ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿದ್ದಾರೆ. ಅವರ ಉಚ್ಛಾಟನೆಯನ್ನು ಹಲವರು ಖಂಡಿಸಿದ್ದಾರೆ. ಯತ್ನಾಳ್ ಅವರನ್ನು ಪಕ್ಷದಿಂದ ಹೊರಹಾಕಿರುವ ಬಿಜೆಪಿಯನ್ನು ತೊರೆಯುವಂತೆ ಪಂಚಮಸಾಲಿ ಸಮುದಾಯಕ್ಕೆ ಸಮುದಾಯದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆಕೊಟ್ಟಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯತ್ನಾಳ್ ಅವರು ಪಂಚಮಸಾಲಿ ಸಮುದಾಯದ ಪ್ರಮುಖ ನಾಯಕರಲ್ಲಿ ಒಬ್ಬರು . ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ. ಯತ್ನಾಳ್ ಉಚ್ಛಾಟನೆಗೆ ಯಡಿಯೂರಪ್ಪ ಮತ್ತು ಅವರ ಕುಟುಂಬವೇ ಮುಖ್ಯ ಕಾರಣ” ಎಂದು ಆರೋಪಿಸಿದ್ದಾರೆ.
ಯತ್ನಾಳ್ ಉಚ್ಛಾಟನೆಯನ್ನು ಪಕ್ಷವು ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ, ಬಿಜೆಪಿಯಲ್ಲಿರುವ ಪಂಚಾಮಸಾಲಿ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿ, ಎಲ್ಲರೂ ಹೊರಬರಬೇಕು” ಎಂದು ಕರೆಕೊಟ್ಟಿದ್ದಾರೆ.
“ಪಂಚಮಸಾಲಿ ಸಮುದಾಯದ ನಾಯಕರನ್ನು ತುಳಿಯುತ್ತಿರುವವರ ವಿರುದ್ಧ ಬೃಹತ್ ಹೋರಾಟ ಮಾಡುತ್ತೇವೆ. ಹಿಂದೆ, ಕಿತ್ತೂರು ರಾಣಿ ಚನ್ನಮ್ಮಾರಿಗೆ ಮೋಸ ಮಾಡಿದ ಶಕ್ತಿಗಳೇ ಈಗ ಪಂಚಮಸಾಲಿ ಸಮುದಾಯದವನ್ನು ತುಳಿಯುತ್ತಿವೆ. ಯತ್ನಾಳ್ ಎಂದಿಗೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಯತ್ನಾಳ್ ಉಚ್ಛಾಟನೆಯು ಪಂಚಮಸಾಲಿ ಸಮುದಾಯಕ್ಕೆ ನೋವುಂಟುಮಾಡಿದೆ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಹನಿಟ್ರ್ಯಾಪ್ | ಕರ್ನಾಟಕ ರಾಜಕಾರಣ ಕಂಡ ‘ಗಲೀಜುಗಾಥೆ’ಗಳ ಸರಮಾಲೆ
ಶಾಸಕ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿ ಬುಧವಾರ ಬಿಜೆಪಿ ಹೈಕಮಾಂಡ್ ಆದೇಶಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಯತ್ನಾಳ್ ನಿರಂತರವಾಗಿ ಮತ್ತು ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿದ್ದರು. ಹಲವಾರು ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದರು. ಅವರಿಗೆ ಬಿಜೆಪಿ ಶಿಸ್ತು ಕಮಿಟಿ ಎರಡು ಬಾರಿ ನೋಟಿಸ್ ಕೊಟ್ಟಿತ್ತು. ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಹೇಳಿಕೆ ಕೊಡುವುದು, ಆರೋಪ ಮಾಡುವುದನ್ನು ನಿಲ್ಲಿಸುವಂತೆ ಎಚ್ಚರಿಕೆಯನ್ನೂ ಕೊಟ್ಟಿತ್ತು. ನೋಟಿಸ್‌ಗಳಿಗೆ ಯತ್ನಾಳ್ ನೀಡಿದ್ದ ಉತ್ತರಗಳು ಸಮಂಜಸವಾಗಿಲ್ಲ ಎಂದು ಕಮಿಟಿ ಹೇಳಿತ್ತು. ಈ ಬೆನ್ನಲ್ಲೇ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಲಾಗಿದೆ.