಅವರ ಸಹಚರರೇ ಹಂಚಿಕೊಂಡಿದ್ದಾರೆ. ಆ ಫೋಟೋಗಳನ್ನು ಸರಿಯಾಗಿ ಕಾಣದ ರೀತಿಯಲ್ಲಿ ತಿರುಚಿ, ಭಯೋತ್ಪಾದಕರ ಜೊತೆಗಿನ ಫೋಟೋಗಳೆಂದು ಯತ್ನಾಳ್ ಅವರು ಸುಳ್ಳು ಆರೋಪ ಮಾಡಿದ್ದಾರೆ. ಮುಸ್ಲಿಂ ಮೌಲ್ವಿ ಎಂಬ ಕಾರಣಕ್ಕೆ ತನ್ವೀರ್ ಅವರ ವಿರುದ್ಧ ಕುತಂತ್ರದಿಂದ ವಿವಾದ ಹುಟ್ಟು ಹಾಕಿದ್ದಾರೆ” ಎಂದು ವಿವರಿಸಿದ್ದಾರೆ.
“ತನ್ವೀರ್ ಅವರು ವಿಜಯಪುರದಲ್ಲಿ ಬಿಜೆಪಿ ಮತ್ತು ಯತ್ನಾಳ್ ಅವರನ್ನು ಸೋಲಿಸಲು ಯತ್ನಿಸಿದ್ದಾರೆ. ಮುಸ್ಲಿಂ ಜನರಲ್ಲಿ ಜಾಗೃತಿ ಮೂಡಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಜೊತೆಗೆ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ತಮ್ಮನ್ನು ಸೋಲಿಸಲು ಯತ್ನಿಸಿದ್ದರು ಎಂಬ ಕಾರಣಕ್ಕೆ ಯತ್ನಾಳ್ ಇಂತಹ ಆರೋಪ ಮಾಡಿದ್ದಾರೆ” ಎಂದು ಇರ್ಫಾನ್ ಶೇಖ್ ತಿಳಿಸಿದ್ದಾರೆ.

ಅಲ್ಲದೆ, ನಾವು ತನ್ವೀರ್ ಅವರ ಸಂಘಟನೆ, ‘ಸುನ್ನಿ ಮುಸ್ಲಿಂ ಜಮಾತ್’ನ ಮುಖಂಡ, ಶಾಫಿ ಸಅದಿ ಅವರನ್ನೂ ಮಾತಾಡಿಸಿದೆವು. ಈ ಶಾಫಿ ಸಅದಿ ಅವರು ಬಿಜೆಪಿ ಅಧಿಕಾರಾವಧಿಯಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದವರು. ಅವರು ಕೂಡ ಯತ್ನಾಳ್ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.
“ನೈಜ ಮುಸಲ್ಮಾನ ಭಯೋತ್ಪಾದಕರಿಗೆ ಸಿಂಪತಿ ನೀಡಲು ಸಾಧ್ಯವೇ ಇಲ್ಲ. ತನ್ವೀರ್ ಅವರು ಮುಸ್ಲಿಂ ವಿದ್ವಾಂಸರು. ಅವರು ಉಗ್ರವಾದ ಮತ್ತು ಹಿಂಸೆಯ ವಿರುದ್ಧ ಮಾತನಾಡುವವರು. ಅವರು ವಿರುದ್ಧ ಐಸಿಸ್ ನಂಟಿಂದೆ ಎನ್ನುತ್ತಿರುವ ಯತ್ನಾಳ್ ಅವರ ಆರೋಪ ವೈಯಕ್ತಿಕ ದ್ವೇಷದ್ದು. ಯತ್ನಾಳ್ ಅವರು ವಿಜಯಪುರದಲ್ಲಿ ಮುಸ್ಲಿಂ ವಿರೋಧಿ ಹೇಳಿಕೆ ನೀಡುತ್ತಿರುತ್ತಾರೆ. ಅವರ ವಿರುದ್ಧ ತನ್ವೀರ್ ಅವರು ಹೋರಾಟ ಮಾಡಿದ್ದಾರೆ. ಆ ದ್ವೇಷದಿಂದಾಗಿ ತನ್ವೀರ್ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಯತ್ನಾಳ್ ಮಾಡಿದ್ದಾರೆ” ಎಂದು ಶಾಫಿ ಸಅದಿ ತಿಳಿಸಿದ್ದಾರೆ.

