- ಟ್ವೀಟ್ ಮೂಲಕ ಮಾಹಿತಿ ನೀಡಿದ ಸಿದ್ದರಾಮಯ್ಯ
- ಝೀರೊ ಟ್ರಾಫಿಕ್‌ನಿಂದ ಸಾರ್ವಜನಿಕರಿಗೆ ಅನಾನುಕೂಲ ಹಿನ್ನೆಲೆ
ಬೆಂಗಳೂರು : ಶನಿವಾರವಷ್ಟೇ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಸಿದ್ದರಾಮಯ್ಯನವರು, ಭಾನುವಾರ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿ, ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದ್ದಾರೆ.
ಮುಖ್ಯಮಂತ್ರಿಗಳ ಸಂಚಾರಕ್ಕಾಗಿ ಈವರೆಗೆ ನೀಡಲಾಗುತ್ತಿದ್ದ ಝೀರೊ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, “ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಝೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಝೀರೊ ಟ್ರಾಫಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ” ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಈ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ತುರ್ತು ಅಗತ್ಯದ ಸಂದರ್ಭಗಳಲ್ಲಿ ಝೀರೋ ಟ್ರಾಫಿಕ್ ಸೌಲಭ್ಯ ಬಳಸಿಕೊಳ್ಳಿ ಎಂದು ಕೆಲವರು ಸಲಹೆ ನೀಡಿದ್ದಾರೆ.
ಈ ಹಿಂದೆ ಗೃಹಮಂತ್ರಿಯಾಗಿದ್ದ ರಾಮಲಿಂಗಾರೆಡ್ಡಿಯವರು, ‘ಝೀರೋ ಟ್ರಾಫಿಕ್ ಬೇಡ’ ಎನ್ನುವ ಮೂಲಕ, ಶಿಷ್ಟಾಚಾರಕ್ಕೆ ಅಗ್ರಪಂಕ್ತಿ ಹಾಕಿದ್ದರು.
ವಿಶ್ವದ ನಿಧಾನಗತಿಯ ನಗರಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ನಗರದಲ್ಲಿ 10 ಕಿ.ಮೀ ದೂರ ಕ್ರಮಿಸಲು ಸರಾಸರಿ 29 ನಿಮಿಷ ಹಾಗೂ 10 ಸೆಕೆಂಡುಗಳಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಇತ್ತೀಚೆಗಿನ ಅಧ್ಯಯನವೊಂದು ತನ್ನ ವರದಿಯಲ್ಲಿ ತಿಳಿಸಿತ್ತು. ಈ ವರದಿಯ ಪ್ರಕಾರ, ಲಂಡನ್ ನಗರ ಮೊದಲ ಸ್ಥಾನದಲ್ಲಿದೆ.