ಉತ್ತರ ಪ್ರದೇಶದ ಬಿಜೆಪಿಯಲ್ಲಿ ಆಂತರಿಕ ಕಲಹ ಮುನ್ನೆಲೆಗೆ ಬಂದಿದೆ. ಸಾಲದೆಂಬಂತೆ, ಯೋಗಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ. ಯೋಗಿ ತಲೆದಂಡವಾಗಲಿದೆಯೇ ಎಂಬ ಊಹಾಪೋಹಗಳನ್ನು ಹುಟ್ಟುಹಾಕಿದೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಭಾರೀ ಕಳಪೆ ಪ್ರದರ್ಶನ ನೀಡಿದೆ. ಬಿಜೆಪಿಗೆ ಮತ ತಂದುಕೊಡುತ್ತದೆಂದು ಕೇಸರಿ ನಾಯಕರು ಭಾವಿಸಿದ್ದ ರಾಮಮಂದಿರ ಉದ್ಘಾಟನೆ ಮಾಡಿದರೂ, 2019ರಲ್ಲಿ ಗೆದ್ದಿದ್ದ ಸ್ಥಾನಗಳ ಪೈಕಿ, ಅರ್ಧದಷ್ಟು ಸ್ಥಾನಗಳನ್ನು 2024ರ ಚುನಾವಣೆಯಲ್ಲಿ ಬಿಜೆಪಿ ಕಳೆದುಕೊಂಡಿದೆ. ಸೋಲಿನ ಕಾರಣಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಬಿಜೆಪಿಗರು ಸಿಟ್ಟಾಗಿದ್ದಾರೆ. ಅವರ ತಲೆತಂಡವಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ಯೋಗಿ ಆದಿತ್ಯನಾಥ್ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ, ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌದರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳುತ್ತಿದ್ದಾರೆ. ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿ, ಯೋಗಿ ವಿರುದ್ಧ ಗುಟುರು ಹಾಕಿದ್ದಾರೆ.
ಇದೆಲ್ಲದರ ನಡುವೆ, ಲೋಕಸಭಾ ಚುನಾವಣೆಯಲ್ಲಿ ತನ್ನ ಸೋಲಿನ ಕುರಿತು ಪಕ್ಷವು ಪರಾಮರ್ಶೆ ನಡೆಸುತ್ತಿದೆ. ಲಕ್ನೋದಲ್ಲಿ ನಡೆದ ಉತ್ತರ ಪ್ರದೇಶ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ, ‘ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಅತಿಯಾದ ಆತ್ಮವಿಶ್ವಾಸ(ಓವರ್ ಕಾನ್ಫೆಡೆನ್ಸ್)ವೇ ಕಾರಣ’ವೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಪ್ಪಿಕೊಂಡಿದ್ದಾರೆ. ಇನ್ನು, ಉಪಮುಖ್ಯಮಂತ್ರಿ ಮೌರ್ಯ ಅವರು ‘ಅಧಿಕಾರಕ್ಕಿಂತ ಪಕ್ಷದ ಸಂಘಟನೆ ಮುಖ್ಯ’ ಎಂದು ಹೇಳಿದ್ದಾರೆ. ಇದೇ ಸಭೆಯಲ್ಲಿ ಭಾಗಿಯಾಗಿದ್ದ ಜೆ.ಪಿ ನಡ್ಡಾ ಅವರಿಗೆ ಪಕ್ಷದ ಸಾಂಸ್ಥಿಕ ಪುನರ್ರಚನೆ ಅಗತ್ಯವೆಂದು ಹಲವರು ಹೇಳಿದ್ದಾರೆ ಎಂದು ವರದಿಯಾಗಿದೆ.
“ಗೆದ್ದೇ ಗೆಲ್ಲುತ್ತೇವೆ ಎಂದು ಅತಿಯಾದ ಆತ್ಮವಿಶ್ವಾಸ ಹೊಂದಿದ್ದಾಗ, ಸ್ವಾಭಾವಿಕವಾಗಿ ಬೆಲೆ ತೆರಬೇಕಾಗುತ್ತದೆ. ಚುನಾವಣೆಯ ಮೊದಲು ವಿಶ್ವಾಸವನ್ನೇ ಕಳೆದುಕೊಂಡಿದ್ದ ಪ್ರತಿಪಕ್ಷಗಳು ಈಗ ತಮ್ಮ ಹೆಜ್ಜೆಯಲ್ಲಿ ಹೊಸ ಹುರುಪನ್ನು ಕಂಡುಕೊಂಡಿವೆ” ಎಂದು ಯೋಗಿ ಹೇಳಿದ್ದರೆ, ಉಪಮುಖ್ಯಮಂತ್ರಿ ಕೇಶವ್ ಮೌರ್ಯ, ”ಬಿಜೆಪಿ ರಚನೆಯಲ್ಲಿ ಪಕ್ಷದ ಕಾರ್ಯಕರ್ತರ ಪ್ರಾಮುಖ್ಯತೆಯನ್ನು ಕಡೆಗಣಿಸಬಾರದು. ಸರ್ಕಾರಕ್ಕಿಂತ ಪಕ್ಷದ ಸಂಘಟನೆ ಯಾವಾಗಲೂ ಆದ್ಯತೆಯಾಗಿರಬೇಕು. ಎಲ್ಲ ಸಚಿವರು, ಶಾಸಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಕಾರ್ಯಕರ್ತರನ್ನು ಗೌರವಿಸುವುದು ಮತ್ತು ಅವರ ಘನತೆಯನ್ನು ಕಾಪಾಡುವುದು ಆದ್ಯ ಕರ್ತವ್ಯವಾಗಬೇಕು” ಎಂದು ಹೇಳಿದ್ದಾರೆ.