“ತನ್ವೀರ್ ಅವರು ಮೆಕ್ಕಾ, ಮದೀನಾ ಉಮ್ರಾಗೆ ಹೋಗುತ್ತಿರುತ್ತಾರೆ. ಅಂದಹಾಗೆ, ಸೌದಿ ಅರೇಬಿಯಾ ಸೇರಿದಂತೆ ಮುಸ್ಲಿಂ ರಾಷ್ಟ್ರಗಳು ಐಸಿಸ್ ಅನ್ನು ಬ್ಯಾನ್ ಮಾಡಿವೆ. ಹೀಗಿರುವಾಗ ತನ್ವೀರ್ ಅವರು ಐಸಿಸ್ ಬೆಂಬಲಿಸಿದ್ದಾರೆ ಅನ್ನೋದು ಸುಳ್ಳು. ತನ್ವೀರ್ ಅವರು ಧಾರ್ಮಿಕ ಕಾರ್ಯಕ್ರಮಕ್ಕೆ ಹೋದಾಗ ಭೇಟಿ ಮಾಡಿದ್ದ ಧಾರ್ಮಿಕರ ಮುಖಂಡರೊಂದಿಗಿನ ಫೋಟೋಗಳನ್ನು ಹಂಚಿಕೊಂಡು ಸುಳ್ಳು ಆರೋಪ ಮಾಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ಇನ್ನು ಹುಬ್ಬಳ್ಳಿಯಲ್ಲಿ ಸಮಾವೇಶ ಆಯೋಜಿಸಿದ್ದ ಸೈಯದ್ ತಾಜುದ್ದೀನ್ ಖಾದ್ರಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ಸಮಾವೇಶಕ್ಕೆ 150ಕ್ಕೂ ಹೆಚ್ಚು ಸೂಫಿಗಳಿಗೆ ಆಹ್ವಾನ ನೀಡಲಾಗಿತ್ತು. 100ಕ್ಕೂ ಹೆಚ್ಚು ಧರ್ಮ ಗುರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಯಾರೊಬ್ಬರೂ ಐಸಿಸ್ ಉಗ್ರರ ಜತೆ ನಂಟು ಹೊಂದಿದ್ದವರು ಇಲ್ಲ. ಪೊಲೀಸ್ ಇಲಾಖೆ ಸೂಚನೆ ಮೇರೆಗೆ ವೇದಿಕೆಯ ಮೇಲೆ 25 ಜನರಿಗೆ ಅವಕಾಶ ನೀಡಲಾಗಿತ್ತು. ಯಾರೆಲ್ಲಾ ಭಾಗವಹಿಸಲಿದ್ದಾರೆಂಬ ಎಲ್ಲ ಮಾಹಿತಿಯನ್ನು ಪೊಲೀಸ್ ಇಲಾಖೆ ಮತ್ತು ಧಾರವಾಡ ಜಿಲ್ಲಾಡಳಿತಕ್ಕೆ ನಾವು ನೀಡಿದ್ದೆವು. ಐಸಿಸ್ ಉಗ್ರರ ಜತೆ ಯಾರೆಲ್ಲಾ ನಂಟು ಹೊಂದಿದ್ದರು ಎಂಬುದನ್ನು ಯತ್ನಾಳ್ ತಿಳಿಸಲಿ. ಉಗ್ರರ ಜತೆಗಿನ ನಂಟು ಇದ್ದವರ ಹೆಸರನ್ನು ಬಹಿರಂಗಪಡಿಸಲಿ” ಎಂದು ಸವಾಲು ಹಾಕಿದ್ದಾರೆ.
ಅಂದಹಾಗೆ, ತನ್ವೀರ್ ಹಾಶ್ಮಿ ಅವರ ಕುರಿತಂತೆ ಇನ್ನಷ್ಟು ಮಾಹಿತಿಗಳನ್ನು ಈ ದಿನ.ಕಾಮ್ ಕಲೆಹಾಕಿತು. ಅದರ ಪ್ರಕಾರ ಅವರು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ಸಿಎಎ, ಎನ್‌ಆರ್‌ಸಿ ವಿರುದ್ಧ ಹಲವಾರು ಹೋರಾಟಗಳನ್ನು ಸಂಘಟಿಸಿದ್ದರು.
