ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿದೆ. ಅವರ ಉಚ್ಚಾಟನೆ ಬೆನ್ನಲ್ಲೇ ಇನ್ನಿಬ್ಬರು ಬಿಜೆಪಿ ಶಾಸಕರಾದ ಎಸ್.ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನೂ ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಇಬ್ಬರೂ ಶಾಸಕರು ಕಾಂಗ್ರೆಸ್ ವಲಯದಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಿದ್ದು, ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ವೇದಿಕೆಯನ್ನೂ ಹಂಚಿಕೊಂಡಿದ್ದಾರೆ. ಪಕ್ಷದ ವಿರುದ್ಧ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಇಬ್ಬರೂ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ, ಇಬ್ಬರು ಕೂಡ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಬ್ಬರಿಗೂ ಬಿಜೆಪಿ ಶಿಸ್ತು ಕಮಿಟಿ ನೋಟಿಸ್ ನೀಡಿದ್ದು, 72 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.
ಈ ನಡುವೆ, ಯತ್ನಾಳ್ ಉಚ್ಚಾಟನೆ ಬಗ್ಗೆ ಮಾತನಾಡಿರುವ ಬಿಜೆಪಿ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ್, “ಯತ್ನಾಳ್ ವಿರುದ್ಧದ ಕ್ರಮವು ಎಲ್ಲರಿಗೂ ಎಚ್ಚರಿಕೆ ಗಂಟೆಯಾಗಿದೆ. ಶಾಸಕ ಎಸ್.ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ. ಅವರ ಹೇಳಿಕೆಯು ಈ ಇಬ್ಬರೂ ಶಾಸಕರನ್ನು ಬಿಜೆಪಿಯಿಂದ ಉಚ್ಚಾಟಿಸುವ ಸಾಧ್ಯತೆ ಕುರಿತಾದ ಚರ್ಚೆಗಳನ್ನು ಹುಟ್ಟುಹಾಕಿದೆ.
ಈ ವರದಿ ಓದಿದ್ದೀರಾ?: ನಟಿ ರನ್ಯಾ ಬಗ್ಗೆ ಅಶ್ಲೀಲ ಹೇಳಿಕೆ: ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಎಫ್‌ಐಆರ್
ಇತ್ತ, ಯತ್ನಾಳ್ ಉಚ್ಛಾಟನೆ ವಿರುದ್ಧ ಬಿಜೆಪಿಯೊಳಗೆ ಮತ್ತು ಪಂಚಮಸಾಲಿ ಸಮುದಾಯದಲ್ಲಿ ಆಕ್ಷೇಪ, ಆಕ್ರೋಶ ವ್ಯಕ್ತವಾಗಿವೆ. ಪಂಚಮಸಾಲಿ ಸಮುದಾಯದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು, “ಯತ್ನಾಳ್ ಉಚ್ಚಾಟನೆಯನ್ನು ಪಕ್ಷವು ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ, ಬಿಜೆಪಿಯಲ್ಲಿರುವ ಪಂಚಾಮಸಾಲಿ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿ, ಎಲ್ಲರೂ ಹೊರಬರಬೇಕು” ಎಂದು ಕರೆಕೊಟ್ಟಿದ್ದಾರೆ.
ಬಿಜೆಪಿ ಹಿರಿಯ ನಾಯಕ, ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. “ಯತ್ನಾಳ್ ತಮ್ಮ ಮನಸ್ಸಿನಲ್ಲಿ ಇದ್ದುದ್ದನ್ನು ನೇರವಾಗಿ ಮಾತನಾಡುತ್ತಿದ್ದರು. ಪಕ್ಷದಿಂದ ಯತ್ನಾಳ್ ಅವರನ್ನು ಉಚ್ಚಾಟಿಸಿರುವುದು ಬೇಸರ ತಂದಿದೆ. ಆದರೆ, ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗುವೆ” ಎಂದಿದ್ದಾರೆ.