ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವಿಧಾನಸಭೆಯ ಹೊರಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ‘ವಿರೋಧ ಪಕ್ಷದ ನಾಯಕ’ನಾಗಿ ರಾಜಕೀಯದಲ್ಲಿ ಸಕ್ರಿಯರಾಗಿರಲಿದ್ದಾರೆ.
“ಜುಲೈ 3ರಂದು ರಾಜ್ಯಪಾಲರು ಸದನದಲ್ಲಿ ಭಾಷಣ ಮಾಡಿದ ಬಳಿಕ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ಆರಂಭಿಸುತ್ತೇನೆ. ಅಧಿವೇಶನ ಮುಗಿಯುವವರೆಗೂ (10 ದಿನ) ಧರಣಿ ನಡೆಸುತ್ತೇನೆ. ಕಾಂಗ್ರೆಸ್ ಜನರಿಗೆ ಸುಳ್ಳು ಗ್ಯಾರಂಟಿಗಳನ್ನು ನೀಡಿ, ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿಗಳನ್ನು ಜಾರಿಗೊಳಿಸಬೇಕು, ಇಲ್ಲವೇ ಅಧಿಕಾರದಿಂದ ಕೆಳಗಿಳಿಯಬೇಕು” ಎಂದು ಯಡಿಯೂರಪ್ಪ ಹೇಳಿದ್ದಾರೆ.
ಜುಲೈ 3ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ ಮಂಡಿಸುವ ಸಾಧ್ಯತೆಯಿದೆ. “ಸದನದ ಒಳಗೆ, ಚುನಾಯಿತ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಾರೆ. ಸದನದ ಹೊರಗೆ, ವಿಧಾನಸಭಾ ಚುನಾವಣೆಯಲ್ಲಿ ಸೋತ ನಾಯಕರನ್ನು ಸರ್ಕಾರ ಎದುರಿಸಬೇಕು” ಎಂದು ಯಡಿಯೂರಪ್ಪ ಒತ್ತಿ ಹೇಳಿದ್ದಾರೆ.
ಇದರರ್ಥ ಪ್ರತಿಪಕ್ಷದ ನಾಯಕ ಬಿಜೆಪಿ ಶಾಸಕರನ್ನು ಸದನದ ಒಳಗೆ ಮುನ್ನಡೆಸಿದರೆ, ಯಡಿಯೂರಪ್ಪ ವಿಧಾನಸಭೆ ಪ್ರವೇಶಿಸಲು ಸಾಧ್ಯವಾಗದ ನಾಯಕರ ಗುಂಪನ್ನು ಮುನ್ನಡೆಸುತ್ತಾರೆ. ವಿಶೇಷವಾಗಿ, ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆ ಸೇರಿದಂತೆ ಐದು ಗ್ಯಾರಂಟಿಗಳ ಅನುಷ್ಠಾನದಲ್ಲಿನ ವೈಫಲ್ಯಗಳ ಬಗ್ಗೆ ಹೋರಾಟ ನಡೆಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬರೀ ಹಣ, ಧಿಮಾಕು, ಅಧಿಕಾರ ಮದದಿಂದ ರಾಜಕಾರಣ ಮಾಡಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
“ಯುಡಿಯೂರಪ್ಪ ಅವರು ಐದು ದಶಕಗಳ ಕಾಲದ ತಮ್ಮ ರಾಜಕೀಯ ಜೀವನದಲ್ಲಿ ವಿರೋಧ ಪಕ್ಷದ ನಾಯಕರಾಗಿ ಹೋರಾಟ ನಡೆಸಿದ್ದಾರೆ. ಅವರು ರಾಜಕೀಯವಾಗಿ ಸಕ್ರಿಯರಾಗಿರಲು ಬಯಸುತ್ತಾರೆ. ಅವರು ಪರಿಗಣಿಸಬೇಕಾದ ನಾಯಕರಾಗಿ ಪ್ರಾಮುಖ್ಯತೆ ಪಡೆಯಲು ಬಯಸುತ್ತಾರೆ” ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಆದರೆ, ಆಡಳಿತಾರೂಢ ಕಾಂಗ್ರೆಸ್ ಕೂಡ ಬಿಜೆಪಿ ಮತ್ತು ಯಡಿಯೂರಪ್ಪ ಅವರನ್ನು ಎದುರಿಸಲು ಸಿದ್ಧವಾಗಿದೆ. “ಅವರು ಧರಣಿ ನಡೆಸಲು ಸ್ವತಂತ್ರರು. ಆದರೆ, ಅವರಿಗೆ ಯಾವ ನೈತಿಕ ಹಕ್ಕಿದೆ? ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದಿರುವ 1 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ, ರೈತರಿಗೆ ಹತ್ತು ಗಂಟೆ ನಿರಂತರ ವಿದ್ಯುತ್ ಮತ್ತು ನೀರಾವರಿ ಕ್ಷೇತ್ರಕ್ಕೆ 1.5 ಲಕ್ಷ ಕೋಟಿ ರೂ. ಸೇರಿದಂತೆ ಬಿಜೆಪಿ ತನ್ನ ಪ್ರಣಾಳಿಕೆಯ ಭರವಸೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಈಗ ರಾಜ್ಯಕ್ಕೆ ಅಕ್ಕಿ ಕೊಡಲು ನಿರಾಕರಿಸಿರುವ ಕೇಂದ್ರವೇ ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸುವುದು ಅರ್ಥಹೀನ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.