ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು ನಿನ್ನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಬಿಜೆಪಿ ಮುಖಂಡನೋರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಈ ಸಂಬಂಧ ನಿನ್ನೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ, “ಬಾಂಬ್ ಸ್ಫೋಟಕ್ಕೆ ನಮ್ಮ ಸರ್ಕಾರವೇ ಕಾರಣ ಅನ್ನೋವಂತೆ ಮಾತಾನಾಡುತ್ತಿದ್ದ ರಾಜ್ಯದ ಕೇಸರಿ ಕಲಿಗಳು ಈಗ ಏನು ಹೇಳುತ್ತಾರೆ? ಬಿಜೆಪಿ ಮುಖಂಡನನ್ನು ಎನ್‌ಐಎ ವಶಕ್ಕೆ ಪಡೆದಿದೆ ಎಂದ ಮೇಲೆ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಅರ್ಥ ಅಲ್ಲವೇ? ಧರ್ಮ ರಕ್ಷಣೆ ಹೆಸರಲ್ಲಿ ರಾಜ್ಯದಲ್ಲಿ ಬಿಜೆಪಿ ನಡೆಸುತ್ತೀರೋ ಕೇಸರಿ ಭಯೋತ್ಪಾದನೆ ಎಷ್ಟು ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ ಅನ್ನೋದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ? ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ದೇಶದ ಮೇಲೆ ಹೇರುತ್ತಿರುವ ಕೇಂದ್ರ ಬಿಜೆಪಿಯು ಇದಕ್ಕೇನು ಹೇಳುತ್ತದೆ? ಎಂದು ಪ್ರಶ್ನಿಸಿದ್ದರು.
ಈ ಬಗ್ಗೆ ವಿಜಯಪುರದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಕೆಲವರು ಮೊಬೈಲ್ ವ್ಯಾಪಾರಿಗಳಿರುತ್ತಾರೆ. ಅದೇ ರೀತಿ ಬಿಜೆಪಿ ಕಾರ್ಯಕರ್ತ ಕೂಡ ಮೊಬೈಲ್ ವ್ಯಾಪಾರಿ. ಅವರ ಬಳಿ ಯಾರು ಬಂದಿರುತ್ತಾರೋ ಇಲ್ಲವೋ ಎಂಬುದು ಗೊತ್ತಿರುವುದಿಲ್ಲ. ಆತ ತನಿಖೆಗೆ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾನೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ” ಎಂದು ಯತ್ನಾಳ್ ತಿಳಿಸಿದಾಗ, ಸಚಿವ ಗುಂಡೂರಾವ್ ಅವರು ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎಂದು ಪತ್ರಕರ್ತ ಕೇಳಿದ್ದಕ್ಕೆ, “ಗುಂಡೂರಾವ್ ಅವರ ಮನೆಯಲ್ಲಿ ಹೆಚ್ಚು ಕಡಿಮೆ ಅರ್ಧ ಪಾಕಿಸ್ತಾನ ಇದೆ. ಹಾಗಾಗಿ, ದೇಶದ ವಿರುದ್ಧ ಹೇಳಿಕೆ ಕೊಡುವುದು ದಿನೇಶ್ ಗುಂಡೂರಾವ್ ಅವರಿಗೆ ಚಟವಾಗಿದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ತಬು ಅವರು ಮುಸ್ಲಿಂ ಸಮುದಾಯದವರು. ಹೀಗಾಗಿಯೇ ಯತ್ನಾಳ್ ಅವರು ಅವರನ್ನು ಪರೋಕ್ಷವಾಗಿ ಪಾಕಿಸ್ತಾನದವರು ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
Yatnal’s comment that @dineshgrao house is half-Pakistani is downright cheap, derogatory and defamatory. I may be born a Muslim, but nobody can question my Indianness. Will @ECISVEEP , @PMOIndia and @JPNadda take action against this habitual offender? @DKShivakumar
— Tabu Rao (@TabbuRao) April 6, 2024
ಯತ್ನಾಳ್ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಗುಂಡೂರಾವ್ ಪತ್ನಿ, “ದಿನೇಶ್ ಗುಂಡೂರಾವ್ ಅವರ ಮನೆಯು ಅರ್ಧ ಪಾಕಿಸ್ತಾನ ಎಂದು ಬಿಜೆಪಿ ಶಾಸಕ ಯತ್ನಾಳ್ ನೀಡಿರುವ ಹೇಳಿಕೆಯು ಅಗ್ಗದ ಹೇಳಿಕೆ. ಅವಹೇಳನಕಾರಿ ಮತ್ತು ಮಾನಹಾನಿಕರ. ನಾನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿರಬಹುದು, ಆದರೆ ನನ್ನ ಭಾರತೀಯತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಈ ಬಗ್ಗೆ ಚುನಾವಣಾಧಿಕಾರಿ ಕ್ರಮ ಕೈಗೊಳ್ಳುತ್ತಾರೆಯೇ?” ಎಂದು ಪ್ರಶ್ನಿಸಿದ್ದು, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿ ಡಿ ಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿದ್ದಾರೆ.
