ಮುಂದಿನ ಚುನಾವಣೆಗಳ ಫಲಿತಾಂಶಗಳಿಗೆ ನೀವೇ ಹೊಣೆಗಾರರಾಗಿರುತ್ತೀರಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪದಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಕಷ್ಟದ ಸಂದರ್ಭದಲ್ಲಿ ಜವಾಬ್ದಾರಿಯಿಂದ ನುಣುಚಿಕೊಂಡವರಿಂದಲೂ ದೂರ ಇರುವಂತೆ ಖರ್ಗೆ ತಿಳಿಸಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್ ಮುಖ್ಯಕಚೇರಿ ಇಂದಿರಾ ಭವನದಲ್ಲಿ ನಡೆದ ಪದಾದಿಕಾರಿಗಳ ಸಭೆಯಲ್ಲಿ ಮಾತನಾಡಿದ ಖರ್ಗೆ, “ತೀರಾ ತಳಮಟ್ಟದಲ್ಲಿ ಕಾರ್ಯನಿರ್ವಹಿಸಿ. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು. ಸೈದ್ಧಾಂತಿಕ ಬದ್ಧತೆ ಇದ್ದವರ ಪ್ರಚಾರವನ್ನು ಮಾಡಬೇಕು” ಎಂದು ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಮಲ್ಲಿಕಾರ್ಜುನ ಖರ್ಗೆ ನನಗೆ ಹಿರಿಯ ಅಣ್ಣ, ಭೇಟಿಗೆ ರಾಜಕೀಯ ಅರ್ಥ ಕಲ್ಪಿಸಬೇಕಿಲ್ಲ: ಸಚಿವ ಪರಮೇಶ್ವರ್
ಇನ್ನು ಕಾಂಗ್ರೆಸ್‌ನಲ್ಲಿ ಕೆಲವು ಬದಲಾವಣೆಗಳ ಬಗ್ಗೆಯೂ ಖರ್ಗೆ ಸುಳಿವು ನೀಡಿದ್ದಾರೆ. “ಕೆಲವು ಬದಲಾವಣೆಗಳು ಈಗಾಗಲೇ ಮಾಡಲಾಗಿದೆ. ಇನ್ನೂ ಕೆಲವು ಬದಲಾವಣೆಗಳನ್ನು ಮಾಡಲಾಗುವುದು” ಎಂದು ತಿಳಿಸಿದ್ದಾರೆ.
“ಹೊಣೆಗಾರಿಕೆಯ ಬಗ್ಗೆ ನಾನು ನಿಮ್ಮಲ್ಲಿ ಮಾತನಾಡಲು ಬಯಸುತ್ತೇನೆ. ಪಕ್ಷದಲ್ಲಾಗುವ ಎಲ್ಲಾ ಬದಲಾವಣೆಗಳಿಗೂ ಮತ್ತು ಮುಂದಿನ ಚುನಾವಣಾ ಫಲಿತಾಂಶಗಳಿಗೂ ನೀವೇ ಹೊಣೆಗಾರರಾಗಿರುತ್ತೀರಿ” ಎಂದು ಕಾಂಗ್ರೆಸ್ ಪದಾದಿಕಾರಿಗಳಿಗೆ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಇತ್ತೀಚೆಗೆ ಸಂಘಟನೆ ಪುನರ್ ರಚನೆ ಮಾಡಿದ್ದು, ಹೊಸ ಪದಾದಿಕಾರಿಗಳ ಆಯ್ಕೆ ಮಾಡಿದೆ. ಹೊಸಬರು ಕೂಡಾ ಈ ಸಭೆಯಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು, ವಿವಿಧ ರಾಜ್ಯಗಳ ಉಸ್ತುವಾರಿಗಳು ಸಭೆಯಲ್ಲಿ ಹಾಜರಿದ್ದರು.