ಮಹಾತ್ಮಾ ಗಾಂಧಿ ಅವರ ಮೊಮ್ಮಗ ರಾಜಮೋಹನ್ ಗಾಂಧಿ ಸೇರಿದಂತೆ ಲಕ್ಷಾಂತರ ಜನರು ಈ ಹೋರಾಟದಲ್ಲಿದ್ದರು. ಸ್ವತಃ ತನ್ವೀರ್ ಹಾಶ್ಮಿ ಅವರೂ ಮುಂಚೂಣಿಯಲ್ಲಿ ನಿಂತು ಈ ಹೋರಾಟಗಳನ್ನು ಮಾಡಿದ್ದರು. ಅಲ್ಲದೆ, ವಿಸ್‌ಡಂ ಇಂಡಿಯಾ ಸ್ಕೂಲ್ ಆಫ್ ಹಾಶಿಂ ಎಂಬ ಶಾಲೆಯನ್ನೂ ತೆರೆದು, ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ವಿಜಯಪುರದಲ್ಲಿ ಯತ್ನಾಳ್ ಅವರ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ತನ್ವೀರ್ ಅವರು ಖಂಡಿಸಿದ್ದರು.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಯತ್ನಾಳ್ ಅವರನ್ನು ಸೋಲಿಸಲು ಪ್ರಯತ್ನಿಸಿದ್ದರು. ಈ ಎಲ್ಲ ಕಾರಣಗಳಿಂದಾಗಿ ತನ್ವೀರ್ ಅವರ ವಿರುದ್ಧ ಯತ್ನಾಳ್ ಅವರು ವೈಯಕ್ತಿಕ ದ್ವೇಷದಿಂದ ಆರೋಪಗಳನ್ನು ಮಾಡಿರುವುದಲ್ಲದೇ, ಈಗ ಅದನ್ನು ಭಯೋತ್ಪಾದಕರು, ಮುಖ್ಯಮಂತ್ರಿ ಇತ್ಯಾದಿ ಅಂಶಗಳೊಂದಿಗೆ ತಳುಕು ಹಾಕಿರುವುದು ಎದ್ದು ಕಾಣುತ್ತಿದೆ.
ಇದಲ್ಲದೇ, ತಾನು ಇನ್ನೊಂದು ವಾರದಲ್ಲಿ ಇನ್ನೂ ಕೆಲವು ಸಾಕ್ಷ್ಯಗಳನ್ನು ಬಿಡುಗಡೆ ಮಾಡುತ್ತೇನೆಂದು ಯತ್ನಾಳ್ ಹೇಳಿದ್ದಾರೆ. ಇದುವರೆಗೆ ಅವರು ಹೊರಹಾಕಿದ ಸಾಕ್ಷ್ಯಗಳೆಲ್ಲಾ ಸುಳ್ಳಾಗಿದ್ದು, ಉಳಿದ ಸಾಕ್ಷಿಗಳು ಹೊರಬಂದರೆ ನೋಡಬೇಕು. ಆದರೆ ಸರ್ಕಾರವು ಈಗ ಯತ್ನಾಳ್ ಹೇಳಿಕೆಯ ಬಗ್ಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸಾಕ್ಷಿ ಒದಗಿಸಿದರೆ ದೇಶವನ್ನೇ ತೊರೆಯುವೆ: ಸೈಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ
ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿ ಮಾಧ್ಯಮಕ್ಕೆ ಹೇಳಿಕೆ ಬಿಡುಗಡೆ ಮಾಡಿರುವ ಸೈಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ, “ಒಂದು ವೇಳೆ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ಸಾಬೀತಾದರೆ ನಾನು ಈ ದೇಶವನ್ನೆ ತ್ಯಾಗ ಮಾಡಿ ಪಲಾಯನ ಮಾಡುತ್ತೇನೆ. ಸಾಬೀತು ಮಾಡುವಲ್ಲಿ ವಿಫಲವಾದರೆ, ಬಸನಗೌಡ ಪಾಟೀಲ ಯತ್ನಾಳ ಇವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಕಿಸ್ತಾನಕ್ಕೆ ಪಲಾಯನವಾಗಬೇಕು ಅಂತ ಸವಾಲೆಸೆಯುತ್ತೇನೆ. ಯತ್ನಾಳ್ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಇದರಲ್ಲಿ ಯಾವುದೇ ರೀತಿಯ ಸತ್ಯಾಂಶ ಇರುವುದಿಲ್ಲ” ಎಂದು ತಿಳಿಸಿದ್ದಾರೆ.