ಮಹಾ ಕುಂಭಮೇಳ ಅಂತ್ಯವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಾ ಕುಂಭಮೇಳದ ಟೀಕಾಕಾರರ ವಿರುದ್ದ ವಾಗ್ದಾಳಿ ನಡೆಸಿದ್ದು, “ಹಂದಿಗಳು, ರಣಹದ್ದುಗಳು” ಎಂದು ಕರೆದಿದ್ದಾರೆ.
ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿದ್ದು, 30 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಸಾವನ್ನಪ್ಪಿದ್ದಾರೆ. ಮಹಾ ಕುಂಭಮೇಳವನ್ನು ಸರಿಯಾಗಿ ನಿರ್ವಹಣೆ ಮಾಡದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸಿದೆ. ಹಾಗೆಯೇ ಮೃತರ ಸಂಖ್ಯೆ ಅಧಿಕವಾಗಿದ್ದು ಮುಚ್ಚಿಡಲಾಗುತ್ತಿದೆ ಎಂದು ದೂರಿದೆ.
ಇದನ್ನು ಓದಿದ್ದೀರಾ? ಸಂಗಮದ ನೀರು ಸ್ನಾನಕ್ಕೆ ಮಾತ್ರವಲ್ಲ ಕುಡಿಯಲು ಯೋಗ್ಯ; ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
ವಿಪಕ್ಷಗಳನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, “ರಣಹದ್ದುಗಳಿಗೆ ಮೃತ ದೇಹಗಳು ಸಿಕ್ಕಿದೆ. ಹಂದಿಗಳಿಗೆ ಹೊಲಸು ಲಭಿಸಿದೆ. ಆದರೆ ಸೂಕ್ಷ್ಮ ಜೀವಿಗಳಿಗೆ ಸಂಬಂಧಗಳ ಸುಂದರ ಚಿತ್ರಣ ಲಭಿಸಿದೆ, ಉದ್ಯಮಿಗಳಿಗೆ ವ್ಯಾಪಾರ ಲಭಿಸಿದೆ, ಭಕ್ತರಿಗೆ ಸ್ವಚ್ಛವಾದ ವ್ಯವಸ್ಥೆ ಲಭಿಸಿದೆ” ಎಂದು ತಿಳಿಸಿದ್ದಾರೆ.
“ನೀವು (ವಿಪಕ್ಷಗಳು) ನಿಗದಿತ ಜಾತಿಯ ಜನರನ್ನು ಮಹಾ ಕುಂಭಮೇಳದಲ್ಲಿ ಭಾಗಿಯಾಗಲು ಬಿಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಆದರೆ ಯಾವ ಜಾತಿಯವರನ್ನು ತಡೆಯಲಾಗಿಲ್ಲ. ಒಳ್ಳೆಯ ಉದ್ದೇಶ ಹೊಂದಿರುವವರು ಕುಂಭಮೇಳಕ್ಕೆ ಗೌರವದಿಂದ ಹೋಗಬೇಕು. ಆದರೆ ಕೆಟ್ಟ ಉದ್ದೇಶದಿಂದ ಅಲ್ಲಿಗೆ ಹೋಗುವವರು ಕುಂಭಮೇಳದಲ್ಲಿ ಅವ್ಯವಸ್ಥೆ ಸೃಷ್ಟಿಸಲು ಪ್ರಯತ್ನಿಸಿದರೆ ಖಂಡಿತವಾಗಿಯೂ ತೊಂದರೆ ಅನುಭವಿಸುತ್ತಾರೆ” ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ ಸುಮಾರು 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಹೇಳಿದೆ. ಆದರೆ ಸರಿಯಾಗಿ ನಿರ್ವಹಣೆ ಇರದ ಕಾರಣದಿಂದಾಗಿ ಉಂಟಾದ ಈ ಕಾಲ್ತುಳಿತದಿಂದಾಗಿ 50ಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ.