ಅಂದಹಾಗೆ, 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿತ್ತು. ಆಗ, ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ಇದ್ದರು. ಅವರ ತಂತ್ರ ಮತ್ತು ಅಂದಿನ ರಾಜ್ಯಾಧ್ಯಕ್ಷ ಮೌರ್ಯ ಅವರ ನೇತೃತ್ವವು ಆ ಗೆಲುವಿಗೆ ಕಾರಣವೆಂದು ಹೇಳಲಾಗಿತ್ತು. ಉತ್ತರ ಪ್ರದೇಶದಲ್ಲಿ ಪ್ರಮುಖ ಜವಾಬ್ದಾರಿ ಹೊತ್ತಿದ್ದ ಮೌರ್ಯ, ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಪ್ರತಿಪಾದಿಸಿದ್ದರು. ಆದಾಗ್ಯೂ, ಸಂಸದರಾಗಿದ್ದ ಗೋರಕ್‌ಪುರ ಮಠದ ಮುಖ್ಯಸ್ಥ ಯೋಗಿಯನ್ನು ರಾಜ್ಯ ರಾಜಕಾರಣಕ್ಕೆ ಕರೆತಂದು ಮುಖ್ಯಮಂತ್ರಿ ಮಾಡಲಾಗಿತ್ತು. ಅಂದಿನಿಂದಲೂ ಯೋಗಿ ಮತ್ತು ಮೌರ್ಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. 2022ರ ವಿಧಾನಸಭಾ ಚುನಾವಣೆಯಲ್ಲಿಯೂ ಮೌರ್ಯ ಅವರನೇ ಬಿಜೆಪಿಯನ್ನು ಮುನ್ನಡೆಸಿದ್ದರು. ಬಿಜೆಪಿ ಗೆಲುವಿನ ಬಳಿಕ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಮುಖ್ಯಮಂತ್ರಿಯಾಗಿ ನೇಮಗೊಂಡಿದ್ದರು. ಸರ್ಕಾರದಲ್ಲಿ ಯೋಗಿ ಅವರನ್ನು ನಿಯಂತ್ರಿಸಲು ಭಾರೀ ಪ್ರಯತ್ನವನ್ನೂ ಹಾಕಿದ್ದರು. ಯೋಗಿ-ಮೌರ್ಯ ನಡುವಿನ ಗುದ್ದಾಟ, ನಾಯಕತ್ವದಲ್ಲಿ ಒಗ್ಗಟ್ಟು ಮತ್ತು ಸಮನ್ವಯದ ಕೊರತೆ ಚುನಾವಣಾ ಸೋಲಿಗೆ ಕಾರಣವೆಂದು ಹಲವರು ಹೇಳುತ್ತಿದ್ದಾರೆ.
ಯೋಗಿ ಅವರ ಹೇಳಿಕೆಯು ಪಕ್ಷವು ಅನುಭವಿಸಿದ ನಷ್ಟಕ್ಕೆ ತಮ್ಮನ್ನು ದೂಷಿಸಿದ ಇತರ ನಾಯಕರಿಗೆ ಪ್ರತಿಕ್ರಿಯೆಯಾಗಿದೆ. ಅಲ್ಲದೆ, ಯೋಗಿ ತಾವು ಹಿಂದು ರಾಷ್ಟ್ರೀಯತೆಯ ಪ್ರಮುಖ ಮುಖವೆಂದು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಪಕ್ಷದ ಸೋಲಿನ ಹೊಣೆ ಹೊರಲು ಅವರು ನಿರಾಕರಿಸುತ್ತಿದ್ದಾರೆ ಎಂದು ಅನೇಕರು ಹೇಳುತ್ತಾರೆ. ಅಂತೆಯೇ, ಕೇಶವ್ ಮೌರ್ಯರ ಸಂಘಟನೆ ಕುರಿತ ಮಾತುಗಳು ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನವಿದೆ ಎಂಬುದನ್ನು ಒತ್ತಿಹೇಳುತ್ತದೆ.
