ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ತೀರಾ ಕಳಪೆ ಪ್ರದರ್ಶನ ನೀಡಿದೆ. ರಾಮಮಂದಿರವಿದ್ದ ಅಯೋಧ್ಯೆಯಲ್ಲಿಯೇ ಬಿಜೆಪಿ ಸೋಲುಂಡು ಮುಖಭಂಗ ಅನುಭವಿಸಿದೆ. ಈ ಬೆನ್ನಲ್ಲೇ, ಉತ್ತರ ಪ್ರದೇಶ ಬಿಜೆಪಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಮತ್ತು ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಉತ್ತರ ಪ್ರದೇಶ ಬಿಜೆಪಿಯ ಗಲಾಟೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಸುಧೀರ್ಘ ಸಭೆ ನಡೆಸಿದ್ದಾರೆ. ಇದಕ್ಕೂ ಮುನ್ನ, ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ಕೂಡ ಮೋದಿ ಅವರನ್ನು ಭೇಟಿ ಮಾಡಿದ್ದು, ತಮ್ಮ ರಾಜ್ಯದಲ್ಲಿ ಪಕ್ಷದ ಕಳಪೆ ಪ್ರದರ್ಶನ ಹೊಣೆ ಹೊತ್ತುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮೋದಿ-ಶಾ ಭೇಟಿಯಲ್ಲಿ ಮಂಗಳವಾರ ನಡೆದ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ನಡುವಿನ ಸಭೆಯಲ್ಲಿ ಏನಾಯಿತು ಎಂಬುದನ್ನು ಮೋದಿಗೆ ಅಮಿತ್ ಶಾ ವಿವರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಉಸ್ತುವಾರಿಗಳ ಬದಲಾವಣೆಯ ಅಗತ್ಯವಿದೆ. ಜೊತೆಗೆ, ರಾಜ್ಯ ಘಟಕದೊಳಗೆ ಸಾಂಸ್ಥಿಕ ಬದಲಾವಣೆಗಳನ್ನು ತರಬೇಕಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಯೋಗಿ ಮತ್ತು ಮೌರ್ಯ ಭಿನ್ನಾಭಿಪ್ರಾಯವು ಪಕ್ಷಕ್ಕೆ ಸವಾಲಾಗಿದೆ ಎಂದು ಬಿಂಬಿಸಲಾಗುತ್ತಿದೆ. ಈ ಹಿಂದೆ, ಮೌರ್ಯ ಅವರು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷರಾಗಿದ್ದಾಗ ಅವರ ನೇತೃತ್ವದಲ್ಲಿ ನಡೆದ 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತ ಗಳಿಸಿ, ಎರಡನೇ ಬಾರಿಗೆ ಅಧಿಕಾರಕ್ಕೇರಿತ್ತು. ಅದಾಗ್ಯೂ, 2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಯೋಗಿ-ಮೌರ್ಯ ನಡುವೆ ಒಳಜಗಳ ನಡೆಯುತ್ತಲೇ ಇದೆ. ಇದೀಗ, ಇಬ್ಬರ ನಡುವಿನ ಅಸಮಾಧಾನ ತೀವ್ರತೆ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಭಾನುವಾರ ಲಕ್ನೋದಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮೌರ್ಯ ಅವರು ‘ಸಂಘಟನೆ ಮೊದಲು – ಅಧಿಕಾರ/ಸರ್ಕಾರವಲ್ಲ’ ಎಂದು ಬ್ಯಾಟಿಂಗ್ ಮಾಡಿದ್ದಾರೆ. ಕೇಂದ್ರ ನಾಯಕತ್ವದೊಂದಿಗೆ ಯೋಗಿಯವರ ಆಡಳಿತ ಶೈಲಿಯ ಬಗ್ಗೆ ತಮ್ಮ ಅಸಮಾಧಾನವನ್ನು ಮೌರ್ಯ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ, ಯೋಗಿ-ಮೌರ್ಯ ಇಬ್ಬರೂ ಒಟ್ಟಾಗಿ ಕೆಲಸ ಮಾಡಬೇಕು. ವಿಪಕ್ಷಗಳಿಗೆ ಟೀಕೆಗೆ ಅವಕಾಶ ನೀಡುವಂತಹ ಹೇಳಿಕೆಗಳು ಮತ್ತು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬಾರದು ಎಂದು ನಡ್ಡಾ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ 2019ರಲ್ಲಿ 62 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ, 2024ರಲ್ಲಿ 33 ಸ್ಥಾನಗಳಿಗೆ ಕುಸಿದಿದೆ. ಈ ಹೀನಾಯ ಸೋಲಿನಿಂದ ಹೊರಬಂದು, ಮತ್ತೆ ತನ್ನ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರವನ್ನು ಉಳಿಸಿಕೊಳ್ಳಲು ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಬಿಸಿ ನಾಯಕನ್ನು ನೇಮಿಸಲು ತಂತ್ರ ಎಣೆಯುತ್ತಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಚೌಧರಿ ಅವರು ಜಾಟ್ ಸಮುದಾಯಕ್ಕೆ ಸೇರಿದವರು. ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ನಡೆದ ರೈತ ಹೋರಾಟದಲ್ಲಿ ಜಾಟ್ ಸಮುದಾಯವು ಪ್ರಮುಖ ಪಾತ್ರ ವಹಿಸಿತ್ತು. ಹೀಗಾಗಿ, ಸಮುದಾಯದ ಮತಗಳು ಬಿಜೆಪಿಯಿಂದ ಹೊರಹೋಗದಂತೆ ತಡೆಯಲು 2022ರಲ್ಲಿ ಚೌಧರಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿತ್ತು.
ಆದಾಗ್ಯೂ, 2024ರ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಪ್ರದರ್ಶನ ನೀಡಿದೆ. ಹೀಗಾಗಿ, ಚೌಧರಿ ಬದಲಿಗೆ ಒಬಿಸಿ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡಲು ಬಿಜೆಪಿ ಹವಣಿಸುತ್ತಿದೆ. ಉತ್ತರ ಪ್ರದೇಶದಲ್ಲಿ 42%ಗೂ ಹೆಚ್ಚಿನ ಸಂಖ್ಯೆಯಲ್ಲಿ ಒಬಿಸಿ ಸಮುದಾಯದ ಜನರಿದ್ದಾರೆ.