ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಕೊಡದ ಕಾರಣ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ತೊರೆದಿದ್ದಾರೆ. ಇದೀಗ, ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ ಸುರೇಶ್ ಜೊತೆ ಕಾಂಗ್ರೆಸ್ ಕಚೇರಿಗೆ ಬಂದಿದ್ದು, ಕೆಪಿಸಿಸಿ ಕಚೇರಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.
ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಯೋಗೇಶ್ವರ್, ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಲ್ಲಿಸಿದ್ದರು. ಬಳಿಕ, ಬುಧವಾರ ಬೆಳಗ್ಗೆ ಡಿ.ಕೆ ಶಿವಕುಮಾರ್ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಯೋಗೇಶ್ವರ್, ಈಗ ಕಾಂಗ್ರೆಸ್ ಕಚೇರಿಗೆ ತೆರಳಿದ್ದು, ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಅವರನ್ನು ಕಾಂಗ್ರೆಸ್ಗೆ ಕರೆತರುವಲ್ಲಿ ಶಿವಕುಮಾರ್ ಮತ್ತು ಸುರೇಶ್ ಯಶಸ್ವಿಯಾಗಿದ್ದಾರೆ.
ಶಿವಕುಮಾರ್ ಮತ್ತು ಸುರೇಶ್ ಜೊತೆ ಕಾಂಗ್ರೆಸ್ ಕಚೇರಿಗೆ ಬಂದಿರುವ ಯೋಗೇಶ್ವರ್ ಅವರು ಸಚಿವ ಚಲುವರಾಯಸ್ವಾಮಿ, ಜಮೀರ್ ಅಹ್ಮದ್, ಕೃಷ್ಣ ಬೈರೇಗೌಡರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಗೆ ಅಚ್ಚರಿಯ ಅಭ್ಯರ್ಥಿಯನ್ನು ಕಾಂಗ್ರೆಸ್ನಿಂದ ಕಣಕ್ಕಿಳಿಸುತ್ತೇವೆಂದು ಡಿ.ಕೆ ಸುರೇಶ್ ಈ ಹಿಂದೆ ಹೇಳಿದ್ದರು. ಇದೀಗ, ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತಂದಿದ್ದು, ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಲಾಗುತ್ತದೆ ಎಂಬುದು ಸ್ಪಷ್ಟವಾಗಿದೆ.
ಒಂದೇ ಕಾರಿನಲ್ಲಿ ಬಂದ ಸಿಪಿ-ಡಿಕೆಶಿ
ಸಿ ಪಿ ಯೋಗೇಶ್ವರ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಒಂದೇ ಕಾರಿನಲ್ಲಿ ಕೆಪಿಸಿಸಿ ಕಚೇರಿಗೆ ಆಗಮಿಸಿದರು. ಈ ವೇಳೆ ಮಾಧ್ಯಮದ ಪ್ರತಿನಿಧಿಗಳು ಯೋಗೇಶ್ವರ್ ಅವರನ್ನು ಬೈಟ್ ಪಡೆದುಕೊಳ್ಳಲು ತಳ್ಳಾಟ-ನೂಕಾಟ ನಡೆಸಿದ ಘಟನೆ ಕೂಡ ನಡೆಯಿತು.