ಅದೇನೆ ಇರಲಿ, 2024ರ ಜೂನ್ 4ರಂದು ಬಂದ ಲೋಕಸಭಾ ಚುನಾವಣಾ ಫಲಿತಾಂಶವು ಉತ್ತರ ಪ್ರದೇಶದಲ್ಲಿ ‘ಬ್ಲೇಮ್ ಗೇಮ್’ಗೆ ಕಾರಣವಾಗಿದೆ. ಬದಲಾಗುತ್ತಿರುವ ರಾಜಕೀಯ ವಿದ್ಯಮಾನಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿಯಲ್ಲಿ ಆಂತರಿಕ ಮರುಪರಿಶೀಲನೆಗೆ ಕರೆ ನೀಡಿದೆ. ಈ ಚುನಾವಣೆಯಲ್ಲಿ ಯಾದವೇತರ ಒಬಿಸಿಗಳು ಮತ್ತು ದಲಿತರು ಸಮಾಜವಾದಿ ಪಕ್ಷದೆಡೆಗೆ ವಾಲಿದ್ದು, ಅವರನ್ನು ಮರಳಿ ಪಕ್ಷದತ್ತ ತರಲು ಪ್ರಮುಖ ಸಾಂಸ್ಥಿಕ ಬದಲಾವಣೆ ಅಗತ್ಯವೆಂದು ಬಿಜೆಪಿ ನಾಯಕತ್ವ ಭಾವಿಸಿದೆ. ಅದಕ್ಕಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಒಬಿಸಿ ನಾಯಕನನ್ನು ನೇಮಿಸಲು ಕೇಸರಿ ನಾಯಕರು ಚಿಂತಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅಂತಹ ಯಾವುದೇ ಪ್ರಸ್ತಾಪ ಹೈಕಮಾಂಡ್‌ನಿಂದ ಇಲ್ಲವೆಂದು ಚೌಧರಿ ಹೇಳಿಕೊಂಡಿದ್ದಾರೆ. ಊಹಾಪೋಹಗಳನ್ನು ನಿರಾಕರಿಸಿದ್ದಾರೆ.
ಯೋಗಿ-ಮೌರ್ಯ ಗುದ್ದಾಟ.ಈ ಗುದ್ದಾಟವನ್ನು ನಿಭಾಯಿಸಲಾಗದ ಚೌಧರಿ ನಾಯಕತ್ವ. ಜೊತೆಗೆ, ಪಕ್ಷದ ವಿವಿಧ ಪದಾಧಿಕಾರಿಗಳು ಸಾರ್ವಜನಿಕವಾಗಿ ಒಬ್ಬರ ಮೇಲೊಬ್ಬರು ಹೇಳಿಕೆಗಳನ್ನು ನೀಡುತ್ತಿರುವುದು ಬಿಜೆಪಿ ಹೈಕಮಾಂಡ್‌ನ ತಲೆನೋವಾಗಿದೆ. ಸಾರ್ವಜನಿಕ ಹೇಳಿಕೆಗಳು ಪಕ್ಷದ ಶಿಸ್ತಿಗೆ ಧಕ್ಕೆ ತಂದಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೂ, ಪಕ್ಷದ ಕಳಪೆ ಪ್ರದರ್ಶನದಿಂದಾಗಿ ಸೋಲಿನ ಹತಾಶೆಯು ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ಈಗ, 10 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಆಂತರಿಕ ಕಚ್ಚಾಟವನ್ನು ಶಮನ ಮಾಡದಿದ್ದರೆ, ಉಪಚುನಾವಣೆಯಲ್ಲೂ ಬಿಜೆಪಿ ಹಿನ್ನಡೆ ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಈ ವರದಿ ಓದಿದ್ದೀರಾ?: ಅಯೋಧ್ಯೆ ಸುತ್ತಮುತ್ತ ರಿಯಲ್ ಎಸ್ಟೇಟ್ ದಂಧೆ
ಉಪಚುನಾವಣೆಗೂ ಮುನ್ನವೇ ಉತ್ತರ ಪ್ರದೇಶ ಬಿಜೆಪಿಯಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ತರಲು ಬಿಜೆಪಿ ಹೈಕಮಾಂಡ್ ಎದುರು ನೋಡುತ್ತಿದೆ. ಈ ಮರುಸಂಘಟನೆಯು ಬಿಜೆಪಿ ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕೆಂಬ ಗುರಿಯನ್ನೂ ಹೊಂದಿದೆ. ಅದಕ್ಕಾಗಿ, ಶೀಘ್ರದಲ್ಲೇ ಯೋಗಿ ಮತ್ತು ಕೇಂದ್ರ ನಾಯಕತ್ವದ ನಡುವೆ ಸಭೆಗಳು ನಡೆಯಲಿವೆ ಎಂದು ನಿರೀಕ್ಷಿಸಲಾಗಿದೆ.
ಅದೇನೆ ಇರಲಿ, ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ವಿರುದ್ಧ ಅಬ್ಬರದ ಪ್ರಚಾರ ಮಾಡಿದ್ದ, ಪ್ರಸ್ತುತ ಜೈಲಿನಲ್ಲೇ ಇರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ‘ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ, ಮೋದಿ-ಶಾ ಜೋಡಿ ಉತ್ತರ ಪ್ರದೇಶದಲ್ಲಿ ಯೋಗಿಯ ರಾಜಕೀಯವನ್ನು ಮುಗಿಸುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತಿದ್ದಂತೆಯೇ ಯೋಗಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಾರೆ. ಮೂಲೆಗುಂಪು ಮಾಡುತ್ತಾರೆ’ ಎಂದು ಹೇಳಿದ್ದರು. ಅವರ ಹೇಳಿಕೆಗಳು ಈಗ ನಿಜವಾಗುತ್ತಿವೆ ಎಂಬಂತೆ ಉತ್ತರ ಪ್ರದೇಶದ ಬಿಜೆಪಿಯಲ್ಲಿ ಆಂತರಿಕ ಕಲಹ ಮುನ್ನೆಲೆಗೆ ಬಂದಿದೆ.
ಸಾಲದೆಂಬಂತೆ, ಬಿಜೆಪಿಯಲ್ಲಿ ಪ್ರಧಾನಿ ಮೋದಿ ನಂತರ ಹೆಚ್ಚು ಪ್ರಭಾವಿ ಅಥವಾ ಮುನ್ನೆಲೆಯಲ್ಲಿರುವ ಯೋಗಿಯ ಬೆಳವಣಿಗೆ ಮೋದಿಗಾಗಲೀ, ಅಮಿತ್ ಶಾಗಾಗಲೀ ಇಷ್ಟವಿಲ್ಲ ಎಂಬುದು ಕಳೆದ ಉತ್ತರ ಪ್ರದೇಶ ಚುನಾವಣೆಯ ಸಮಯದಲ್ಲೇ ಖಚಿತವಾಗಿತ್ತು. 2022ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಗೆದ್ದ ಬಿಜೆಪಿ ಯೋಗಿಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ನೀಡುವುದಿಲ್ಲ ಎಂದು ಹೇಳಲಾಗಿತ್ತು. ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಬಹಳ ದಿನಗಳ ಕಾಲ ನಡೆದ ಬಳಿಕ, ಅದೃಷ್ಟವಶಾತ್ ಯೋಗಿಗೆ 2ನೇ ಬಾರಿಗೂ ಮುಖ್ಯಮಂತ್ರಿ ಹುದ್ದೆ ಒಲಿದಿತ್ತು. ಆದರೆ, ಯೋಗಿ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚು ಗುರುತಿಸಿಕೊಳ್ಳುವುದು ಮೋದಿ-ಶಾ ಜೋಡಿಗೆ ಇಷ್ಟವಿಲ್ಲ. ಹೀಗಾಗಿ, ಯೋಗಿಯ ರಾಜಕೀಯ ಜೀವನವನ್ನು ಮುಗಿಸಲು ಈ ಇಬ್ಬರೂ ಹವಣಿಸುತ್ತಿದ್ದಾರೆ ಎಂಬ ಮಾತುಗಳೂ ಇವೆ.
ಇಂತಹ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲು ಯೋಗಿಯ ತಲೆತಂಡಕ್ಕೆ ಸಿಕ್ಕ ಅಸ್ತ್ರವಾಗಿದೆ. ಯೋಗಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ. ಯೋಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಎಂಬ ಊಹಾಪೋಹಗಳನ್ನು ಹುಟ್ಟುಹಾಕಿದೆ. ಸದ್ಯ, ಉತ್ತರ ಪ್ರದೇಶ ಬಿಜೆಪಿಯಲ್ಲಿ ಏನೆಲ್ಲ ಘಟಿಸಲಿವೆ. ಉತ್ತರ ಪ್ರದೇಶ ರಾಜಕೀಯದಲ್ಲಿ ಯಾವೆಲ್ಲ ಬದಲಾವಣೆಗಳಾಗಲಿವೆ ಕಾದು ನೋಡಬೇಕಿದೆ.